ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುಳುಕಾದ ಲಿಂಗ

Last Updated 18 ಜುಲೈ 2017, 19:30 IST
ಅಕ್ಷರ ಗಾತ್ರ

ಜಗತ್ತಿನ ಸೃಷ್ಟಿ, ಸ್ಥಿತಿ ಮತ್ತು ಲಯಕ್ಕೆ ಕಾರಣವಾಗಿರುವ ಪರವಸ್ತುವನ್ನು ಲಿಂಗ­ವೆಂದು ಕರೆಯಲಾಗಿದೆ. ಜಗತ್ತಿನ ಚರಾಚರಗಳೆಲ್ಲವೂ ಈ ಲಿಂಗದಲ್ಲಿಯೇ ಹುಟ್ಟಿ, ಲಿಂಗದಲ್ಲಿಯೇ ಲಯವಾಗುವವು. ಆಲದ ಬೀಜವು ಇಡೀ ವೃಕ್ಷ ವಿಸ್ತಾರವನ್ನೇ ತನ್ನಲ್ಲಿ ಗರ್ಭೀಕರಿಸಿಕೊಂಡಿರುವಂತೆ ಸಮಸ್ತ ವಿಶ್ವವನ್ನೇ ತನ್ನೊಳಗೆ ತುಂಬಿಕೊಂಡಿರುವ, ಸಮಸ್ತ ವಿಶ್ವದ ಒಳಹೊರಗೆ ವ್ಯಾಪಿಸಿರುವ ಈ ಪರವಸ್ತುವು ಅಣುವಿಗೆ ಅಣು, ಮಹತ್ತಿಗೆ ಮಹತ್ತು ಆಗಿರುವುದಲ್ಲದೆ ಚೇತನ ಸ್ವರೂಪವೂ ಆಗಿರುವುದರಿಂದ ಇದನ್ನು ಪರಶಿವ ಚೈತನ್ಯವೆಂದೂ ವ್ಯಾಖ್ಯಾನಿಸ­ಲಾಗಿದೆ. ಮಾತು, ಮನಸ್ಸುಗಳಿಗೆ ಮೀರಿದ, ಬುದ್ಧಿಗೆ ಅಗಮ್ಯವಾದ ಈ ಪರಶಿವ ಚೈತನ್ಯವು ಭಾವಭರಿತವೂ, ಜ್ಞಾನಗೋಚರವೂ, ಅನುಭಾವ­ವೇದ್ಯವೂ ಆಗಿದೆ.

‘ಲಿಂಗವೆಂಬುದು ಪರಶಿವನ ನಿಜದೇಹ, ಲಿಂಗವೆಂಬುದು ಪರಶಿವನ ಘನತೇಜ, ಲಿಂಗವೆಂಬುದು ಸಚ್ಚಿದಾನಂದ ನಿತ್ಯಪರಿಪೂರ್ಣ, ಲಿಂಗವೆಂಬುದು ಸಕಲ ಲೋಕೋತ್ಪತ್ತಿಗೆ ಕಾರಣ’ ಎನ್ನುವ ಶರಣರು ಪರಶಿವ ಚೈತನ್ಯವನ್ನು ಲಿಂಗವೆಂಬುದಾಗಿ ವಿವರಿಸಿದ್ದಾರೆ. ಅದು ಬ್ರಹ್ಮಾಂಡವನ್ನು ವ್ಯಾಪಿಸಿರುವಂತೆ ಪಿಂಡಾಂಡವನ್ನೂ ವ್ಯಾಪಿಸಿದೆ. ಬ್ರಹ್ಮಾಂಡಗತ ಚೈತನ್ಯವನ್ನು ಸ್ಥಾವರಲಿಂಗ ಅಥವಾ ಮೂರ್ತಿಗಳ ರೂಪದಲ್ಲಿ ಹಲವರು ಆರಾಧಿಸಿದರೆ ಇನ್ನು ಕೆಲವರು ಪಿಂಡಾಂಡಗತ ಚೈತನ್ಯವನ್ನು ಇಷ್ಟಲಿಂಗದ ರೂಪದಲ್ಲಿ ಆರಾಧಿಸುವರು. ನಿರಾಕಾರ ನಿರ್ಗುಣ ಸ್ವರೂಪದ ಪರಶಿವ ಚೈತನ್ಯವನ್ನು ಸಾಕಾರ ರೂಪದಲ್ಲಿ ಕಂಡಿರುವ ಧರ್ಮಗುರು ಬಸವಣ್ಣನವರು ‘ಸಾಕಾರ ನಿರಾಕಾರ ಏಕೋದೇವ ನಮ್ಮ ಕೂಡಲ ಸಂಗಮದೇವ’ ಎನ್ನುವರು.

ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ
ಪಾತಾಳದಿಂದತ್ತತ್ತ ನಿಮ್ಮ ಶ್ರೀ ಚರಣ
ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀ ಮಕುಟ
ಅಗಮ್ಯ, ಅಗೋಚರ ಅಪ್ರಮಾಣಲಿಂಗವೆ
ಕೂಡಲಸಂಗಮದೇವಯ್ಯಾ
ನೀವೆನ್ನ ಕರಸ್ಥಳಕ್ಕೆ ಬಂದು ಚುಳುಕಾದಿರಯ್ಯಾ’

ಬ್ರಹ್ಮಾಂಡ ಮತ್ತು ಪಿಂಡಾಂಡಗಳನ್ನು ವ್ಯಾಪಿಸಿರುವ ಪರಶಿವ ಚೈತನ್ಯವು ಇವೆಲ್ಲವುಗಳನ್ನು ಮೀರಿದ ಘನವಾಗಿದೆ. ಇಂದ್ರಿಯಗಳಿಗೆ ಅಗೋಚರವಾದ, ಬುದ್ಧಿಗೆ ಅಗಮ್ಯವಾದ, ಜಗದಗಲ, ಮುಗಿಲಗಲವಾಗಿರುವ ಈ ಚೈತನ್ಯವನ್ನು ಕಾರುಣ್ಯಮೂರ್ತಿಯಾಗಿರುವ ಸದ್ಗುರುವು ಅಂಗೈನೆಲ್ಲಿಯಾಗಿಸಿರುವನು. ಪರಶಿವ ಚೈತನ್ಯವು ವಿಶ್ವವನ್ನೇ ವ್ಯಾಪಿಸಿದ್ದರೂ ಗುರುಕಾರುಣ್ಯದಿಂದ ನಮ್ಮ ಕರಸ್ಥಳಕ್ಕೆ ಚುಳುಕಾಗಿ ಬಂದಿದೆ. ಪರಶಿವ ಚೈತನ್ಯದ ಕುರುಹಾಗಿರುವ ಚುಳುಕಾದ ಲಿಂಗವು ಸಾಕಾರವೂ ಹೌದು ನಿರಾಕಾರವೂ ಹೌದು ಎನ್ನುವರು ಬಸವಣ್ಣನವರು.

‘ಲಿಂಗದಲಿ ಮನವಾಗಿ, ಲಿಂಗದಲಿ ನೆನಹಾಗಿ, ಲಿಂಗದಲಿ ನೋಟ ನುಡಿಕೂಟವಾದವನು ಲಿಂಗವೇ ಅಕ್ಕು ಸರ್ವಜ್ಞ’ ಎಂದು ಕವಿ ಸರ್ವಜ್ಞ ಹೇಳಿರುವುದು ಮತ್ತು ‘ಲಿಂಗವನರಿಯದೆ ಏನನರಿದಡೆಯೂ ಫಲವಿಲ್ಲ, ಲಿಂಗವನರಿದ ಬಳಿಕ ಮತ್ತೇನ­ನರಿದಡೆಯೂ ಫಲವಿಲ್ಲ’ ಎಂದು ಅನುಭಾವಿ ಅಲ್ಲಮ ನುಡಿದಿರುವುದು ಚುಳುಕಾದ ಲಿಂಗದ ಹಿರಿಮೆ-ಗರಿಮೆಗಳಿಗೆ ಸಾಕ್ಷಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT