ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷ ಅಧಿಕಾರಿಗಳಿಗೆ ಯಾಕೆ ವರ್ಗಾವಣೆಯ ಶಿಕ್ಷೆ?

Last Updated 17 ಜುಲೈ 2017, 12:17 IST
ಅಕ್ಷರ ಗಾತ್ರ

ಬೆಂಗಳೂರು: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿನ ಅವ್ಯವಹಾರ ಕುರಿತು ಆರೋಪಿಸಿದ್ದ ಡಿಐಜಿ ಡಿ.ರೂಪಾ ಅವರನ್ನು ವರ್ಗಾವಣೆ ಮಾಡಲು ಆದೇಶಿಸಿರುವ ಸರ್ಕಾರದ ನಡೆಯನ್ನು ಜನರು ಪ್ರಶ್ನಿಸುತ್ತಿದ್ದಾರೆ. ದಕ್ಷ ಅಧಿಕಾರಿಗಳಿಗೆ ಯಾಕೆ ವರ್ಗಾವಣೆಯ ಶಿಕ್ಷೆ ಎಂಬುದು ಜನರ ಪ್ರಶ್ನೆ.
ಕೆಲವು ದಿನಗಳ ಹಿಂದೆಯಷ್ಟೇ ಡಿಐಜಿ ಡಿ.ರೂಪಾ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿರುವ ಅವ್ಯವಹಾರ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಮತ್ತು ಕಾರಾಗೃಹಗಳ ಮಹಾನಿರೀಕ್ಷಕ (ಸತ್ಯನಾರಾಯಣರಾವ್‌) ಅವರಿಗೆ ಪತ್ರ ಬರೆದು ಕಾರಾಗೃಹದಲ್ಲಿನ ಅವ್ಯವಹಾರಗಳನ್ನು ಬಯಲಿಗೆಳೆದಿದ್ದರು.

ಸೋಮವಾರ ಬೆಳಗ್ಗೆ ವರೆಗೆ ಕಾರಾಗೃಹ ಇಲಾಖೆಯ ಡಿಐಜಿ ಆಗಿದ್ದ ರೂಪಾ ಮೊದಗಿಲ್ ಅವರನ್ನು ಮಧ್ಯಾಹ್ನ ಹೊತ್ತಿಗೆ ಎತ್ತಂಗಡಿ ಮಾಡಲು ಸರ್ಕಾರ ಆದೇಶಿಸಿತ್ತು. ಇದೀಗ ರೂಪಾ ಅವರನ್ನು ರಾಜ್ಯ ರಸ್ತೆ ಸುರಕ್ಷತೆ ಮತ್ತು ಸಂಚಾರ ಆಯುಕ್ತರಾಗಿ ನೇಮಿಸಲಾಗಿದೆ.

ಮುಖ್ಯಮಂತ್ರಿ ಏನಂತಾರೆ? 

ರೂಪಾ ಅವರನ್ನು ವರ್ಗಾವಣೆ  ಮಾಡಿರುವ ಆದೇಶದ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಪ್ರಶ್ನೆ ಕೇಳಿದಾಗ ಅವರು ಉತ್ತರಿಸಿದ್ದು ಹೀಗೆ-

'ನಾವೇನು ಮಾಡಲಿ? ನಾವು ಅವರನ್ನು ವರ್ಗಾವಣೆ ಮಾಡಿಲ್ಲ'
ಆಡಳಿತಾತ್ಮಕ ಕಾರಣಗಳಿಂದ ಅವರನ್ನು ವರ್ಗಾವಣೆ ಮಾಡಲಾಗಿದೆ. ನಾವಿಲ್ಲಿ ಕುಳಿತು ಇದನ್ನೆಲ್ಲ ಮಾಧ್ಯಮದವರಿಗೆ ವಿವರಿಸಲು ಆಗುವುದಿಲ್ಲ'

ಕಾರಾಗೃಹದಲ್ಲಿನ ಅವ್ಯವಹಾರದ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ಕೊಟ್ಟಿರುವ ಬಗ್ಗೆ ಸರ್ಕಾರಕ್ಕೆ ರೂಪಾ ಮೇಲೆ ಅಸಮಾಧಾನವಿದೆ ಎಂದು ಹೇಳಲಾಗುತ್ತಿದೆ.

ಆದಾಗ್ಯೂ, ರೂಪಾ ಅವರನ್ನು ವರ್ಗಾವಣೆ ಮಾಡಿರುವುದಕ್ಕೆ ವಿಪಕ್ಷಗಳು ರಾಜ್ಯ ಸರ್ಕಾರ ವಿರುದ್ಧ ಕಿಡಿ ಕಾರಿವೆ.

ಈ ಬಗ್ಗೆ ಸುದ್ದಿ ವಾಹಿನಿಯೊಂದರಲ್ಲಿ ಮಾತನಾಡಿದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ, ರೂಪಾ ಅವರನ್ನು ವಿನಾಕಾರಣ ವರ್ಗಾವಣೆ ಮಾಡಲಾಗಿದೆ. ಪ್ರಾಮಾಣಿಕ ಅಧಿಕಾರಿಗಳನ್ನು ಸರ್ಕಾರ ಟಾರ್ಗೆಟ್ ಮಾಡುತ್ತಿದೆ ಮತ್ತು ಅಪ್ರಾಮಾಣಿಕ ಅಧಿಕಾರಿಗಳನ್ನು ಸರ್ಕಾರ ರಕ್ಷಿಸುತ್ತಿದೆ ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನ ಎಂದಿದ್ದಾರೆ.

ಸರ್ಕಾರ ಅಪ್ರಾಮಾಣಿಕ ವ್ಯಕ್ತಿಗಳನ್ನು ರಕ್ಷಿಸಲು ಮುತುವರ್ಜಿ ವಹಿಸುತ್ತಿದೆ. ಸರ್ಕಾರಕ್ಕೆ ಸತ್ಯ ಬಹಿರಂಗವಾಗಬೇಕು ಎಂಬ ಆಸಕ್ತಿ ಇಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‍.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT