ಸೋಮವಾರ, ಡಿಸೆಂಬರ್ 16, 2019
25 °C

ಪ್ರೇಮಾಂಕುರವೂ.., ಬದುಕಿನ ವಿಧಿಯಾಟವೂ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರೇಮಾಂಕುರವೂ.., ಬದುಕಿನ ವಿಧಿಯಾಟವೂ...

–ಶಂಕರ್ ಎಂ. ಭಟ್

ಕಡುಬಡತನದಲ್ಲಿ ಹುಟ್ಟಿದಾಕೆ ರಾಜೀವಿ. ಬೆಂಗಳೂರಿನ ಮಲ್ಲೇಶ್ವರ ಬಳಿ ನೆಲೆಸಿತ್ತು ಈ ಕುಟಂಬ. ಪೋಷಕರ ಜೊತೆ ರಾಜೀವಿ ಕೂಡ ಅಲ್ಲಿ ಇಲ್ಲಿ ಕೂಲಿ ಮಾಡಿ ಬದುಕು ಕಂಡುಕೊಂಡವಳು. ಬಡತನವಿದ್ದರೂ ಶಿಕ್ಷಣಕ್ಕೆ ಕೊರತೆ ಮಾಡದ ಅಪ್ಪ ಅಮ್ಮನ ಋಣ ತೀರಿಸಲು ಕಟಿಬದ್ಧಳಾಗಿದ್ದಳು ಈಕೆ. ವಾಣಿಜ್ಯ ಪದವಿ ಮುಗಿಸಿದ ರಾಜೀವಿಗೆ ವಿಮಾ ಕಂಪೆನಿಯೊಂದರಲ್ಲಿ ಪ್ರತಿನಿಧಿಯ ಕೆಲಸ ದಕ್ಕಿತು. ತಿಂಗಳಿಗೆ ₹ 30-40 ಸಾವಿರ ವೇತನ. ಆದ್ದರಿಂದ ಆರ್ಥಿಕವಾಗಿ ಕುಟುಂಬಕ್ಕೆ ಆಸರೆಯಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಳು.

ಒಳ್ಳೆಯ ಉದ್ಯೋಗವೂ ಸಿಕ್ಕಿದ್ದರಿಂದ ಸ್ಮಾರ್ಟ್‌ಫೋನ್‌ ಕೊಂಡಳು ರಾಜೀವಿ. ಫೇಸ್‌ಬುಕ್‌ನಲ್ಲಿ ಖಾತೆಯನ್ನು ತೆರೆದಳು. ಅದರಲ್ಲಿ ಅವಳಿಗೆ ಆಂಧ್ರಪ್ರದೇಶದ  ವಾರಂಗಲ್‌ನ ಸುರೇಶ ಎಂಬಾತನ ಪರಿಚಯವಾಯಿತು. ಬೆಂಗಳೂರಿನ ಕಾಲ್‌ಸೆಂಟರ್‌ ಒಂದರಲ್ಲಿ ₹ 20-25 ಸಾವಿರ ಸಂಬಳ ಪಡೆಯುತ್ತಿದ್ದ ಸುರೇಶ. ಫೇಸ್‌ಬುಕ್‌ನಲ್ಲಿಯೇ ಪ್ರತಿದಿನ ಮಾತುಕತೆ ನಡೆದು ಸಲುಗೆ ಹೆಚ್ಚಿತು. ಈ ಸಲುಗೆ ಪ್ರೇಮಕ್ಕೆ ತಿರುಗಿ ಮದುವೆಯಾಗುವ ತನಕ ಬಂತು.

ತಾನು ಸುರೇಶನನ್ನು ಮದುವೆಯಾಗುವ ವಿಷಯವನ್ನು ರಾಜೀವಿ ತಂದೆ ತಾಯಿಗೆ ತಿಳಿಸಿದಳು. ಅವನ ಕುಲ, ಗೋತ್ರ, ಹಿನ್ನೆಲೆ ಎಲ್ಲವನ್ನೂ ಕೇಳಿದ ಅಪ್ಪ-ಅಮ್ಮ ಗಾಬರಿಯಾದರು. ಏಕೆಂದರೆ ಇಬ್ಬರದ್ದೂ ಬೇರೆ ಬೇರೆ ಜಾತಿಯಾಗಿತ್ತು. ಅಲ್ಲದೇ ಆಂಧ್ರದ ಕಮ್ಮ ಸಮುದಾಯದ ಸುರೇಶ ಶ್ರೀಮಂತ ಮನೆತನದವನಾಗಿದ್ದರಿಂದ ಅವನ ಅಪ್ಪ-ಅಮ್ಮ ಈ ಮದುವೆಗೆ ಒಪ್ಪುವುದಿಲ್ಲ ಎಂಬ ಆತಂಕವೂ ಇತ್ತು. ಆದರೆ ರಾಜೀವಿ ಹಟ ಬಿಡಲಿಲ್ಲ. ಮದುವೆಯಾದರೆ ಅವನನ್ನೇ ಆಗುವುದು ಎಂದಳು. ಇತ್ತ, ತಮ್ಮ ಏಕೈಕ ಮಗನನ್ನು ರಾಜೀವಿಗೆ ಕೊಡಲು ಸುರೇಶನ ಪೋಷಕರು ಸಹ ಒಪ್ಪಲಿಲ್ಲ. ಸುರೇಶ್‌ ಕೂಡ ಪೋಷಕರ ಮಾತಿಗೆ ಬೆಲೆ ಕೊಡಲಿಲ್ಲ.

ಇಬ್ಬರೂ ತಂದೆ-ತಾಯಿಯರ ವಿರೋಧ ಲೆಕ್ಕಿಸದೇ ಮಲ್ಲೇಶ್ವರದ ದೇವಾಲಯವೊಂದರಲ್ಲಿ ಮದುವೆಯಾದರು. ಚೆನ್ನಾಗಿ ಹೊಂದಾಣಿಕೆ ಮಾಡಿಕೊಂಡು ಬದುಕತೊಡಗಿದರು.

ತಾನೊಂದು ಬಗೆದರೆ, ದೈವವೊಂದು ಬಗೆಯುತ್ತದೆ ಎನ್ನುತ್ತಾರಲ್ಲ... ಸುರೇಶ್‌-ರಾಜೀವಿ ಬಾಳಲ್ಲೂ ಹಾಗೆಯೇ ಆಯಿತು.  ಅದೊಂದು ದಿನ ರಾಜೀವಿ ಮಲ್ಲೇಶ್ವರದಲ್ಲಿಯೇ ಇರುವ ಅವಳ ಚಿಕ್ಕಪ್ಪನ ಮನೆಗೆ ಹೋದಳು. ಅದು ಎರಡನೆಯ ಮಹಡಿಯಲ್ಲಿ ಇತ್ತು. ಹೈಹೀಲ್ಸ್‌ ಹಾಕಿದ್ದ ರಾಜೀವಿ ಇನ್ನೂ ತನ್ನ ಚಪ್ಪಲಿಯನ್ನು ಬಿಚ್ಚಿರಲಿಲ್ಲ. ಅಲ್ಲಿಯೇ ಆಡುತ್ತಿದ್ದ ಚಿಕ್ಕಪ್ಪನ ಮೊಮ್ಮಗುವನ್ನು ಎತ್ತಿಕೊಂಡು ಮುದ್ದಾಡತೊಡಗಿದಳು. ಅಷ್ಟರಲ್ಲಿಯೇ ಅವಳ ಫೋನ್‌ ರಿಂಗ್‌ ಆಯಿತು. ಯಾರು ಕರೆ ಮಾಡಿದ್ದಾರೆಂದು ನೋಡಲು ರಾಜೀವಿ, ಮಗುವನ್ನು ಅಲ್ಲಿಯೇ ಮಲಗಿಸಿ ಲಗುಬಗೆಯಿಂದ ಬಂದಳು. ಅದು ಅವಳ ಗಂಡ ಸುರೇಶ ಮಾಡಿದ ಕರೆಯಾಗಿತ್ತು. ಗಡಿಬಿಡಿಯಿಂದ ಫೋನ್‌ ಕೈಗೆತ್ತಿಕೊಂಡಳು. ಚಿಕ್ಕಪ್ಪನ ಮನೆ ಮುಖ್ಯರಸ್ತೆಯ ಬದಿಯಲ್ಲಿಯೇ ಇತ್ತು. ಮನೆಯ ಎದುರು ಭದ್ರತೆಗೆಂದು ಗ್ರಿಲ್‌ ಹಾಕಲಾಗಿತ್ತು. ಆದರೆ ಅದು ಕೇವಲ ಮೊಳಕಾಲು ಎತ್ತರವಿತ್ತು. ಮಾತನಾಡುತ್ತಾ ಹೊರಗೆ ಬಂದಾಗ ಗ್ರಿಲ್‌ ಬಳಿ ಎಡವಿದಳು. ಹೈಹೀಲ್ಸ್‌ ಚಪ್ಪಲಿ ಧರಿಸಿದ್ದರಿಂದ ಸಮತೋಲನ ಕಾಪಾಡಿಕೊಳ್ಳಲು ಆಗದೇ ಬಿದ್ದಳು. ಅವಳು ಬಿದ್ದದ್ದು ನೇರವಾಗಿ ಕಾಂಕ್ರಿಟ್ ರಸ್ತೆಗೆ!

ಮುಂದಿನೆಲ್ಲವೂ ದುರಂತವೇ. ವಿಷಯ ತಿಳಿದ ಸುರೇಶ ಮಲ್ಲೇಶ್ವರದತ್ತ ಧಾವಿಸಿದ. ರಾಜೀವಿ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಅವಳ ಮಿದುಳಿಗೆ ಹಾನಿಯಾಗಿ ಬೆನ್ನು ಮೂಳೆಗೂ ಏಟಾಗಿತ್ತು. ಹೆಂಡತಿಯನ್ನು ಆತ ಆಸ್ಪತ್ರೆಗೆ ಸೇರಿಸಿದ. ಎಲ್ಲರನ್ನೂ ಎದುರು ಹಾಕಿಕೊಂಡು ಮದುವೆಯಾಗಿ

ದ್ದರಿಂದ ಸುರೇಶನಿಗೆ ಆ ಕ್ಷಣದಲ್ಲಿ ಯಾರನ್ನೂ ಕರೆಯುವ ಧೈರ್ಯ ಆಗಲಿಲ್ಲ. ಆದ್ದರಿಂದ ತಾನೇ ಹೆಂಡತಿಯನ್ನು ನೋಡಿಕೊಳ್ಳತೊಡಗಿದ.

ಬೆಂಗಳೂರಿನ ಅತ್ಯಂತ ತಜ್ಞ ವ್ಶೆದ್ಯರಿಂದ ಚಿಕಿತ್ಸೆ ಕೊಡಿಸಿದ ಸುರೇಶ. ಹೀಗೆ ಸುಮಾರು ಮೂರು ತಿಂಗಳು ಕಳೆಯಿತು. ದೇಹದ ಮೇಲಿನ ಸಂಪೂರ್ಣ ಸ್ವಾಧೀನ ಕಳೆದುಕೊಂಡಿದ್ದ ರಾಜೀವಿ ಮೂರು ತಿಂಗಳು ಒಳರೋಗಿಯಾಗಿ ಚಿಕಿತ್ಸೆ ಪಡೆದಳು. ಇವಳನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಸುರೇಶ ಕೆಲಸಕ್ಕೆ ಹೋಗುವಂತಿರಲಿಲ್ಲ. ಆದ್ದರಿಂದ ಇಬ್ಬರಿಗೂ ಕೆಲಸ ಇಲ್ಲದಂತಾಯಿತು. ಸುದೀರ್ಘ ರಜೆ ಹಾಕಿದ್ದರಿಂದ ಇಬ್ಬರೂ ಕೆಲಸ ಕಳೆದುಕೊಂಡರು. ಅದಾಗಲೇ ಸುರೇಶ ಅವರಿವರ ಬಳಿ ಬೇಡಿ ಆಸ್ಪತ್ರೆಗೆ ಐದು ಲಕ್ಷ ರೂಪಾಯಿ ಖರ್ಚು ಮಾಡಿದ್ದ. ಕೈಯಲ್ಲಿ ಬಿಡಿಕಾಸೂ ಇಲ್ಲದಾಯಿತು. ಇಷ್ಟು ಖರ್ಚು ಮಾಡಿದರೂ ಹೆಂಡತಿ ಬದುಕುತ್ತಾಳೆ ಎನ್ನುವ ಭರವಸೆಯೂ ಇರಲಿಲ್ಲ.

ಮೂರು ತಿಂಗಳ ನಂತರ ಅರೆ ಪ್ರಜ್ಞಾವಸ್ಥೆಯಿಂದ ಕಣ್ಣು ತೆರೆದಳು ರಾಜೀವಿ. ತನ್ನ ಹೆಂಡತಿ ಬದುಕುತ್ತಾಳೆ ಎಂದು ನಂಬಿಕೆಯನ್ನೇ ಕಳೆದು

ಕೊಂಡಿದ್ದ ಸುರೇಶನ ಕಣ್ಣುಗಳಲ್ಲಿ ಭರವಸೆಯ ಮಿಂಚು ಕಂಡಿತು. ಕಣ್ಣೀರ ಕೋಡಿ ಹರಿಯಿತು. ಆದರೆ, ಬೆನ್ನು ಹುರಿಗೆ ಆದ ಪೆಟ್ಟು ರಾಜೀವಿಯನ್ನು ಜೀವನ  ಪರ್ಯಂತ ಗಾಲಿ ಖುರ್ಚಿಯಲ್ಲಿ ಇರುವಂತೆ ಮಾಡಿತು. ಅವಳ ಪ್ರತಿಯೊಂದು ಕಾರ್ಯಕ್ಕೂ ಸುರೇಶನೇ ಆಧಾರವಾಗಬೇಕಾಯಿತು. ಇನ್ನೂ ಚಿಕಿತ್ಸೆ ನೀಡಬೇಕಿರುವ ಕಾರಣ ಅವಳನ್ನು ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಮಾಡಿರಲಿಲ್ಲ.

ತಮ್ಮ ಮಗಳನ್ನು ನೋಡಲು ರಾಜೀವಿ ತಂದೆ-ತಾಯಿ ಬಂದರಾದರೂ ಅವರ ಬಳಿಯೂ ಮಗಳಿಗಾಗಿ ಖರ್ಚು ಮಾಡಲು ದುಡ್ಡು ಇರಲಿಲ್ಲ. ಇದ್ದ ದುಡ್ಡೆಲ್ಲಾ ನೀರಿನಂತೆ ಕರಗಿಹೋದಾಗ ಸುರೇಶನಿಗೆ ಬೇರೆ ದಾರಿ ಕಾಣಿಸಲಿಲ್ಲ. ತನ್ನ ಪೋಷಕರಿಗೆ ವಿಷಯ ತಿಳಿಸಿದ. ಕಾಕಿನಾಡದಿಂದ ಅವನ ಪೋಷಕರು ಆಸ್ಪತ್ರೆಗೆ ಭೇಟಿಯಿತ್ತರು. ಸೊಸೆಯ ಪರಿಸ್ಥಿತಿಯನ್ನು ನೋಡಿದ ಅವರಿಗೆ ಮಗನ ಭವಿಷ್ಯದ ಚಿಂತೆ ಕಾಡಿತು. ರಾಜೀವಿಯಿಂದ ಇನ್ನು ಯಾವ ಸುಖವೂ ತಮ್ಮ ಮಗನಿಗೆ ಸಿಗುವುದಿಲ್ಲ, ಬದಲಿಗೆ ಜೀವನಪರ್ಯಂತ ಮಗನೇ ಅವಳ ಸೇವೆ ಮಾಡಬೇಕಾಗುತ್ತದೆ ಎಂದು ತಿಳಿದು ಅವರು ಇನ್ನಷ್ಟು ಕುಗ್ಗಿ ಹೋದರು. ಆಸ್ಪತ್ರೆಯಲ್ಲಿಯೇ ಸುರೇಶ ಮತ್ತು ಪೋಷಕರ ನಡುವೆ ಶೀತಲ ಸಮರ ಶುರುವಾಯಿತು. ಸುರೇಶನಿಗೂ ಪೋಷಕರ ನೆರವು ಕೋರದೇ ವಿಧಿಯಿರಲಿಲ್ಲ. ಹೆಂಡತಿಯ ಚಿಕಿತ್ಸೆಗೆ ಇನ್ನೂ ಹಣದ ಅವಶ್ಯಕತೆ ಇದೆ ಎಂದು ಅಪ್ಪ-ಅಮ್ಮನ ಬಳಿ ಹೇಳಿದ. ಆದರೆ ಅವನ ಅಪ್ಪ-ಅಮ್ಮ ಮಾತ್ರ ಹಿಂದಿನ ವಿಷಯವನ್ನೆಲ್ಲಾ ಕೆದಕಿದರು. ಕೈತುಂಬ ವರದಕ್ಷಿಣೆ ನೀಡುವ ಹೆಣ್ಣುಮಕ್ಕಳನ್ನೆಲ್ಲಾ ಬಿಟ್ಟು ಎಲ್ಲರ ವಿರೋಧ ಕಟ್ಟಿಕೊಂಡು ಪ್ರೇಮ ವಿವಾಹವಾದುದಕ್ಕೆ ನಿನಗಾದ ಶಿಕ್ಷೆಯಿದು ಎಂದೆಲ್ಲಾ ಮೂದಲಿಸತೊಡಗಿದರು. ಆದರೆ ಆ ಸಂದರ್ಭದಲ್ಲಿ ಅವರ ವಿರುದ್ಧ ಮಾತನಾಡುವ ಪರಿಸ್ಥಿತಿಯಲ್ಲಿ ಸುರೇಶ ಇರಲಿಲ್ಲ. ಪೋಷಕರ ಬೈಗುಳಗಳನ್ನು ಮೌನವಾಗಿ ಆಲಿಸತೊಡಗಿದ.

ತನ್ನ ಅತ್ತೆ-ಮಾವ ಮತ್ತು ಗಂಡನ ನಡುವೆ ನಡೆಯುತ್ತಿರುವ ಮಾತುಕತೆಯನ್ನು ಆಲಿಸಿದ ರಾಜೀವಿಗೆ ಬರಸಿಡಿಲು ಬಡಿದಂತಾಗಿತ್ತು. ಗಂಡನ ಅಸಹಾಯಕತೆ ನೋಡಿ ಅವಳ ಕರುಳು ಚುರುಗುಟ್ಟಿತು. ಆದರೆ ಏನೂ ಮಾಡುವ ಪರಿಸ್ಥಿತಿ ಆಕೆಯದ್ದಾಗಿರಲಿಲ್ಲ. ‘ನಾನೇಕೆ ಸತ್ತು ಹೋಗಲಿಲ್ಲ? ಈ ಬದುಕು ಸಾವಿಗಿಂತ ಘೋರವಾಗಿದೆ’ ಎಂದು ಕೊಳ್ಳತೊಡಗಿದಳು ಆಕೆ, ಇನ್ನೊಂದೆಡೆ ಸುರೇಶ ನನ್ನು ವಾಪಸ್‌ ಕರೆದುಕೊಂಡು ಹೋಗಲು ಪೋಷಕರು ಒತ್ತಾಯಿಸುತ್ತಿದ್ದಾರೆ ಎಂಬ ಸಂಶಯವೂ ಅವಳ ಮನದಲ್ಲಿ ಮೂಡಿತು. ಹೀಗೇನಾದರೂ ಆಗಿಬಿಟ್ಟರೆ ತನ್ನ ಗತಿಯೇನು ಎಂದು ಆಕೆ ಚಿಂತಿಸತೊಡಗಿದಳು.

ನಂತರ ಆದದ್ದೂ ಹಾಗೆಯೇ. ಮಗನ ಮನ ಪರಿವರ್ತನೆ ಮಾಡಿ, ಹೇಗಾದರೂ ಮಾಡಿ ರಾಜೀವಿಯಿಂದ ಅವನಿಗೆ ವಿಚ್ಛೇದನ ಕೊಡಿಸಿ ವಾಪಸ್‌ ಕರೆದುಕೊಂಡು ಹೋಗುವ ತವಕದಲ್ಲಿ ಸುರೇಶನ ಅಮ್ಮ ಇದ್ದರು. ಅಲ್ಲಿ ಅವನಿಗೆ ತಮ್ಮಿಚ್ಛೆಯಂತೆ ಇನ್ನೊಂದು ಮದುವೆ ಮಾಡಿಸಿ ಹೊಸ ಬದುಕು ಆರಂಭಿಸಲು ಅವರು ಹವಣಿಸುತ್ತಿದ್ದಳು. ಇಷ್ಟು ತಿಂಗಳು ಹೆಂಡತಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿದ ಸುರೇಶ ಈಗ ಅಸಹಾಯಕನಾಗಿದ್ದ. ಅಮ್ಮನ ಮಾತಿಗೆ ತಲೆಯಾಡಿಸುವುದು ಬಿಟ್ಟರೆ ಬೇರೆನೂ ದಾರಿ ತೋಚಲಿಲ್ಲ.

ಸುರೇಶನ ಅಮ್ಮ ಇನ್ನು ತಡ ಮಾಡಲಿಲ್ಲ. ರಾಜೀವಿಯ ತಂದೆ ತಾಯಿಗೆ ವಿಷಯ ಹೇಳಿದರು. ರಾಜೀವಿಗೆ ವಿಚ್ಛೇದನ ನೀಡಿ, ಮಗನನ್ನು ವಾಪಸ್‌ ಕರೆದುಕೊಂಡು ಹೋಗುವುದಾಗಿ ಹೇಳಿದರು. ಈ ವಿಷಯ ಕೇಳಿದ ರಾಜೀವಿಯ ಅಪ್ಪ-ಅಮ್ಮನಿಗೆ ಆಕಾಶವೇ ಕಳಚಿಬಿದ್ದಂತಾಯಿತು. ಆದರೆ ಸುರೇಶನ ಅಮ್ಮ ಹಟ ಬಿಡಲಿಲ್ಲ. ಸುದೀರ್ಘ ಮಾತುಕತೆಯ ನಂತರ, ಕೊನೆಯ ಪಕ್ಷ ತಮ್ಮ ಮಗಳ ಭವಿಷ್ಯದ ಆಸರೆಗಾಗಿ 8-10 ಲಕ್ಷ ರೂಪಾಯಿಗಳನ್ನಾದರೂ ಕೊಡಿ ಎಂದು ಸುರೇಶನ ಪೋಷಕರನ್ನು  ರಾಜೀವಿಯ ಅಪ್ಪ-ಅಮ್ಮ ಕೇಳಿಕೊಂಡರು. ಆಗ ಸುರೇಶನ ತಂದೆ- ತಾಯಿ ರಾಜೀವಿಯ ಬಗ್ಗೆ ಅಸಡ್ಡೆಯ ಮಾತುಗಳನ್ನಾಡಿದರು. ‘ಒಂದು ಪೈಸೆಯನ್ನೂ ನೀಡುವುದಿಲ್ಲ. ಈಗಾಗಲೇ ಮಗ ಐದು ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ. ಅಷ್ಟೇ ಸಾಕು...’ ಎಂದು ಅವರು ಕಡ್ಡಿ ಮುರಿದಂತೆ ಹೇಳಿ ಹೊರಟೇ ಹೋದರು. ಹೋಗುವಾಗ ರಾಜೀವಿಗೆ ಸುರೇಶ ಕೊಡಿಸಿದ ಆಭರಣಗಳನ್ನೂ ತೆಗೆದುಕೊಂಡು ಹೋದರು.

ಬೇರೆ ದಾರಿ ಕಾಣದ ರಾಜೀವಿ ಪೋಷಕರು ವರದಕ್ಷಿಣೆ ಕಿರುಕುಳ ಕಾಯ್ದೆ ಅಡಿ ಮಲ್ಲೇಶ್ವರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಪೊಲೀಸರು ಎರಡೂ ಕಡೆಯವರನ್ನು ಕರೆಸಿದರು. ಮಾತುಕತೆಯ ನಂತರ ಸುರೇಶನ ಪೋಷಕರು, ರಾಜೀವಿಗೆ ಸುರೇಶ ಕೊಡಿಸಿದ್ದ ಆಭರಣ ಹಾಗೂ ಸುರೇಶನಿಗೆ ರಾಜೀವಿ ಕೊಟ್ಟಿದ್ದ ಉಂಗುರವನ್ನು ರಾಜೀವಿಗೆ ಹಿಂದಿರುಗಿಸಿದರು. ರಾಜೀವಿ ಜೊತೆ ದಾಂಪತ್ಯ ಜೀವನ ಮುಂದುವರಿಯಲು ಸಾಧ್ಯವಿಲ್ಲವೆಂದು ಸುರೇಶನ ಪೋಷಕರು ಹೇಳಿದರು. ಸುರೇಶ ಕೂಡ ಮೌನವಹಿಸಿದ. ಅಂತೂ ರಾಜೀವಿಯ ಮನೆಯವರು ಭಾರವಾದ ಹೃದಯದಿಂದ ವಿಚ್ಛೇದನಕ್ಕೆ ಒಪ್ಪಿದರು.

