ಸೋಮವಾರ, ಡಿಸೆಂಬರ್ 16, 2019
26 °C
ಬಿಜೆಪಿ ಮುಖಂಡರಿಂದ ಶಾಂತಿ ಸಭೆ ಬಹಿಷ್ಕಾರ

ಮತಾಂಧ ಶಕ್ತಿಗಳ ದಮನಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮತಾಂಧ ಶಕ್ತಿಗಳ ದಮನಕ್ಕೆ ಆಗ್ರಹ

ಮಂಗಳೂರು: ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಮತಾಂಧ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಶಾಂತಿ ಸಭೆಯಲ್ಲಿ ವ್ಯಕ್ತವಾಯಿತು.

‘ಕೆಲವೇ ಜನರು ನಡೆಸುವ ದುಷ್ಕೃತ್ಯಗಳಿಂದ ಇಡೀ ದಕ್ಷಿಣ ಕನ್ನಡ ಜಿಲ್ಲೆಗೆ ಕಳಂಕ ಬರುತ್ತಿದೆ. ಆಗಾಗ ನೆತ್ತರು ಹರಿಸಿ ಜಿಲ್ಲೆಯ ಜನರ ನೆಮ್ಮದಿ ಕದಡುವ ಮತಾಂಧ ಶಕ್ತಿಗಳನ್ನು ಯಾವುದೇ ಮುಲಾಜಿಲ್ಲದೇ ಬಗ್ಗುಬಡಿಯಬೇಕು. ಪೊಲೀಸರು ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು. ಕೋಮು ಗಲಭೆಗಳು ನಡೆದ ಸಂದರ್ಭದಲ್ಲಿ ಅಮಾಯಕರನ್ನು ಬಂಧಿಸಿ, ಕಿರುಕುಳ ಕೊಡುವುದನ್ನು ನಿಲ್ಲಿಸಬೇಕು’ ಎಂದು ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕರು ಆಗ್ರಹಿಸಿದರು.

ಬಹಿಷ್ಕಾರ: ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್‌ಕುಮಾರ್‌ ಕೊಲೆ ಆರೋಪಿಗಳನ್ನು ಬಂಧಿಸದೇ ಇರುವುದು ಮತ್ತು ಸಂಘ ಪರಿವಾರದ ಸಂಘಟನೆಗಳಿಗೆ ಆಹ್ವಾನ ನೀಡದಿರುವುದನ್ನು ವಿರೋಧಿಸಿ ಬಿಜೆಪಿ ಮುಖಂಡರು ಸಭೆಯನ್ನು ಬಹಿಷ್ಕರಿಸಿದ್ದರು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ಎಲ್ಲ ಚುನಾಯಿತ ಪ್ರತಿನಿಧಿಗಳು, ನೋಂದಾಯಿತ ರಾಜಕೀಯ ಪಕ್ಷಗಳ ಜಿಲ್ಲಾ ಘಟಕಗಳ ಮುಖ್ಯಸ್ಥರು, ಶಿಕ್ಷಣ ಸಂಸ್ಥೆಗಳ ಪ್ರಮುಖರಿಗೆ ಸಭೆಗೆ ಆಹ್ವಾನ ನೀಡಲಾಗಿತ್ತು. ಸಭೆಗೆ ಹಾಜರಾಗಿದ್ದ ಜೆಡಿಎಸ್‌ ಪ್ರತಿನಿಧಿಗಳು, ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಶಾಂತಿಗಾಗಿ ಸೌಹಾರ್ದಯಾತ್ರೆ ನಡೆಸಲು ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ ಎಂದು ಆರೋಪಿಸಿ ಸಭೆಯಿಂದ ಹೊರನಡೆದರು. ಕಾಂಗ್ರೆಸ್‌, ಸಿಪಿಎಂ, ಸಿಪಿಐ, ಎಸ್‌ಡಿಪಿಐ ಮತ್ತು ದಲಿತ ಸಂಘಟನೆಗಳ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಭೆಯ ಅಂತ್ಯದಲ್ಲಿ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ‘ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಕೋಮುವಾದಿಗಳ ದುಷ್ಕೃತ್ಯಗಳನ್ನು ನಾವು ಏಕಕಾಲಕ್ಕೆ ಖಂಡಿಸಬೇಕು. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕೋಮು ಘರ್ಷಣೆ ಗೆರಿಲ್ಲಾ ಯುದ್ಧದ ಸ್ವರೂಪ ಪಡೆದುಕೊಂಡಿರುವುದು ಆತಂಕಕಾರಿ. ಕೆಲವು ದುಷ್ಕರ್ಮಿಗಳು ನಡೆಸುವ ನಿಯೋಜಿತ ಸಂಘಟಿತ ಅಪರಾಧವನ್ನು ಹತ್ತಿಕ್ಕಲು ಜಿಲ್ಲಾಡಳಿತ ಸನ್ನದ್ಧವಾಗಿದೆ’ ಎಂದರು.

* ಮುಖ್ಯಮಂತ್ರಿ ಪ್ರೀತಿ ಪಾತ್ರರೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ಶರತ್ ಮಡಿವಾಳ ಅವರನ್ನು ಹತ್ಯೆ ಮಾಡಿದ್ದಾರೆ

-ಪ್ರತಾಪ ಸಿಂಹ, ಸಂಸದ

* ಬಂಟ್ವಾಳದಲ್ಲಿ ಶರತ್ ಮಡಿವಾಳ ಅವರನ್ನು ನನ್ನ ಆಪ್ತರೇ ಹತ್ಯೆ ಮಾಡಿಸಿದ್ದಾರೆ ಎಂದು ಹೇಳಿರುವ ಸಂಸದ ಪ್ರತಾಪ ಸಿಂಹ ರಾಜಕೀಯದಲ್ಲಿ ಅಪ್ರಬುದ್ಧರು’

- ಸಿದ್ದರಾಮಯ್ಯ, ಮುಖ್ಯಮಂತ್ರಿ

ಪ್ರತಿಕ್ರಿಯಿಸಿ (+)