ಬುಧವಾರ, ಡಿಸೆಂಬರ್ 11, 2019
20 °C

‘ಟಾಸ್‌’ ಹಾಕಿ ರಮ್ಯಾ ವಿದಾಯ

Published:
Updated:
‘ಟಾಸ್‌’ ಹಾಕಿ ರಮ್ಯಾ ವಿದಾಯ

‘‘ಬಹುಶಃ ‘ಟಾಸ್‌’ ನನ್ನ ಕೊನೆಯ ಸಿನಿಮಾ ಆಗಿರಬಹುದು’’

ಹೀಗೆ ಕೊಂಚ ಅನುಮಾನವನ್ನು ಸೇರಿಸಿಯೇ ಹೇಳಿ ಸಣ್ಣಗೆ ನಕ್ಕರು ರಮ್ಯಾ ಬಾರ್ನಾ. ‘ಯಾಕೆ ಸಿನಿಮಾ ಕ್ಷೇತ್ರ ಬಿಟ್ಟುಬಿಡುತ್ತೀರಾ?’ ಎಂದು ಕೇಳಿದ್ದಕ್ಕೆ ’ಪೂರ್ತಿಯಾಗಿ ಬಿಟ್ಟೇ ಬಿಟ್ಟಿದ್ದೇನೆ ಎಂದಲ್ಲ. ಆದರೆ ಸದ್ಯಕ್ಕೆ ಸಾಕು ಎನಿಸಿದೆ. ಇಷ್ಟು ವರ್ಷ ನಟಿಸಿದೆನಲ್ಲ; ಇನ್ನು ಮೇಲೆ ಬೇರೆ ಏನಾದರೂ ಮಾಡೋಣ ಅಂದುಕೊಂಡಿದ್ದೇನೆ. ಅದಕ್ಕಾಗಿಯೇ ಬೆಂಗಳೂರಿನ ಆಚೆಯೇ ಸಿದ್ಧತೆಯನ್ನೂ ಮಾಡಿಕೊಂಡಿದ್ದೇನೆ’ ಎಂದು ಗೋಡೆಯ ಮೇಲಿನ ದೀಪದ ಬೆಳಕಿನಂತೆ ತೇಲಿಸಿ ಮಾತನಾಡಿದರು.

‘ಹಾಗಾದರೆ ಇನ್ನು ಮೇಲೆ ನಿಮ್ಮನ್ನು ತೆರೆಯ ಮೇಲೆ ನೋಡಲು ಸಾಧ್ಯವಿಲ್ಲ ಅನ್ನಿ’ ಎಂದು ಇನ್ನಷ್ಟು ಕೆಣಕಿದಾಗ ‘ಆ...’ ಎಂದು ಕೊಂಚ ರಾಗ ಎಳೆದು ‘ಸಾಧ್ಯವೇ ಇಲ್ಲ ಎಂದೂ ಖಚಿತವಾಗಿ ಹೇಳಲಾರೆ. ನಾಳೆ ಏನಾಗುತ್ತದೋ ಯಾರಿಗೆ ಗೊತ್ತು? ಸದ್ಯಕ್ಕಂತೂ ಯಾವ ಸಿನಿಮಾವನ್ನೂ ಒಪ್ಪಿಕೊಳ್ಳುತ್ತಿಲ್ಲ’ ಎಂದರು.

ಅವರು ನಾಯಕಿಯಾಗಿ ನಟಿಸಿರುವ ‘ಟಾಸ್’ ಸಿನಿಮಾ ಇದೇ ತಿಂಗಳ 21ರಂದು ಬಿಡುಗಡೆಯಾಗಲಿದೆ. ದಯಾಳ್‌ ಪದ್ಮನಾಭನ್‌ ನಿರ್ದೇಶನದ ‘ಟಾಸ್‌’ ಸಿನಿಮಾ ಶುರುವಾಗಿದ್ದು ಐದು ವರ್ಷಗಳ ಹಿಂದೆ. ಮುಗಿದಿದ್ದು ಕೆಲವು ತಿಂಗಳುಗಳ ಹಿಂದೆ. ಬಿಡುಗಡೆಯಾಗುತ್ತಿರುವುದು ಈಗ. ಐದು ವರ್ಷಗಳ ಹಿಂದಿನ ಸಿನಿಮಾವೊಂದು ಈಗ ಬಿಡುಗಡೆಯಾಗುತ್ತಿರುವುದರ ಕುರಿತು ರಮ್ಯಾ ಅವರಿಗೆ ಯಾವ ಆತಂಕವೂ ಇಲ್ಲ. ಇದಕ್ಕೆ ಕಾರಣ ಆ ಸಿನಿಮಾದ ವಸ್ತು ಮತ್ತು ತಾಂತ್ರಿಕ ಗುಣಮಟ್ಟದ ಮೇಲೆ ಅವರಿಗಿರುವ ನಂಬಿಕೆ.

