ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿಲ್ಲೆ ಕಾರಾದ ಸ್ವಾದ: ಸಾಟಿ ಎಲ್ಲಿ?

Last Updated 15 ಜುಲೈ 2017, 19:30 IST
ಅಕ್ಷರ ಗಾತ್ರ

ಭಿಲ್ಲೆ ಕಾರಾ..ಲಖಡ್ ಗಾಟಿ.. ಹುಬ್ಬಳ್ಳಿಯ ತಿನಿಸುಪ್ರಿಯ ಜನರಿಗೆ ಈ ಶಬ್ದಗಳು ಕಿವಿಗೆ ಬಿದ್ದರೆ ಬಾಯಲ್ಲಿ ನೀರೂರುವುದು ಖಚಿತ.

ಬ್ರಾಡ್‌ವೇಯಿಂದ ಮೇದಾರ ಓಣಿಗೆ ಹೋಗುವ ಹಾದಿಯಲ್ಲಿ ಇರುವ ಭಿಲ್ಲೆ ಕಾರಾ ಅಂಗಡಿಯಲ್ಲಿ ಸಿಗುವ ಮಿಕ್ಸರ್‌, ಹಿಟ್ಟು ಹಚ್ಚಿ ಕರಿದ ಶೇಂಗಾ, ಲಖಡ್ ಗಾಟಿ ರುಚಿ ತಿಂದವರೇ ಬಲ್ಲರು.

ಕಾರ, ಹುಳಿ, ಸಿಹಿಯ  ಹದವಾದ ಮಿಶ್ರಣದಿಂದಾಗಿ ಪದೇ ಪದೇ ತಿನ್ನಬೇಕೆಂಬ ಆಸೆ ಹುಟ್ಟಿಸುವ ರುಚಿ ಇಲ್ಲಿಯ ಕಾರಾಗೆ.

ಆದರೆ ಭಿಲ್ಲೆಯವರ ಅಂಗಡಿಯ ಈ ತಿನಿಸುಗಳು ದಿನದ ಎಲ್ಲ ಸಮಯದಲ್ಲಿಯೂ ಸಿಗುವುದಿಲ್ಲ. ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರ ಲಭ್ಯ. ಅದೂ ಗ್ರಾಹಕರ ದೊಡ್ಡ ಸರದಿ ಸಾಲಿನಲ್ಲಿ ನಿಂತು ಪಡೆಯಬೇಕು.

ಮಾರುತಿರಾವ್ ಗಂಗಾರಾಮ್ ಭಿಲ್ಲೆ ಅವರು 1958ರಲ್ಲಿ ಈ ಅಂಗಡಿ ಪ್ರಾರಂಭಿಸಿದಾಗಿನಿಂದಲೂ ಗ್ರಾಹಕರ ಬೇಡಿಕೆ ಅಪಾರವಾಗಿದೆ. ಅದೇ ಗುಣಮಟ್ಟವನ್ನು ಇದುವರೆಗೂ ಕಾಪಾಡಿಕೊಂಡಿರುವ ಭಿಲ್ಲೆ ಕುಟುಂಬವು ಮಾರಾಟದ ಪ್ರಮಾಣವನ್ನು ಮಾತ್ರ ಹೆಚ್ಚಿಸಿಲ್ಲ.

ಮಾರುತಿರಾವ್  ಕಬಡ್ಡಿ ಆಟಗಾರರಾಗಿದ್ದವರು. ಆಗಿನ ಮುಂಬೈ ಕರ್ನಾಟಕದಲ್ಲಿ ಅವರ ಆಟ ಪ್ರಸಿದ್ಧವಾಗಿತ್ತು.ಎಸ್ಸೆಸ್ಸೆಲ್ಸಿ ಓದಿದ್ದ ಅವರು ಬಹುತೇಕ ಎಲ್ಲ ಕ್ರೀಡೆಗಳಲ್ಲಿಯೂ ಮುಂದಿದ್ದರು. ರುಚಿಕಟ್ಟಾದ ಅಡುಗೆ ತಯಾರಿಕೆಯ ಜ್ಞಾನವಿದ್ದ ಅವರು ಕಾರ ಮತ್ತು ಸಿಹಿತಿನಿಸುಗಳ ಅಂಗಡಿಯನ್ನು ಆರಂಭಿಸಿದರು. ನಾಲಿಗೆಗೆ ಚುರುಕು ಮುಟ್ಟಿಸುವ ಕಾರದ ತಿನಿಸುಗಳು, ತುಪ್ಪದಲ್ಲಿ ಮುಳುಗೆದ್ದ ಹಲ್ವಾ, ಫೇಡೆಗಳು ಜನರ ಮನಗೆದ್ದವು.

‘ನಮ್ಮ ತಂದೆ ಸ್ವತಃ ಕ್ರೀಡಾಪಟು ಮತ್ತು ಪ್ರೋತ್ಸಾಹಕರಾಗಿದ್ದವರು. ‌ಆರೋಗ್ಯಕರ ತಿನಿಸುಗಳನ್ನು ತಯಾರಿಸಿ ಜನರಿಗೆ ನೀಡುವ ಉದ್ದೇಶದಿಂದ  ಗುಣಮಟ್ಟದೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳಲಿಲ್ಲ. ಹಣದಾಸೆಗೆ ವ್ಯಾಪಾರ ವೃದ್ಧಿಸಲಿಲ್ಲ. ನಾವೂ ಅದೇ ಸಿದ್ಧಾಂತ ಮುಂದುವರಿಸಿದ್ದೇವೆ’ ಎಂದು  ಮಾರುತಿರಾವ್ ಅವರ ಮಗ ಗಂಗಾಧರ್ ಹೇಳುತ್ತಾರೆ.

ಪರ ಊರುಗಳಿಂದ ಹುಬ್ಬಳ್ಳಿ–ಧಾರವಾಡಕ್ಕೆ ಹೋಗುವ ಜನರಿಗೆ ಫೇಡೆ, ಮಿರ್ಚಿ, ಗಿರ್‌ಮಿಟ್‌ಗಳ ರುಚಿ ಗೊತ್ತಿರುತ್ತದೆ. ಏಕೆಂದರೆ ಬಹಳಷ್ಟು ಮಳಿಗೆಗಳಲ್ಲಿ ಈ ತಿನಿಸುಗಳು ಸಿಗುತ್ತವೆ. ಆದರೆ, ಭಿಲ್ಲೆ ಅಂಗಡಿಯ ತಿನಿಸುಗಳಿಗೆ ಪರ್ಯಾಯವೇ ಇಲ್ಲ.

‘ಈ ತಿನಿಸುಗಳನ್ನು ತಯಾರಿಸುವ ಪ್ರಕ್ರಿಯೆಯ ರಹಸ್ಯವನ್ನು ನಾವು ಇದುವರೆಗೂ ಬಿಟ್ಟುಕೊಟ್ಟಿಲ್ಲ. ಅದನ್ನು ಯಾವುದೇ ಕಾರಣಕ್ಕೂ ಬಹಿರಂಗಪಡಿಸಲೂ ಸಾಧ್ಯವಿಲ್ಲ. ನಮ್ಮ ಜೀವನ ನಿರ್ವಹಣೆಗೆ ಸಾಕಾಗುವಷ್ಟು ಗಳಿಕೆ ಈ ಉದ್ಯೋಗದಿಂದ ಆಗುತ್ತಿದೆ. ಉಳಿದ ಸಮಯವನ್ನು ಆಟ, ಪರಿಸರ ಮತ್ತು ಪ್ರಾಣಿಗಳೊಂದಿಗೆ ಕಳೆಯುತ್ತೇವೆ’ ಎಂದು ಗಂಗಾಧರ್ ಹೇಳುತ್ತಾರೆ.

ಆಧುನಿಕ ಮಾರುಕಟ್ಟೆಯಲ್ಲಿ ಎಲ್ಲರೂ ಸ್ಪರ್ಧೆಗೆ ಬಿದ್ದು ಓಡುತ್ತಿದ್ದರೆ ಇವರು ಮಾತ್ರ ನಿರುಮ್ಮಳವಾಗಿದ್ದಾರೆ. ಮಾರುತಿರಾವ್‌ ಅವರ ಮಾದರಿಯಲ್ಲಿಯೇ ಅವರ ಮೂವರು ಮಕ್ಕಳಾದ ಗಂಗಾಧರ್, ಪ್ರಭಾಕರ್ ಮತ್ತು ಮುರಳಿ ಕೂಡ ಉತ್ತಮ ಕ್ರೀಡಾಪಟುಗಳು, ಅಲ್ಲದೇ ಪರಿಸರ ರಕ್ಷಣೆಗೆ ಕೆಲಸ ಮಾಡುತ್ತಿರುವ ಸಹೋದರರು.

‘ಈಗ ಸಿಹಿ ಪದಾರ್ಥಗಳನ್ನು ತಯಾರಿಸುವುದನ್ನು ನಿಲ್ಲಿಸಿದ್ದೇವೆ. ಕೇವಲ ಕಾರಾ ತಿನಿಸುಗಳು ಮಾತ್ರ ತಯಾರು ಮಾಡುತ್ತೇವೆ. ಅಂದೇ ತಯಾರಿಸಿ ಅಂದೇ ಖಾಲಿ ಮಾಡುತ್ತೇವೆ’ ಎಂದು ಗಂಗಾಧರ್ ಹೇಳುತ್ತಾರೆ.

ಗಂಗಾಧರ್ ಅವರು ಶ್ವಾನಪ್ರಿಯರು. ದೇಶ–ವಿದೇಶಗಳ ತಳಿಗಳ 5–6 ನಾಯಿಗಳನ್ನು ಅವರು ಸಾಕಿಕೊಂಡಿದ್ದಾರೆ. ತಮ್ಮ ತಂದೆ ಸಾಕಿದ್ದ ಪಾರಿವಾಳಗಳ ಲಾಲನೆ, ಪಾಲನೆಯನ್ನೂ ಮುಂದುವರಿಸಿದ್ದಾರೆ. ಅವರ ಮಗ ಮತ್ತು ಮಗಳು ಕೂಡ ಉತ್ತಮ ಕ್ರೀಡಾಪಟುಗಳಾಗಿದ್ದಾರೆ. ತಮ್ಮ ಕುಟುಂಬದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT