ಶುಕ್ರವಾರ, ಡಿಸೆಂಬರ್ 13, 2019
17 °C

‘ಪುಟಾಣಿ ಸಫಾರಿ’ ಜಾಡಿನ ಸವಾಲು

ಕೆ.ಎಚ್. ಓಬಳೇಶ್ Updated:

ಅಕ್ಷರ ಗಾತ್ರ : | |

‘ಪುಟಾಣಿ ಸಫಾರಿ’ ಜಾಡಿನ ಸವಾಲು

ಹಿಂದಿನ ವರ್ಷ ಕನ್ನಡದಲ್ಲಿ ಸೆನ್ಸಾರ್‌ ಆದ ಮಕ್ಕಳ ಚಿತ್ರಗಳ ಸಂಖ್ಯೆ ಹದಿನೈದು. ಆದರೆ, ಬಿಡುಗಡೆಯಾಗಿದ್ದು ಕೇವಲ ಐದು! ‘ಮಕ್ಕಳ ಚಿತ್ರಗಳು’ ಎಂಬ ಹಣೆಪಟ್ಟಿ ಹೊತ್ತ ಸಿನಿಮಾಗಳು ನಿಜವಾಗಿಯೂ ಚಿಣ್ಣರಿಗೆ ತಲು‍ಪುತ್ತಿವೆಯೇ? ಅರೇ... ಮಕ್ಕಳು ಹಟ ಹಿಡಿದರೂ ಪೋಷಕರು ಇಂತಹ ಚಿತ್ರ ತೋರಿಸಲು ಸಿದ್ಧರಿದ್ದಾರೆಯೇ? ಅವರಿಗೆ ಪುರುಸೊತ್ತು ಸಿಗುತ್ತದೆಯೇ– ಈ ಯಕ್ಷಪ್ರಶ್ನೆಗಳಿಗೆ ಉತ್ತರಿಸುವುದು ತುಸು ಕಷ್ಟಕರ.

ಇಂಗ್ಲಿಷ್‌ನ ‘ಹ್ಯಾರಿಪಾಟರ್’, ‘ಜಂಗಲ್‌ ಬುಕ್’ನಂತಹ ಮಕ್ಕಳ ಚಿತ್ರಗಳ ವೀಕ್ಷಣೆಗಾಗಿ ಚಿಣ್ಣರೊಂದಿಗೆ ಪೋಷಕರು ಸರದಿ ಸಾಲಿನಲ್ಲಿ ನಿಂತಾಗ ಅಚ್ಚರಿ‍ಪಡಬೇಕಿಲ್ಲ. ಆದರೆ, ಕನ್ನಡದಲ್ಲಿ ತಯಾರಾಗುವ ಮಕ್ಕಳ ಚಿತ್ರಗಳ ವೀಕ್ಷಣೆಗೆ ಇಂತಹ ಮನಸ್ಥಿತಿ ಅವರಲ್ಲಿ ಇನ್ನೂ ಪಕ್ವವಾಗಿಲ್ಲ ಏಕೆ? ಎಂಬ ಪ್ರಶ್ನೆ ನಿರ್ದೇಶಕ ರವೀಂದ್ರ ವಂಶಿ ಅವರದು.

ಜನರಿಗೆ ಮಕ್ಕಳ ಚಿತ್ರಗಳ ಬಗ್ಗೆ ಒಂದೆಡೆ ತಾತ್ಸಾರ. ಜತೆಗೆ, ಇಂತಹ ಸಿನಿಮಾಗಳಿಗೆ ಅವುಗಳದ್ದೇ ಮಿತಿ ಉಂಟು. ‘ಪುಟಾಣಿ ಸಫಾರಿ’ ಮಕ್ಕಳ ಸಿನಿಮಾ ನಿರ್ದೇಶನದ ವೇಳೆ ಅವರಿಗೆ ಈ ಸತ್ಯದ ಅರಿವಾಗಿದೆ. ಈ ಚಿತ್ರ ಜುಲೈ 14ರಂದು ತೆರೆ ಕಾಣುತ್ತಿದೆ. ಸಫಾರಿಯ ಸವಾರಿ ಬಗ್ಗೆ ಅವರು ಚಂದನವನದೊಂದಿಗೆ ಮಾತನಾಡಿದ್ದು ಹೀಗೆ.

‘ಕನ್ನಡದಲ್ಲಿ ತಯಾರಾಗುವ ಮಕ್ಕಳ ಸಿನಿಮಾಗಳು ಚಲನ ಚಿತ್ರೋತ್ಸವ, ಕೆಲವು ಪ್ರದರ್ಶನಗಳಿಗಷ್ಟೇ ಸೀಮಿತ. ತಿಂಗಳುಗಟ್ಟಲೆ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುವುದು ಕನಸಿನ ಮಾತು. ಇಂಗ್ಲಿಷ್‌ನಲ್ಲಿ ತಯಾರಾಗುವ ಮಕ್ಕಳ ಚಿತ್ರಗಳಿಗೆ ದೊಡ್ಡ ಮಾರುಕಟ್ಟೆ ಇದೆ. ಜಂಗಲ್‌ ಬುಕ್ ಚಿತ್ರ ನೋಡಲು ಜನರು ದಾಂಗುಡಿ ಇಟ್ಟಿದ್ದರು. ಆಗ ಕನ್ನಡದಲ್ಲೂ ಇಂತಹ ವಾತಾವರಣ ಸೃಷ್ಟಿಸಬೇಕೆಂಬ ಆಸೆ ನನ್ನಲ್ಲಿ ಮೊಳಕೆಯೊಡೆಯಿತು’ ಎಂದು ಸಫಾರಿಯ ಜಾಡನ್ನು ನೆನಪಿಸಿಕೊಂಡರು.

ಮಕ್ಕಳಿಗಾಗಿಯೇ ಕಥೆ ಬರೆದೆ. ಸಿನಿಮಾದ ಚಿತ್ರೀಕರಣವೂ ಸಾಂಗವಾಗಿ ಮುಗಿಯಿತು. ಆದರೆ, ಚಿತ್ರದ ಬಿಡುಗಡೆಗೆ ಮುಂದಾದಾಗ ನೈಜ ಸಮಸ್ಯೆ ಅರಿವಿಗೆ ಬಂತು. ಮಕ್ಕಳ ಚಿತ್ರಗಳಿಗೆ ಚಿತ್ರಮಂದಿರಗಳು ಸಿಗುವುದೇ ಅಪರೂಪ ಎಂದು ಸಫಾರಿ ಹಿಂದಿನ ಸವಾಲು ತೆರೆದಿಟ್ಟರು ರವೀಂದ್ರ ವಂಶಿ.

‘ಚಿತ್ರರಂಗದಲ್ಲಿ ಸ್ಟಾರ್‌ ನಟರು, ಕೆಲವು ವಿಭಾಗದ ಚಿತ್ರಗಳು, ಹೆಸರು ಮಾಡಿರುವ ನಿರ್ದೇಶಕರ ಚಿತ್ರಗಳಿಗೆ ಪ್ರೇಕ್ಷಕರು ಇದ್ದಾರೆ. ಮಕ್ಕಳ ಚಿತ್ರಗಳಿಗೆ ಚಿಣ್ಣರೇ ಪ್ರೇಕ್ಷಕರು. ಅವರಿಗೆ ಸಿನಿಮಾ ತಲುಪಿಸುವುದು ಹೇಗೆಂಬ ಚಿಂತೆಯ ಸುಳಿಗೆ ಬಿದ್ದೆ. ಪ್ರೀತಿ, ಪ್ರೇಮದ ಸಿನಿಮಾವಾದ್ರೆ ಯುವಕ, ಯುವತಿಯರು ಕಾಲೇಜಿಗೆ ಚಕ್ಕರ್‌ ಹಾಕಿ ಚಿತ್ರಮಂದಿರಕ್ಕೆ ಬರ್ತಾರೆ.

ಆಕ್ಷನ್‌ ಸಿನಿಮಾಗಳಿಗೆ ಅದರದ್ದೇ ಪ್ರೇಕ್ಷಕ ವರ್ಗವಿದೆ. ಮಕ್ಕಳ ಚಿತ್ರಗಳಿಗೆ ಚಿಣ್ಣರು ಹೊರತಾದ ಪ್ರೇಕ್ಷಕ ವರ್ಗವಿಲ್ಲ. ಚಿತ್ರದ ಪೋಸ್ಟರ್‌ ಅಂಟಿಸಿದರೂ ಅವರು ನೋಡುವುದು ಕಷ್ಟ‘ ಎಂದ ಅವರ ಮಾತಿನಲ್ಲಿ ಚಿತ್ರದ ಪ್ರಚಾರಕ್ಕಾಗಿ ಅವರು ಅನುಭವಿಸಿದ ಸಂಕಟ ಅನಾವರಣಗೊಂಡಿತು.

ಚಿಣ್ಣರು ವಾಟ್ಸ್‌ಆ್ಯಪ್‌, ಯೂಟೂಬ್‌ನಿಂದಲೂ ಬಹುದೂರ. ದಿನಪತ್ರಿಕೆಗಳ ಸಿನಿಮಾ ಪುರವಣಿ ನೋಡುವುದಿಲ್ಲ. ಟಿ.ವಿ. ನೋಡಲು ತಂದೆ, ತಾಯಿ ಬಿಡುವುದಿಲ್ಲ. ರಚ್ಚೆ ಹಿಡಿದರೂ ಚಿತ್ರ ತೋರಿಸಲು ಪೋಷಕರಿಗೆ ಸಮಯದ ಅಭಾವ.

ವಾರಾಂತ್ಯದಲ್ಲಿ ಸಿನಿಮಾ ತೋರಿಸುತ್ತೇವೆಂಬ ಸಿದ್ಧ ಉತ್ತರ ಸಾಮಾನ್ಯ. ಭಾನುವಾರದಂದು ಯಾವುದಾದರು ಕುಟುಂಬದ ಕಾರ್ಯಕ್ರಮದಲ್ಲಿ ಮುಳುಗಿಹೋದರೆ ಸಿನಿಮಾ ನೋಡಲು ಸಾಧ್ಯವೇ? ಮುಂದಿನ ವಾರ ಚಿತ್ರಮಂದಿರಕ್ಕೆ ಹೋದರೆ ಅಲ್ಲಿ ನಮ್ಮ ಸಿನಿಮಾವೇ ಇರುವುದಿಲ್ಲ ಎಂದರು ರವೀಂದ್ರ ವಂಶಿ.

‘ಇಷ್ಟೆಲ್ಲಾ ಸವಾಲುಗಳು ಸಿನಿಮಾ ತಯಾರಿಸುವ ಮೊದಲು ನಮ್ಮ ಅರಿವಿಗೆ ಬರಲಿಲ್ಲ. ಸಮಸ್ಯೆ ಎದುರಾದಾಗ ಮಕ್ಕಳನ್ನೇ ಚಿತ್ರಮಂದಿರಕ್ಕೆ ಕರೆತರಲು ನಿರ್ಧರಿಸಿದೆವು. ಆಗ ಶುರುವಾಗಿದ್ದೇ ಚಿತ್ರತಂಡದ ಶಾಲಾ ಭೇಟಿ. ಬೆಂಗಳೂರಿನಲ್ಲಿ ಚಿತ್ರಮಂದಿರದ ಸುತ್ತಮುತ್ತ ಇರುವ ಶಾಲೆಗಳಿಗೆ ಭೇಟಿ ನೀಡಿದೆವು. ಚಿತ್ರದ ಬಗ್ಗೆ ಶಿಕ್ಷಕರಿಗೆ ತಿಳಿವಳಿಕೆ ಮೂಡಿಸಿದೆವು. ಶಾಲೆಗಳ ಪಟ್ಟಿ 120ಕ್ಕೆ ಮುಟ್ಟಿತು’ ಎಂದು ಸುತ್ತಾಟದ ವೃತ್ತಾಂತ ಬಿಡಿಸಿಟ್ಟರು.

ರಾಜ್ಯದಾದ್ಯಂತ ಚಿತ್ರದ ಬಿಡುಗಡೆಗೆ ನಿರ್ಧರಿಸಿದ್ದೇವೆ. ಮೊದಲ ಹಂತದಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು ಮತ್ತು ತುಮಕೂರಿನಲ್ಲಿ ಚಿತ್ರ ತೆರೆಕಾಣಲಿದೆ. ಶಿಕ್ಷಣ ಇಲಾಖೆಯ ಅನುಮತಿ ಪಡೆದು ಎಲ್ಲ ಶಾಲೆಯ ಮಕ್ಕಳಿಗೂ ಈ ಚಿತ್ರದ ತೋರಿಸಬೇಕೆಂಬ ಆಸೆ ಇದೆ. ಆದರೆ, ಶಾಲಾ ಸಮಯದ ಹೊಂದಾಣಿಕೆಯದ್ದೇ ದೊಡ್ಡ ಸಮಸ್ಯೆ. ಕೆಲವು ಶಾಲೆಗಳಿಗೆ ಭೇಟಿ ನೀಡಿ ಪ್ರಚಾರ ನಡೆಸಿದ್ದೇವೆ. ಉಳಿದ ಶಾಲೆಗಳ ಮಕ್ಕಳೂ ಚಿತ್ರ ವೀಕ್ಷಿಸಬಹುದು ಎಂದರು.

‘ನಮ್ಮದು ಒತ್ತಡದ ಬದುಕು. ಮಕ್ಕಳ ಬಗ್ಗೆ ಕಾಳಜಿ ಕಡಿಮೆ. ಸಾಫ್ಟ್‌ವೇರ್‌ ದಂಪತಿಯ ಪುತ್ರನೊಬ್ಬ ಓದಿನಲ್ಲಿ ತುಂಬಾ ಜಾಣ. ಆದ್ರೆ, ಅವನಿಗೆ ಅಪ್ಪ, ಅಮ್ಮನ ಪ್ರೀತಿ ಸಿಗುವುದಿಲ್ಲ. ಅವನಲ್ಲಿ ಕಾಡಿನ ಸಫಾರಿ ಮಾಡಬೇಕೆಂಬ ಆಸೆ ಚಿಗುರೊಡೆಯುತ್ತದೆ.

ಇನ್ನೊಂದೆಡೆ ಅನಕ್ಷರಸ್ಥ ದಂಪತಿಯ ಪುತ್ರನಲ್ಲಿ ಕಾಡಿನ ಜ್ಞಾನ ಭಂಡಾರವೇ ಅಡಗಿರುತ್ತದೆ. ಇಬ್ಬರು ಕಾಡಿನಲ್ಲಿ ಸಂದಿಸುತ್ತಾರೆ. ಅಲ್ಲಿಂದ ಅವರು ಹೇಗೆ ಹೊರಬರುತ್ತಾರೆ. ಅವರು ಅಲ್ಲಿ ಏನು ಕಲಿಯುತ್ತಾರೆಂಬ ಎನ್ನುವುದೇ ಕಥೆಯ ಹಂದರ. ಮಕ್ಕಳಿಗೆ ಈ ಚಿತ್ರದ ಮನರಂಜನೆ ನೀಡಲಿದೆ’ ಎಂದ ಅವರ ಮಾತಿನಲ್ಲಿ ಚಿಣ್ಣರಿಗೆ ಸಫಾರಿ ದರ್ಶನ ಮಾಡಿಸುವ ವಿಶ್ವಾಸ ಮೂಡಿತು.ಬೃಂದಾ

ಪ್ರತಿಕ್ರಿಯಿಸಿ (+)