ಭಾನುವಾರ, ಡಿಸೆಂಬರ್ 15, 2019
23 °C
ಮಂಡ್ಯಕ್ಕೆ ಹೆಮ್ಮೆ ತಂದ ಹುಡುಗಿ, ರಾಷ್ಟ್ರಮಟ್ಟದ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ

ಚೆಸ್‌ಬೋರ್ಡ್‌ನಲ್ಲಿ ‘ಶಿಫಾಲಿ’ ರಾಜಕುಮಾರಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆಸ್‌ಬೋರ್ಡ್‌ನಲ್ಲಿ ‘ಶಿಫಾಲಿ’ ರಾಜಕುಮಾರಿ!

ಮಂಡ್ಯ: ‘ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು’ ಎನ್ನುವ ಮಾತಿಗೆ ಎ.ಎನ್‌. ಶಿಫಾಲಿ ಹೇಳಿ ಮಾಡಿಸಿದಂತಹ ಬಾಲ ಪ್ರತಿಭೆ.

ಚೆಸ್‌ ಟೂರ್ನಿಯಲ್ಲಿ ರಾಷ್ಟ್ರಮಟ್ಟದ ಗಮನ ಸೆಳೆದಿರುವ ಶಿಫಾಲಿ ಈಚೆಗೆ ದೆಹಲಿಯಲ್ಲಿ 8 ವರ್ಷ ವಯಸ್ಸಿನೊಳಗಿನ (ಅಂಡರ್‌ 8) ಸ್ಪರ್ಧಿಗಳಿಗೆ ನಡೆದ ಕಾಮನ್‌ವೆಲ್ತ್‌ ಚೆಸ್‌ ಚಾಂಪಿಯನ್‌ ಷಿಪ್‌ನಲ್ಲಿ ಚಿನ್ನ ಗೆದ್ದಿದ್ದಾರೆ. ಚೆಸ್‌ನಲ್ಲಿ ಮಿನುಗುತಾರೆಯಾಗಿರುವ ಈಕೆ ಮಕ್ಕಳಿಗೆ ಸ್ಫೂರ್ತಿಯಾಗಿದ್ದಾರೆ.

ಹೊಸಹಳ್ಳಿ ಸರ್ಕಲ್‌ ನಿವಾಸಿಗಳಾದ  ಎ.ಪಿ. ನರೇಂದ್ರ ಹಾಗೂ ಎಚ್‌.ಬಿ. ನಿರ್ಮಲಾ ದಂಪತಿಯ ಮಗಳು ಶಿಫಾಲಿ. ನಾಲ್ಕನೇ ವಯಸಿನಲ್ಲೇ ಚೆಸ್‌ ಕ್ಷೇತ್ರಕ್ಕೆ  ಪದಾರ್ಪಣೆ ಮಾಡಿದ ಶಿಫಾಲಿ ಹಲವು ಬಹುಮಾನ ಗೆದ್ದು ಗಮನ ಸೆಳೆದಿದ್ದಾರೆ.

ಇದಕ್ಕೂ ಮೊದಲು ಶಿಫಾಲಿ ಶ್ರೀಲಂಕಾದಲ್ಲಿ ನಡೆದ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನಗೆದ್ದಿದ್ದರು. ಈಗ ಎರಡನೇ ಬಾರಿ ಚಿನ್ನ ಗೆದ್ದಿರುವ ಶಿಫಾಲಿ ಮಂಡ್ಯ ನಗರಕ್ಕೆ ಹೆಮ್ಮೆ ತಂದಿದ್ದಾರೆ. ನಗರದಲ್ಲಿ ಒಂದು ವರ್ಷ ಚೆಸ್‌ ತರಬೇತಿ ಪಡೆದ ಶಿಫಾಲಿ ನಂತರ ಆನ್‌ಲೈನ್‌ ಮೂಲಕ  ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯಗಳ ನುರಿತ ತರಬೇತುದಾರರಿಂದ ಚೆಸ್‌ ಅಭ್ಯಾಸ ಮಾಡಿದ್ದಾರೆ.

ಪುದುಚೆರಿಯಲ್ಲಿ ಅಂಡರ್‌ –7ರ ವಿಭಾಗದಲ್ಲಿ ನಡೆದ ಚೆಸ್‌ ಪಂದ್ಯಾವಳಿಯಲ್ಲಿ  ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಜುಲೈ 2ರಿಂದ 10ರವರೆಗೆ ನಡೆದ  ಅಂಡರ್‌–8 ವಿಭಾಗದಲ್ಲಿ ಚಿನ್ನದ ಪದಕ ಪಡೆದು ಹೆಮ್ಮೆ ತಂದಿದ್ದಾರೆ. ಸಿಂಗಪೂರ್‌ನಲ್ಲಿ ನಡೆದ ಏಷ್ಯನ್‌ ಯೂತ್‌ ಚಾಂಪಿಯನ್‌ಷಿಪ್‌ನಲ್ಲೂ ಕಂಚಿನ ಪದಕ ಮುಡಿಗೇರಿಸಿಕೊಂಡಿದ್ದಾರೆ.

ಮೈಸೂರಿನಲ್ಲಿ ನಡೆದ ಅಂಡರ್‌–9 ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ತೈವಾನ್‌, ಶ್ರೀಲಂಕಾ, ಉಜ್ಜೇಕಿಸ್ತಾನದಲ್ಲಿ ಮುಂತಾದ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಬಹುಮಾನ ಗೆದ್ದುಕೊಂಡಿದ್ದಾರೆ. ತಮಿಳುನಾಡು, ಆಂಧ್ರ ಪ್ರದೇಶ, ಕೇರಳ, ಪಶ್ಚಿಮ ಬಂಗಾಳ, ದೆಹಲಿ, ಮಹಾರಾಷ್ಟ್ರ ಮತ್ತಿತರ ರಾಜ್ಯಗಳ ಟೂರ್ನಿಗಳಲ್ಲಿ ಭಾಗವಹಿಸಿದ್ದಾರೆ. 

‘ಮೈಸೂರು, ಬೆಂಗಳೂರು, ಹಾಸನ, ಕುಂದಾಪುರ, ಮಂಡ್ಯ ಸೇರಿ ಹಲವು ಜಿಲ್ಲೆಗಳಲ್ಲಿ ನಡೆದ ಹಲವು ಚೆಸ್‌ ಟೂರ್ನಾಮೆಂಟ್‌ನಲ್ಲೂ ಭಾಗವಹಿಸಿ ಬಹುಮಾನ ಪಡೆದಿದ್ದಾರೆ’ ಎಂದು ಶಿಫಾಲಿಗೆ ಪ್ರೋತ್ಸಾಹ ನೀಡುತ್ತಿರುವ ಚಿಕ್ಕಮ್ಮ ಇಂದಿರಾ ಹೇಳಿದರು.

‘ಕರಾವಳಿ ಪ್ರಶಸ್ತಿ, ಮಂಡ್ಯ ಅಮೃತ ಮಹೋತ್ಸವದ ಕ್ರೀಡಾ ಕಣ್ಮಣಿ ಪ್ರಶಸ್ತಿ, ಗಣರಾಜ್ಯೋತ್ಸವ ಪ್ರಶಸ್ತಿ, ಲಯನ್ಸ್‌ ಕ್ಲಬ್‌ನ ಕ್ರೀಡಾ ಪ್ರತಿಭಾ ಪುರಸ್ಕಾರ ಹಾಗು ಕ್ರೀಡಾ ಇಲಾಖೆ ಸೇರಿ ಹಲವು ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ’ ಎಂದು ಹೆಮ್ಮೆಯಿಂದ ಶಿಫಾಲಿ ತಾಯಿ ಎಚ್‌.ಬಿ. ನಿರ್ಮಲಾ ಹೇಳುತ್ತಾರೆ.

ಮೋಹನ್‌ ರಾಗಿಮುದ್ದನಹಳ್ಳಿ

***

ಶಿಫಾಲಿಗೆ ಚೆಸ್‌ ಎಂದರೆ ಬರಿ ಆಟವಲ್ಲ, ಅದು ಮೌಲ್ಯವೂ ಆಗಿದೆ. ಚೆಸ್‌ನಿಂದ ಬದುಕಿನ ಪಾಠ ಕಲಿತಿದ್ದಾಳೆ. ಜೊತೆಗೆ  ನಾವು ಕೂಡ ಹಲವು ಪಾಠ ಕಲಿತಿದ್ದೇವೆ

ಎ.ಪಿ. ನರೇಂದ್ರ, ಶಿಫಾಲಿ ತಂದೆ

ಪ್ರತಿಕ್ರಿಯಿಸಿ (+)