ಭಾನುವಾರ, ಡಿಸೆಂಬರ್ 8, 2019
19 °C
ಸರಕು ಮತ್ತು ಸೇವಾ ತೆರಿಗೆಯಿಂದ ಪೇಚಿಗೆ ಸಿಲುಕಿರುವ ಕನ್ನಡಕ ಮಳಿಗೆ ವರ್ತಕರು

ತಂಪು ಕನ್ನಡಕಕ್ಕೆ ಬೆಲೆ ಏರಿಕೆಯ ಬಿಸಿ

ಶಶಿಕಾಂತ ಎಸ್.ಶೆಂಬಳ್ಳಿ Updated:

ಅಕ್ಷರ ಗಾತ್ರ : | |

ತಂಪು ಕನ್ನಡಕಕ್ಕೆ ಬೆಲೆ ಏರಿಕೆಯ ಬಿಸಿ

ಹೊಸಪೇಟೆ:  ‘ಹೊಸ ಬಿಲ್‌ ಬಂದಿಲ್ಲ. ಹಳೆ ಬಿಲ್‌್ ಕೊಡುವಂತಿಲ್ಲ’ ನಗರದ ಸ್ಟೇಷನ್‌ ರಸ್ತೆಯಲ್ಲಿರುವ ಸಾಗರ್‌ ವಿಷನ್‌ ಕೇರ್‌ ಕನ್ನಡಕ ಅಂಗಡಿಯ ಮಾಲೀಕ ಯು.ಎಂ. ಗುರುರಾಜ್‌ ಅವರ ಮಾತುಗಳಿವು.

ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್‌.ಟಿ.) ಜುಲೈ ಒಂದರಿಂದಲೇ ಜಾರಿಗೆ ಬಂದಿದೆ. ಅಷ್ಟೇ ಅಲ್ಲ, ಎಲ್ಲ ಕನ್ನಡಕ, ಫ್ರೇಮ್‌ಗಳ ಮೇಲಿನ ತೆರಿಗೆ ಶೇ 5.5ರಿಂದ ಶೇ 12ಕ್ಕೆ ಹೆಚ್ಚಳವಾಗಿದೆ. ಎಲ್ಲ ತರಹದ ಬ್ರ್ಯಾಂಡೆಡ್‌ ತಂಪು ಕನ್ನಡಕಗಳ ಮೇಲಿನ ತೆರಿಗೆ ಶೇ 18ರಿಂದ ಶೇ 21ಕ್ಕೆ ಏರಿಕೆಯಾಗಿದೆ.

ಇಷ್ಟೆಲ್ಲ ಆದರೂ ಈ ಬಗ್ಗೆ ಸರಿಯಾದ ತಿಳಿವಳಿಕೆ ಕನ್ನಡಕ ಮಳಿಗೆಯ ವರ್ತಕರಿಗೆ ಇಲ್ಲ. ಇದರಿಂದ ಅವರು ಪೇಚಿಗೆ ಸಿಲುಕಿದ್ದಾರೆ. ಹಳೆಯ ಬಿಲ್‌ಗಳನ್ನು ಕೊಡಲು ಹೋದರೆ ಜನ ಸ್ವೀಕರಿಸುತ್ತಿಲ್ಲ. ಹೊಸ ಬಿಲ್‌ ಕೊಡಬೇಕೆಂದರೆ ಅದನ್ನು ಯಾವ ರೀತಿ ತಯಾರಿಸಬೇಕು ಎನ್ನುವುದು ಅವರಿಗೆ ಗೊತ್ತಿಲ್ಲ. ಅದಕ್ಕೆ ನಿದರ್ಶನ ಗುರುರಾಜ್‌.

‘ಈ ಹಿಂದೆ ರಸೀದಿಯಲ್ಲಿ ವಸ್ತು, ಪ್ರಮಾಣ ಹಾಗೂ ಬೆಲೆ ನಮೂದಿ ಸಬೇಕಿತ್ತು. ಆದರೆ, ಇಲ್ಲಿಯವರೆಗೆ ರಸೀದಿಯ ಮಾದರಿ ಹೇಗಿರುತ್ತದೆ ಎನ್ನುವುದು ಗೊತ್ತಾಗಿಲ್ಲ. ವೆಬ್‌ಸೈಟ್‌ನಲ್ಲಿ ನೋಡಿದರೆ ಒಬ್ಬೊಬ್ಬರು ಒಂದು ರೀತಿಯಲ್ಲಿ ಹಾಕಿದ್ದಾರೆ.

ಕೆಲವು ರಸೀದಿಗಳನ್ನು ಡೌನ್‌ಲೋಡ್‌ ಮಾಡಿ ನೋಡಿದರೆ 15ರಿಂದ 16 ಕಾಲಂಗಳ ರಸೀದಿ ಇದೆ. ಅದರಲ್ಲಿ ಏನೇನೋ ಕೇಳಲಾಗಿದೆ. ನಾವು ವ್ಯಾಪಾರ ಮಾಡ ಬೇಕೋ ಅಥವಾ ಅಷ್ಟುದ್ದ ಇರುವ ರಸೀದಿ ತುಂಬುತ್ತ ಕೂರಬೇಕೋ’ ಎಂದು ಪ್ರಶ್ನಿಸುತ್ತಾರೆ ಗುರುರಾಜ್‌.

‘ನನ್ನಂತೆ ಇದೇ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವ ಅನೇಕ ಜನರನ್ನು ಪ್ರಶ್ನಿಸಿದ್ದೆ. ಆದರೆ, ಯಾರಿಗೂ ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಹೊಸ ಮಾಲು ತರಲು ಯೋಚಿಸು ತ್ತಿದ್ದೇನೆ. ಜಿ.ಎಸ್‌.ಟಿ. ಬಂದ ನಂತರ ಒಂದೇ ರೀತಿ ತೆರಿಗೆ ಇರುತ್ತದೆ ಎಂದು ಸರ್ಕಾರ ತಿಳಿಸಿತ್ತು. ಈಗ ನೋಡಿದರೆ ಜಿ.ಎಸ್‌.ಟಿ. ಬೇರೆ, ಎಸ್‌.ಜಿ.ಎಸ್‌.ಟಿ. ಬೇರೆ ತೆರಿಗೆ ಇದೆ’ ಎಂದರು.

‘ಒಟ್ಟಿನಲ್ಲಿ ವ್ಯಾಪಾರಕ್ಕೆ ಹೊಡೆತ ಬೀಳುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ವ್ಯಾಪಾರಿಗಳಲ್ಲಿ ಗೊಂದಲ ನಿರ್ಮಾಣವಾಗಿದೆ. ಇದು ಒಂದು ರೀತಿಯಲ್ಲಿ ನೋಟ್‌ ಬ್ಯಾನ್‌ನಂತೆ ಗೊಂದಲವಾಗಿದೆ. ಎಲ್ಲ ಸರಿ ಹೋಗಲು ನಾಲ್ಕೈದು ತಿಂಗಳಾದರೂ ಹಿಡಿಯ ಬಹುದು’ ಎಂದು ಹೇಳಿದರು.

ನಂಬರ್‌ ಕನ್ನಡಕಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಿರುವುದಕ್ಕೆ ಅನೇಕ ವರ್ತಕರು ವಿರೋಧ ವ್ಯಕ್ತಪಡಿಸಿದ್ದಾರೆ. ಹಣವಂತರು ತಂಪು ಕನ್ನಡಕಗಳನ್ನು ಖರೀದಿಸುತ್ತಾರೆ. ಅದರ ಮೇಲೆ ತೆರಿಗೆ ಹೆಚ್ಚಿಸಿರುವುದರಲ್ಲಿ ತಪ್ಪಿಲ್ಲ. ಆದರೆ, ನಂಬರ್‌ ಕನ್ನಡಕಗಳ ಮೇಲೆ ತೆರಿಗೆ ಹೆಚ್ಚಿಸಿರುವುದರಿಂದ ಇದು ನೇರವಾಗಿ ಜನಸಾಮಾನ್ಯರ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ.

‘ನಂಬರ್‌ ಕನ್ನಡಕಗಳ ತೆರಿಗೆ ಹೆಚ್ಚಿ ಸಿರುವುದು ಸರಿಯಲ್ಲ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗು ತ್ತದೆ. ಬ್ರ್ಯಾಂಡೆಡ್‌ ತಂಪು ಕನ್ನಡ ಬೆಲೆ ಹೆಚ್ಚಿಸಿರುವುದಕ್ಕೆ ತಮ್ಮ ಅಭ್ಯಂತರವಿಲ್ಲ’ ಎಂದು ನಗರದ ಲಕ್ಕಿ ಮಳಿಗೆಯ ಮಾಲೀಕ ರಾಜೇಶ್‌ ತಿಳಿಸಿದರು.

ಪ್ರತಿಕ್ರಿಯಿಸಿ (+)