ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ಮೂಲ ಉಳಿಸಲು ಎಲ್ಲರೂ ಒಂದಾದರು

ಐದು ವರ್ಷದ ಯೋಜನೆ ಸಿದ್ಧ, ಇದೇ ಮಳೆಗಾಲದಿಂದ ಆರಂಭ: ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆ ಸಹಭಾಗಿತ್ವ
Last Updated 15 ಜುಲೈ 2017, 19:30 IST
ಅಕ್ಷರ ಗಾತ್ರ

ಮಡಿಕೇರಿ: ಕಾವೇರಿಯ ಪ್ರಮುಖ ಉಪನದಿಗಳಲ್ಲಿ ಒಂದಾಗಿರುವ ಲಕ್ಷ್ಮಣತೀರ್ಥದ ಪುನರುಜ್ಜೀವನಕ್ಕೆ ಇದೀಗ ಕಾಲ ಕೂಡಿಬಂದಿದ್ದು, ಐದು ವರ್ಷದ ಯೋಜನೆಯೊಂದು ಸಿದ್ಧವಾಗಿದೆ. ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆಯ ಆಂದೋಲನಕ್ಕೆ ಕೊಡಗು ಜಿಲ್ಲಾಡಳಿತ, ವಿರಾಜಪೇಟೆ ತಾಲ್ಲೂಕು ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯವೂ ಕೈಜೋಡಿಸಿದೆ.

ದಕ್ಷಿಣ ಕೊಡಗಿನ ಬ್ರಹ್ಮಗಿರಿ ಶ್ರೇಣಿಯಲ್ಲಿ ಹುಟ್ಟುವ ಲಕ್ಷ್ಮಣತೀರ್ಥ ನದಿಯು ಇರ್ಪು ಜಲಪಾತದಲ್ಲಿ ಧುಮ್ಮಿಕ್ಕಿ ಜಿಲ್ಲೆಯಲ್ಲಿ ಸುಮಾರು 60 ಕಿ.ಮೀ ಹರಿಯುತ್ತದೆ. ಶ್ರೀಮಂಗಲ, ಕಾನೂರು, ಹರಿಹರ, ನಿಟ್ಟೂರು, ಬಾಳೆಲೆ, ನಾಗರಹೊಳೆ, ಹುಣಸೂರು, ಕೆ.ಆರ್‌.ನಗರದ ಮೂಲಕ ಕೆಆರ್‌ಎಸ್‌ ಜಲಾಶಯಕ್ಕೆ ಸೇರುವ ಪ್ರಮುಖ ನದಿಗಳಲ್ಲಿ ಇದೂ ಒಂದು. ಕಾವೇರಿಗೆ ಜೀವತುಂಬುತ್ತಿದ್ದ ನದಿಯು ಇತ್ತೀಚಿನ ವರ್ಷಗಳಲ್ಲಿ ಮಳೆಗಾಲದಲ್ಲೇ ಸೊರಗಿ ನಿಲ್ಲುತ್ತಿದೆ. ಎರಡು ವರ್ಷಗಳಿಂದ ಈ ನದಿ ನೀರು ಜಿಲ್ಲೆಯ ಗಡಿಭಾಗವನ್ನೂ ದಾಟುತ್ತಿಲ್ಲ ಎಂಬ ಕೊರಗು ಸಾಮಾನ್ಯರದ್ದು.

ಆ ನದಿಯಲ್ಲಿ ಮತ್ತೆ ನೀರು ಉಕ್ಕಿಸಲು ಪರಿಸರ ಪ್ರೇಮಿಗಳು, ಪ್ರಾಧ್ಯಾಪಕರು, ಆಧ್ಯಾತ್ಮಿಕ ಚಿಂತಕರು, ಧಾರ್ಮಿಕ ಗುರುಗಳು ಸಜ್ಜಾಗಿದ್ದಾರೆ. ಅದಕ್ಕೆ ಸರ್ಕಾರದಿಂದ ಸಹಾಯದ ಭರವಸೆಯೂ ಸಿಕ್ಕಿದೆ. ಜಿಲ್ಲೆಯ ಅಧಿಕಾರಿಗಳೂ ಜೀವನದಿ ಉಳಿಸಲು ಪಣತೊಟ್ಟಿದ್ದಾರೆ. ಮೊದಲ ಹಂತವಾಗಿ ನದಿಪಾತ್ರವಾದ ನಿಟ್ಟೂರು ಗ್ರಾಮದಿಂದ ಶ್ರೀಮಂಗಲ ತನಕ ಸಾವಿರಾರು ಸಸಿಗಳನ್ನು ನೆಡಲಾಗಿದೆ. ಅಂತರ್ಜಲ ವೃದ್ಧಿಗೆ ಪೂರಕ ಹಾಗೂ ಭೂಸವಕಳಿ ತಪ್ಪಿಸಲು ನೆರವಾಗುವ ಜಾತಿಯ ಸಸಿಗಳನ್ನೇ ಆಯ್ಕೆಮಾಡಿ ನದಿಪಾತ್ರದಲ್ಲಿ ನೆಡಲಾಗಿದೆ. ಹೊಂಗೆ, ಹೊಳೆ ಮತ್ತಿ, ಬಿದಿರು ಸೇರಿದಂತೆ ಪ್ರಮುಖ ಜಾತಿಯ ಸಸಿಗಳು ಸೇರಿಕೊಂಡಿವೆ. ಯೋಜನೆಯ ವಿಸ್ತೃತ ವರದಿ ತಯಾರಾಗಿದ್ದು, ಈ ಮಳೆಗಾಲದಿಂದಲೇ ಕಾರ್ಯರೂಪಕ್ಕೆ ಬರಲಿದೆ ಎಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ನಿರ್ವಹಣಾ ವಿಭಾಗದ ಮುಖ್ಯಸ್ಥ ಡಾ.ಜಿ.ಎಂ.ದೇವಗಿರಿ ತಿಳಿಸಿದರು.

(ನದಿಪಾತ್ರದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ)

‘ಕಾವೇರಿಗೆ 30ರಿಂದ 35 ಉಪನದಿಗಳಿವೆ. ಎಲ್ಲ ಉಪನದಿಗಳ ಸ್ಥಿತಿಯೂ ಅತ್ಯಂತ ಗಂಭೀರವಾಗಿದೆ. ಅಕ್ರಮ ಮರಳುಗಾರಿಕೆ, ಒತ್ತುವರಿ ಕಾರಣಕ್ಕೆ ನದಿಪಾತ್ರಗಳೇ ಕಣ್ಮರೆ ಆಗುತ್ತಿರುವುದು ಸಮೀಕ್ಷೆಯಿಂದ ಗೊತ್ತಾಗಿದೆ. ಭಾಗಮಂಡಲದಿಂದ ಶಿರಂಗಾಲದವರೆಗೂ ಕಾವೇರಿ ನದಿ ಉಳಿಸಲು ಕೆಲವು ಸಂಘ– ಸಂಸ್ಥೆಗಳು ಕಾರ್ಯ ಪ್ರವೃತ್ತವಾಗಿವೆ. ಕಾವೇರಿಗೆ ಲಕ್ಷ್ಮಣ ತೀರ್ಥದಿಂದ ಸಾಕಷ್ಟು ಪ್ರಮಾಣದ ನೀರು ಹರಿದು ಸೇರುತ್ತಿದ್ದರೂ ಯಾರೂ ಇದರತ್ತ ಗಮನ ಹರಿಸಿರಲಿಲ್ಲ. ಮಾರ್ಚ್‌ನಲ್ಲಿ ಅರಣ್ಯ ಇಲಾಖೆ, ಜಿಲ್ಲಾ ಪಂಚಾಯಿತಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿತ್ತು. ಆಗ ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆಯ ಮುಖ್ಯಸ್ಥ ಶ್ರೀ ಶ್ರೀ ರವಿಶಂಕರ ಗುರೂಜಿ ಅವರು ನಾವೂ ಆಂದೋಲನದಲ್ಲಿ ಭಾಗಿಯಾ ಗುವುದಾಗಿ ಭರವಸೆ ನೀಡಿದ್ದರು’ ಎಂದು ನೆನಪಿಸಿಕೊಳ್ಳುತ್ತಾರೆ.

‘ಕೇರಳದ ವಿದ್ಯುತ್‌ ಮಾರ್ಗಕ್ಕಾಗಿ ದಕ್ಷಿಣ ಕೊಡಗಿನಲ್ಲಿ ಅಂದಾಜು 56 ಸಾವಿರ ಮರಗಳನ್ನು ಕಡಿಯಲಾಗಿತ್ತು. ಇದರಿಂದ ಭೂಸವಕಳಿ ಹೆಚ್ಚಾಗಿದೆ. ರೈತರೂ ಭತ್ತದ ಬೆಳೆಯಿಂದ ವಿಮುಖರಾಗುತ್ತಿದ್ದಾರೆ. ಹಿಂದೆಲ್ಲಾ ಭತ್ತದ ಗದ್ದೆಗಳಲ್ಲಿ 90 ದಿನಗಳ ಕಾಲ ನೀರು ನಿಂತು ಅಂತರ್ಜಲ ವೃದ್ಧಿಗೆ ನೆರವಾಗುತ್ತಿತ್ತು. ಈಗ ಗದ್ದೆಗಳೂ ಮಾಯವಾಗಿವೆ. ಕಾವೇರಿ ಕೊಳ್ಳದ ವ್ಯಾಪ್ತಿಯಲ್ಲಿ ಭತ್ತ ಬೆಳೆಯುವ ರೈತರನ್ನು ಪ್ರೋತ್ಸಾಹಿಸುವುದು; ಜತೆಗೆ ನೈಸರ್ಗಿಕವಾಗಿ ಮರಗಿಡ ಬೆಳೆಸುವ ಮೂಲಕ ನದಿಪಾತ್ರಉಳಿಸುವುದು ನಮ್ಮ ಉದ್ದೇಶವಾಗಿದೆ. ಅಲ್ಲದೇ ಅಗತ್ಯವಿರುವ ಕಡೆಗಳಲ್ಲಿ ನದಿಗೆ ಮಣ್ಣು ಕುಸಿಯದಂತೆ ತಡೆಗೋಡೆ ನಿರ್ಮಿಸುವ ಯೋಜನೆಯೂ ಇದೆ’ ಎನ್ನುತ್ತಾರೆ ದೇವಗಿರಿ.

‘ನದಿಪಾತ್ರದ ನಾಲ್ಕು ಕಿ.ಮೀ.  ಜಮೀನು ಹೊಂದಿರುವ ರೈತರು ಭತ್ತದ ಕೃಷಿಯನ್ನೇ ಮಾಡುತ್ತೇವೆ, ಮರಳುಗಾರಿಕೆಗೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ಹಂತಹಂತವಾಗಿ ಉಳಿದ ರೈತರನ್ನು ಮನವೊಲಿಸಿ ಭತ್ತವನ್ನೇ ಬೆಳೆಯಲು ಉತ್ತೇಜಿಸಲಾಗುವುದು. ರಾಷ್ಟ್ರದ ವಿವಿಧೆಡೆ ನದಿ ಉಳಿಸುವ ಯೋಜನೆಗಳನ್ನು ಅಧ್ಯಯನ ಮಾಡಲಾಗಿದೆ. ಅದರಲ್ಲಿನ ಸೂಕ್ತ ಮಾರ್ಗಗಳನ್ನು ಇಲ್ಲಿಯೂ ಅನುಸರಿಸುತ್ತೇವೆ’ ಎಂದು ಅರಣ್ಯ ಮಹಾವಿದ್ಯಾಲಯದ ಡೀನ್‌ ಸಿ.ಜಿ.ಕುಶಾಲಪ್ಪ ‘ಪ್ರಜಾವಾಣಿ’ಗೆ ಯೋಜನೆಯ ಚಿತ್ರಣ ಬಿಚ್ಚಿಟ್ಟರು.

**

ಲಕ್ಷ್ಮಣತೀರ್ಥ ನದಿಯು ವರ್ಷದ 6 ತಿಂಗಳು ತುಂಬಿ ಹರಿಯುತ್ತಿರುವುದನ್ನು ಕಂಡಿದ್ದೇನೆ. ಈಗ ಮಳೆಗಾಲದಲ್ಲೂ ನೀರಿನ ಹರಿವು ಕಾಣಿಸುವುದಿಲ್ಲ
-ಡಾ.ಜಿ.ಎಂ.ದೇವಗಿರಿ
ಮುಖ್ಯಸ್ಥರು, ನಿರ್ವಹಣಾ ವಿಭಾಗ, ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆ

**

ಸದ್ಯಕ್ಕೆ ಲಕ್ಷ್ಮಣತೀರ್ಥ ನದಿಗೆ ಸೀಮಿತಗೊಳಿಸಲಾಗಿದೆ. ಇದರ ಯಶಸ್ಸು ನೋಡಿಕೊಂಡು ಕಾವೇರಿಗೂ ವಿಸ್ತರಿಸುವ  ಆಲೋಚನೆಯಿದೆ
-ಸಿ.ಜಿ.ಕುಶಾಲಪ್ಪ, ಡೀನ್‌, ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT