ಶುಕ್ರವಾರ, ಡಿಸೆಂಬರ್ 6, 2019
17 °C

ಸ್ಯಾನಿಟರಿ ಪ್ಯಾಡ್‍ಗಳ ಮೇಲಿನ ತೆರಿಗೆ ಸಮಂಜಸವೇ?

Published:
Updated:
ಸ್ಯಾನಿಟರಿ ಪ್ಯಾಡ್‍ಗಳ ಮೇಲಿನ ತೆರಿಗೆ ಸಮಂಜಸವೇ?

ಸ್ಯಾನಿಟರಿ ನ್ಯಾಪ್‌ಕಿನ್‌ಗಳಿಗೆ ಜಿಎಸ್‌ಟಿ ತೆರಿಗೆ ವಿಧಿಸಿರುವ ಬಗ್ಗೆ ಓದುಗರ ಪ್ರತಿಕ್ರಿಯೆ ಕೇಳಿದ್ದೆವು. ಅತ್ಯುತ್ತಮ ಸ್ಪಂದನ ದೊರಕಿದೆ. ಅವುಗಳನ್ನು ಪ್ರತಿದಿನ ಇಲ್ಲಿ ಪ್ರಕಟಿಸಲಾಗುತ್ತಿದೆ. ಅಂದ ಹಾಗೆ ನಿಮ್ಮ ಪ್ರಕಾರ, ಸ್ಯಾನಿಟರಿ ನ್ಯಾಪ್‌ಕಿನ್‌ಗಳಿಗೆ ಶೇ.12 ತೆರಿಗೆ ವಿಧಿಸಿದ್ದು ಸರಿಯೇ? ನಿಮ್ಮ ಅಭಿಪ್ರಾಯವನ್ನು ಬರೆದು, ನಿಮ್ಮ ಭಾವಚಿತ್ರದೊಂದಿಗೆ ನಮಗೆ ಕಳುಹಿಸಿ.

ನಮ್ಮ ವಾಟ್ಸಾಪ್‌ ಸಂಖ್ಯೆ: 95133 22931; ಇಮೇಲ್: metropv@prajavani.co.in

*

ಜೂನ್ ಒಂದರಿಂದ ಜಾರಿಗೆ ಬಂದಿರುವ ಸ್ಯಾನಿಟರಿ ನ್ಯಾಪ್‌ಕಿನ್‌ ಮೇಲೆ ವಿಧಿಸಿರುವ ಜಿಎಸ್‌ಟಿ ತೆರಿಗೆ ತೀವ್ರ ಚರ್ಚೆಗೆ ಒಳಗಾಗಿದೆ. ಸಮಾಜದ ವಿವಿಧ ಸ್ತರದ ಜನರು ಇದನ್ನು ಪ್ರತಿರೋಧಿಸುತ್ತಿದ್ದಾರೆ. ಜನಸಾಮಾನ್ಯರಿಂದಲೂ, ವರ್ತಕರಿಂದಲೂ ಇದು ಟೀಕೆಗೆ ಒಳಗಾಗಿದೆ. ದುರಂತವೆಂದರೆ ಸರ್ಕಾರ ಇದನ್ನು ಜನಹಿತವೆಂದು ಬಣ್ಣಸುತ್ತಿದೆ, ಆದರೆ ನಿಜಸ್ಥಿತಿಯೇ ಬೇರೆ.

ಸರಾಸರಿ 11-12 ಪ್ರಾಯದ ಬಾಲಕಿಯರಿಂದ 50 ವರ್ಷದ ಮಹಿಳೆಯರಿಗೆ ತಮ್ಮ ಋತುಚಕ್ರದ ದಿನಗಳಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಅವಶ್ಯವಾದ ಸ್ಯಾನಿಟರಿ ಪ್ಯಾಡ್‍ಗಳ ಮೇಲೆ ಶೇ 12 ತೆರಿಗೆ ವಿಧಿಸಲಾಗಿದೆ. ನಮ್ಮ ದೇಶದ ಪರಿಸ್ಥಿತಿಯಲ್ಲಿ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದ ಮನೆಗಳಲ್ಲಿ ಇಂದಿಗೂ ಊಟ, ಬಟ್ಟೆ, ಶಿಕ್ಷಣಕ್ಕೆ ಆದಾಯ ಸಾಕಾಗುತ್ತಿಲ್ಲ.

ಇನ್ನು ಕುಟುಂಬದ ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ನ್ಯಾಪ್‍ಕಿನ್‍ಗಳನ್ನು ಒದಗಿಸಿಕೊಡುವುದು ದೂರದ ಮಾತೇ ಸರಿ! ಋತುಚಕ್ರದ ದಿನಗಳಲ್ಲಿ ಹೆಣ್ಣುಮಕ್ಕಳು ಅನುಭವಿಸುವ ಹೊಟ್ಟೆ ನೋವು, ಸೊಂಟ ನೋವು ಅರಿತಿರುವ ತಾಯಂದಿರು ಹೇಗೋ ತಮ್ಮ ಹೆಣ್ಣು ಮಕ್ಕಳಿಗೆ ಇದನ್ನು ಒದಗಿಸುತ್ತಿರುತ್ತಾರೆ. ಇದು ದುಬಾರಿಯಾದಾಗ ಅದಕ್ಕೆ ಕತ್ತರಿ ಬೀಳುತ್ತದೆ.

ಮಹಿಳೆಯರನ್ನು ಎರಡನೇ ದರ್ಜೆ ನಾಗರಿಕಳೆಂದು ಕಾಣದೆ ಸಮಾಜಕ್ಕೆ ಅವಳು ನೀಡುವ ಕೊಡುಗೆಯನ್ನು ಗೌರವಿಸುತ್ತಾ ಅವಳ ಹಿತ ಕಾಪಾಡುವುದು ಒಂದು ಪ್ರಜಾತಂತ್ರ ದೇಶದ ಕನಿಷ್ಠ ಕರ್ತವ್ಯ. ಪುರುಷ ಪ್ರಧಾನ ಸಮಾಜದ ಮೌಲ್ಯಗಳಿಂದ ತತ್ತರಿಸುತ್ತಿರುವ ಎಲ್ಲಾ ಹೆಣ್ಣು ಮಕ್ಕಳು ತಮ್ಮ ಅವಶ್ಯಕತೆಗಳಿಗೆ ಆಗ್ರಹಿಸಿ ಗಟ್ಟಿ ದನಿ ಎತ್ತಿ ಕೂಗಬೇಕು, ಸರ್ಕಾರದ ವಂಚನೆಯನ್ನು ಬಯಲು ಮಾಡಬೇಕು.

–ಅಪರ್ಣಾ ಬಿ.ಆರ್‌

*

ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಮೇಲೆ ಜಿಎಸ್‌ಟಿ ವಿಧಿಸಿರುವುದು ಸರಿಯಲ್ಲ. ಮೊದಲೇ ಜೀವನಾವಶ್ಯಕ ವಸ್ತುಗಳೆಲ್ಲಾ ದುಬಾರಿಯಾಗಿರುವ ಈ ಕಾಲದಲ್ಲಿ ದುಡಿದು ತಂದ ದುಡ್ಡಿನಲ್ಲಿ ಜೀವನ ಸಾಗಿಸುವುದು ಕಷ್ಟ. ತಿಂಗಳು ತಿಂಗಳು ಅಷ್ಟೊಂದು ದುಡ್ಡು ವೆಚ್ಚ ಮಾಡಿ ಕೊಂಡುಕೊಳ್ಳಲಾಗದು. ಬಟ್ಟೆಗಳನ್ನು ಉಪಯೋಗಿಸಿದರೆ ಸೋಂಕು ಹಾಗೂ ಆರೋಗ್ಯಕ್ಕೆ ಹಾನಿ. ಮಹಿಳಾ ಹಿತಾದೃಷ್ಟಿಯಿಂದ ಯೋಚಿಸಿ ಜಿಎಸ್‌ಟಿ ಮುಕ್ತಗೊಳಿಸಬೇಕು.

–ಭಾಗ್ಯಾ ಅರುಣ್‌ ಚಂದಾಪುರ

*

ಸ್ಯಾನಿಟರಿ ನ್ಯಾಪ್‌ಕಿನ್‌ ಮೇಲೆ ತೆರಿಗೆ ವಿಧಿಸಿರುವುದು ಹೆಣ್ಣುಮಕ್ಕಳ ಶೋಷಣೆ ಮತ್ತು ಮಲತಾಯಿ ಧೋರಣೆ. ಹೆಣ್ಣು ಮಕ್ಕಳ ಸಿಟ್ಟು ಏನೆಂದು ತಿಳಿಯಬೇಕು. ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಸರ್ಕಾರವೇ ಶಾಲಾ, ಕಾಲೇಜು ಹಾಗೂ ಆಸ್ಪತ್ರೆಗಳಲ್ಲಿ ನ್ಯಾಯವಾದ ಬೆಲೆಗೆ ಮಾರಾಟ ಮಾಡಲಿ.

–ಡಿ.ಎಸ್‌. ನಾಗರಾಜ ಮೈಸೂರು ರಸ್ತೆ*

ಋತುಸ್ರಾವ ಸ್ವಾಭಾವಿಕ ಕ್ರಿಯೆ. ಆ ದಿನಕ್ಕೆ ಸ್ಯಾನಿಟರಿ ಪ್ಯಾಡ್‌ಗಳು ಅತ್ಯವಶ್ಯಕ. ಈಗಿನ ಧಾವಂತದ ದಿನಗಳಲ್ಲಿ ಬಟ್ಟೆಯನ್ನು ಉಪಯೋಗಿಸಲು ಕಷ್ಟ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಪ್ಯಾಡ್‌ ಮೇಲೆ ವಿಧಿಸಿರುವ ಜಿಎಸ್‌ಟಿ ಹೆಣ್ಣುಮಕ್ಕಳ ಹೆಣ್ಣುಮಕ್ಕಳ ಆರೋಗ್ಯದ ಬಗ್ಗೆ ಅದಕ್ಕೆ ಇರುವ ಕಾಳಜಿಯನ್ನು ತಿಳಿಸುತ್ತದೆ. ಜಿಎಸ್‌ಟಿ ರದ್ದುಗೊಳಿಸಲಿ.

–ಗೀತಾ

ಪ್ರತಿಕ್ರಿಯಿಸಿ (+)