ಶುಕ್ರವಾರ, ಡಿಸೆಂಬರ್ 6, 2019
18 °C
ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿಗೆ ಜೆಡಿಯು ಪ್ರಶ್ನೆ

ಅಪಾರ ಆಸ್ತಿ ಗಳಿಸಿದ್ದು ಹೇಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಪಾರ ಆಸ್ತಿ ಗಳಿಸಿದ್ದು ಹೇಗೆ

ಪಟ್ನಾ: ಬಿಹಾರದ ಆಡಳಿತಾರೂಢ ಮಹಾಮೈತ್ರಿ ಕೂಟದ ಪ್ರಮುಖ ಅಂಗಪಕ್ಷಗಳಾದ ಆರ್‌ಜೆಡಿ ಮತ್ತು ಜೆಡಿಯು ನಡುವಣ ಬಿರುಕು ಇನ್ನಷ್ಟು ಗಾಢವಾಗಿದೆ. ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಮಗ, ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌ ಅವರ ಆದಾಯದ ಮೂಲ ಯಾವುದು ಎಂದು ತಿಳಿಸುವಂತೆ ಜೆಡಿಯು ಕೇಳಿದೆ.

‘ಸಣ್ಣ ವಿಚಾರವನ್ನು ದೊಡ್ಡ ವಿವಾದವಾಗಿ ಮಾಡಲಾಗಿದೆ. ನಿಮ್ಮ ಆದಾಯದ ಮೂಲ ಯಾವುದು ಮತ್ತು ಭಾರಿ ಪ್ರಮಾಣದ ಆಸ್ತಿ ಗಳಿಸಲು ಹೇಗೆ ಸಾಧ್ಯವಾಯಿತು ಎಂಬುದನ್ನು ತಿಳಿಸಿದರಷ್ಟೇ ಸಾಕು. ನೀವು ಯಾವ ತಪ್ಪೂ ಮಾಡಿಲ್ಲ ಎಂದಾದರೆ ಪ್ರತಿ ಆರೋಪಕ್ಕೂ ಸ್ಪಷ್ಟನೆ ನೀಡುವ ಮೂಲಕ ವಿರೋಧಿಗಳಿಗೆ ತಿರುಗೇಟು ನೀಡಿ’ ಎಂದು ಜೆಡಿಯು ವಕ್ತಾರ ನೀರಜ್‌ ಕುಮಾರ್‌ ಅವರು ತೇಜಸ್ವಿಗೆ ಹೇಳಿದ್ದಾರೆ.

ಭ್ರಷ್ಟಾಚಾರ ಆರೋಪ ಹೊತ್ತಿರುವವರು ಸಂಪುಟದಲ್ಲಿ ಮುಂದುವರಿಯುವುದು ಸಾಧ್ಯವಿಲ್ಲ ಎಂಬ ನಿಲುವಿನಲ್ಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಗಟ್ಟಿಯಾಗಿ ನಿಂತಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನಿತೀಶ್‌ ಮತ್ತು ಲಾಲು ಪ್ರಸಾದ್‌ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಸಂಧಾನಕ್ಕೆ ಪ್ರಯತ್ನಿಸಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಆದರೆ ಕಾಂಗ್ರೆಸ್‌ ಮುಖಂಡರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಇದನ್ನು ದೃಢಪಡಿಸಿಲ್ಲ. ಎರಡು ದಿನಗಳ ಹಿಂದೆ ಸೋನಿಯಾ ಅವರು ನಿತೀಶ್‌ ಅವರಿಗೆ ಕರೆ ಮಾಡಿದ್ದರು. ವಿರೋಧ ಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿ ಅವರಿಗೆ ಬೆಂಬಲ ನೀಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಲು ಈ ಕರೆ ಮಾಡಿದ್ದರು ಎಂದು ಅವರು ಹೇಳಿದ್ದಾರೆ.

ಬಿಹಾರ ಬಿಕ್ಕಟ್ಟಿನ ಬಗ್ಗೆ ಅವರು ಹೆಚ್ಚು ಚರ್ಚೆ ನಡೆಸಿಲ್ಲ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

ಮೇವು ಹಗರಣದ ವಿಚಾರಣೆಗಾಗಿ ರಾಂಚಿಗೆ ಹೋಗಿದ್ದ ಲಾಲು ಶುಕ್ರವಾರ ಸಂಜೆ ಪಟ್ನಾಕ್ಕೆ ಹಿಂದಿರುಗಿದ್ದಾರೆ. ಎರಡೂ ಪಕ್ಷಗಳಿಗೆ ಮುಖಭಂಗ ಆಗದ ರೀತಿಯಲ್ಲಿ ಸಂಧಾನ ಸೂತ್ರವೊಂದು ಸಿದ್ಧವಾಗುತ್ತಿದೆ ಎಂದು ತಿಳಿದು ಬಂದಿದೆ.

ತಮ್ಮನ್ನು ಪ್ರಕರಣದಲ್ಲಿ ಸಿಬಿಐ ಹೇಗೆ ಸಿಲುಕಿಸಿದೆ ಎಂಬುದನ್ನು ತೇಜಸ್ವಿ ವಿವರಿಸಲಿದ್ದಾರೆ ಎಂದು ಆರ್‌ಜೆಡಿ ಮೂಲಗಳು ಹೇಳಿವೆ.

ಪ್ರತಿಕ್ರಿಯಿಸಿ (+)