ಮಂಗಳವಾರ, ಡಿಸೆಂಬರ್ 10, 2019
17 °C
ರೈತರಿಗೆ ಆಘಾತ ನೀಡಿದ ಜೂನ್‌ ತಿಂಗಳು: ಕಾಡುತ್ತಿದೆ ಬರದ ಕರಿನೆರಳು

ಮಾಯವಾದ ಮಳೆ: ಕಂಗಾಲಾದ ಅನ್ನದಾತ

ಯೋಗೇಶ್‌ ಮಾರೇನಹಳ್ಳಿ Updated:

ಅಕ್ಷರ ಗಾತ್ರ : | |

ಮಾಯವಾದ ಮಳೆ: ಕಂಗಾಲಾದ ಅನ್ನದಾತ

ಮಂಡ್ಯ: ಆರಂಭ ಶೂರತ್ವ ತೋರಿದ್ದ ಮುಂಗಾರು ಮಳೆ ರೈತರನ್ನು ಭ್ರಮ ನಿರಸನಗೊಳಿಸಿದೆ. ಅವಧಿಗೆ ಮುನ್ನವೇ ಸುರಿದ ಮಳೆಯನ್ನು ನೆಚ್ಚಿ ಹೊಲಕ್ಕೆ ಬಿತ್ತಿದ್ದ ಬಿತ್ತನೆಬೀಜ ಚಿಗುರೊಡೆಯುವ ಮೊದಲೇ ಮಣ್ಣಲ್ಲಿ ಮಣ್ಣಾಗಿ ಹೋಗಿದೆ.

ಭೂಮಿ ಹದ ಮಾಡಿಕೊಂಡು ಮಳೆಗಾಗಿ ಕಾಯುತ್ತಿದ್ದ ರೈತರಿಗೆ ಜೂನ್‌ ತಿಂಗಳು ದೊಡ್ಡ ಆಘಾತ ನೀಡಿದೆ. ಮುಂಗಾರು ಮಳೆ ರಾಜ್ಯಕ್ಕೆ ಅಡಿ ಇಟ್ಟ ನಂತರ ಜಿಲ್ಲೆಯಲ್ಲಿ ಒಮ್ಮೆಯೂ ಹದವೆನಿಸುವ ಮಳೆ ಸುರಿದಿಲ್ಲ. ಮೋಡ ಮುಚ್ಚಿದ ವಾತಾವರಣ ರೈತರನ್ನು ಕಾಡುತ್ತಿದ್ದು, ಮೋಡ ಹನಿಯಾಗಿ ಧರೆಗೆ ಇಳಿಯುತ್ತಿಲ್ಲ.

ಮುಂಗಾರು ಪೂರ್ವದಲ್ಲಿ ತೊಗರಿ, ಎಳ್ಳು, ಹುರುಳಿ, ಅಲಸಂದೆ ಅವರೆ ಬಿತ್ತಿದ್ದ ರೈತರು ಸ್ವಲ್ಪ ಫಸಲು ಪಡೆದಿದ್ದಾರೆ. ಆದರೆ ನೀರಿನ ಕೊರತೆಯಿಂದ ಇಳುವರಿ ಕಡಿಮೆ ಯಾಗಿದೆ. ಮುಂಗಾರು ಮಳೆಯನ್ನೇ ನೆಚ್ಚಿಕೊಂಡಿದ್ದ ರೈತರಿಗೆ ಆಘಾತವಾಗಿ ದ್ದು, ಮಳೆಯ ನಿರೀಕ್ಷೆಯಲ್ಲೇ ಇದ್ದಾರೆ.

‘ಜಿಲ್ಲೆಯಲ್ಲಿ ಮತ್ತೊಮ್ಮೆ ಬರದ ಕರಿನೆರಳು ಆವರಿಸಿದೆ. ಮುಂಗಾರು ಮಳೆ ಆರಂಭವಾದ ನಂತರ ಮಂಡ್ಯ ಜಿಲ್ಲೆಯಲ್ಲಿ ಮಳೆ ಸುರಿಯಲೇ ಇಲ್ಲ. ಇತ್ತ ಕೆಆರ್‌ಎಸ್‌ ಜಲಾಶಯವೂ ತುಂಬಲಿಲ್ಲ. ನಮ್ಮನ್ನು ದೇವರೇ ಕಾಪಾಡಬೇಕು’ ಎಂದು ತಾಲ್ಲೂಕಿನ ತೂಬಿನಕೆರೆ ಗ್ರಾಮ ದ ರೈತ ಸಣ್ಣೇಗೌಡ ಆತಂಕ ವ್ಯಕ್ತಪಡಿಸುತ್ತಾರೆ.

ಕುಸಿದ ಮಳೆ ಪ್ರಮಾಣ: ಮಾರ್ಚ್‌– ಏಪ್ರಿಲ್‌ ತಿಂಗಳಲ್ಲಿ ವಾಡಿಕೆಗಿಂತಲೂ ಹೆಚ್ಚಿನ ಮಳೆ ಸುರಿದಿತ್ತು. ಮಾರ್ಚ್‌ನಲ್ಲಿ 8.8 ಮಿ.ಮೀ ವಾಡಿಕೆ ಮಳೆ, ಆದರೆ, 17.7 ಮಿ.ಮೀ ಮಳೆ ಸುರಿದು ಜನರ ಮೊದಲ್ಲಿ ಮಂದಹಾಸ ಮೂಡಿಸಿತ್ತು.

