ಶನಿವಾರ, ಡಿಸೆಂಬರ್ 14, 2019
21 °C

ಹಳೇ ವಾಹನ ಬಜಾರ್‌ ಮೇಲೆ ‘ಜಿಎಸ್‌ಟಿ’ ಕರಿನೆರಳು

ಓದೇಶ ಸಕಲೇಶಪುರ Updated:

ಅಕ್ಷರ ಗಾತ್ರ : | |

ಹಳೇ ವಾಹನ ಬಜಾರ್‌ ಮೇಲೆ ‘ಜಿಎಸ್‌ಟಿ’ ಕರಿನೆರಳು

ಹುಬ್ಬಳ್ಳಿ: ಏಕರೂಪ ತೆರಿಗೆ ವ್ಯವಸ್ಥೆ ‘ಜಿಎಸ್‌ಟಿ’ (ಸರಕು ಮತ್ತು ಸೇವಾ ತೆರಿಗೆ) ಜಾರಿಯಾದ ಬಳಿಕ, ಹಳೆಯ ವಾಹನಗಳ ಮಾರಾಟದ ಪ್ರಮಾಣ ಗಣನೀಯವಾಗಿ ಕುಸಿದಿದೆ. ಗ್ರಾಹಕರಿಂದ ಸದಾ ಗಿಜಿಗುಡುತ್ತಿದ್ದ ಹಳೇ ವಾಹನಗಳ ಮಾರಾಟ ಮಾಡುವ ಆಟೊ ಕನ್ಸಲ್ಟೆಂಟ್ ಕೇಂದ್ರಗಳು ಇದೀಗ ಭಣಗುಡುತ್ತಿವೆ.

ಐನೂರು ಮತ್ತು ಸಾವಿರ ಮುಖಬೆಲೆಯ ನೋಟುಗಳ ಚಲಾವಣೆ ರದ್ದುಗೊಂಡಾಗ, ಒಂದು ಹಂತಕ್ಕೆ ಇಳಿಕೆ ಕಂಡಿದ್ದ ಹಳೇ ಕಾರುಗಳು ಮತ್ತು ದ್ವಿಚಕ್ರ ವಾಹನಗಳ ಮಾರಾಟ, ಜಿಎಸ್‌ಟಿ ಬಳಿಕ ಸಂಪೂರ್ಣ ನೆಲ ಕಚ್ಚಿದೆ. ಇದರಿಂದಾಗಿ ನೂರಾರು ಸಂಖ್ಯೆಯ ವಾಹನಗಳನ್ನು ಮಾರಾಟ ಮಾಡುವ ದೊಡ್ಡ,ದೊಡ್ಡ ಆಟೊ ಕನ್ಸಲ್ಟೆಂಟ್‌ ಏಜೆನ್ಸಿಗಳನ್ನು ಒಳಗೊಂಡಂತೆ ಬೀದಿ ಬದಿಯ ಬಜಾರ್‌ಗಳು ನಷ್ಟದಲ್ಲಿವೆ.

ವೈಯಕ್ತಿಕ ಬಳಕೆಯ ಕಾರು, ಬೈಕ್ ಹಾಗೂ ಸ್ಕೂಟರ್‌ಗಳು ಇಂತಹ ಬಜಾರ್‌ಗಳಲ್ಲಿ ಸಾಮಾನ್ಯವಾಗಿ ಮಾರಾಟವಾಗುತ್ತವೆ. ಇಲ್ಲಿ ಬೈಕ್‌ಗಳ ಬೆಲೆ ಕನಿಷ್ಠ ₹ 10 ಸಾವಿರದಿಂದ ಆರಂಭವಾದರೆ, ಕಾರುಗಳ ಬೆಲೆ ಕನಿಷ್ಠ ₹ 50 ಸಾವಿರದವರೆಗೆ ಇರುತ್ತದೆ. ಹಾಗಾಗಿ, ಮಾರುಕಟ್ಟೆ ಬೆಲೆಗೆ ಬ್ರಾಂಡೆಡ್ ಕಾರು ಅಥವಾ ಬೈಕ್‌ಗನ್ನು ಖರೀದಿಸುವ ಸಾಮರ್ಥ್ಯ ಇಲ್ಲದವರು, ಇಂತಹ ಹಳೆಯ ಬಜಾರ್‌ಗಳಿಗೆ ಬಂದು ಕಡಿಮೆ ಮೊತ್ತಕ್ಕೆ ಖರೀದಿಸುತ್ತಾರೆ.

ದಿಢೀರ್ ಕುಸಿತ: ‘ಕಳೆದ ನವೆಂಬರ್‌ನಲ್ಲಿ ನೋಟು ರದ್ದಾಗುವುದಕ್ಕೆ ಮುಂಚೆ, ತಿಂಗಳಿಗೆ ಏನಿಲ್ಲವೆಂದರೂ 15ರಿಂದ 20 ಕಾರುಗಳನ್ನು ಮಾರಾಟ ಮಾಡುತ್ತಿದ್ದೆವು. ನೋಟು ರದ್ದಾಗಿದ್ದೇ ತಡ, ಮಾರಾಟದಲ್ಲಿ ಭಾರಿ ಇಳಿಕೆಯಾಯಿತು. ಇದೀಗ ಜಿಎಸ್‌ಟಿ ಜಾರಿಯಾದ ನಂತರ, ಒಂದೇ ಒಂದು ಕಾರು ಸಹ ಮಾರಾಟವಾಗಿಲ್ಲ’ ಎನ್ನುತ್ತಾರೆ ಹುಬ್ಬಳ್ಳಿಯ ಕಲ್ಯಾಣ ಆಟೊ ಜೋನ್‌ನ ಯಶವಂತ್.

‘ಮಾಲೀಕರು ಇಲ್ಲಿಗೆ ತಂದು ಬಿಡುವ ಕಾರುಗಳು ಗರಿಷ್ಠ ಮೂರು ತಿಂಗಳೊಳಗೆ ಮಾರಾಟವಾಗುತ್ತವೆ. ಆದರೆ, ಕಳೆದ ತಿಂಗಳಿಂದ ಇತ್ತ ತಿರುಗಿ ನೋಡುವವರೇ ಕಡಿಮೆಯಾಗಿದ್ದಾರೆ’ ಎಂದು ಅವರು ಪರಿಸ್ಥಿತಿಯನ್ನು ಬಿಚ್ಚಿಡುತ್ತಾರೆ.

ನಗದು ಅವಲಂಬಿಸಿದ ವ್ಯವಹಾರ: ಹಳೆಯ ವಾಹನಗಳ ಮಾರಾಟ ಬಹುತೇಕ ನಗದು ವ್ಯವಹಾರವನ್ನೇ ಅವಲಂಭಿಸಿದೆ. ಇದೀಗ, ಬ್ಯಾಂಕುಗಳ ವ್ಯವಹಾರಗಳಿಗೆ ಕಮಿಷನ್ ಹೆಚ್ಚಾಗಿದೆ. ಖಾತೆಯಿಂದ ಹೆಚ್ಚು ನಗದು ತೆಗೆಯುವ ಅಥವಾ ಪಾವತಿಸುವುದಕ್ಕೆ ಸಂಬಂಧಿಸಿದಂತೆ, ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲಾಗಿದೆ.

ಸರ್ಕಾರ ಇತ್ತೀಚೆಗೆ, ಕ್ಯಾಶ್‌ಲೆಸ್ ವ್ಯವಹಾರಕ್ಕೆ ಒತ್ತು ನೀಡುತ್ತಿದೆ. ಹಾಗಾಗಿ, ಜನರ ಕೈಯಲ್ಲೂ ಹೆಚ್ಚು ಹಣ ನಿಲ್ಲುತ್ತಿಲ್ಲ. ಹಾಗಾಗಿ, ನಗದು ವ್ಯವಹಾರವನ್ನೇ ಅವಲಂಬಿಸಿದ ಹಳೆಯ ವಾಹನಗಳ ಮಾರಾಟದ ಮೇಲೆ ಕರಿನೆರಳು ಬೀರಿದೆ.

ಗಾಯದ ಮೇಲೆ ಬರೆ: ‘ನಮ್ಮ ಪಾಲಿಗೆ ಜಿಎಸ್‌ಟಿ ಎಂದರೆ, ಗಾಯದ ಮೇಲೆ ಎಳೆದ ಬರೆ. ವ್ಯವಹಾರ ಈಗ ಸಂಪೂರ್ಣ ನೆಲ ಕಚ್ಚಿದೆ. ನೋಟು ರದ್ದಿಗೂ ಮುನ್ನ, ತಿಂಗಳಿಗೆ ಕನಿಷ್ಠ 50 ಬೈಕ್‌ಗಳನ್ನು ಮಾರಾಟ ಮಾಡುತ್ತಿದ್ದೆವು. ರದ್ದಾದ ಬಳಿಕ ಅದು 25ಕ್ಕೆ ಕುಸಿಯಿತು. ಜಿಎಸ್‌ಟಿ ಜಾರಿಯಾಗಿ ಇಂದಿಗೆ 12 ದಿನ ಕಳೆದಿದೆ.

ಇಷ್ಟು ದಿನದಲ್ಲಿ ಮಾರಾಟವಾಗಿರುವ ಬೈಕ್‌ಗಳ ಸಂಖ್ಯೆ ಕೇವಲ ಆರು. ಹೀಗೆ ಆದರೆ, ಬದುಕಿಗೆ ಏನು ಮಾಡುವುದು?’ ಎಂದು ತಮ್ಮ ವ್ಯವಹಾರಕ್ಕೆ ಮುಳುವಾದ ಜಿಎಸ್‌ಟಿ ಬಗ್ಗೆ, ಕಮರಿಪೇಟೆಯ ಡೈಮಂಡ್ ಆಟೊಲಿಂಕ್ಸ್‌ನ ಯಲ್ಲಪ್ಪ ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಜಿಎಸ್‌ಟಿ ಜಾರಿ ಬಳಿಕ ಹಳೆ ವಾಹನ ಖರೀದಿಸಿದರೆ, ಎಲ್ಲಿ ತೊಂದರೆಯಾಗುತ್ತದೊ ಎಂಬ ಆತಂಕ ಜನರಲ್ಲಿದೆ. ಇದು ತಪ್ಪು ಕಲ್ಪನೆ. ನಾವು ಮಾಲೀಕರು ಮತ್ತು ಗ್ರಾಹಕರ ನಡುವಿನ ಮಧ್ಯವರ್ತಿಗಳಗಷ್ಟೆ. ನಮ್ಮಿಂದ ವಾಹನ ಖರೀದಿಸುವವರಿಗೆ ಮೂಲ ದಾಖಲೆಗಳ ಜತೆಗೆ, ರಸೀದಿ ನೀಡುತ್ತೇವೆ.

ಸ್ಥಳೀಯ ಆರ್‌ಟಿಒ ಕಚೇರಿಯಿಂದ ನಿರಾಕ್ಷೇಪಣ ಪ್ರಮಾಣಪತ್ರ ಕೊಡಿಸುತ್ತೇವೆ. ಹಾಗಾಗಿ, ಗ್ರಾಹಕರು ನಮ್ಮಲ್ಲಿ ವಾಹನ ಖರೀದಿಸಿದರೆ ಮುಂದೆ ತೊಂದರೆಯಾಗುತ್ತದೆ ಎಂದು ಭಯಪಡುವ ಅಗತ್ಯವಿಲ್ಲ’ ಎಂದು ಹುಬ್ಬಳ್ಳಿ ಆಟೊ ಕನ್ಸಲ್ಟೆಂಟ್ಸ್‌ನ ಗಣಪತಿ ವಿವರಿಸುತ್ತಾರೆ.

