ಗುರುವಾರ , ಡಿಸೆಂಬರ್ 12, 2019
17 °C

‘ಕಬ್ಬಿಗೆ ಎಫ್‌ಆರ್‌ಪಿ ನಿಗದಿ ಸರಿಯಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕಬ್ಬಿಗೆ ಎಫ್‌ಆರ್‌ಪಿ ನಿಗದಿ ಸರಿಯಲ್ಲ’

ಬೆಳಗಾವಿ: ‘ಕಬ್ಬಿಗೆ ನ್ಯಾಯಸಮ್ಮತ ಹಾಗೂ ಮೌಲ್ಯಾಧಾರಿತ ಬೆಲೆ (ಎಫ್‌ಆರ್‌ಪಿ) ನಿಗದಿಪಡಿರುವ ಕ್ರಮ ಸರಿಯಲ್ಲ’ ಎಂದು ಉಗಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಶಿರಗಾಂವಕರ ಹೇಳಿದರು. ಪುಣೆಯ ಡೆಕ್ಕನ್‌ ಸಕ್ಕರೆ ತಂತ್ರಜ್ಞರ ಸಂಸ್ಥೆಯಿಂದ ಇಲ್ಲಿನ ಜವಾಹರಲಾಲ್‌ ನೆಹರೂ ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಆರಂಭವಾದ 63ನೇ ವಾರ್ಷಿಕ ಸಮ್ಮೇಳನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕಬ್ಬಿಗೆ ಶಾಸನಾತ್ಮಕ ಕನಿಷ್ಠ ಬೆಲೆ (ಎಸ್‌ಎಂಪಿ) ನಿಗದಿಪಡಿಸುವ ಹಿಂದಿನ ಕ್ರಮವೇ ಸರಿಯಾಗಿತ್ತು. ಇದರಿಂದ ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಯವರಿಗೆ ಅನುಕೂಲವಾಗಿತ್ತು. ಇದನ್ನು ಯಾಕೆ ರದ್ದುಪಡಿಸಿದರೋ ಗೊತ್ತಿಲ್ಲ. ಹೊಸದಾಗಿ ಜಾರಿಗೊಳಿಸಿರುವ ಎಫ್‌ಆರ್‌ಪಿಯಿಂದಾಗಿ ರೈತರು ಹಾಗೂ ರೈತಮುಖಂಡರು ಹೆಚ್ಚಿನ ದರವನ್ನು ನೀಡುವಂತೆ ಪಟ್ಟು ಹಿಡಿಯುತ್ತಿದ್ದಾರೆ, ಹೋರಾಟ ಮಾಡುತ್ತಾರೆ. ಇದರಿಂದ ಸಕ್ಕರೆ ಉದ್ಯಮ ಸಂಕಷ್ಟದಲ್ಲಿದೆ. ಇದರಿಂದ ಕಬ್ಬು ಬೆಳೆಗಾರರಿಗೂ ನಷ್ಟವಾಗುತ್ತಿದೆ’ ಎಂದು ತಿಳಿಸಿದರು.

ಸಮ್ಮೇಳನ ಉದ್ಘಾಟಿಸಿದ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ‘30–40 ವರ್ಷದ ಹಿಂದೆ ಸಕ್ಕರೆ ಉತ್ಪಾದನೆ, ಇಳುವರಿ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ, ಈಗ ಪೈಪೋಟಿಯಿಂದಾಗಿ ಸುಧಾರಿತ ಕ್ರಮಗಳನ್ನು ಅನುಸರಿಸಬೇಕಾಗಿದೆ. ತಂತ್ರಜ್ಞಾನಗಳು ಬದಲಾಗುತ್ತಿವೆ. ಇದಕ್ಕೆ ತಕ್ಕಂತೆ ಹೂಡಿಕೆ ಮಾಡಬೇಕಾಗಿದೆ. ಇವೆಲ್ಲವುಗಳಿಂದಾಗಿ ಸಕ್ಕರೆ ಕಾರ್ಖಾನೆಗಳು ಆರ್ಥಿಕ ತೊಂದರೆ ಅನುಭವಿಸುತ್ತಿವೆ. ಉತ್ಪಾದನಾ ವೆಚ್ಚ ಕಡಿಮೆ ಮಾಡುವುದಕ್ಕೆ ಈಗ ಮಹತ್ವ ನೀಡಬೇಕಾಗಿದೆ’ ಎಂದರು.

ತಂತ್ರಜ್ಞಾನ ಬಳಸಿ: ಜಿಲ್ಲಾಧಿಕಾರಿ ಎನ್‌. ಜಯರಾಮ್‌ ಮಾತನಾಡಿ, ‘ವಿದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕಬ್ಬಿನ ಇಳುವರಿ ಕಡಿಮೆ ಇದೆ. ಹೆಚ್ಚಿನ ಇಳುವರಿ ನೀಡುವ, ಕಡಿಮೆ ಅವಧಿಯಲ್ಲಿ ಕಟಾವಿಗೆ ಬರುವ ಹಾಗೂ ನೀರು ಮಿತವ್ಯಯದ ತಳಿಗಳನ್ನು ಅವಲಂಬಿಸುವುದು ಇಂದಿನ ಅಗತ್ಯವಾಗಿದೆ. ಇದರಿಂದ ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳವರಿಗೆ ಅನುಕೂಲವಾಗುತ್ತದೆ. ಅತ್ಯಾಧುನಿಕ ಹಾಗೂ ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಕೆಯಿಂದ ಉತ್ಪಾದನಾ ವೆಚ್ಚ ಕಡಿಮೆ ಮಾಡಿಕೊಳ್ಳಬಹುದು’ ಎಂದರು.

‘ಕರ್ನಾಟಕದಲ್ಲಿ ಪ್ರಮುಖವಾಗಿ 16 ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆಯಲಾಗುತ್ತದೆ. ಕಾರ್ಖಾನೆಗಳಲ್ಲಿ ಕಾರ್ಯಕ್ಷಮತೆ ಹೆಚ್ಚಿಸುವ, ಇಂಧನ ಹಾಗೂ ನೀರು ಮಿತವ್ಯಯಕ್ಕೆ ಕಾರ್ಖಾನೆಗಳು ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ಸಲಹೆ ಮಾಡಿದರು. ಸಕ್ಕರೆ ತಜ್ಞ ಭಕ್ಷಿ ರಾಮ್‌ ಮಾತನಾಡಿ, ‘ಮಳೆಯ ಕೊರೆಯಿಂದಾಗಿ ಮೂರು ವರ್ಷದಿಂದ ಕಬ್ಬಿನ ಇಳುವರಿ ಕಡಿಮೆಯಾಗಿದೆ. ಈ ಸಂದರ್ಭದಲ್ಲಿ ಸುಧಾರಿತ ತಳಿಗಳನ್ನು ಅವಲಂಬಿಸುವುದು ಮಹತ್ವದ್ದಾಗಿದೆ’ ಎಂದರು.

ಸಂಸ್ಥೆ ಅಧ್ಯಕ್ಷ ಮಾನಸಿಂಗ್‌ರಾವ್‌ ಜಾಧವ್‌, ಉಪಾಧ್ಯಕ್ಷ ಎಸ್‌.ಎಸ್‌. ಗಂಗಾವತಿ, ತಜ್ಞರಾದ ಸಮೀರ್‌ ಸೋಮಯ್ಯ, ಪ್ರಕಾಶ್‌ರಾವ್‌, ಮಾನಸಿಂಗ್‌ ಪಟೇಲ್‌, ಜಗದೀಶ ಕುಲಕರ್ಣಿ, ಬಿ.ಡಿ. ಪವಾರ್‌ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)