ಶುಕ್ರವಾರ, ಡಿಸೆಂಬರ್ 6, 2019
17 °C

‘ನೀವು ಶಾಸಕರಾಗಿಯೂ ಆಯ್ಕೆ ಆಗಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ನೀವು ಶಾಸಕರಾಗಿಯೂ ಆಯ್ಕೆ ಆಗಲ್ಲ’

ಬೆಂಗಳೂರು: ‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನೀವು ಶಾಸಕರಾಗಿಯೂ ಆಯ್ಕೆ ಆಗಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಸವಾಲು ಹಾಕಿದರು.

‘ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಅವರು ಅವರಪ್ಪನಾಣೆ ಮುಖ್ಯಮಂತ್ರಿ ಆಗಲ್ಲ ಎಂದು ಹೋದ ಕಡೆಗಳೆಲ್ಲ ಮುಖ್ಯಮಂತ್ರಿ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಅವರಿಗೆ ಅಧಿಕಾರ ಮತ್ತು ಹಣದ ಮದ ಬಂದಿದೆ’ ಎಂದು ಮಾಧ್ಯಮಗೋಷ್ಠಿಯಲ್ಲಿ ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದರು.

‘ಉಪ ಚುನಾವಣೆಯಲ್ಲಿ ಗೆದ್ದ ಗುಂಡ್ಲುಪೇಟೆ ಮತ್ತು ಚಾಮರಾಜನಗರ ಕ್ಷೇತ್ರಗಳನ್ನೂ ಕಾಂಗ್ರೆಸ್‌ ಪಕ್ಷ ಉಳಿಸಿಕೊಳ್ಳಲು ಸಾಧ್ಯ ಇಲ್ಲ ಎನ್ನುವುದನ್ನು ಛಾಪಾ ಕಾಗದದಲ್ಲಿ ಬರೆದುಕೊಡುತ್ತೇನೆ’ ಎಂದರು.

‘ಅಭ್ಯರ್ಥಿಗಳ ಆಯ್ಕೆಗೆ ಚರ್ಚೆ’:  ‘ಶನಿವಾರದಿಂದ ಮೂರು ದಿನ ನಾನು ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು (ದೇವೇಗೌಡ) ಮುಂಬರುವ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆಸುತ್ತೇವೆ. ಈಗಾಗಲೇ ಹಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಾಗಿದೆ’ ಎಂದರು.

‘30ರಷ್ಟು ಕ್ಷೇತ್ರಗಳಲ್ಲಿ 3–4 ಆಕಾಂಕ್ಷಿಗಳಿದ್ದಾರೆ. ಅವರೆಲ್ಲರನ್ನೂ ಕರೆದು ಮಾತುಕತೆ ನಡೆಸುತ್ತೇನೆ. ಅವರ ಅಭಿಪ್ರಾಯ ಪಡೆದ ಬಳಿಕ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆ’ ಎಂದರು.

‘ಆಗಸ್ಟ್‌ನಲ್ಲಿ 40 ದಿನ ಉತ್ತರ ಕರ್ನಾಟಕ ಪ್ರವಾಸ ಮಾಡುತ್ತೇನೆ. ಸೆಪ್ಟೆಂಬರ್‌ನಲ್ಲಿ ವಿಜಯಪುರದಲ್ಲಿ ರೈತ ಸಮಾವೇಶ ಆಯೋಜಿಸಲಾಗುವುದು ಮುಂದಿನ ಚುನಾವಣೆಯಲ್ಲಿ ಉತ್ತರ ಕರ್ನಾಟಕದ ಯಾವುದಾದರೂ ಒಂದು ಕ್ಷೇತ್ರದಿಂದಲೂ ನಾನು ಸ್ಪರ್ಧಿಸಬಹುದು. ನರೇಂದ್ರ ಮೋದಿ ಎರಡು ಕ್ಷೇತ್ರಗಳಲ್ಲಿ ಚುನಾವಣೆಗೆ ನಿಲ್ಲಬಹುದಾದರೆ ನಾನ್ಯಾಕೆ ನಿಲ್ಲಬಾರದು’ ಎಂದು ಅವರು ಪ್ರಶ್ನಿಸಿದರು.

ಪ್ರತಿಕ್ರಿಯಿಸಿ (+)