ಹೊಸ ವಾಹನಗಳ ಆಕರ್ಷಣೆ

ವಾಹನ ತಯಾರಿಕಾ ಕಂಪೆನಿಗಳು ಆಗಾಗ ಹೊಸ ಮಾದರಿಯ ವಾಹನಗಳನ್ನು ಮಾರುಕಟ್ಟೆಗೆ ಬಿಡುತ್ತವೆ. ಜತೆಗೆ, ವಾಹನಗಳ ಬದಲಾವಣೆ (ಎಕ್ಸ್‌ಚೆಂಜ್) ಮೇಲೆ ರಿಯಾಯಿತಿ ದರಗಳನ್ನು ಕೊಡುತ್ತವೆ. ಆಗಾಗ, ಎಕ್ಸ್‌ಚೆಂಜ್ ಮೇಳಗಳನ್ನು ಸಹ ನಡೆಸುತ್ತವೆ.

ಕಂಪೆನಿಗಳ ಹೊಸ ಮಾದರಿಯ ವಾಹನಗಳಿಗೆ ಆಕರ್ಷಿತರಾಗುವ ಗ್ರಾಹಕರು, ತಮಗೆ ಕುದುರುವ ಮೊತ್ತ ಅಲ್ಲಿ ಸಿಕ್ಕರೆ ಹಳೆ ವಾಹನ ಕೊಟ್ಟು ಹೊಸದನ್ನು ಖರೀದಿಸುತ್ತಾರೆ. ಒಂದು ವೇಳೆ ಸಿಗದಿದ್ದರೆ, ಆಟೊ ಕನ್ಸಲ್ಟೆಂಟ್ ಏಜೆನ್ಸಿಗಳಿಗೆ ಇಂತಿಷ್ಟು ಬೆಲೆ ನಿಗದಿ ಮಾಡಿ ಮಾರಾಟಕ್ಕೆಂದು ಬಿಡುತ್ತಾರೆ.

ಏಜೆನ್ಸಿಯವರು ಆ ವಾಹನವನ್ನು ಮಾಲೀಕ ಗೊತ್ತುಪಡಿಸಿದ ಬೆಲೆಗೆ ಮಾರಾಟ ಮಾಡಿ, ಗ್ರಾಹಕ ಮತ್ತು ಮಾಲೀಕನಿಂದ ಕಮಿಷನ್ ಪಡೆಯುತ್ತಾರೆ. ಕನಿಷ್ಠ ಹತ್ತು ವಾಹನಗಳನ್ನು ಮಾರಾಟ ಮಾಡುವ ಏಜೆನ್ಸಿಗಳಿಂದಿಡಿದು, ಸಾವಿರಾರು ವಾಹನಗಳನ್ನು ಮಾರಾಟ ಮಾಡುವ ಏಜೆನ್ಸಿಗಳು ಇವೆ. ಕೆಲ ವಾಹನ ತಯಾರಿಕಾ ಕಂಪೆನಿಗಳು ಸಹ ಇಂತಹ ಏಜೆನ್ಸಿಗಳನ್ನು ನಡೆಸುವುದುಂಟು.

* * 

ಕಾರ್‌ವಾಲಾ, ಓಎಲ್‌ಎಕ್ಸ್‌ ಸೇರಿದಂತೆ ಹಲವು ಆನ್‌ಲೈನ್‌ ಮಾರಾಟ ಕಂಪೆನಿಗಳು ಇದರಲ್ಲಿ ತೊಡಗಿವೆ. ಇದು ಸಹ ನಮ್ಮ ವ್ಯವಹಾರಕ್ಕೆ ಸವಾಲಾಗಿ ಪರಿಣಮಿಸಿದೆ

ಗಣಪತಿ

ಹುಬ್ಬಳ್ಳಿ ಆಟೊ ಕನ್ಸಲ್ಟೆಂಟ್ಸ್

ಪ್ರತಿಕ್ರಿಯಿಸಿ (+)