‘ಆ ಸಿನಿಮಾವನ್ನು ಈಗ ಮಾಡಬೇಕಿತ್ತು’ ಎನ್ನುತ್ತಾರೆ ಅವರು. ಅದಕ್ಕೆ ಅವರು ನೀಡುವ ಕಾರಣಗಳು ಹೀಗಿವೆ: ‘ಟಾಸ್‌ ಸಿನಿಮಾ ಇಂದಿನ ಪೀಳಿಗೆಯವರಿಗೆ ಸರಿಯಾಗಿ ಹೊಂದುವ ಕಥೆ. ಅಷ್ಟು ಅಡ್ವಾನ್ಸ್ಡ್‌ ಕಥೆಯನ್ನು ದಯಾಳ್‌ ಪದ್ಮನಾಭನ್‌ ಅವರು ಐದು ವರ್ಷಗಳ ಹಿಂದೆಯೇ ಸಿನಿಮಾ ಮಾಡಲು ಹೊರಟಿದ್ದರು. ಆದ್ದರಿಂದ ಈ ಸಿನಿಮಾ ಖಂಡಿತವಾಗಿಯೂ ಹಳೆಯ ಸಿನಿಮಾ ಅನಿಸಲ್ಲ. ಅದರ ತಾಜಾತನ ಟ್ರೇಲರ್‌ ನೋಡಿದರೇ ತಿಳಿಯುತ್ತದೆ. ಇದೊಂದು ತುಂಬ ವಿಭಿನ್ನವಾದ ಕಥೆ. ನನ್ನ ತಿಳಿವಳಿಕೆಯಲ್ಲಿ ಇಂಥ ಸಿನಿಮಾ ಇನ್ನೂ ಬಂದಿಲ್ಲ.

ತುಂಬಾ ಟ್ರೆಂಡಿಯಾಗಿ, ಯುವ ಮನಸ್ಸುಗಳಿಗೆ ಇಷ್ಟವಾಗುವ ಸಿನಿಮಾ ಇದು’ ಎಂದು ಅವರು ಷರಾ ಬರೆಯುವುದೂ ಅಲ್ಲದೇ ‘ಪ್ರೇಮಕಥೆ ಎಂದಿಗೂ ಓಲ್ಡ್‌ ಫ್ಯಾಷನ್‌ ಆಗಲ್ಲ ಅಲ್ವಾ?’ ಎಂದು ಜಾಣತನದಿಂದ ಪ್ರಶ್ನೆ ಎಸೆಯುತ್ತಾರೆ. ‘ಆಗ ಲಭ್ಯವಿದ್ದ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಸಿನಿಮಾ ಮಾಡಿದ್ದರಿಂದ ತಾಂತ್ರಿಕವಾಗಿಯೂ ಅದು ಅಷ್ಟೇ ಶಕ್ತವಾಗಿದೆ’ ಎಂಬ ಸಮರ್ಥನೆಯನ್ನೂ ಸೇರಿಸುತ್ತಾರೆ.

ಆ ಸಿನಿಮಾದ ಕಥೆಯೇ ಅವರನ್ನು ಅತಿಯಾಗಿ ಆಕರ್ಷಿಸಿ ಟಾಸ್‌ನ ಒಂದು ಮುಖವಾಗುವಂತೆ ಮಾಡಿದೆ. ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎನ್ನುವುದು ರಮ್ಯಾ ಇದುವರೆಗೆ ಪಾಲಿಸಿಕೊಂಡು ಬಂದಿರುವ ತತ್ವ. ಆದರೆ ಈ ಸಿನಿಮಾದಲ್ಲಿ ಒಂದೇ ಸಿನಿಮಾದಲ್ಲಿ ಮೂರು ಛಾಯೆಯುಳ್ಳ ಪಾತ್ರ ಅವರಿಗೆ ಸಿಕ್ಕಿದೆ. ಈ ಪಾತ್ರ ಅವರಿಗೆ ಸಾಕಷ್ಟು ತೃಪ್ತಿಯನ್ನೂ ನೀಡಿದೆಯಂತೆ. ‘ಈ ಚಿತ್ರದಲ್ಲಿ ಟ್ರಾಫಿಕ್‌ ಪೊಲೀಸ್‌ ಇನ್ಸ್‌ಪೆಕ್ಟರ್‌, ಭರತನಾಟ್ಯ ಕಲಾವಿದೆ, ಹಾಗೆಯೇ ಫ್ಯಾಷನ್‌ ಡಿಸೈನರ್‌ ಮೂರು ರೀತಿಯ ಛಾಯೆ ನನ್ನ ಪಾತ್ರಕ್ಕಿದೆ. ಜನರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ’ ಎಂದು ಅವರು ಖುಷಿಯಿಂದ ಹೇಳಿಕೊಳ್ಳುತ್ತಾರೆ.

ಚಿತ್ರೀಕರಣದ ಸಂದರ್ಭದಲ್ಲಿ ಟ್ರಾಫಿಕ್‌ ಪೊಲೀಸ್‌ ಸಮವಸ್ತ್ರ ತೊಟ್ಟು ರಸ್ತೆಯಲ್ಲಿ ಅಭಿನಯಿಸುವಾಗ ಜನರು ಇವರನ್ನು ನಿಜವಾದ ಟ್ರಾಫಿಕ್‌ ಪೊಲೀಸ್‌ ಎಂದುಕೊಂಡು ಇವರ ಆಜ್ಞೆಗಳನ್ನು ಅಕ್ಷರಶಃ ಪಾಲಿಸುತ್ತಿದ್ದರಂತೆ! ‘ಚಿತ್ರೀಕರಣದ ದಿನಗಳನ್ನು ನೆನೆಸಿಕೊಂಡರೆ ಈಗಲೂ ಮನಸ್ಸು ಖುಷಿಯಿಂದ ಅರಳುತ್ತದೆ’ ಎಂದು ಅವರು ಕಣ್ಣರಳಿಸುತ್ತಾರೆ.

ಈ ಸಿನಿಮಾ ನಂತರ ರಮ್ಯಾ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಸದ್ಯಕ್ಕೆ ರಮ್ಯಾ ಈಗ ಯಾವ ಚಿತ್ರವನ್ನೂ ಒಪ್ಪಿಕೊಳ್ಳುತ್ತಿಲ್ಲ. ‘ಇದು ನನ್ನ ಅಭಿನಯದ ಕೊನೆಯ ಸಿನಿಮಾ ಆಗಿ ಬಿಡುಗಡೆಯಾಗುತ್ತಿದೆ.

ಟಾಸ್‌’ ಮೂಲಕ ಚಿತ್ರರಂಗಕ್ಕೆ ವಿದಾಯ ಹೇಳುತ್ತಿರುವುದಕ್ಕೆ ಖುಷಿಯಿದೆ’ ಎಂದೂ ಹೇಳಿದ್ದಾರೆ!

ಸಿನಿಮಾ ರಂಗ ಸಾಕು ಅನಿಸಿದ್ದು ಯಾಕೆ ಎಂಬುದಕ್ಕೆ ನಿರ್ದಿಷ್ಟವಾದ ಕಾರಣಗಳನ್ನೂ ಅವರು ನೀಡುವುದಿಲ್ಲ. ‘ಬೇರೆ ಬ್ಯುಸಿನೆಸ್‌ ಸಿದ್ಧತೆಯಲ್ಲಿದ್ದೇನೆ. ಸಿನಿಮಾಕ್ಕೆ ಸಾಕಷ್ಟು ಸಮಯ ಕೊಡಲು ಆಗುತ್ತಿಲ್ಲ’ ಎನ್ನುವ ಅವರು ಯಾವ ಬ್ಯುಸಿನೆಸ್‌ನಲ್ಲಿ ತೊಡಗಿಕೊಳ್ಳುತ್ತಾರೆ ಎಂಬ ಸುಳಿವು ಕೊಡದೇ ನುಣುಚಿಕೊಳ್ಳುತ್ತಾರೆ.

ಪ್ರವಾಸ ಅಂದರೆ ರಮ್ಯಾ ಅವರಿಗೆ ಪಂಚಪ್ರಾಣ. ತಮ್ಮ ಬಿಡುವಿನ ಬಹುತೇಕ ವೇಳೆಯನ್ನು ಅವರು ಪ್ರವಾಸದಲ್ಲಿಯೇ ಕಳೆಯುತ್ತಾರೆ. ಸಾಧ್ಯವಾದಾಗಲೆಲ್ಲ ಸಿನಿಮಾಗಳನ್ನು ನೋಡುತ್ತಾರೆ.

’ಪ್ಲ್ಯಾನ್‌ ಹಾಕಿಕೊಂಡು ಅದರ ಪ್ರಕಾರವೇ ಬದುಕನ್ನು ರೂಪಿಸಿಕೊಳ್ಳುವುದು ನನ್ನ ಜಾಯಮಾನ ಅಲ್ಲ’ ಎನ್ನುವ ಅವರು ಈಗ ಚಿತ್ರರಂಗ ತೊರೆಯಲು ನಿರ್ಧರಿಸಿರುವುದೂ ಒಂದು ಅಚಾನಕ್‌ ಆದ ನಿರ್ಧಾರವೇ. ಇಂಥದ್ದೇ ಇನ್ನೊಂದು ತಿರುವಿನಲ್ಲಿ ಹಾದು ಕೆಲ ಸಮಯದ ನಂತರ ತಿರುಗಿ ಚಿತ್ರರಂಗಕ್ಕೆ ಬಂದರೂ ಬರಬಹುದು! ಇದು ಬರೀ ಊಹೆಯಲ್ಲ, ಅವರ ಮಾತಿನಲ್ಲಿಯೇ ಸಿಕ್ಕ ಸುಳಿವೂ ಹೌದು.

ಪ್ರತಿಕ್ರಿಯಿಸಿ (+)