ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್ ಪ್ರಧಾನಿ ನವಾಜ್ ಷರೀಫ್ ರಾಜೀನಾಮೆ; ಮುಂದಿನ ಪ್ರಧಾನಿ ಯಾರು?

Last Updated 28 ಜುಲೈ 2017, 11:43 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ನವಾಜ್‌ ಷರೀಫ್‌ ಹಾಗೂ ಅವರ ಕುಟುಂಬ ವಿರುದ್ಧದ ಪನಾಮಾ ಪೇಪರ್ಸ್‌ ಪ್ರಕರಣದ ವಿಚಾರಣೆ ನಡೆಸಿದ ಪಾಕಿಸ್ತಾನದ ಸುಪ್ರೀಂ ಕೋರ್ಟ್‌ ನವಾಜ್‌ ಷರೀಫ್‌ ಅವರನ್ನು ದೋಷಿ ಎಂದು ಮಹತ್ವದ ತೀರ್ಪು ಪ್ರಕಟಿಸಿದೆ. ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಿದ ಬೆನ್ನಲ್ಲೇ ಷರೀಫ್ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಅಕ್ರಮ ಸಂಪಾದನೆ ಹಾಗೂ ತೆರಿಗೆ ವಂಚನೆಯಿಂದ ಗಳಿಸಿದ ಕಾಳಧನವನ್ನು ಅಂತರರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ಇರಿಸಿರುವವರ ಪಟ್ಟಿಯು ಪನಾಮಾ ಪೇಪರ್ಸ್‌ ಸೋರಿಕೆಯಿಂದ ಬಹಿರಂಗಗೊಂಡಿತ್ತು.

ಮುಂದಿನ ಪ್ರಧಾನಿ ಯಾರು?
ಷರೀಫ್ ಅವರ ರಾಜೀನಾಮೆ ಹಿನ್ನೆಲೆಯಲ್ಲಿ ಮುಂದಿನ ಪ್ರಧಾನಿ ಯಾರು ಆಗಬೇಕೆಂಬುದರ ಬಗ್ಗೆ ಪಾಕಿಸ್ತಾನ್ ಮುಸ್ಲಿಂ ಲೀಗ್ -ನವಾಜ್ (ಪಿಎಂಎಲ್ -ಎನ್) ಪಕ್ಷ ತೀರ್ಮಾನಿಸಲಿದೆ. ನವಾಜ್ ಷರೀಫ್ ಅವರೇ ಈ ಪಕ್ಷದ ಮುಖ್ಯಸ್ಥರಾಗಿರುವುದರಿಂದ ಅವರೇ ಮುಂದಿನ ಪ್ರಧಾನಿ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ.

ಪಾಕ್ ಸರ್ಕಾರದಲ್ಲಿ ಬಹುಮತ ಹೊಂದಿರುವ ಪಿಎಂಎಲ್ -ಎನ್ ಪಕ್ಷವು ಹೊಸ ಪ್ರಧಾನಿಯನ್ನು ಆಯ್ಕೆ ಮಾಡಲಿದ್ದು, ಕೆಲವು ಪ್ರಮುಖರ ಹೆಸರುಗಳು ಪಟ್ಟಿಯಲ್ಲಿವೆ.

ಷರೀಫ್ ಮಗಳ ಹೆಸರೂ ಕೇಳಿ ಬರುತ್ತಿದೆ!
ಪ್ರಧಾನಿ ಗದ್ದುಗೆಯೇರಲು ನವಾಜ್ ಷರೀಫ್ ಅವರ ಮಗಳು ಮರಿಯಂ ನವಾಜ್ ಹೆಸರೂ ಕೇಳಿ ಬರುತ್ತಿದ್ದೆ. ಆದರೆ ಆಕೆ ಚುನಾಯಿತ ಪ್ರತಿನಿಧಿ ಅಲ್ಲದೇ ಇರುವ ಕಾರಣ ಪ್ರಧಾನಿ ಸ್ಥಾನಕ್ಕೆ ಅರ್ಹಳಾಗಿರುವುದಿಲ್ಲ.

ಪ್ರಧಾನಿ ಸ್ಥಾನಕ್ಕೇರಲು ಸಾಧ್ಯತೆ ಇರುವ ವ್ಯಕ್ತಿಗಳು

ಶಹಬಾಜ್ ಷರೀಫ್
ಷರೀಫ್ ಅವರ ಕಿರಿಯ ಸಹೋದರ ಶಹಬಾಜ್ ಷರೀಫ್ ಅವರ ಹೆಸರು ಪ್ರಧಾನಿ ಸ್ಥಾನಕ್ಕೆ ಕೇಳಿಬರುತ್ತಿದೆ. ಶಹಬಾಜ್ ಷರೀಫ್ ಅವರು ಪಂಜಾಬ್ ಪ್ರಾಂತ್ಯದಲ್ಲಿ ಮುಖ್ಯಮಂತ್ರಿಯಾಗಿದ್ದಾರೆ. ಶಹಬಾಜ್ ಷರೀಫ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ನ್ಯಾಷನಲ್ ಅಸೆಂಬ್ಲಿಯಲ್ಲಿ ಆಯ್ಕೆಯಾದರೆ ಮಾತ್ರ ಪ್ರಧಾನಿಯಾಗಬಹುದು.

ಖ್ವಾಜಾ ಮುಹಮ್ಮದ್ ಆಸಿಫ್
ಸದ್ಯ ಪಾಕಿಸ್ತಾನದ ರಕ್ಷಣಾ ಸಚಿವರಾಗಿರುವ ಖ್ವಾಜಾ ಆಸಿಫ್ ಅವರಿಗೆ ಪ್ರಧಾನಿ ಪಟ್ಟ ಒಲಿಯುವ ಸಾಧ್ಯತೆಗಳು ಹೆಚ್ಚು. ಒಂದು ಕಾಲದಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದ ಆಸಿಫ್ 1991ರಿಂದ ಪಿಎಂಎಲ್-ಎನ್ ಪಕ್ಷದಲ್ಲಿ ಮಹತ್ತರ ಸ್ಥಾನಗಳನ್ನು ವಹಿಸಿಕೊಂಡಿದ್ದಾರೆ. ಸಿಯಾಲ್‍ಕೋಟ್‍ನಿಂದ  ನ್ಯಾಷನಲ್ ಅಸೆಂಬ್ಲಿಗೆ ಆಯ್ಕೆಯಾಗಿದ್ದ ಇವರು ಪಾಕಿಸ್ತಾನದ ಪ್ರಬಲ ರಾಜಕಾರಣಿ ಎಂದೆನಿಸಿಕೊಂಡಿದ್ದಾರೆ.

ಸರ್ದಾರ್ ಅಯಾಜ್ ಸಾದಿಖ್
ನ್ಯಾಷನಲ್ ಅಸೆಂಬ್ಲಿಯಲ್ಲಿ ಸ್ಪೀಕರ್ ಆಗಿರುವ ಸರ್ದಾರ್ ಅಯಾನ್ ಸಾದಿಖ್ ಕೂಡಾ ಪ್ರಮುಖ ರಾಜಕಾರಣಿ. 2013ರ ಸಾರ್ವತ್ರಿಕ ಚುನಾವಣೆಯಲ್ಲಿ ಮಾಜಿ ಕ್ರಿಕೆಟಿಗ, ರಾಜಕಾರಣಿ ಇಮ್ರಾನ್ ಖಾನ್ ಅವರನ್ನು ಪರಾಭವಗೊಳಿಸುವ ಮೂಲಕ ಸಾದಿಖ್, ನವಾಜ್ ಷರೀಫ್ ಅವರ ಆಪ್ತ ವಲಯದಲ್ಲಿ ಜಾಗ ಪಡೆದುಕೊಂಡಿದ್ದರು.

ವೋಟಿಂಗ್‍ನಲ್ಲಿ ಮೋಸ ಮಾಡಿದ್ದಾರೆ ಎಂಬ ಆರೋಪದಲ್ಲಿ ನ್ಯಾಷನಲ್ ಅಸೆಂಬ್ಲಿಗೆ ಆಯ್ಕೆ ಆದ ಎರಡೇ ವರ್ಷದಲ್ಲಿ ಸೀಟು ಕಳೆದುಕೊಳ್ಳಬೇಕಾಗಿ ಬಂತು. ಆಮೇಲೆ ನಡೆದ ಉಪ ಚುನಾವಣೆಯಲ್ಲಿ ಸಾದಿಖ್, ಇಮ್ರಾನ್ ಖಾನ್ ಅವರ ಆಪ್ತರನ್ನು ಪರಾಭವಗೊಳಿಸಿ ಗೆದ್ದು ಬಂದರು. ಮರು ಚುನಾವಣೆಯಲ್ಲಿ ಸ್ಪೀಕರ್ ಸ್ಥಾನಕ್ಕೆ ಆಯ್ಕೆಯಾದರು.

ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹರೀಕ್ -ಇ- ಇನ್ಸಾಫ್ ಪಕ್ಷದ ಬೆಂಬಲಿಗರಾಗಿ ರಾಜಕೀಯಕ್ಕೆ ಧುಮುಕಿದ್ದ ಸಾದಿಖ್, ಆ ಪಕ್ಷವನ್ನು ತೊರೆದು 2002ರಲ್ಲಿ ಪಿಎಂಎಲ್-ಎನ್ ಟಿಕೆಟಿನಿಂದ ಚುನಾವಣೆ ಸ್ಪರ್ಧಿಸಿದ್ದರು.

ಅಹಸಾನ್ ಇಕ್ಬಾಲ್
ಅಮೆರಿಕದಲ್ಲಿ ಶಿಕ್ಷಣ ಪೂರೈಸಿದ್ದ ಪಾಕ್ ರಾಜಕಾರಣಿ ಅಹಸಾನ್ ಇಕ್ಬಾಲ್ ಅವರು ಷರೀಫ್ ಅವರ ಪಿಎಂಎಲ್-ಎನ್ ಪಕ್ಷದೊಂದಿಗೆ ದೃಢ ಸಂಬಂಧ ಹೊಂದಿದ್ದಾರೆ. 
ಇಕ್ಬಾಲ್ ಅವರನ್ನು ಪ್ರಸ್ತುತ ಪಕ್ಷದ ಚಾಣಾಕ್ಷ ಮತ್ತು ದಾರ್ಶನಿಕ ನಾಯಕ ಎಂದೇ ಪರಿಗಣಿಸಲಾಗುತ್ತಿದೆ. ಅಹಸಾನ್ ಅವರು ಪಾಕ್ ಸರ್ಕಾರಲ್ಲಿ ಫೆಡರಲ್ ಪ್ಲಾನಿಂಗ್ ಮತ್ತು ಅಭಿವೃದ್ಧಿ ಸಚಿವಾಲಯದ ಹೊಣೆಗಾರಿಕೆ ಹೊಂದಿದ್ದಾರೆ.

ಚೌಧರಿ ನಿಸಾರ್ ಅಲಿ ಖಾನ್
ಪಾಕಿಸ್ತಾನದ ಆಂತರಿಕ ಸಚಿವರಾಗಿರುವ ಚೌಧರಿ ನಿಸಾರ್ ಅಲಿ ಖಾನ್ ಪಿಎಂಎಲ್-ಎನ್ ಪಕ್ಷದ ಕಣ್ಮಣಿಯಾಗಿದ್ದರು. ಷರೀಫ್ ಅವರೊಂದಿಗೆ ಉತ್ತಮ ಸಂಬಂಧ ಹೊಂದಿರುವ ಇವರು ಪಾಕಿಸ್ತಾನದ ಸೇನೆಯೊಂದಿಗೂ ಆಪ್ತರಾಗಿದ್ದಾರೆ.

ಶಾಹಿದ್ ಖಕಾನ್ ಅಬ್ಬಾಸಿ
ಪಾಕಿಸ್ತಾನದ ಸುದ್ದಿ ಮಾಧ್ಯಮಗಳ ಪ್ರಕಾರ ಉದ್ಯಮಿ, ಪಿಎಂಎಲ್-ಎನ್ ಪ್ರತಿನಿಧಿ ಶಾಹಿದ್ ಖಕಾನ್ ಅಬ್ಬಾಸಿ ಕೂಡಾ ಪ್ರಧಾನಿ ರೇಸ್‍ನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT