ಭಾನುವಾರ, ಡಿಸೆಂಬರ್ 8, 2019
21 °C

ಮಸ್ಕಿ ಕೆರೆ ಬರಿದು; ನೀರಿಗೆ ಹಾಹಾಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಸ್ಕಿ ಕೆರೆ ಬರಿದು; ನೀರಿಗೆ ಹಾಹಾಕಾರ

ಮಸ್ಕಿ: ಪಟ್ಟಣದ ಶಾಶ್ವತ ಕುಡಿಯುವ ನೀರಿನ ಯೋಜನೆಯ ಕೆರೆಯಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕುಸಿದಿದೆ. ನೀರಿನ ಅಭಾವದಿಂದ ಪುರಸಭೆ ಆಡಳಿತ ಮಂಡಳಿ ಐದು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲು ಕ್ರಮ ಕೈಗೊಂಡಿದೆ. ಎಡದಂಡೆ ಕಾಲುವೆ ನೀರು ಬಿಡುವುದು ತಡವಾದರೆ ಸಾರ್ವಜನಿಕರಿಗೆ ನೀರಿನ ಬಿಸಿ ತಟ್ಟಲಿದೆ.

ಏಪ್ರಿಲ್‌ ತಿಂಗಳಲ್ಲಿ ತುಂಗಭದ್ರಾ ಜಲಾಶಯದಿಂದ ಎಡದಂಡೆ ಕಾಲುವೆ ನೀರು ಬಿಟ್ಟಿದ್ದರಿಂದ ಕೆರೆಯಲ್ಲಿ 18 ಅಡಿಗಳಷ್ಟು ನೀರು ಸಂಗ್ರಹ ಮಾಡಿಕೊಳ್ಳಲಾಗಿತ್ತು. ಕೆರೆಯಲ್ಲಿ ನೀರಿನ ಸೋರಿಕೆ ಹಾಗೂ ಅವೈಜ್ಞಾನಿಕ ನೀರು ನಿರ್ವಹಣೆಯಿಂದಾಗಿ ನೀರಿನ ಪ್ರಮಾಣ ಕುಸಿಯಲು ಕಾರಣ ಎಂದು ಸ್ಥಳೀಯರು ದೂರಿದ್ದಾರೆ.

‘ಕೆರೆಯಲ್ಲಿ ಶುಕ್ರವಾರ ಎರಡು ಅಡಿ ನೀರು ಇದೆ. ಒಂದು ವಾರಕ್ಕೆ ಮಾತ್ರ ನೀರು ಪೂರೈಸಲು ಸಾಧ್ಯ. ಒಂದೆರಡು ದಿನಗಳಲ್ಲಿ ತುಂಗಭದ್ರಾ ಎಡದಂಡೆ ಕಾಲುವೆ ನೀರು ಬಿಟ್ಟರೆ ನೀರಿನ ಅಭಾವ ತಪ್ಪಲಿದೆ’ ಎಂದು ಪುರಸಭೆ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ ತಿಳಿಸಿದ್ದಾರೆ.

‘ಈಗಾಗಲೇ ಐದು ದಿನಕ್ಕೊಮ್ಮೆ ಕುಡಿಯುವ ನೀರು ಬಿಡಲು ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಕೊಳವೆ ಬಾವಿಗಳಿಂದಲೂ ನೀರು ಪೂರೈಕೆ ಮಾಡಲಾಗುತ್ತಿದೆ. ಸಾರ್ವಜನಿಕರಿಗೆ ಕುಡಿಯವ ನೀರಿನ ತೊಂದರೆ ಆಗದಂತೆ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ತಿಳಿಸಿದರು.

‘ರಾಯಚೂರು ಜಿಲ್ಲೆಯಲ್ಲಿ ಕುಡಿಯುವ ನೀರಿನ ಅಭಾವ ಇರುವ ಕಾರಣ ತುಂಗಭದ್ರಾ ಜಲಾಶಯದಿಂದ ಎಡದಂಡೆ ಕಾಲುವೆಗೆ ನೀರು ಬಿಡುವಂತೆ ಜಿಲ್ಲಾಧಿಕಾರಿ ಮನವಿ ಮೇರೆಗೆ ಕಲಬುರ್ಗಿಯ ಪ್ರಾದೇಶಿಕ ಆಯುಕ್ತರು ಕರ್ನಾಟಕ ನೀರಾವರಿ ನಿಗಮದ ಮುನಿರಬಾದ್‌ ವೃತ್ತದ ಮುಖ್ಯ ಎಂಜಿನಿಯರ್‌ ಅವರಿಗೆ ಆದೇಶ ನೀಡಿದ್ದಾರೆ. ಪ್ರಾದೇಶಿಕ ಆಯುಕ್ತರ ಆದೇಶದಂತೆ ಕೂಡಲೇ ತುಂಗಭದ್ರಾ ಎಡದಂಡೆ ಕಾಲುವೆ ನೀರು ಹರಿಸಬೇಕು’ ಎಂದು ಪುರಸಭೆ ಅಧ್ಯಕ್ಷ ಮೌನೇಶ ಮುರಾರಿ ಆಗ್ರಹಿಸಿದ್ದಾರೆ.

* * 

ತುಂಗಭದ್ರಾ ಎಡದಂಡೆ ಕಾಲುವೆಗೆ ನೀರು ಬಂದ ತಕ್ಷಣ ಕುಡಿಯುವ ನೀರಿನ ಕೆರೆ ತುಂಬಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು

ಮೌನೇಶ ಮುರಾರಿ

ಅಧ್ಯಕ್ಷ , ಪುರಸಭೆ

ಪ್ರತಿಕ್ರಿಯಿಸಿ (+)