ಶನಿವಾರ, ಡಿಸೆಂಬರ್ 7, 2019
24 °C

ಮನೆಗೆ ನುಗ್ಗಿ ಯುವತಿ ಮೈ ಮುಟ್ಟಿದ ಆರೋಪಿ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮನೆಗೆ ನುಗ್ಗಿ ಯುವತಿ ಮೈ ಮುಟ್ಟಿದ ಆರೋಪಿ ಸೆರೆ

ಬೆಂಗಳೂರು: ಕುಡಿದ ಅಮಲಿನಲ್ಲಿ ಮನೆಗೆ ನುಗ್ಗಿ ಯುವತಿ ಜತೆ ಅನುಚಿತವಾಗಿ ವರ್ತಿಸಿದ್ದಲ್ಲದೆ, ಅವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ ಕೃಷ್ಣಚಂದ್ ಅಲಿಯಾಸ್ ರಾಜು (22) ಎಂಬಾತನನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ.

ಅಸ್ಸಾಂನ ಕೃಷ್ಣಚಂದ್, ಆರು ತಿಂಗಳ ಹಿಂದೆ ನಗರಕ್ಕೆ ಬಂದು ಶಿವಪುರದಲ್ಲಿ ನೆಲೆಸಿದ್ದ. ಅದೇ ಪ್ರದೇಶದಲ್ಲಿ ಒಡಿಶಾದ ಯುವತಿಯೊಬ್ಬರು, ಗೆಳತಿ ಜತೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

‘ಆರೋಪಿಯು ಪೀಣ್ಯದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಅದರ ಪಕ್ಕದಲ್ಲೇ ಇರುವ ಗಾರ್ಮೆಂಟ್ಸ್‌ಗೆ ಸಂತ್ರಸ್ತೆ ಕೆಲಸಕ್ಕೆ ಹೋಗುತ್ತಿದ್ದರು. 2 ತಿಂಗಳಿನಿಂದ ಅವರನ್ನು ಪ್ರೀತಿ ಮಾಡುತ್ತಿದ್ದ ಕೃಷ್ಣಚಂದ್, ನಿತ್ಯ ಮನೆವರೆಗೂ ಹಿಂಬಾಲಿಸಿ ಹೋಗುತ್ತಿದ್ದ. ಆದರೆ, ಜೀವಭಯದಿಂದ ಸಂತ್ರಸ್ತೆ ಪೊಲೀಸರಿಗೆ ದೂರು ಕೊಟ್ಟಿರಲಿಲ್ಲ’ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

‘ಮಂಗಳವಾರ ರಾತ್ರಿ 12.30ರ ಸುಮಾರಿಗೆ ಕಂಠಪೂರ್ತಿ ಕುಡಿದು ಸಂತ್ರಸ್ತೆಯ ಮನೆ ಹತ್ತಿರ ಹೋದ ಕೃಷ್ಣಚಂದ್, ಕಾಲಿನಿಂದ ಒದ್ದು ಬಾಗಿಲು ಮುರಿದು ಹಾಕಿದ್ದ. ನಂತರ ಒಳಗೆ ನುಗ್ಗಿ ಯುವತಿಯ ಮೈ–ಕೈ ಮುಟ್ಟಿ ಅನುಚಿತವಾಗಿ ವರ್ತಿಸಿದ್ದ. ಚೀರಾಡಿದರೆ ಕೊಲ್ಲುವುದಾಗಿ ಚಾಕು ತೋರಿಸಿ ಬೆದರಿಸಿದ್ದ.’

‘ಈ ವೇಳೆ ಇನ್ನೊಂದು ಕೋಣೆಯಲ್ಲಿ ಮಲಗಿದ್ದ ಸಂತ್ರಸ್ತೆಯ ಗೆಳತಿ, ಎಚ್ಚರಗೊಂಡು ಹೊರಗೆ ಬಂದಿದ್ದರು. ಆತನನ್ನು ನೋಡುತ್ತಿದ್ದಂತೆಯೇ ಹೊರಗೆ ಓಡಿ ಹೋಗಿ, ರಕ್ಷಣೆಗೆ ಕೂಗಿಕೊಂಡಿದ್ದರು.’

‘ಇದರಿಂದ ಗಾಬರಿಗೊಂಡ ಆರೋಪಿ, ಸಂತ್ರಸ್ತೆ ಕೈಗೆ ಚಾಕುವಿನಿಂದ ಹಲ್ಲೆ ನಡೆಸಿ ಮನೆಯಿಂದ ಓಡಿ ಹೋಗಿದ್ದ. ನೆರೆಹೊರೆಯವರು ಆತನಿಗಾಗಿ ಸುತ್ತಮುತ್ತಲ ರಸ್ತೆಗಳಲ್್ಲಿ ಹುಡುಕಾಡಿದ್ದರು.’

‘ಸಂತ್ರಸ್ತೆ ಕೊಟ್ಟ ದೂರಿನ ಅನ್ವಯ ಕಾರ್ಯಾಚರಣೆ ಪ್ರಾರಂಭಿಸಿದ ಪೀಣ್ಯ ಠಾಣೆ ಸಿಬ್ಬಂದಿ, ಕೃಷ್ಣಚಂದ್ ಕೆಲಸ ಮಾಡುತ್ತಿದ್ದ ಕಾರ್ಖಾನೆಯ ಕಾರ್ಮಿಕರ ನೆರವಿನಿಂದ ಆರೋಪಿಯನ್ನು ಬುಧವಾರ ಬೆಳಿಗ್ಗೆ ಪತ್ತೆ ಮಾಡಿದರು’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)