ಏಪ್ರಿಲ್‌ನಲ್ಲೂ ವಾಡಿಕೆ ಮಳೆಗಿಂತ ಹೆಚ್ಚುವರಿ ಮಳೆ ಸುರಿದಿತ್ತು. 46.4 ಮಿ.ಮೀ ವಾಡಿಕೆ ಮಳೆಗೆ 58.63 ಮಿ.ಮೀ ಮಳೆ ಸುರಿದಿತ್ತು. ಮೇ ತಿಂಗಳಲ್ಲೂ ಹೆಚ್ಚುವರಿ ಮಳೆಯಾಗಿತ್ತು. ಹೆಚ್ಚುವರಿ ಮಳೆ ಕಂಡ ರೈತರು ಪೂರ್ವ ಮುಂಗಾರು ದ್ವಿದಳ ದಾನ್ಯ ಬಿತ್ತನೆ ಕಾರ್ಯ ಆರಂಭಿಸಿದರು. ಆದರೆ, ಜೂನ್‌ನಲ್ಲಿ ಮಳೆ ಕೊರತೆ ಉಂಟಾದ ಕಾರಣ ರೈತರ ಜಂಘಾಬಲವೇ ಅಡಗಿ ಹೋಗಿದೆ.

ಜೂನ್‌ ಅಂತ್ಯಕ್ಕೆ ಜಿಲ್ಲೆಯಲ್ಲಿ ಸುರಿಯಬೇಕಾಗಿದ್ದ 54.1 ಮಿ.ಮೀ ವಾಡಿಕೆ ಮಳೆಯಲ್ಲಿ ಕೇವಲ 22.6 ಮಿ.ಮೀ ಮಳೆಯಾಗಿದೆ. ಜುಲೈ 10ರ ಅಂತ್ಯಕ್ಕೆ 19.1 ಮಿ.ಮೀ ವಾಡಿಕೆ ಮಳೆ ಸುರಿಯಬೇಕಾಗಿತ್ತು. ಆದರೆ, ಕೇವಲ 3.8 ಮಿ.ಮೀ ಮಳೆ ಸುರಿದಿದೆ.

ಕುಸಿದ ಬಿತ್ತನೆ ಪ್ರದೇಶ: ಪೂರ್ವ ಮುಂಗಾರಿನಲ್ಲಿ ಜಿಲ್ಲೆಯಾದ್ಯಂತ 35,000 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಆಗಿತ್ತು. ಆದರೆ, ಜೂನ್‌ ತಿಂಗಳ ನಂತರ ಮಳೆ ಕೊರತೆಯುಂಟಾಗಿ ಬಿತ್ತನೆ ಪ್ರದೇಶದಲ್ಲಿ ಕುಸಿತವಾಗಿದೆ. ಜುಲೈ 10ರವರೆಗೆ ಜಿಲ್ಲೆಯಲ್ಲಿ 2 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿತ್ತು.

ಆದರೆ, ಕೇವಲ 32,505 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆ ಆಗಿದೆ. ಶೇ 16.2ರಷ್ಟು ಮಾತ್ರ ಬಿತ್ತನೆ ಕಾರ್ಯ ನಡೆದಿದೆ. ಮದ್ದೂರು ತಾಲ್ಲೂಕಿನಲ್ಲಿ ಅತೀ ಕಡಿಮೆ ಶೇ 3.8ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದೆ. ಪಾಂಡವಪುರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಶೇ 46.1ರಷ್ಟು ಭೂಮಿ ಬಿತ್ತನೆಯಾಗಿದೆ. ಮಂಡ್ಯ ತಾಲ್ಲೂಕಿನಲ್ಲಿ ಶೇ 8.3, ಮಳವಳ್ಳಿ ಶೇ 6.3, ಶ್ರೀರಂಗಪಟ್ಟಣ ಶೇ 12.3, ಕೆ.ಆರ್‌.ಪೇಟೆ ಶೇ 36.6, ನಾಗ ಮಂಗಲ ಶೇ 8.1ರಷ್ಟು ಬಿತ್ತನೆಯಾಗಿದೆ.

ಕಗ್ಗಂಟಾದ ಆಷಾಢದ ಗಾಳಿ: ‘ಮೋಡ ಮುಚ್ಚಿದ ವಾತಾವರಣದಿಂದಾಗಿ ತೇವಾಂಶ ಇದೆ. ಹೇಗಾದರೂ ಮಾಡಿ ದ್ವಿದಳ ದಾನ್ಯದ ಪೈರು ಉಳಿಸಿಕೊಳ್ಳಬ ಹುದು. ಆದರೆ, ಈ ಆಷಾಢದ ಗಾಳಿ ಯಿಂದಾಗಿ ಸಸಿ ಪೈರುಗಳು ಹೋಗುತ್ತಿವೆ. ಜೊತೆಗೆ ಬೇಸಿಗೆಯಂತೆ ಬಿಸಿಲು ಬರುತ್ತಿದ್ದು, ಬೆಳೆ ಒಣಗುತ್ತಿದೆ’ ಎಂದು ಶಿವಳ್ಳಿಯ ರೈತ ವೆಂಕಟಪ್ಪ ಹೇಳಿದರು.

ಪ್ರತಿಕ್ರಿಯಿಸಿ (+)