ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ಯೋಜನೆಯ ಪ್ರಗತಿ ಅತ್ಯಂತ ಕಳಪೆ

Last Updated 14 ಜುಲೈ 2017, 5:28 IST
ಅಕ್ಷರ ಗಾತ್ರ

ಕೊಪ್ಪ: ಅಧಿಕಾರಿಗಳ ಬೇಜವಾಬ್ದಾರಿ, ನಿರ್ಲಕ್ಷ್ಯ ಧೋರಣೆಯಿಂದಾಗಿ ಕೊಪ್ಪ ಮತ್ತು ಶೃಂಗೇರಿ ತಾಲ್ಲೂಕುಗಳ ಆಶ್ರಯ ವಸತಿ ಯೋಜನೆಯ ಪ್ರಗತಿ ಕಾರ್ಯ ಅತ್ಯಂತ ಕಳಪೆ ಮಟ್ಟದಲ್ಲಿದೆ ಎಂದು ಜಿಲ್ಲಾಧಿಕಾರಿ ಜಿ. ಸತ್ಯವತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಕೊಪ್ಪ ಮತ್ತು ಶೃಂಗೇರಿ ತಾಲ್ಲೂಕುಗಳ ಆಶ್ರಯ ವಸತಿ ಯೋಜನೆ ಮತ್ತು ನಿವೇಶನ ಹಂಚಿಕೆ ಪ್ರಕ್ರಿಯೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ನಿರಾಶ್ರಿತ ಬಡವರಿಗೆ ವಸತಿ ಸೌಲಭ್ಯ ಕಲ್ಪಿಸುವ ಸರ್ಕಾರದ ಮಹತ್ವಪೂರ್ಣ ಯೋಜನೆ ಯನ್ನು ಗೊಂದಲದ ಗೂಡಾಗಿಸಿರುವ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದು ಕೊಂಡರು.

‘ಜಿಲ್ಲೆಯಲ್ಲಿ ವಸತಿ ಯೋಜನೆಯ ಪ್ರಗತಿ ಕುಂಠಿತವಾಗಿರುವ ಕಾರಣ ತಾವು ಎಲ್ಲ ತಾಲ್ಲೂಕುಗಳ ಪ್ರತಿ ಗ್ರಾಮವಾರು ಪ್ರಗತಿ ಪರಿಶೀಲನೆ ನಡೆಸುತ್ತಿದ್ದು, ಚಿಕ್ಕ ಮಗಳೂರು, ಕಡೂರು, ತರೀಕೆರೆ ತಾಲ್ಲೂಕುಗಳಲ್ಲಿ ಪ್ರಗತಿ ಕಂಡುಬಂದಿದೆ. ನರಸಿಂಹರಾಜಪುರದಲ್ಲಿ ನಡೆಸಿದ ಪ್ರಗತಿ ಪರಿಶೀಲನೆಯೂ ತೃಪ್ತಿದಾಯಕವಾಗಿದೆ.

ಆದರೆ, ಕೊಪ್ಪ ಮತ್ತು ಶೃಂಗೇರಿ ತಾಲ್ಲೂಕುಗಳಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆ ಅಧಿ ಕಾರಿಗಳಲ್ಲಿ ಸಮನ್ವಯತೆ ಕೊರತೆಯಿಂದ ಯೋಜನೆ ನನೆಗುದಿಗೆ ಬಿದ್ದಿದ್ದು, ‘ನಿವೇಶನರಹಿತರ ಹೋರಾಟ ಸಮಿತಿ’ ಯಂತಹ ಸಂಘಟನೆಗಳು ಹುಟ್ಟಿಕೊಂಡು ಬೀದಿಗಿಳಿಯುವ ಸನ್ನಿವೇಶ ಸೃಷ್ಟಿಯಾಗಿರುವುದು ದುರಂತ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕಿನ ಬಹುತೇಕ ಪಂಚಾಯಿತಿ ಗಳ ಪಿಡಿಒಗಳು ವಿವರಣೆ ನೀಡಿ, ‘ನಿವೇಶನ ಹಂಚಿಕೆಗಾಗಿ ಫಲಾನುಭವಿ ಗಳ ಪಟ್ಟಿ ಸಿದ್ಧವಾಗಿದೆ. ಆದರೆ, ಅರಣ್ಯ ಇಲಾಖೆಯಿಂದ ನಿರಾಕ್ಷೇ ಪಣೆಗಾಗಿ ಕಳುಹಿಸಿದ ಕಡತಗಳು ಹಿಂದಿ ರುಗದೆ ನಿವೇಶನ ಹಂಚಿಕೆ ಸಾಧ್ಯವಾಗಿಲ್ಲ’ ಎಂದೂ, ಇನ್ನು ಕೆಲವರು ‘ಕಡತ ಎ.ಸಿ ಕಚೇರಿಗೆ ಹೋಗಿದೆ. ವಾಪಾಸು ಬಂದಿಲ್ಲ’ ಎಂದೂ ಸಬೂಬು ನೀಡಿದಾಗ ಸಿಡಿಮಿಡಿಗೊಂಡ ಜಿಲ್ಲಾಧಿಕಾರಿ ‘ಮೀಸಲು ಅರಣ್ಯ ಹೊರತುಪಡಿಸಿದ ಜಾಗಕ್ಕೆ ಅರಣ್ಯ ಇಲಾಖೆಯ ಒಪ್ಪಿಗೆ ಬೇಡವೆಂದು ಈ ಹಿಂದೆಯೇ ತಿಳಿಸಿದ್ದರೂ ಕಡತಗಳನ್ನು ಅಲ್ಲಿಗೇಕೆ ಕಳುಹಿಸುತ್ತೀರಿ’ ಎಂದು ಪ್ರಶ್ನಿಸಿದರು.

ನಿವೇಶನ ಹಂಚಿಕೆಗೆ ಗುರುತಿಸಿದ ಗ್ರಾಮಗಳ ಸರ್ವೆ ನಂಬರ್‌ಗಳಲ್ಲಿ ಅರಣ್ಯ ಭೂಮಿ ಎಷ್ಟಿದೆ? ಕಂದಾಯ ಭೂಮಿ ಎಷ್ಟಿದೆ ಎಂದು ಪ್ರಶ್ನಿಸಿದಾಗ ಮಾಹಿತಿ ನೀಡಲು ತಡಕಾಡಿದ ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಗೆ, ‘ನಿಮ್ಮ ಗ್ರಾಮಗಳ ಬಗ್ಗೆ ನನಗೆ ತಿಳಿದಿರು ವಷ್ಟು ಮಾಹಿತಿ ನಿಮಗೆ ತಿಳಿದಿಲ್ಲವೆಂದರೆ ಹೇಗೆ? ಜಿಲ್ಲಾಧಿಕಾರಿಯ ಸಭೆಗೆ ಪೂರ್ವ ತಯಾರಿಯಿಂದ ಬರಬೇಕೆಂದು ಗೊತ್ತಿಲ್ಲವೇ?’ ಎಂದು ರೇಗಿದರು. ‘ಇನ್ನು ಮುಂದೆ ವಸತಿ ಯೋಜನೆಗೆ ಸಂಬಂಧ ಪಟ್ಟ ಕಡತಗಳನ್ನು ಎಸಿ ಕಚೇರಿಗೆ ಕಳುಹಿಸುವುದು ಬೇಡ. ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೇ ಕಳುಹಿಸಿ. ಕೂಡಲೇ ಇತ್ಯರ್ಥಪಡಿಸಿ ವಾಪಸ್‌ ಕಳುಹಿಸಲಾಗುವುದು’ ಎಂದರು.

ಪ್ರಸ್ತಾಪಿತ ಅರಣ್ಯ ವ್ಯಾಪ್ತಿಯಲ್ಲಿ ವಸತಿ ಬಡಾವಣೆಗೆ ಜಾಗ ಗುರುತಿಸಿದ್ದರೆ ಕಂದಾಯ ಮತ್ತು ಅರಣ್ಯ ಇಲಾಖೆ ಅಧಿ ಕಾರಿಗಳು ಜಂಟಿ ಸರ್ವೆ ನಡೆಸಿ ಅರಣ್ಯ ಹೊರತಾದ ಜಾಗದ ಮಾಹಿತಿಯನ್ನು ಕೂಡಲೇ ತಮಗೆ ಸಲ್ಲಿಸಬೇಕು ಎಂದು ಸೂಚಿಸಿದರು.

ಕೊಪ್ಪ ಗ್ರಾಮಾಂತರ ಪಂಚಾಯಿತಿ ಯಲ್ಲಿ 100 ಫಲಾನುಭವಿಗಳಿಗೆ ವಿತರಿಸಲು ಸಿದ್ಧವಾಗಿರುವ ಹಕ್ಕುಪತ್ರ ಗಳಿಗೆ ಸಹಿ ಹಾಕಲು ಹಿಂದೇಟು ಹಾಕುತ್ತಿ ರುವ ಬಗ್ಗೆ ಸಭೆಗೆ ಗೈರಾಗಿದ್ದ ತಹ ಶೀಲ್ದಾರ್ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿ, ‘ನಿಮಗೆ ಸಹಿ ಹಾಕಲಾಗ ದಿದ್ದರೆ ನನಗೆ ಕಳುಹಿಸಿ. ನಾನು ಸಹಿ ಮಾಡುತ್ತೇನೆ’ ಎಂದರಲ್ಲದೆ, ನಾಳೆ ದಿನವೇ ತಹಶೀಲ್ದಾರ್, ಇಒ ಮತ್ತು ಪಿಡಿಒ ಜಿಲ್ಲಾಧಿಕಾರಿ ಕಚೇರಿಗೆ ಬರ ಬೇಕು. ನಾನೇ ಇತ್ಯರ್ಥಪಡಿಸಿ ಕೊಡು ತ್ತೇನೆ ಎಂದರು.

ವಸತಿ ಬಡಾವಣೆಗೆ ಮೂಲಸೌಲಭ್ಯ ಕಲ್ಪಿಸಲು ಈ ಪಂಚಾಯಿತಿಯವರು 100 ಫಲಾನುಭವಿಗಳಿಂದ ತಲಾ ₹ 10 ಸಾವಿರ ವಸೂಲಿಗೆ ಮುಂದಾಗಿರುವುದು ಅಕ್ಷ್ಯಮ್ಯ ಅಪರಾಧ. ಹಾಗೆ ಮಾಡಿದರೆ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

‘ವಸತಿ ಬಡಾವಣೆ ಜಾಗದ ಸರ್ವೆಗೆ ಹಿಂದೇಟು ಹಾಕುವ ಸರ್ವೆಯರ್ ಹಿರೇ ಕೊಡಿಗೆ ಸರ್ವೆ ನಂ 87ರ ನಿವೇಶನದ ಸರ್ವೆಗೆ ಭಾನುವಾರ ಹೋಗಿದ್ದೇಕೆಂದು ಪ್ರಶ್ನಿಸಿದರು. ‘ಅವತ್ತು ಜಾಗದ ಗಲಾಟೆ ಆಗಿ ಪೊಲೀಸರು ಬಂದಿದ್ದರಿಂದ ಹೋಗಿದ್ದೆ’ ಎಂದು ಸರ್ವೆಯರ್ ತಿಳಿಸಿದಾಗ, ‘ರಾಜಕೀಯದವರು ಗಲಾಟೆ ಮಾಡಿಸುತ್ತಾರೆ. ಹಾಗಂತ ನೀವು ಕಾನೂನು ಮೀರಿ ಕೆಲಸ ಮಾಡುತ್ತೀರಾ? ಎಂದರು.

ಬಿಂತ್ರವಳ್ಳಿ ಪಂಚಾಯಿತಿಯಲ್ಲಿ ವಸತಿ ಯೋಜನೆಗೆ ಕಾದಿರಿಸಿದ ಜಾಗ ಒತ್ತುವರಿಯಾಗಿರುವ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿ, ‘ಪ್ರಭಾವಿಗಳೇ ಒತ್ತುವರಿ ಮಾಡಿ ಕೂತರೆ ಬಡವರು ಎಲ್ಲಿಗೆ ಹೋಗ ಬೇಕು?’ ಎಂದರಲ್ಲದೆ, ನಿರ್ದಾಕ್ಷಿಣ್ಯ ವಾಗಿ ಒತ್ತುವರಿ ತೆರವುಗೊಳಿಸುವಂತೆ ಪಿಡಿಒಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆರ್. ರಾಗಪ್ರಿಯಾ, ಮುಖ್ಯ ಯೋಜನಾಧಿಕಾರಿ ಹನುಮಂತಪ್ಪ, ಉಪ ಅರಣ್ಯ ಸಂರ ಕ್ಷಣಾಧಿಕಾರಿ ಬಸವರಾಜು, ಕೊಪ್ಪ ಇಒ ಬಿ. ಅರುಣ್‌ ಕುಮಾರ್, ಶೃಂಗೇರಿ ಇಒ ಅಪ್ಪಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT