ಭಾನುವಾರ, ಡಿಸೆಂಬರ್ 8, 2019
21 °C
ಎರಡು ವಾರಗಳಿಂದ ಹಲವು ತರಕಾರಿ, ಧಾನ್ಯಗಳ ದರದಲ್ಲಿ ಏರಿಳಿತ

ಇಳಿಯದ ಟೊಮೆಟೊ ಬೆಲೆ

ಎಂ.ಎನ್.ಯೋಗೇಶ್‌ Updated:

ಅಕ್ಷರ ಗಾತ್ರ : | |

ಇಳಿಯದ ಟೊಮೆಟೊ ಬೆಲೆ

ಮಂಡ್ಯ: ಜಿಲ್ಲೆಯಾದ್ಯಂತ ಜನರು ಮಳೆಯ ನಿರೀಕ್ಷೆಯಲ್ಲಿದ್ದಾರೆ. ಇದರ ಜತೆಗೆ ಟೊಮೆಟೊ ಬೆಲೆ ಯಾವಾಗ ಇಳಿಯುತ್ತದೆ ಎಂಬ ನಿರೀಕ್ಷೆಯೂ ಇದೆ.

ಎರಡು ವಾರಗಳಿಂದ ಹಲವು ತರಕಾರಿ, ಧಾನ್ಯಗಳಲ್ಲಿ ಏರಿಳಿತ ಉಂಟಾಗಿದೆ. ಆದರೆ, ಟೊಮೆಟೊ ಮಾತ್ರ 70ರ ಗಡಿಯಿಂದ ಕೆಳಗೆ ಇಳಿದಿಲ್ಲ. ನಗರದ ತರಕಾರಿ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಕೇಳಿ ರೈತರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದು ವ್ಯಾಪಾರಿಗಳು ಇದನ್ನು ಚಿನ್ನ ಎಂದು ಭಾವಿಸಿದ್ದಾರೆ. ಮೊದಲು ಒಂದು ಹಣ್ಣನ್ನು ಹೆಚ್ಚಿಗೆ ತೂಕ ಮಾಡಿಕೊಡುತ್ತಿದ್ದ ಅವರು ಈಗ ಕಟ್ಟುನಿಟ್ಟಾಗಿ ತೂಕ ಮಾಡುತ್ತಿದ್ದಾರೆ.

‘ಟೊಮೆಟೊ ಬೆಲೆ ಇಳಿಯುವವರೆಗೆ ನಮಗೆ ಹುಣಿಸೆ ಹುಳಿಯೇ ಗತಿ. ಕಳೆದ ವರ್ಷ ಇದೇ ಅವಧಿಯಲ್ಲಿ ₹80ಕ್ಕೆ ಒಂದು ಮದುವೆಗೆ ಆಗುವಷ್ಟು ಟೊಮೊಟೊ ಕೊಳ್ಳಬಹುದಿತ್ತು. ರೂಪಾಯಿಗೊಂದು ಕೆ.ಜಿ. ಟೊಮೆಟೊ ಇತ್ತು’ ಎಂದು ಗ್ರಾಹಕ ರಾಜಣ್ಣ ಅಚ್ಚರಿ ಪಡುತ್ತಾರೆ.

ಕೆ.ಜಿ.ಕ್ಯಾರೆಟ್‌ ಬೆಲೆ 65ರ ಸಮೀಪ ಇತ್ತು. ಆದರೆ, ಈ ವಾರ 40ಕ್ಕೆ ಇಳಿದಿದೆ. ಮೂರು ತಿಂಗಳಿಂದ ₹60ರ ಗಡಿಯಲ್ಲಿದ್ದ ಕ್ಯಾರೆಟ್‌ ಬೆಲೆ ₹ 40ಕ್ಕೆ ಇಳಿದಿರುವುದು ಗ್ರಾಹಕರಲ್ಲಿ ಸಂತಸ ತಂದಿದೆ.

₹ 60ರಲ್ಲಿದ್ದ ಬೀಟರೂಟ್ ಬೆಲೆ ₹ 50ಕ್ಕೆ ಇಳಿದಿರುವುದು ಗ್ರಾಹಕರಲ್ಲಿ ಸಮಾಧಾನ ತಂದಿದೆ. ಬೀನ್ಸ್‌ ಬೆಲೆ ₹40 ರಲ್ಲೇ ಮುಂದುವರಿದಿದೆ. ಕೆ.ಜಿ. ಬೆಂಡೆಕಾಯಿ ಬೆಲೆ ಕಳೆದ ವಾರ ₹ 20ಕ್ಕೆ ಮಾರಾಟವಾಗುತ್ತಿತ್ತು. ಈ ವಾರ ₹ 10 ಹೆಚ್ಚಳವಾಗಿದ್ದು, ಕೆ.ಜಿ.ಗೆ ₹30 ಇದೆ.

ಬದನೆಕಾಯಿ ₹ 30, ಹಾಗಲಕಾಯಿ ₹ 40, ಮೂಲಂಗಿ ₹ 30 ಬೆಲೆಯಲ್ಲಿ ಮುಂದುವರಿದಿದೆ. ದೊಣ್ಣಮೆಣಸಿನಕಾಯಿ ಬೆಲೆ ಕೊಂಚ ಹೆಚ್ಚಳವಾಗಿದ್ದು, ₹ 40ಕ್ಕೆ ಮಾರಾಟವಾಗುತ್ತಿದೆ. ಹೀರೇಕಾಯಿ ಕೆ.ಜಿ. ₹ 50, ತೊಂಡೆಕಾಯಿ ₹ 40, ನಾಲ್ಕು ಸೌತೆಕಾಯಿಗೆ ₹ 10ರಲ್ಲಿ ಮಾರಾಟವಾಗುತ್ತಿದ್ದು, ಸ್ಥಿರತೆ ಕಾಯ್ದುಕೊಂಡಿವೆ.

‘ಅಲ್ಲಲ್ಲಿ ಮಳೆ ಸುರಿಯುತ್ತಿರುವ ಕಾರಣ ಟೊಮೆಟೊ ಬೆಳೆ ಕೊಳೆತು ಹೋಗುತ್ತಿದೆ.

ಮಾರುಕಟ್ಟೆಗೆ ಮಾಲು ಕೊರತೆ ಆಗಿರುವ ಕಾರಣ ಬೆಲೆಯಲ್ಲಿ ಹೆಚ್ಚಳವಾಗಿದೆ’ ಎಂದು ತರಕಾರಿ ವ್ಯಾಪಾರಿ ಲವಕುಮಾರ್‌ ತಿಳಿಸಿದರು.

ಸೊಪ್ಪು: ಕಳೆದ ವಾರ ಒಂದು ಕಟ್ಟು ಸೊಪ್ಪಿಗೆ ₹ 20 ಇತ್ತು. ಆದರೆ, ಆಷಾಢ ಮಾಸ ಆರಂಭವಾಗುತ್ತಿದ್ದಂತೆ ಸೊಪ್ಪು ತಿನ್ನುವವರಿಗೆ ಅದೃಷ್ಟ ಒಲಿದಿದೆ. ಈಗ ₹ 20ಕ್ಕೆ ಐದು ಕಟ್ಟು ಕೊತ್ತಂಬರಿ ಸೊಪ್ಪು ಮಾರಾಟವಾಗುತ್ತಿದೆ. ಸಬ್ಬಸಿಗೆ ಸೊಪ್ಪಿನ ಬೆಲೆ ಕೂಡ ಇಳಿಕೆಯಾಗಿದ್ದು, ₹ 3ಕ್ಕೆ ಒಂದು ಕಟ್ಟು ಸಿಗುತ್ತಿದೆ. ₹ 5ಕ್ಕೆ ಪುದಿನ, ₹ 5ಕ್ಕೆ ಪಾಲಕ್‌ ಸೊಪ್ಪು ಸಿಗುತ್ತಿದ್ದು, ಸೊಪ್ಪು ತಿನ್ನುವವರ ಮನಸುಗಳು ಅರಳಿವೆ.

‘ಇದು ಆಷಾಢ ಮಾಸವಾದ ಕಾರಣ ಬಾಡೂಟದ ಕಾರ್ಯಕ್ರಮಗಳು ನಡೆಯುತ್ತಿಲ್ಲ ಹೀಗಾಗಿ ಕೊತ್ತಂಬರಿ ಸೊಪ್ಪಿನ ಬೆಲೆ ಇಳಿಕೆಯಾಗಿದೆ; ಎಂದು ಸೊಪ್ಪಿನ ವ್ಯಾಪಾರಿ ಲಕ್ಷ್ಮಮ್ಮ ಹೇಳಿದರು.

ರಾಗಿ ಬೆಲೆ ಎರಿಕೆ: ಕಳೆದ ವಾರ ₹ 25ಕ್ಕೆ ಮಾರಾಟವಾಗುತ್ತಿದ್ದ ಕೆ.ಜಿ. ರಾಗಿಯು ಈ ವಾರ ₹ 30ಕ್ಕೆ ಏರಿದೆ. ಕಳೆದ ಎರಡು ವರ್ಷಗಳಿಂದ ಬರಗಾಲ ಕಾಡಿದ ಪರಿಣಾಮ ಮಾರುಟ್ಟೆಗೆ ರಾಗಿ ಬರುತ್ತಿಲ್ಲ. ಮುಂದೆ ಕೆ.ಜಿ. ರಾಗಿಗೆ ₹ 40 ಆದರೂ ಆಶ್ಚರ್ಯ ಪಡಬೇಕಾಗಿಲ್ಲ. ಇನ್ನು ಧಾನ್ಯಗಳಲ್ಲಿ ₹ 85ಕ್ಕೆ ಅವರೆಕಾಳು, ₹ 50ಕ್ಕೆ ಹುರುಳಿಕಾಳು, ₹ 60ಕ್ಕೆ ಕಡ್ಲೆಕಾಳು ಮಾರಾಟವಾಗುತ್ತಿವೆ.

ಮಾರುಟ್ಟೆಗೆ ತಮಿಳುನಾಡಿನ ಏಲಕ್ಕಿ ಬಾಳೆಹಣ್ಣು ಬರುತ್ತಿರುವ ಕಾರಣ ಬೆಲೆ ಸ್ಥಿರವಾಗಿದೆ. ₹ 60ಕ್ಕೆ ಕೆ.ಜಿ. ಬಾಳೆಹಣ್ಣು ಸಿಗುತ್ತಿದೆ.

ಪ್ರತಿಕ್ರಿಯಿಸಿ (+)