ಶನಿವಾರ, ಡಿಸೆಂಬರ್ 7, 2019
24 °C

ರಸ್ತೆ ಸರಿಯಿಲ್ಲ, ಬಸ್‌ ಸೌಕರ್ಯವೂ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಸ್ತೆ ಸರಿಯಿಲ್ಲ, ಬಸ್‌ ಸೌಕರ್ಯವೂ ಇಲ್ಲ

ಭಾಲ್ಕಿ: ಗ್ರಾಮಕ್ಕೆ ಬಾರದ ಬಸ್‌, ರಸ್ತೆಯಲ್ಲೇ ಹರಿಯುವ ಹೊಲಸು ನೀರು, ಊರಿನ ಜನರಿಗೆ ಬಯಲೇ ಶೌಚಾಲಯ, ಶಾಲೆಯಲ್ಲಿ ಆಟದ ಮೈದಾನದ ಕೊರತೆ ...ಹೀಗೆ ಸಮಸ್ಯೆಗಳ ಸರಮಾಲೆಯನ್ನು ಎದುರಿಸುತ್ತಿದೆ ದಾಡಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಕಲಾಸಪೂರವಾಡಿ ಗ್ರಾಮ. ಈ ಗ್ರಾಮವೂ ತಾಲ್ಲೂಕು ಕೇಂದ್ರದಿಂದ 5 ಕಿ.ಮೀ ದೂರದಲ್ಲಿದ್ದು, ಸುಮಾರು ಒಂದು ಸಾವಿರ ಜನಸಂಖ್ಯೆ ಹೊಂದಿದೆ. ಮೂಲಭೂತ ಸೌಕರ್ಯಗಳು ಇಲ್ಲದೆ ಈ ಗ್ರಾಮ ಸೊರಗಿದ್ದು, ಗ್ರಾಮದ ರಸ್ತೆ ಅಕ್ಕಪಕ್ಕದ ಸ್ಥಳಗಳೇ ಶೌಚಾಲಯವಾಗಿ ಪರಿವರ್ತನೆಗೊಂಡಿವೆ.

ಗ್ರಾಮದ ಅಂಗನವಾಡಿಯಿಂದ ಲಕ್ಷ್ಮಿ ದೇವಸ್ಥಾನದವರೆಗೆ, ಎಸ್ಸಿ ವಾರ್ಡ್‌ನ ಕೆಲವೆಡೆ, ಹನುಮಾನ ಮಂದಿರದಿಂದ ತುಸು ದೂರದವರೆಗೆ ಮಾತ್ರ ಸಿಸಿ ರಸ್ತೆ ನಿರ್ಮಾಣವಾಗಿದೆ. ಕೆಲ ಸ್ಥಳಗಳಲ್ಲಿ ಒಂದು ಬದಿಯಲ್ಲಿ ಮಾತ್ರ ಚರಂಡಿ ಇದೆ.   ಚರಂಡಿ ಸಮಸ್ಯೆಯಿಂದ ಮನೆಗಳ ಹೊಲಸು ನೀರು ರಸ್ತೆಗೆ ನುಗ್ಗುತ್ತಿದೆ.

ಇದರಿಂದ ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರಿಗೆ ಅಡ್ಡಾಡಲು ತೀವ್ರ ಕಷ್ಟವಾಗುತ್ತಿದೆ. ‘ಮಳೆಗಾಲದಲ್ಲಿ ಎಲ್ಲೆಂದರಲ್ಲಿ ನೀರು ಸಂಗ್ರಹವಾಗುತ್ತದೆ. ಹಾಗಾಗಿ, ಜನರು ದುರ್ನಾತ ಬೀರುವ ನೀರಿನಲ್ಲಿಯೇ ನಡೆದುಕೊಂಡು ಹೋಗುತ್ತಾರೆ. ಸಾಂಕ್ರಾಮಿಕ ರೋಗ ಭೀತಿ ಜನರನ್ನು ಕಾಡುತ್ತದೆ ಎಂದು ಅಳಲು ತೋಡಿಕೊಳ್ಳುತ್ತಾರೆ’ ಗ್ರಾಮದ ಮಹ್ಮದ್‌ ಅಲಿ, ರಮೇಶರಾವ ಕೊಂಗಳಿ, ಬಸೀರ್‌ಮಿಯಾ.

ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಆಟದ ಮೈದಾನದ ಕೊರತೆಯಿದ್ದು, ಮಕ್ಕಳ ದೈಹಿಕ ಚಟುವಟಿಕೆಗೆ ಹೊಡೆತ ಬೀಳುತ್ತಿದೆ. ಇನ್ನು ನೀರಿನ ಟ್ಯಾಂಕ್‌ ಸುತ್ತ ತಿಪ್ಪೆ ಗುಂಡಿ ಇದೆ. ಕೈ ಪಂಪ್‌ ಸುತ್ತ ಮನೆಗಳ ಹೊಲಸು ನೀರು ಹರಿಯುವುದರಿಂದ ಜನರಿಗೆ ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ. ಎಸ್ಸಿ ವಾರ್ಡ್‌ನಲ್ಲಿ ಮಳೆ ನೀರು ಮನೆಗೆ ನುಗ್ಗುತ್ತಿದೆ.

ಕೆಲವರು ಮನೆಗೊಂದು ಶೌಚಾಲಯ ನಿರ್ಮಿಸಿಕೊಂಡಿದ್ದಾರೆ. ಆದರೆ, ಹಣ ಕೊಡಲು ಬಹಳ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಾರೆ  ಸುತಾರಾ, ಗಣಪತಿ ಭವಾನಿ, ರಮೇಶ ದಶರಥ. ಶೀಘ್ರವೇ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈ ಕಡೆ ಗಮನ ಹರಿಸಿ ಗ್ರಾಮಕ್ಕೆ ಮೂಲ ಸೌಕರ್ಯ ಒದಗಿಸಬೇಕು ಎಂದು ಗ್ರಾಮದ ನಿವಾಸಿಗಳು ಒತ್ತಾಯಿಸಿದ್ದಾರೆ.

* * 

ಗ್ರಾಮದ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಿ, ಶೀಘ್ರದಲ್ಲಿ ರಸ್ತೆ, ಚರಂಡಿ ನಿರ್ಮಿಸಲಾಗುವುದು.

ಸಯ್ಯದ್‌ ಮುನೀರ್‌

ಗ್ರಾ.ಪಂ ಕಾರ್ಯದರ್ಶಿ

 

ಪ್ರತಿಕ್ರಿಯಿಸಿ (+)