ಸೋಮವಾರ, ಡಿಸೆಂಬರ್ 16, 2019
25 °C
ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿದ ಸ್ಥಳೀಯರು; ಪತ್ತೆಯಾಗದ ಕಟ್ಟಡ ಮಾಲೀಕರು

ವಿಶ್ವನಾಥನಗರದಲ್ಲಿ ಅಕ್ರಮ ಕಟ್ಟಡ ನೆಲಸಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವನಾಥನಗರದಲ್ಲಿ ಅಕ್ರಮ ಕಟ್ಟಡ ನೆಲಸಮ

ಹಾಸನ: ವಿಶ್ವನಾಥನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಿರ್ಮಿಸಲಾಗಿದ್ದ ಅಕ್ರಮ ಕಟ್ಟಡವನ್ನು ಸೋಮವಾರ ನಗರಸಭೆ ಅಧ್ಯಕ್ಷ ಎಚ್.ಎಸ್.ಅನಿಲ್‌ ಕುಮಾರ್ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.

ಅಕ್ರಮ ಕಟ್ಟಡಕ್ಕೆ ಶಾಸಕ ಎಚ್.ಎಸ್.ಪ್ರಕಾಶ್ ಹಾಗೂ ನಗರಸಭೆ ಅಧ್ಯಕ್ಷರು ಬೆಂಬಲ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಎಚ್.ಕೆ. ಮಹೇಶ್ ಆರೋಪಿಸಿದ್ದರಿಂದ ತೆರವು ಕಾರ್ಯಾಚರಣೆ ಕೈಗೊಳ್ಳಲಾಯಿತು.

‘ಶಾಲಾ ಆವರಣದಲ್ಲಿ ಕಟ್ಟುತ್ತಿರುವುದು ಅಂಗನವಾಡಿ ಕೇಂದ್ರ. ಇದರಿಂದ ಸ್ಲಂ ನಿವಾಸಿಗಳಿಗೆ ಅನುಕೂಲವಾಗುತ್ತದೆ. ಕಟ್ಟಡ ತೆರವು ಮಾಡಬೇಡಿ’ ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿ, ನಗರಸಭೆ ಅಧ್ಯಕ್ಷರ ವಿರುದ್ಧ ಧಿಕ್ಕಾರ ಕೂಗಿದರು.

ಜನರ ಮನವಿಗೆ ಸ್ಪಂದಿಸದ ಅನಿಲ್‌ಕುಮಾರ್, ‘ಅಂಗನವಾಡಿ ಹೆಸರಿನಲ್ಲಿ ಮನೆ ಕಟ್ಟಲಾಗುತ್ತಿದೆ. ಕಟ್ಟಡಕ್ಕೆ ನಗರಸಭೆ ಅಥವಾ ಸ್ಲಂ ಬೋರ್ಡ್‌ನಿಂದ ಯಾವುದೇ ಅನುಮತಿ ಪಡೆದಿಲ್ಲ. ಈ ರೀತಿಯ ಕಟ್ಟಡಗಳಿಗೆ ಅವಕಾಶ ನೀಡುವುದಿಲ್ಲ. ಅಂಗನವಾಡಿ ಕೇಂದ್ರವನ್ನು ಬೇರೆ ಕಡೆಗೆ ಕಟ್ಟಿಕೊಡುತ್ತೇವೆ. ಆದರೆ, ತೆರವು ಕಾರ್ಯಾಚರಣೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಕಟ್ಟಡ ಕೆಡವಲು ಮುಂದಾದ ಜೆಸಿಬಿಗೆ ಎದುರು ನಿಂತು ಅಡ್ಡಿಪಡಿಸಲು ಯತ್ನಿಸಿದರು. ಆದರೆ, ಪೊಲೀಸರು ಅವರನ್ನು ಪಕ್ಕಕ್ಕೆ ತಳ್ಳಿದರು. ಕೆಲವೇ ಕ್ಷಣಗಳಲ್ಲಿ ಸಂಪೂರ್ಣ ಕಟ್ಟಡ ನೆಲಸಮವಾಯಿತು.

‘ಸರ್ಕಾರಿ ಶಾಲಾ ಆವರಣದಲ್ಲಿ ಅಕ್ರಮ ಕಟ್ಟಡ ತಲೆ ಎತ್ತಿದೆ ಎಂಬ ವಿಷಯ ಶನಿವಾರ ತಿಳಿಯಿತು. ಆದ್ದರಿಂದ ತೆರವು ಕಾರ್ಯಾಚರಣೆ ಕೈಗೊಂಡಿದ್ದೇನೆ. 

ಈ ಕಟ್ಟಡದ ಮಾಲೀಕರು ಯಾರು ಎಂಬುದು ಇನ್ನು ತಿಳಿದು ಬಂದಿಲ್ಲ. ಕುಮಾರ್ ಎಂಬ ಗುತ್ತಿಗೆದಾರ ಕೆಲಸ ಮಾಡಿದ್ದಾರೆ. ಅವರ ಮೂಲಕವೇ  ಕಟ್ಟಡದ ಮಾಲೀಕರನ್ನು ಪತ್ತೆ ಹಚ್ಚಲಾಗುವುದು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದರು.

‘ಅಂಗನವಾಡಿ ಕೇಂದ್ರ ಎಂಬ ಕಾರಣಕ್ಕೆ ಸ್ಥಳೀಯರು ಸುಮ್ಮನಿದ್ದರು. ಆದರೆ, ಕಟ್ಟಡಕ್ಕೆ ಸಂಬಂಧಿಸಿದಂತೆ ನಗರಸಭೆಯಿಂದ ಅನುಮತಿ ಪಡೆದಿಲ್ಲ. ಅಂಗನವಾಡಿ ಕಟ್ಟಡವೆಂದರೆ ಅಡಿಪಾಯ, ಸಿಮೆಂಟ್, ಕಲ್ಲು ಹಾಗೂ ಇತರೆ ಸಾಮಗ್ರಿಗಳ ಗುಣಮಟ್ಟ ಪರಿಶೀಲನೆ ನಡೆಸಬೇಕಾಗುತ್ತದೆ. ಆದರೆ ಅದ್ಯಾವುದು ಇಲ್ಲಿ ಆಗಿಲ್ಲ’ ಎಂದು ಹೇಳಿದರು.

ನಗರಸಭೆ ಸದಸ್ಯೆ ಶುಭಾ ದಿನೇಶ್, ಆಯುಕ್ತ ಕೃಷ್ಣಕುಮಾರ್, ಎಂಜಿನಿಯರ್ ನಾಗೇಂದ್ರ ಇದ್ದರು.

**

ಸರ್ಕಾರದ ಆಸ್ತಿ ಕಬಳಿಸಿಲ್ಲ

‘ಶಾಲಾ ಆವರಣದಲ್ಲಿ ತಲೆ ಎತ್ತಿರುವ ಅಕ್ರಮ ಕಟ್ಟಡ ತೆರವಿಗೆ ಹೋರಾಟ ಪ್ರಾರಂಭಿಸಿರುವುದೇ ನಾನು. ಆದರೆ ಈ ಕಟ್ಟಡದ ಮಾಲೀಕ ನಾನೇ ಎಂಬ ಆರೋಪ ಕೇಳಿ ಬರುತ್ತಿರುವುದು ಆಶ್ಚರ್ಯ ಮೂಡಿಸಿದೆ. ಈ ಪ್ರಕರಣ ಸಂಬಂಧ ತನಿಖೆ ನಡೆಸಲಿ. ಸರ್ಕಾರರದ ಆಸ್ತಿ ಕಬಳಿಸುವ ಕೆಟ್ಟ ಕೆಲಸ ಮಾಡಿಲ್ಲ’ ಎಂದು ದಸಂಸ ಯುವ ಘಟಕದ ಜಿಲ್ಲಾಧ್ಯಕ್ಷ  ಸಿ. ಕ್ರಾಂತಿ ಪ್ರಸಾದ್ ತ್ಯಾಗಿ ತಿಳಿಸಿದರು.

**

ನಗರದಲ್ಲಿ ಇನ್ನೂ ಅನೇಕ ಅಕ್ರಮ ಕಟ್ಟಡಗಳು ತಲೆ ಎತ್ತಿವೆ. ಅಧ್ಯಕ್ಷ ಸ್ಥಾನ ಸ್ವೀಕರಿಸಿದ ನಂತರ ಅಕ್ರಮ ಕಟ್ಟಡಗಳನ್ನು ಕೆಡವಲಾಗುತ್ತಿದೆ

-ಎಚ್‌.ಎಸ್‌.ಅನಿಲ್‌ ಕುಮಾರ್‌, ನಗರಸಭೆ ಅಧ್ಯಕ್ಷ

ಪ್ರತಿಕ್ರಿಯಿಸಿ (+)