ಶನಿವಾರ, ಡಿಸೆಂಬರ್ 7, 2019
16 °C

ಆರಕ್ಕೇರಲಿಲ್ಲ; ಮೂರಕ್ಕೆ ಇಳಿಯಲೂ ಇಲ್ಲ

Published:
Updated:
ಆರಕ್ಕೇರಲಿಲ್ಲ; ಮೂರಕ್ಕೆ ಇಳಿಯಲೂ ಇಲ್ಲ

ಕಳೆದ ವಾರ ಮುಕ್ತಾಯಗೊಂಡ ಶ್ರೀಲಂಕಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯನ್ನು 3–2ರಲ್ಲಿ ಗೆದ್ದುಕೊಂಡ ಜಿಂಬಾಬ್ವೆ ಕ್ರಿಕೆಟ್ ತಂಡ ಸುದ್ದಿ ಮಾಡಿತು. ತಂಡದ ಜಯಕ್ಕಿಂತಲೂ ಆ ಸೋಲಿನೊಂದಿಗೆ ಶ್ರೀಲಂಕಾ ಕ್ರಿಕೆಟ್‌ನಲ್ಲಿ ಆದ ಬದಲಾವಣೆ ಸುದ್ದಿಗೆ ಕಾರಣ. ಲಂಕಾ ನಾಯಕ ಏಂಜೆಲೊ ಮ್ಯಾಥ್ಯೂಸ್‌ ಅವರ ರಾಜೀನಾಮೆ ಮತ್ತು ಟೆಸ್ಟ್‌–ನಿಗದಿತ ಓವರ್‌ಗಳ ಕ್ರಿಕೆಟ್‌ಗೆ ಹೊಸ ನಾಯಕರ ನೇಮಕಕ್ಕೆ ಜಿಂಬಾಬ್ವೆ ತಂಡದ ಲಂಕಾ ಪ್ರವಾಸ ಕಾರಣವಾಯಿತು.

ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗಿನಿಂದ ಜಿಂಬಾಬ್ವೆ ಈ ರೀತಿಯ ಸುದ್ದಿಗೆ ಕಾರಣವಾಗುತ್ತಿದೆ. ಪ್ರಮುಖ ಟೂರ್ನಿಗಳಲ್ಲಿ ಇತರ ತಂಡಗಳ ಮುನ್ನಡೆಗೆ ಈ ತಂಡ ಕಾರಣವಾದ ಪ್ರಸಂಗಗಳು ಅನೇಕ ಇವೆ. ಇದರ ಲಾಭ ಪಡೆದ ತಂಡಗಳು ಸಾಧನೆ ಮಾಡುತ್ತ ಸಾಗಿದವು. ಆದರೆ ಜಿಂಬಾಬ್ವೆ ಮಾತ್ರ ಆರಕ್ಕೆ ಏರಲೂ ಆಗದೆ, ಮೂರಕ್ಕೆ ಇಳಿಯುವುದಕ್ಕೂ ತಯಾರಿಲ್ಲದೆ ಸಾಗುತ್ತಿದೆ.

ಭಾರತ, ಶ್ರೀಲಂಕಾ, ಪಾಕಿಸ್ತಾನ ಮುಂತಾದ ತಂಡಗಳು ಪ್ರವರ್ಧಮಾನಕ್ಕೆ ಬರುತ್ತಿದ್ದ ವೇಳೆಯಲ್ಲೇ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿತ್ತು ಜಿಂಬಾಬ್ವೆ. ಚೊಚ್ಚಲ ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಮಣಿಸಿದ ಜಿಂಬಾಬ್ವೆ ನಂತರ ಇಂಗ್ಲೆಂಡ್‌, ಭಾರತ, ಪಾಕಿಸ್ತಾನ ಹಾಗೂ ಶ್ರೀಲಂಕಾಕ್ಕೆ ಆಗಾಗ ಆಘಾತ ನೀಡಿದ್ದರೂ ಸರಿಯಾದ ಲಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಏಳು–ಬೀಳುಗಳಲ್ಲೇ ಮುಂದೆ ಸಾಗಿದ ತಂಡ 15 ವರ್ಷಗಳ ನಂತರ ಲಂಕಾ ಪ್ರವಾಸ ಮಾಡಿದೆ. ಮೊದಲ ಏಕದಿನ ಪಂದ್ಯದಲ್ಲಿ ಜಯ ಗಳಿಸಿ ಶ್ರೀಲಂಕಾವನ್ನು ಅವರದೇ ನೆಲದಲ್ಲಿ ಮೊದಲ ಬಾರಿ ಸೋಲಿಸಿದ ಶ್ರೇಯಸ್ಸು ತನ್ನದಾಗಿಸಿಕೊಂಡ ಜಿಂಬಾಬ್ವೆ ಸರಣಿಯನ್ನೂ ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ. ಇದು ಈ ತಂಡದ ಹೊಸ ಯುಗಕ್ಕೆ ನಾಂದಿಯಾಗಲಿದೆಯೇ ಎಂಬ ಪ್ರಶ್ನೆಯೂ ಈಗ ಎದ್ದಿದೆ. ಈ ವರ್ಷ ಆಡಿದ ಒಟ್ಟು 12 ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಆರನ್ನು ಗೆದ್ದುಕೊಂಡಿರುವ ಜಿಂಬಾಬ್ವೆಗೆ ಶ್ರೀಲಂಕಾ ವಿರುದ್ಧದ ಟೆಸ್ಟ್‌ ಈ ವರ್ಷದ ನಾಂದಿ ಪಂದ್ಯ.

ಹಿಂದಿಕ್ಕಿದ ಐರ್ಲೆಂಡ್‌–ಅಫ್ಗಾನ್‌

ಕ್ರಿಕೆಟ್ ಶಿಶುಗಳು ಎಂದು ಕರೆಯಲಾಗುತ್ತಿದ್ದ ಐರ್ಲೆಂಡ್ ಮತ್ತು ಅಫ್ಗಾನ್‌ ತಂಡಗಳಿಗೆ ಇತ್ತೀಚೆಗೆ ಟೆಸ್ಟ್ ಮಾನ್ಯತೆ ನೀಡಲಾಯಿತು. ಈ ತಂಡಗಳಿಗಿಂತ 25 ವರ್ಷಗಳ ಮೊದಲೇ ಜಿಂಬಾಬ್ವೆ ಟೆಸ್ಟ್‌ ಆಡಲು ಆರಂಭಿಸಿದೆ. ಜಿಂಬಾಬ್ವೆಗಿಂತ ಎರಡು ದಶಕಗಳ ನಂತರ ಏಕದಿನ ಮತ್ತು ಟ್ವೆಂಟಿ–20 ಕ್ರಿಕೆಟ್‌ ಆಡಲು ಆರಂಭಿಸಿದ ಐರ್ಲೆಂಡ್ ಮತ್ತು ಅಫ್ಗಾನಿಸ್ತಾನ ಈ ಮಾದರಿಗಳಲ್ಲಿ ಸಾಕಷ್ಟು ಹೆಸರು ಮಾಡಿವೆ. ಜಿಂಬಾಬ್ವೆಯನ್ನೇ ಅನೇಕ ಬಾರಿ ಸೋಲಿಸಿವೆ. ಬರ್ಮುಡಾ, ಕೆನಡಾ, ನಮೀಬಿಯಾ, ನೆದರ್ಲೆಂಡ್‌ ಮತ್ತು ಯುಎಇ ಹೊರತುಪಡಿಸಿದರೆ ಇತರ ಎಲ್ಲ ತಂಡಗಳ ವಿರುದ್ಧವೂ ಜಿಂಬಾಬ್ವೆ ಏಕದಿನ ಕ್ರಿಕೆಟ್‌ನಲ್ಲಿ ಸೋಲು ಕಂಡಿದೆ. ಟಿ–20 ಕ್ರಿಕೆಟ್‌ನಲ್ಲಿ ಐರ್ಲೆಂಡ್ ಮತ್ತು ಅಫ್ಗಾನ್‌ ವಿರುದ್ಧ ಜಯ ಗಳಿಸಲು ಜಿಂಬಾಬ್ವೆಗೆ ಇನ್ನೂ ಸಾಧ್ಯವಾಗಲಿಲ್ಲ.‌‌

ರಾಜಕೀಯ ಮತ್ತು ಕ್ರಿಕೆಟ್‌ನ ತಳಮಳ

ಜಿಂಬಾಬ್ವೆಯಲ್ಲಿ ರಾಜಕೀಯ ಬೆಳವಣಿಗೆಗಳು ನಿರಂತರವಾಗಿ ಕ್ರಿಕೆಟ್ ಮೇಲೆ ಪರಿಣಾಮ ಬೀರಿವೆ. ಕ್ರಿಕೆಟ್‌ ಆಟಗಾರರ ಆಯ್ಕೆಯಲ್ಲಿ ರಾಜಕೀಯ ಹಸ್ತಕ್ಷೇಪ ನಡೆಯುತ್ತಿದೆ ಎಂಬ ಆರೋಪ, ಆಟಗಾರರ ಪ್ರತಿಭಟನೆ, ವಜಾ ಮುಂತಾದ ಪ್ರಸಂಗಗಳೂ ಅನೇಕ ಬಾರಿ ನಡೆದಿವೆ. 1992ರಿಂದ 2002 ವರೆಗೆ ಜಿಂಬಾಬ್ವೆ ಕ್ರಿಕೆಟ್ ತಂಡದ ಸುವರ್ಣ ಕಾಲವಾಗಿತ್ತು. ಫ್ಲವರ್‌ ಸಹೋದರರಾದ ಆಂಡಿ ಮತ್ತು ಗ್ರ್ಯಾಂಟ್ ಫ್ಲವರ್‌, ಆಲ್‌ರೌಂಡರ್‌ಗಳಾದ ಆಂಡಿ ಬ್ಲಿಗ್‌ನಾಟ್‌ ಮತ್ತು ಹೀತ್ ಸ್ಟ್ರೀಕ್‌, ಸ್ಫೋಟಕ ಬ್ಯಾಟ್ಸ್‌ಮನ್‌ ಮರ್ರೆ ಗುಡ್‌ವಿನ್‌, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಅಲೆಸ್ಟರ್‌ಕ್ಯಾಂಪ್‌ಬೆಲ್‌, ಲೆಗ್ ಸ್ಪಿನ್‌ ಆಲ್‌ರೌಂಡರ್‌ಗಳಾದ ಪಾಲ್ ಸ್ಟ್ರಾಂಗ್‌ ಮತ್ತು ಎಡೊ ಬ್ರಾಂಡ್ಸ್‌, ವೇಗಿ ಮತ್ತು ಆರಂಭಿಕ ಬ್ಯಾಟ್ಸ್‌ಮನ್‌ ನೀಲ್ ಜಾನ್ಸನ್‌ ಮುಂತಾದವರು ಈ ಕಾಲದಲ್ಲಿ ಜಿಂಬಾಬ್ವೆ ತಂಡವನ್ನು ಎತ್ತರಕ್ಕೆ ಏರಿಸಿದ್ದರು.

ರಾಜಕೀಯ ಹಸ್ತಕ್ಷೇಪದ ಆರೋಪ ಮಾಡಿದ ಹೀತ್ ಸ್ಟ್ರೀಕ್ ಅವರನ್ನು 2004ರಲ್ಲಿ ತಂಡದಿಂದ ಹೊರ ಹಾಕಿದ್ದು ಮತ್ತು ಇದಕ್ಕೆ ಇತರ ಆಟಗಾರರು ಪ್ರತಿಭಟನೆ ನಡೆಸಿದ್ದು ಜಿಂಬಾಬ್ವೆ ಕ್ರಿಕೆಟ್‌ನಲ್ಲಿ ಹೊಸ ಮತ್ತು ಅನನುಭವಿ ಆಟಗಾರರು ಸ್ಥಾನ ಗಳಿಸಲು ನೆರವಾಯಿತು. ಹೀತ್ ಸ್ಟ್ರೀಕ್‌ ಅವರ ಗರಡಿಯಲ್ಲೇ ಈಗಿನ ತಂಡ ಹೊಸ ದಿಸೆಯನ್ನು ಹುಡುಕುತ್ತ ಸಾಗಿದೆ.

***

ಜಿಂಬಾಬ್ವೆ: ರ‍್ಯಾಂಕಿಂಗ್‌ನ ಏರಿಳಿತ

ಮಾದರಿ ಪ್ರಸ್ತುತ ಗರಿಷ್ಠ

ಟೆಸ್ಟ್‌ 10 9

ಏಕದಿನ 11 8

ಟ್ವೆಂಟಿ–20 12 10

ವಿವಿಧ ಮಾದರಿಗಳಲ್ಲಿಏಳು–ಬೀಳು

ಮಾದರಿ ಒಟ್ಟುಪಂದ್ಯ ಜಯ ಸೋಲು ಫಲಿತಾಂಶವಿಲ್ಲ

ಟೆಸ್ಟ್‌ 101 11 64 26(ಡ್ರಾ)

ಏಕದಿನ 491 129 345 6(ಟೈ)/11(ಫಲಿತಾಂಶವಿಲ್ಲ)

ಟ್ವೆಂಟಿ–20 54 13 40 1(ಟೈ)

ಪ್ರತಿಕ್ರಿಯಿಸಿ (+)