ಶುಕ್ರವಾರ, ಡಿಸೆಂಬರ್ 6, 2019
17 °C

ನಿತೀಶ್ ನಾಯಕತ್ವದಲ್ಲಿ ಕಾಂಗ್ರೆಸ್‌ಗೆ ಭವಿಷ್ಯ; ಗುಹಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿತೀಶ್ ನಾಯಕತ್ವದಲ್ಲಿ ಕಾಂಗ್ರೆಸ್‌ಗೆ ಭವಿಷ್ಯ; ಗುಹಾ

ನವದೆಹಲಿ: ಅವನತಿಯತ್ತ ಸಾಗುತ್ತಿರುವ ಕಾಂಗ್ರೆಸ್ ಸ್ಥಿತಿಯನ್ನು ಸುಧಾರಿಸಲು ಆ ಪಕ್ಷದ ನಾಯಕತ್ವದ ಬದಲಾವಣೆಯಿಂದ ಮಾತ್ರ ಸಾಧ್ಯ ಎಂದು ಇತಿಹಾಸಕಾರ ರಾಮಚಂದ್ರ ಗುಹಾ ಹೇಳಿದ್ದಾರೆ. ನಾಯಕತ್ವಕ್ಕೆ ಹೆಸರನ್ನೂ ಸೂಚಿಸಿರುವ ಅವರು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಕಾಂಗ್ರೆಸ್ ಪಕ್ಷದ ಹೊಣೆಗಾರಿಕೆಯನ್ನು ವರ್ಗಾಯಿಸಬೇಕು ಎಂದಿದ್ದಾರೆ.

ಇದು ತಮ್ಮ ಭಾವನೆ ಎಂದು ಒತ್ತಿ ಹೇಳಿರುವ ಗುಹಾ, ‘ಜೆಡಿಯು ಮುಖಂಡ ನಿತೀಶ್ ಅವರು ಸ್ನೇಹಪೂರ್ವಕವಾಗಿ ಕಾಂಗ್ರೆಸ್ ಪಕ್ಷದ ನಾಯಕತ್ವ ವಹಿಸಿಕೊಂಡರೆ ಅದು ಸ್ವರ್ಗದಲ್ಲೇ ಮಾಡಿದ ಜೋಡಿಯಂತಿರುತ್ತದೆ’ ಎಂದಿದ್ದಾರೆ.

‘ಕಾಂಗ್ರೆಸ್ ನಾಯಕನಿಲ್ಲದ ಪಕ್ಷ. ನಿತೀಶ್ ಕುಮಾರ್ ಸೂಕ್ತ ಪಕ್ಷವಿಲ್ಲದ ಅಪ್ಪಟ ನಾಯಕ’ ಎಂದು ತಮ್ಮ ‘ಇಂಡಿಯಾ ಆಫ್ಟರ್ ಗಾಂಧಿ’ ಪುಸ್ತಕದ ಹತ್ತನೇ ವರ್ಷದ ಸಂಚಿಕೆ ಬಿಡುಗಡೆ ಸಂದರ್ಭದಲ್ಲಿ ಹೇಳಿದ್ದಾರೆ.

‘ನಿತೀಶ್‌ರನ್ನು ಸೂಚಿಸಲು ಕಾರಣಗಳಿವೆ. ಮೋದಿ ಅವರಂತೆಯೇ ನಿತೀಶ್‌ಗೂ ಕುಟುಂಬದ ಗೊಡವೆಯಿಲ್ಲ. ಮೋದಿಗಿದ್ದಂತೆ ಸ್ವಪ್ರತಿಷ್ಠೆಯ ಹುಚ್ಚೂ ಇಲ್ಲ. ಅವರು ಜನಾಂಗೀಯವಾದಿಯಲ್ಲ. ಲಿಂಗ ಸಮಾನತೆಗೆ ಒತ್ತು ನೀಡುತ್ತಾರೆ. ಇದು ಭಾರತದ ರಾಜಕಾರಣಿಗಳಲ್ಲಿರುವ ಅಪರೂಪದ ಗುಣ’ ಎಂದು ಹೇಳಿದ್ದಾರೆ.

‘ಕಾಂಗ್ರೆಸ್ ಅಧ್ಯಕ್ಷರು ತಮ್ಮ ಸ್ಥಾನವನ್ನು ನಿತೀಶ್‌ಗೆ ಬಿಟ್ಟುಕೊಡದಿದ್ದರೆ ಭಾರತದ ರಾಜಕಾರಣದಲ್ಲಿ ನಿತೀಶ್‌ಗೂ ಭವಿಷ್ಯವಿಲ್ಲ, ಸೋನಿಯಾ ಗಾಂಧಿ ಅವರಿಗೂ ಭವಿಷ್ಯವಿಲ್ಲ’ ಎಂದು ತಮ್ಮ ಅಭಿಪ್ರಾಯವನ್ನು ದಾಖಲಿಸಿದ್ದಾರೆ.

‘ಕಾಂಗ್ರೆಸ್ ಈಗ ಪ್ರಮುಖ ರಾಜಕೀಯ ಪಕ್ಷವಾಗಿ ಉಳಿದಿಲ್ಲ. ಪಕ್ಷದ ಸಂಸದರ ಸಂಖ್ಯೆ ಹೆಚ್ಚೆಂದರೆ ಈಗಿರುವ 44ರಿಂದ 100ಕ್ಕೆ ತಲುಪಬಹುದು. ಆದರೆ ನಾಳೆಯೇ ನಾಯಕತ್ವ ಬದಲಾದರೂ ಪರಿಸ್ಥಿತಿ ಬದಲಾಗುತ್ತದೆ.’ ಎಂದು 2019ರ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಅವರು ಮಾತನಾಡಿದರು.

‘ಪಶ್ಚಿಮದ ರಾಷ್ಟ್ರಗಳಂತೆ ದ್ವಿಪಕ್ಷ ರಾಜಕೀಯ ವ್ಯವಸ್ಥೆ ಅಳವಡಿಸಿಕೊಳ್ಳುವಲ್ಲಿ ಭಾರತ ಸಫಲವಾಗಿಲ್ಲ’ ಎಂದಿರುವ ಗುಹಾ, ಕೇರಳ, ತಮಿಳುನಾಡು ಮತ್ತು ಹಿಮಾಚಲ ಪ್ರದೇಶಗಳು ಎಪ್ಪತ್ತು ವರ್ಷಗಳಲ್ಲಿ ಸಾಧಿಸಿದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಉದಾಹರಿಸುವ ಮೂಲಕ, ಆಡಳಿತವು ಎರಡು ಪಕ್ಷಗಳಲ್ಲಿ ಕೈ ಬದಲಾಗುವುದರ ಮಹತ್ವವನ್ನು ಎತ್ತಿಹಿಡಿದರು.

ಪ್ರತಿಕ್ರಿಯಿಸಿ (+)