* * *

ಪೊಲೀಸ್‌ ಠಾಣೆಯಲ್ಲಿ ಎರಡೂ ಕಡೆಯವರು ರಾಜಿ ಆಗಿದ್ದೂ ನಿಜ, ರಾಜೀವಿ ಮನೆಯವರಿಗೆ ಒಡವೆಗಳು ಸಿಕ್ಕಿದ್ದೂ ನಿಜ, ಸುರೇಶನ ಮನೆಯವರಿಗೆ ರಾಜೀವಿಯಿಂದ ‘ಮುಕ್ತಿ’ ಸಿಕ್ಕಿದ್ದೂ ನಿಜ... ಆದರೆ ಪೊಲೀಸರ ಕೈ ಮಾತ್ರ ‘ಬೆಚ್ಚಗೆ’ ಆಗಿರಲಿಲ್ಲವಲ್ಲ...! ಇನ್ನೊಂದರ್ಥದಲ್ಲಿ ಹೇಳುವುದಾದರೆ, ಕ್ರಿಮಿನಲ್‌ ಮೊಕದ್ದಮೆಯಿಂದ ತಪ್ಪಿಸಿಕೊಂಡಿದ್ದ ಸುರೇಶನ ಪೋಷಕರಿಂದ ಪೊಲೀಸರಿಗೆ ಏನೂ ಸಿಕ್ಕಿರಲಿಲ್ಲ... ಆದ್ದರಿಂದ ರಾಜೀವಿ ಪೋಷಕರು ಹಾಕಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ಮುಂದುವರಿಸಿದ ಅವರು, ಸುರೇಶ ಮತ್ತು ಅವನ ಪೋಷಕರ ವಿರುದ್ಧ ದೋಷಾರೋಪ ಪಟ್ಟಿ ತಯಾರುಮಾಡಿ ಕೋರ್ಟ್‌ಗೆ ಸಲ್ಲಿಸಿದರು.

ಸುರೇಶನ ಪೋಷಕರಿಗೆ ಪೊಲೀಸ್‌ ಠಾಣೆಯಿಂದ ಕರೆ ಬಂತು. ಇದು ಕ್ರಿಮಿನಲ್‌ ಮೊಕದ್ದಮೆ ಆಗಿರುವ ಕಾರಣ, ಎಲ್ಲರ ವಿರುದ್ಧ ಕೋರ್ಟ್‌ ಜಾಮೀನು ರಹಿತ ವಾರಂಟ್‌ಗೆ ಆದೇಶಿಸಿತು. ಸಂಗತಿ ತಿಳಿದು ಸುರೇಶನ ಪೋಷಕರು ತಬ್ಬಿಬ್ಬಾದರು. ವಾರಂಟ್ ತಂದ ಪೊಲೀಸ್‌ ಕಾನ್‌ಸ್ಟೆಬಲ್‌ನನ್ನು ಪ್ರತ್ಯೇಕವಾಗಿ ಕರೆದ ಸುರೇಶನ ತಾಯಿ ಎಷ್ಟು ಹಣ ಕೊಡಬೇಕೆಂದು ಕೇಳಿದರು. ಸಿಕ್ಕಿದ್ದೇ ಛಾನ್ಸ್‌ ಎಂದುಕೊಂಡ ಕಾನ್‌ಸ್ಟೆಬಲ್‌ ಒಂದಿಷ್ಟು ಹಣದ ಬೇಡಿಕೆ ಇಟ್ಟ. ಅದಕ್ಕೆ ಸುರೇಶನ ಅಮ್ಮ ಒಪ್ಪಿದರು. ಅಲ್ಲಿಗೆ ಈ ಭ್ರಷ್ಟ ವ್ಯವಸ್ಥೆಯಿಂದ ಸುರೇಶನ ಅಮ್ಮನ ಸಮಸ್ಯೆ ಬಗೆಹರಿಯಿತು. ‘ಆರೋಪಿಗಳಿಗೆ ವಾರಂಟ್‌ ನೀಡಲು ಮನೆಗೆ ಹೋದಾಗ ಅವರು ಅಲ್ಲಿ ಇರಲಿಲ್ಲ. ಅಕ್ಕಪಕ್ಕದಲ್ಲಿ ವಿಚಾರಿಸಿದಾಗ ಅವರು ಯಾವುದೋ ಊರಿಗೆ ಹೋಗಿರುವುದಾಗಿ ತಿಳಿದುಬಂತು...’ಎಂಬ ಮಾಹಿತಿಯನ್ನು ಕಾನ್‌ಸ್ಟೆಬಲ್‌ ನ್ಯಾಯಾಲಯಕ್ಕೆ  ನೀಡಿದ.

ಆ ಕ್ಷಣದಲ್ಲಿ ಬಂಧನದಿಂದ ತಪ್ಪಿಸಿಕೊಂಡರೂ, ಕೋರ್ಟ್‌ ಪ್ರಕ್ರಿಯೆ ಅಲ್ಲಿಗೇ ಮುಗಿಯುವುದಿಲ್ಲವಲ್ಲ... ಇನ್ನೂ ಬಂಧನದ ತೂಗುಕತ್ತಿ ಎಲ್ಲರ ತಲೆಯ ಮೇಲೆ ನೇತಾಡುತ್ತಿತ್ತು. ಆದ್ದರಿಂದ ಸುರೇಶನ ತಾಯಿ ನನಗೆ ಕರೆ ಮಾಡಿ ‘ನಮಗೆ ಬಂಧನದ ಭೀತಿಯಿದೆ.., ಕೇಸಿನಿಂದ ಮುಕ್ತಿ ಕೊಡಿಸಿ...’ ಎಂದು ಕೇಳಿದರು. ವಿಷಯ ತಿಳಿದುಕೊಂಡ ನಾನು ಆ ಹಂತದಲ್ಲಿ ಅಗತ್ಯ ಇರುವ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದೆ. ವಾದ–ಪ್ರತಿವಾದ ನಡೆದು ಮೂವರಿಗೂ ನಿರೀಕ್ಷಣಾ ಜಾಮೀನು ಸಿಕ್ಕಿತು. ನಂತರದ ಹಂತ ಕೋರ್ಟ್‌ ಹೊರಡಿಸಿದ್ದ ವಾರಂಟ್‌ ಆದೇಶ ರದ್ದುಮಾಡುವ ಸಂಬಂಧ ಅರ್ಜಿ ಸಲ್ಲಿಸುವುದು. ಅದನ್ನೂ ಮಾಡಿದೆ. ಮೂವರಿಗೂ ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರಾಗುವಂತೆ ಹೇಳಿದೆ. ಅದರಂತೆ ಅವರು ನಡೆದುಕೊಂಡರು.  ವಾದ, ಪ್ರತಿವಾದದ ನಂತರ ವಾರಂಟ್‌ ಆದೇಶ ರದ್ದಾಯಿತು.

ನಂತರ ಇಬ್ಬರೂ ಕುಳಿತು ಪರಸ್ಪರ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಇಬ್ಬರ ಮನವೊಲಿಸಿದೆ. ಅದಂತೆ ಸುರೇಶ ಮತ್ತು ರಾಜೀವಿಯ ಪೋಷಕರು ಮತ್ತೆ ಮಾತುಕತೆ ನಡೆಸಿದರು. ಇಷ್ಟೆಲ್ಲಾ ಬೆಳವಣಿಗೆ ನಂತರ ಸುರೇಶ ವಿಚ್ಛೇದನಕ್ಕೆ ಸಂಪೂರ್ಣ ಒಪ್ಪಿಕೊಂಡಿದ್ದ. ಪರಸ್ಪರ ಸಮ್ಮತಿ ಮೇರೆಗೆ ಕೌಟುಂಬಿಕ ಕೋರ್ಟ್‌ನಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕಿದೆ. ರಾಜೀವಿಗೆ ಅವಳ ದೈಹಿಕ ಸ್ಥಿತಿಯಿಂದ ನ್ಯಾಯಾಲಯಕ್ಕೆ ಬರಲು ಸಾಧ್ಯವಿರಲಿಲ್ಲ. ಅದನ್ನು ಕೋರ್ಟ್‌ ಮಾನ್ಯ ಮಾಡಿತು. 6-8 ತಿಂಗಳ ನಂತರ ವಿಚ್ಛೇದನದ ಆದೇಶ ಬಂತು. ಹೀಗೆ ಪ್ರೇಮವಿವಾಹ ವಿಚ್ಛೇದನದ ಮೂಲಕ ಅಂತ್ಯಕಂಡಿತು.

ಆದರೆ ಮೂವತ್ತರ ಆಸುಪಾಸಿನ ರಾಜೀವಿಯ ಬದುಕು ಮಾತ್ರ ಇನ್ನೂ ದುರಂತಮಯವಾಗಿಯೇ ಇದೆ. ಎಲ್ಲರಿಗೂ ಅವರವರ ಮಟ್ಟಿಗೆ ನ್ಯಾಯ ಒದಗಿಸಿರುವ ತೃಪ್ತಿ ನನಗಿದ್ದರೂ, ರಾಜೀವಿಯ ಬದುಕನ್ನು ನೆನೆಸಿಕೊಂಡಾಗಲೆಲ್ಲಾ ನೋವು ಉಂಟಾಗುತ್ತದೆ.

(ಹೆಸರುಗಳನ್ನು ಬದಲಾಯಿಸಲಾಗಿದೆ)  

ಲೇಖಕ ಹೈಕೋರ್ಟ್‌ ವಕೀಲ

ಪ್ರತಿಕ್ರಿಯಿಸಿ (+)