7

ಬದುಕು ಕಟ್ಟಿಕೊಟ್ಟ ಮೊಲಗಳು

Published:
Updated:
ಬದುಕು ಕಟ್ಟಿಕೊಟ್ಟ ಮೊಲಗಳು

ವಿಜಯಪುರ ಜಿಲ್ಲೆಯ ಆಲಮೇಲದ ಇಮ್ರಾನ್‌ ಖಾನ್‌ ಎಲಿಗಾರ ಕಂಪ್ಯೂಟರ್‌ ವಿಜ್ಞಾನದಲ್ಲಿ ಡಿ‍‍ಪ್ಲೊಮಾ ಮುಗಿಸಿದವರು. ಕೆಲಸಕ್ಕಾಗಿ ಅಲೆಯದೆ ಸಮೀಪದ ವಿಭೂತಿಹಳ್ಳಿಯ ಜಮೀನಿನಲ್ಲಿ ಮೊಲ ಸಾಕಾಣಿಕೆ ಕೇಂದ್ರವನ್ನು ಆರಂಭಿಸಿ ಯಶಸ್ಸು ಕಂಡವರು.

ಕಂಪ್ಯೂಟರ್‌ ಶಿಕ್ಷಣ ಪಡೆದ ಬಹುತೇಕ ಯುವಕರು ಬೆಂಗಳೂರು, ಪುಣೆ, ಮುಂಬೈ ನಗರಗಳತ್ತ ಉದ್ಯೋಗಕ್ಕಾಗಿ ಚಿತ್ತ ಹರಿಸುವ ಇಂದಿನ ದಿನಗಳಲ್ಲಿ ಇವರು ಇರುವಲ್ಲಿಯೇ ಬದುಕಿನ ಮಾರ್ಗ ಹುಡುಕಲು ಹೊರಟವರು.

ತಮ್ಮ ಜಮೀನಿನಲ್ಲಿ ಮೂರು ವರ್ಷಗಳ ಹಿಂದೆ 30x40 ಅಡಿ ವಿಸ್ತೀರ್ಣದ ಶೆಡ್ ನಿರ್ಮಿಸಿ ವಿವಿಧ ತಳಿಯ ಮೊಲಗಳ ಸಾಕಾಣಿಕೆ ಆರಂಭಿಸಿದರು. ಮೊಲ ಸಾಕಾಣಿಕೆಗಾಗಿ ಮೂರು ವರ್ಷಗಳ ಹಿಂದೆ ₹5 ಲಕ್ಷ ಬಂಡವಾಳವನ್ನು ಅವರು ಹೂಡಿದರು. ಇದರಲ್ಲಿ ಶೆಡ್ ನಿರ್ಮಾಣವೂ ಸೇರಿತ್ತು. ‘ಪ್ರತಿವರ್ಷ ಈಗ ಮೊಲಗಳ ಮಾರಾಟದಿಂದ ವಾರ್ಷಿಕ ಐದರಿಂದ ಆರು ಲಕ್ಷ ರೂಪಾಯಿ ಆದಾಯ ಬರುತ್ತಿದೆ’ ಎಂದು ಅವರು ಹೇಳುತ್ತಾರೆ.

‘ರೈತರು ಕೃಷಿಯ ಜೊತೆಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆಯಂತಹ ಉಪಕಸುಬುಗಳನ್ನೂ ಅಳವಡಿಸಿಕೊಂಡರೆ ಉತ್ತಮ. ಅದರಲ್ಲೂ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ತರುವಂತಹ ಉಪಕಸುಬು ಎಂದರೆ ಮೊಲ ಸಾಕಾಣಿಕೆ. ಮೊಲಗಳಿಗೆ ಕಾಯಿಲೆಗಳು ಕಡಿಮೆ. ಇವುಗಳ ಆರೈಕೆಗೆ ಮೂರು ಗಂಟೆ ಸಮಯ ವ್ಯಯಿಸಿದರೆ ಸಾಕು’ ಎಂದು ಅವರು ಮಾಹಿತಿ ನೀಡುತ್ತಾರೆ.

‘ಎರಡು ತಿಂಗಳಿಗೊಮ್ಮೆ ಮೊಲಗಳನ್ನು ಮಾರಾಟ ಮಾಡಬಹುದು. ಸದ್ಯ ನನ್ನಲ್ಲಿರುವ ಸ್ವಲ್ಪ ಜಾಗದಲ್ಲಿ ಆರು ತಳಿಗಳ 500 ಮೊಲಗಳನ್ನು ಸಾಕಿದ್ದೇನೆ. ಇವುಗಳ ಆಹಾರಕ್ಕಾಗಿ ಎರಡು ಎಕರೆ ಜಮೀನಿನಲ್ಲಿ ಮೆಕ್ಕೆಜೋಳ, ಗರಿಕೆ ಹುಲ್ಲು, ಕರಿಕಿ, ಸಜ್ಜೆ ಹುಲ್ಲು ಬೆಳೆಸಿದ್ದೇನೆ’ ಎಂದು ಹೇಳುತ್ತಾರೆ.

ಮೊಲ ಗರ್ಭಧರಿಸಿದ 28 ದಿನಗಳಲ್ಲಿ 5ರಿಂದ 12 ಮರಿಗಳನ್ನು ಹಾಕುತ್ತದೆ. ನಂತರ ಕೇವಲ ಒಂದು ತಿಂಗಳಲ್ಲಿ ಮರಿಗಳು 2.5 ಕೆ.ಜಿ ತೂಗುತ್ತವೆ. ಸಾಧಾರಣವಾಗಿ ಒಂದು ಮೊಲ 500ರಿಂದ 1200 ರೂಪಾಯಿವರೆಗೆ ಮಾರಾಟವಾಗುತ್ತವೆ. ಮೊಲಗಳ ಆರೈಕೆಯಲ್ಲಿ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡಬೇಕು. ತಂತಿಗಳಿಂದ ಹೆಣೆದ ಬೋನು ಅಥವಾ ಜಾಳಿಗೆಯ ಪಂಜರದಲ್ಲಿ 10 ಮೊಲಗಳನ್ನು ಇಡಲಾಗುತ್ತದೆ. ಇದರಲ್ಲಿ ಏಳು ಹೆಣ್ಣು, ಮೂರು ಗಂಡು ಮೊಲಗಳಿರುತ್ತವೆ.

ಮೊಲದ ಮಾಂಸದಲ್ಲಿ ಇತರೆ ಪ್ರಾಣಿಗಳ ಮಾಂಸದಲ್ಲಿ ಇರುವಂತೆ ಕೊಬ್ಬಿನಾಂಶ ಇರುವುದಿಲ್ಲ. ಇದರಲ್ಲಿ ಕೇವಲ 0.3 ಕೊಲೆಸ್ಟ್ರಾಲ್ ಇರುವುದರಿಂದ ಹೃದಯ ಸಂಬಂಧಿತ ಕಾಯಿಲೆಗಳು, ಮಧುಮೇಹ, ರಕ್ತದೊತ್ತಡ ಇದ್ದವರು ಇದರ ಮಾಂಸ ಸೇವನೆಯಿಂದ ರೋಗ ನಿರೋಧಕ ಶಕ್ತಿ ಗಳಿಸಿಕೊಳ್ಳುತ್ತಾರೆ ಎಂಬ ನಂಬಿಕೆಯಿದೆ.

ಮೊಲಗಳನ್ನು ಪುಣೆ, ಮುಂಬಯಿ, ಹೈದರಾಬಾದ್‌, ಸೊಲ್ಲಾಪುರ, ಕಲಬುರ್ಗಿ, ವಿಜಯಪುರ, ಬಾಗಲಕೋಟೆ, ಶಿವಮೊಗ್ಗ, ಹಾವೇರಿ ಮೊದಲಾದ ನಗರಗಳಿಗೆ ಸಾಗಿಸಲಾಗುತ್ತದೆ. ಮೊಲ ಸಾಗಾಣಿಕೆ ಮಾಡುವವರಿಗೆ ಪಂಜರ, ಮೊಲ ಪೂರೈಸುವುದಲ್ಲದೆ ಆಗಾಗ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ನೀಡಲಾಗುತ್ತದೆ ಎಂದು ಇಮ್ರಾನ್‌ ಹೇಳುತ್ತಾರೆ.

ಸಂಪರ್ಕಕ್ಕೆ: 79969 46440.

v

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry