ಸೋಮವಾರ, ಡಿಸೆಂಬರ್ 16, 2019
18 °C

ಭಾರತಕ್ಕೆ ಭರ್ಜರಿ ಜಯ: ಸೆಮಿಫೈನಲ್‌ ಪ್ರವೇಶಿಸಿದ ಮಿಥಾಲಿ ಪಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತಕ್ಕೆ ಭರ್ಜರಿ ಜಯ: ಸೆಮಿಫೈನಲ್‌ ಪ್ರವೇಶಿಸಿದ ಮಿಥಾಲಿ ಪಡೆ

ಡರ್ಬಿ: ಇಲ್ಲಿ ನಡೆದ ಮಹಿಳಾ ಕ್ರಿಕೆಟ್‌ ವಿಶ್ವಕಪ್‌ ಪಂದ್ಯಾವಳಿಯ ನ್ಯೂಜಿಲೆಂಡ್ ಎದುರಿನ ಮಹತ್ವದ ಪಂದ್ಯದಲ್ಲಿ ಭಾರತ ತಂಡ 186ರನ್‌ಗಳ ಭಾರಿ ಅಂತರದ ಜಯ ಸಾಧಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

ಪಂದ್ಯದಲ್ಲಿ ಟಾಸ್‌ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕಿ ಸೂಜಿ ಬೇಟ್ಸ್ ಭಾರತಕ್ಕೆ ಬ್ಯಾಟಿಂಗ್‌ ಅವಕಾಶ ನೀಡಿ, ಬೌಲಿಂಗ್‌ ಆಯ್ದುಕೊಂಡರು.

ನಾಯಕಿಯ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಉತ್ತಮವಾಗಿ ದಾಳಿ ಸಂಘಟಿಸಿದ ಕೀವಿಸ್‌ ಬೌಲರ್‌ಗಳು ಮಿಥಾಲಿ ಪಡೆಯ ಆರಂಭಿಕ ಬ್ಯಾಟ್ಸ್‌ವುಮನ್‌ಗಳನ್ನು ಬೇಗನೆ ಪೆವಿಲಿಯನ್‌ಗಟ್ಟಿ ಸಂಭ್ರಮಿಸಿದರು.

ನಿಧಾನಗತಿಯಲ್ಲಿ ಬ್ಯಾಟ್‌ ಬೀಸುತ್ತಿದ್ದ ಸ್ಮೃತಿ ಮಂದಾನ 24 ಎಸೆತಗಳಲ್ಲಿ 13ರನ್‌ ಹಾಗೂ ಪೂನಮ್‌ ರಾವುತ್‌ 11 ಎಸೆತಗಳಲ್ಲಿ 4ರನ್‌ಗಳಿಸಿ ವಿಕೆಟ್‌ ಒಪ್ಪಿಸಿದಾಗ ಭಾರತ ತಂಡದ ಮೊತ್ತ ಕೇವಲ 21!

ಈ ವೇಳೆ ಜತೆಯಾದ ನಾಯಕಿ ಮಿಥಾಲಿ ಹಾಗೂ ಹರ್ಮನ್‌ ಪ್ರೀತ್‌ಕೌರ್‌ ಮೂರನೇ ವಿಕೆಟ್‌ಗೆ 132ರನ್‌ ಸೇರಿಸಿ ತಂಡವನ್ನು ಆತಂಕದಿಂದ ಪಾರು ಮಾಡಿದರು. ಜವಾಬ್ದಾರಿಯುತ ಆಟವಾಡಿದ ನಾಯಕಿ ಮಿಥಾಲಿ ಏಕದಿನ ಮಾದರಿಯಲ್ಲಿ ಆರನೇ ಶತಕ ಸಿಡಿಸಿ ಸಂಭ್ರಮಿಸಿದರು. ಅವರು 123 ಎಸೆತಗಳಲ್ಲಿ 109ರನ್‌ ಗಳಿಸಿದರು. ಇನ್ನೊಂದು ತುದಿಯಲ್ಲಿ ನಾಯಕಿಗೆ ಉತ್ತಮ ಬೆಂಬಲ ನೀಡಿದ ಹರ್ಮನ್‌ ಪ್ರೀತ್‌ಕೌರ್‌(60) ಸಹ ಅರ್ಧಶತಕ ಸಿಡಿಸಿ ಮಿಂಚಿದರು.

(ಶತಕ ಗಳಿಸಿದ ಮಿಥಾಲಿ ರಾಜ್‌ ಅವರನ್ನು ಅಭಿನಂದಿಸುತ್ತಿರುವ ವೇದಾ ಕೃಷ್ಣಮೂರ್ತಿ)

ಇನಿಂಗ್ಸ್‌ ಕೊನೆಯಲ್ಲಿ ಅಬ್ಬರಿಸಿದ ಕರ್ನಾಟಕದ ವೇದಾ ಕೃಷ್ಣಮೂರ್ತಿ ಕೇವಲ 45ಎಸೆತಗಳಲ್ಲಿ 70ರನ್‌ಗಳಿಸಿ ತಂಡದ ಮೊತ್ತವನ್ನು 260ರ ಗಡಿ ದಾಟಿಸುವಲ್ಲಿ ಸಹಕಾರಿಯಾದರು.

ಅಂತಿಮವಾಗಿ ಭಾರತ ತಂಡ ನಿಗದಿತ 50ಓವರ್‌ಗಳಲ್ಲಿ 7ವಿಕೆಟ್‌ ಕಳೆದುಕೊಂಡು 265ರನ್‌ಗಳಿಸಿತು.

ಗುರಿ ಬೆನ್ನುಹತ್ತಿದ್ದ ನ್ಯೂಜಿಲೆಂಡ್ ತಂಡ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿ ಕೇವಲ 79ರನ್‌ಗಳಿಗೆ ಆಲೌಟ್‌ ಆಯಿತು. ಕೀವೀಸ್‌ ನಾಡಿನ ತಂಡದ ಆ್ಯಮಿ ಸಟ್ಟರ್‌ವೈಟ್‌, ಕಟೀ ಮಾರ್ಟಿನ್‌, ಅಮೇಲಿ ಕೆರ್‌ ಹೊರತು ಪಡಿಸಿ ಉಳಿದ ಆಟಗಾರರು ಎರಡಂಕಿ ಮೊತ್ತ ಗಳಿಸುವಲ್ಲಿ ವಿಫಲರಾದರು.

(ಬಿರುಸಿನ ಆಟವಾಡಿದ ವೇದಾ ಕೃಷ್ಣಮೂರ್ತಿ ಬ್ಯಾಟಿಂಗ್‌ ವೈಖರಿ)

ಭಾರತ ಪರ ರಾಜೇಶ್ವರಿ ಗಾಯಕ್‌ವಾಡ್‌ 15ರನ್‌ಗೆ 5ವಿಕೆಟ್‌ ಪಡೆದು ಎದುರಾಳಿ ಆಟಗಾರರನ್ನು ಕಾಡಿದರು. ಉಳಿದಂತೆ ದೀಪ್ತಿ ಶರ್ಮಾ 2, ಜೂಲನ್‌ ಗೋಸ್ವಾಮಿ, ಶಿಖಾ ಪಾಂಡೆ ಮತ್ತು ಪೂನಮ್‌ ಯಾದವ್‌ ತಲಾ ಒಂದು ವಿಕೆಟ್‌ ಪಡೆದರು.

ಆರಂಭದ ಸತತ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಭಾರತ ತಂಡ ನಂತರದ ಎರಡು ಸೋಲುಕಂಡಿತ್ತು. ಹಾಗಾಗಿ ಸೆಮಿಫೈನಲ್‌ ಪ್ರವೇಶಿಸಲು ಮಿಥಾಲಿ ಪಡೆ ಈ ಪಂದ್ಯದಲ್ಲಿ ಜಯ ಗಳಿಸುವುದು ಅನಿವಾರ್ಯವಾಗಿತ್ತು.

ಪ್ರತಿಕ್ರಿಯಿಸಿ (+)