ಗಜೇಂದ್ರಮೋಕ್ಷ ಕೊಳದಲ್ಲಿ ನೀರಿನ ಹೊನಲು

7

ಗಜೇಂದ್ರಮೋಕ್ಷ ಕೊಳದಲ್ಲಿ ನೀರಿನ ಹೊನಲು

Published:
Updated:
ಗಜೇಂದ್ರಮೋಕ್ಷ ಕೊಳದಲ್ಲಿ ನೀರಿನ ಹೊನಲು

ಮಂಡ್ಯ: ಪಾಳು ಬಿದ್ದು ಇತಿಹಾಸದ ಗರ್ಭದಲ್ಲಿ ಹೂತುಹೋಗಿದ್ದ ನಗರದ ಗಜೇಂದ್ರಮೋಕ್ಷ ಕೊಳದಲ್ಲೀಗ ನೀರು ತುಂಬಿದೆ. ಹೂಳೆತ್ತಿ ಕೊಳಕ್ಕೆ ಕಾಯಕಲ್ಪ ನೀಡಿದ ಸಮಾನ ಮನಸ್ಕರ ಮೊಗದಲ್ಲೀಗ ಹರ್ಷದ ಹೊನಲು ಹರಿದಿದೆ.

ಮೈಷುಗರ್‌ ಕಾರ್ಖಾನೆಯ ಬೃಹತ್‌ ಕಟ್ಟಡಗಳ ಪಕ್ಕದಲ್ಲೇ ಈ ಐತಿಹಾಸಿಕ ಕೊಳವಿದೆ. ಸೂಕ್ತ ನಿರ್ವಹಣೆ ಇಲ್ಲದೆ ಕೊಳ ಹಲವು ವರ್ಷಗಳಿಂದ ಪಾಳು ಬಿದ್ದಿತ್ತು. ಮೆಟ್ಟಿಲಿನ ಕಲ್ಲುಗಳು ಸಾವಿರಾರು ವರ್ಷಗಳ ಇತಿಹಾಸವನ್ನು ಕೂಗಿ ಹೇಳುತ್ತಿದ್ದವು. ಕೊಳದ ಮೇಲ್ಭಾಗದಲ್ಲಿರುವ ಮಂಟಪ ಕಿಡಿಗೇಡಿಗಳ ಅನೈತಿಕ ಚಟುವಟಿಕೆಗಳ ತಾಣವಾಗಿತ್ತು. ಉದ್ದವಾದ ಚಪ್ಪಡಿಗಳು ಕಳ್ಳರ ಪಾಲಾಗಿದ್ದವು. 35 ಗುಂಟೆ ಇರುವ ಕೊಳದ ಜಾಗ ಒತ್ತುವರಿಗೂ ತುತ್ತಾಗಿತ್ತು. ಕಳೆದ ವರ್ಷ ನಗರದ ಸಮಾನಮನಸ್ಕ ಸಂಘಟನೆಗಳು ಒಂದಾಗಿ ಕೊಳಕ್ಕೆ ಕಾಯಕಲ್ಪ ನೀಡಲು ಮುಂದಾದವು. ಆಗ ಜಿಲ್ಲಾಧಿಕಾರಿಯಾಗಿದ್ದ ಅಜಯ್‌ ನಾಗಭೂಷಣ್‌ ಕಾಯಕಲ್ಪಕ್ಕೆ ಕೈಜೋಡಿಸಿದ್ದರಿಂದಾಗಿ ಹೂಳು ಹೊರಕ್ಕೆ ಬಂತು. ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಕಲ್ಲುಗಳನ್ನು ಜೋಡಿಸಲಾಯಿತು. ಇತಿಹಾಸ ಹೇಳುವ ಶಾಸನಗಳನ್ನು ಕೊಳದ ನಾಲ್ಕೂ ಮೂಲೆಗಳಲ್ಲಿ ಪ್ರತಿಷ್ಠಾಪಿಸಲಾಯಿತು.

ಮೂರು ಮಳೆ ಸಂಗ್ರಹ ಘಟಕ: ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ, ರೋಟರಿ ಕ್ಲಬ್‌ ಸೇರಿ ವಿವಿಧ ಸಂಘಟನೆಗಳು ಒಟ್ಟಾಗಿ ₹ 5 ಲಕ್ಷ ವೆಚ್ಚದಲ್ಲಿ ಕೊಳ ಅಭಿವೃದ್ಧಿಪಡಿಸಿದವು.  ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಅನುಮತಿ ಪಡೆದು ಕಾರ್ಖಾನೆಯ ಗೋದಾಮು ಆವರಣದಲ್ಲಿ ಎರಡು ಮಳೆ ನೀರು ಸಂಗ್ರಹ ಘಟಕ ನಿರ್ಮಿಸಿ ಕೊಳಕ್ಕೆ ಸಂಪರ್ಕ ನೀಡಲಾಯಿತು. ಕೊಳದ ಆವರಣದಲ್ಲಿ ಇನ್ನೊಂದು ಮಳೆನೀರು ಸಂಗ್ರಹ ಘಟಕ ನಿರ್ಮಿಸಲಾಯಿತು. ಮುಂಗಾರು ಆರಂಭವಾಗುತ್ತಿದ್ದಂತೆ ಮಳೆ ನೀರು ಬಸಿದು ಬರುತ್ತಿದ್ದು ಪಾಳು ಬಿದ್ದಿದ್ದ ಕೊಳದಲ್ಲಿ ನೀರಿನ ಸಿಂಚನ ಉಂಟಾಗಿದೆ.

‘ಮುಂಗಾರು ಆರಂಭವಾಗಿ ಎರಡು ತಿಂಗಳಾದರೂ ಜಿಲ್ಲೆಯಲ್ಲಿ ಅಷ್ಟೇನೂ ಉತ್ತಮ ಮಳೆ ಆಗಿಲ್ಲ. ಸುರಿದ ಅಲ್ಪ ಮಳೆಯಲ್ಲೇ ಕೊಳಕ್ಕೆ 15 ಅಡಿಗಳಷ್ಟು ನೀರು ಬಂದಿದೆ.   ನಮ್ಮ ಪ್ರಯತ್ನಕ್ಕೆ ಫಲ ಸಿಕ್ಕಿದ್ದು ಐತಿಹಾಸಿಕ ಕೊಳವೊಂದನ್ನು ಉಳಿಸಿದ ತೃಪ್ತಿಯ ಜತೆಗೆ ಮಳೆನೀರು ಸಂಗ್ರಹ ಘಟಕದ ಮೂಲಕ ನೀರು ತುಂಬಿಸಿದ ಸಂತಸ ನಮಗಿದೆ’ ಎಂದು ಕೊಳಕ್ಕೆ ಕಾಯಕಲ್ಪ ನೀಡಲು ಪ್ರಮುಖ ಪಾತ್ರ ವಹಿಸಿದ       ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ.ಮಹೇಂದ್ರಬಾಬು ಹೇಳಿದರು.

‘ಅರ್ಧಗಂಟೆ ಜೋರು ಮಳೆ ಸುರಿದರೆ ಕೊಳ ತುಂಬಿ ಹರಿಯುತ್ತದೆ. ಮಳೆನೀರು ಸಂಗ್ರಹ ಘಟಕದ ಜತೆಯಲ್ಲೇ ಶುದ್ಧೀಕರಣ ಯಂತ್ರವನ್ನೂ ಅಳವಡಿಸಲಾಗಿದೆ. ಹೀಗಾಗಿ ಶುದ್ಧ ನೀರು ಕೊಳಕ್ಕೆ ಬರುತ್ತದೆ’ ಎಂದು ಘಟಕ ನಿರ್ಮಾಣದ ನೇತೃತ್ವ ವಹಿಸಿದ್ದ ಪಿ.ಇ.ಎಸ್‌ ಎಂಜಿನಿಯರಿಂಗ್‌ ಕಾಲೇಜು ಪ್ರಾಧ್ಯಾಪಕ ಎಲ್‌.ಪ್ರಸನ್ನಕುಮಾರ್‌ ತಿಳಿಸಿದರು.

ಐತಿಹಾಸಿಕ ಹಿನ್ನೆಲೆ: 1810ರಲ್ಲಿ ಗೋವಿಂದ ರಾಜನ ಮಗ ತಿರುಮಲಾಚಾರ್ಯ ಅವರು ಈ ಕೊಳ ನಿರ್ಮಿಸಿದರು ಎಂಬ ಇತಿಹಾಸ ಇದೆ.

   ಸದ್ಯ ಈ ಕೊಳ ನಗರದ ಲಕ್ಷ್ಮಿ ಜನಾರ್ದನ ಸ್ವಾಮಿ ದೇವಾಲಯಕ್ಕೆ ಸೇರಿದೆ. ದೇಗುಲ ಮುಜರಾಯಿ ಇಲಾಖೆಗೆ ಸೇರಿದ್ದು ಕೊಳದ ಅಭಿವೃದ್ಧಿ ನಡೆದಿಲ್ಲ. ಹಿಂದೆ ಲಕ್ಷ್ಮಿ ಜನಾರ್ದನ ಸ್ವಾಮಿಗೆ   ಇದೇ ಕೊಳದ ನೀರು ತಂದು ಪೂಜೆ ಸಲ್ಲಿಸುತ್ತಿದ್ದರಂತೆ. ದೇಗುಲದಲ್ಲಿ ನಡೆಯುತ್ತಿದ್ದ ಗಜೇಂದ್ರ ಮೋಕ್ಷ ಉತ್ಸವದ ಮೆರವಣಿಗೆ ಇದೇ ಕೊಳದಿಂದ ಆರಂಭವಾಗುತ್ತಿತ್ತಂತೆ. ಹೀಗಾಗಿ ಈ ಕೊಳಕ್ಕೆ ಗಜೇಂದ್ರಮೋಕ್ಷ ಕೊಳ ಎಂಬ ಹೆಸರು ಬಂತು ಎಂಬ ಪ್ರತೀತಿ ಇದೆ.

ಆಗಸ್ಟ್‌ 1ರಂದು ಮತ್ತೆ ಸ್ವಚ್ಛತಾ ಕಾರ್ಯ

ಕೊಳಕ್ಕೆ ನೀರು ಹರಿದು ಬರುತ್ತಿರುವ ಕಾರಣ ಮೆಟ್ಟಿಲುಗಳ ಮೇಲೆ ಬೆಳೆದಿರುವ ಗಿಡ ಕಿತ್ತು ಸುತ್ತಲಿನ ಪ್ರದೇಶ ಸ್ವಚ್ಛ ಮಾಡಲು ವಿವಿಧ ಸಂಘಟನೆಗಳು ನಿರ್ಧರಿಸಿವೆ. ಆಗಸ್ಟ್‌ 1ರಂದು ಸ್ವಚ್ಛತಾ ಕಾರ್ಯ ಆರಂಭವಾಗಲಿದೆ.

‘ಜತೆಗೆ ಕೊಳದ ಸುತ್ತಲೂ ವಾಕಿಂಗ್‌ ಪಾತ್‌ ನಿರ್ಮಿಸಿ, ಕಲ್ಲು ಬೆಂಚ್‌ ಹಾಕಲಾಗುವುದು. ಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು’ ಎಂದು ರೋಟರಿ ಕ್ಲಬ್‌ ಮಾಜಿ ಅಧ್ಯಕ್ಷ ಸಿ.ಅನಂತಕುಮಾರ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry