ಶನಿವಾರ, ಮಾರ್ಚ್ 6, 2021
31 °C
ಬಿ.ಕೆ.ಸಿಂಗ್‌ ನೇತೃತ್ವದಲ್ಲಿ 19 ಅಧಿಕಾರಿಗಳ ತಂಡ

ಗೌರಿ ಲಂಕೇಶ್‌ ಹತ್ಯೆ ತನಿಖೆಗೆ ಎಸ್‌ಐಟಿ ರಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೌರಿ ಲಂಕೇಶ್‌ ಹತ್ಯೆ ತನಿಖೆಗೆ ಎಸ್‌ಐಟಿ ರಚನೆ

ಬೆಂಗಳೂರು: ದೇಶಾದ್ಯಂತ ತಲ್ಲಣ ಉಂಟುಮಾಡಿರುವ ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್‌ ಹತ್ಯೆ ತನಿಖೆಗೆ ಗುಪ್ತದಳದ ಇನ್‌ಸ್ಪೆಕ್ಟರ್‌ ಜನರಲ್‌ ಆಫ್‌ ಪೊಲೀಸ್‌  ಬಿ.ಕೆ. ಸಿಂಗ್‌ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ.

ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಅನುಚೇತ್‌ ಮುಖ್ಯ ತನಿಖಾಧಿಕಾರಿಯಾಗಿದ್ದು, ಒಟ್ಟು 19 ಅಧಿಕಾರಿಗಳು ತಂಡದಲ್ಲಿದ್ದಾರೆ. ಈ ಸಂಬಂಧ ಬುಧವಾರ ಸಂಜೆ ಪೊಲೀಸ್‌ ಮಹಾನಿರ್ದೇಶಕ ಹಾಗೂ ನಿರೀಕ್ಷಕ ಆರ್‌.ಕೆ. ದತ್ತ ಆದೇಶ ಹೊರಡಿಸಿದ್ದಾರೆ.

‘ಎಸ್‌ಐಟಿ ತಕ್ಷಣದಿಂದಲೇ ತನಿಖೆ ಆರಂಭಿಸಿದೆ. ಎಲ್ಲಾ ಕೋನಗಳಿಂದಲೂ ತನಿಖೆ ನಡೆಯುತ್ತದೆ. ಪ್ರತಿಯೊಬ್ಬ ಅಧಿಕಾರಿಗಳ ಸೇವಾ ದಾಖಲೆಗಳು ಹಾಗೂ ತನಿಖಾ ಚಾತುರ್ಯ ಮಾಹಿತಿ ಪಡೆದ ನಂತರ ಎಸ್‍ಐಟಿಗೆ ಡಿಜಿಪಿ ಆಯ್ಕೆ ಮಾಡಿದ್ದಾರೆ ’ ಎಂದು ಮೂಲಗಳು ತಿಳಿಸಿವೆ.

ಸಿಐಟಿಯೇ ಸೂಕ್ತ: ಹತ್ಯೆಯ ತನಿಖೆ ತಂಡ ರಚಿಸುವ ಸಂಬಂಧ ತೀರ್ಮಾನ ತೆಗೆದುಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಿಗ್ಗೆ ವಿಧಾನಸೌಧದಲ್ಲಿ ಗೃಹ ಇಲಾಖೆ ಮತ್ತು ಪೋಲೀಸ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಬಳಿಕ ಮಾಧ್ಯಮ ಗೋಷ್ಠಿಯಲ್ಲಿ ವಿಶೇಷ ತನಿಖಾ ತಂಡ ರಚಿಸುವ ನಿರ್ಧಾರ ಪ್ರಕಟಿಸಿದರು.

‘ಈ ಪ್ರಕರಣದ ಗಂಭೀರತೆ ಪರಿಗಣಿಸಿ, ತ್ವರಿತಗತಿಯಲ್ಲಿ ಅಪರಾಧಿಗಳನ್ನು ಪತ್ತೆ ಹಚ್ಚಲು ಸಿಐಡಿಗಿಂತ ಎಸ್‌ಐಟಿಯೇ ಸೂಕ್ತ. ಈ ಕಾರಣಕ್ಕೆ ಎಸ್‌ಐಟಿಯನ್ನು ರಚಿಸಲು ನಿರ್ಧರಿಸಿದ್ದೇವೆ’ ಎಂದು ಅವರು ತಿಳಿಸಿದರು.

ಸಾಮ್ಯತೆ ಬಗ್ಗೆ ಈಗಲೇ ಹೇಳಲು ಆಗದು: ‘ಗೋವಿಂದ ಪಾನ್ಸರೆ , ನರೇಂದ್ರ ದಾಭೋಲ್ಕರ್‌ ಮತ್ತು ಎಂ.ಎಂ.ಕಲ್ಬುರ್ಗಿ ಹತ್ಯೆಗಳಲ್ಲಿ ಪಿಸ್ತೂಲು ಬಳಕೆಯಲ್ಲಿ ಸಾಮ್ಯತೆ ಇತ್ತು. ಆದರೆ, ಈ ಹತ್ಯೆಯಲ್ಲಿ ಬಳಸಿರುವ ಪಿಸ್ತೂಲ್‌ ಕೊಂಚ ಬೇರೆ. ಆ ಹತ್ಯೆಗಳಿಗೂ ಗೌರಿ ಹತ್ಯೆಗೂ ಸಾಮ್ಯತೆ ಇದೆಯೇ ಎಂಬುದನ್ನು ಪ್ರಾಥಮಿಕ ತಕ್ಷಣಕ್ಕೆ ಹೇಳಲು ಆಗುವುದಿಲ್ಲ’ ಎಂದರು.

ಗೌರಿ ಲಂಕೇಶ್ ಮನೆಯಲ್ಲಿರುವ ನಾಲ್ಕು ಸಿ.ಸಿ ಟಿ.ವಿ ಕ್ಯಾಮೆರಾಗಳಲ್ಲಿ ದಾಖಲಾಗಿದ್ದ ದೃಶ್ಯಗಳನ್ನು ಪರಿಶೀಲಿಸಲಾಗಿದೆ. ಗೌರಿ ಅವರು ರಾಜರಾಜೇಶ್ವರಿ ನಗರದಲ್ಲಿರುವ ತಮ್ಮ ನಿವಾಸಕ್ಕೆ ಮಂಗಳವಾರ ರಾತ್ರಿ ಬಂದರು. ಆಗ ಹೆಲ್ಮೆಟ್ ಧರಿಸಿದ್ದ ವ್ಯಕ್ತಿ ತೀರಾ ಹತ್ತಿರದಿಂದ ಗುಂಡು ಹಾರಿಸಿದ್ದಾನೆ. ದೇಹಕ್ಕೆ ಗುಂಡು ಬಿದ್ದ ನಂತರವೂ ಮನೆಯತ್ತ ಓಡಲು ಅವರು ನಾಲ್ಕೈದು ಹೆಜ್ಜೆ ಹಾಕಿದ್ದಾರೆ. ಬಳಿಕ ಅಲ್ಲೇ ಕುಸಿದು ಬಿದ್ದರು ಎಂದು ಸಿದ್ದರಾಮಯ್ಯ ಹೇಳಿದರು.

‘ಹಂತಕರು ಎಷ್ಟು ಮಂದಿ ಇದ್ದರು, ಅವರು ವಾಹನಗಳಲ್ಲಿ ಮೊದಲೇ ಬಂದು ಅಡಗಿದ್ದರೆ ಎಂಬ ವಿವರಗಳು ತಿಳಿದು ಬಂದಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಗುಪ್ತದಳದ ವೈಫಲ್ಯವೂ ಅಲ್ಲ’ ಎಂದು ಪ್ರಶ್ನೆಯೊಂದಕ್ಕೆ ಸಮಜಾಯಿಷಿ ನೀಡಿದರು.

‘ಈ ಘಟನೆ ನನಗೆ ವೈಯಕ್ತಿಕವಾಗಿ ಆಘಾತವುಂಟು ಮಾಡಿದೆ. ಇದು ಸಂಘಟಿತ ಅಪರಾಧದ ಕೃತ್ಯ. ಇದನ್ನು ಯಾರು ಮಾಡಿದ್ದಾರೆ ಎನ್ನುವುದನ್ನು ಈಗಲೇ ಹೇಳಲು ಆಗುವುದಿಲ್ಲ. ಇವುಗಳ ಬಗ್ಗೆ ಮಾಹಿತಿ ಕಲೆ ಹಾಕುವುದೂ ಕಷ್ಟ’ ಎಂದು ಅವರು ತಿಳಿಸಿದರು.

‘ಲಂಕೇಶ್‌ ಕಾಲದಿಂದಲೂ ಗೌರಿ ನನಗೆ ಚೆನ್ನಾಗಿ ಪರಿಚಯವಿತ್ತು. ಹಲವು ಸಲ ನನ್ನನ್ನು ಭೇಟಿ ಮಾಡಿದ್ದರು. ಆದರೆ, ಯಾವ ಸಂದರ್ಭದಲ್ಲೂ ಜೀವ ಬೆದರಿಕೆ ಇದೆ ಎಂಬುದನ್ನು ಅವರು ಹೇಳಿಕೊಂಡಿರಲಿಲ್ಲ’ ಎಂದು ಮುಖ್ಯಮಂತ್ರಿ ಪುನರುಚ್ಚರಿಸಿದರು.

‘ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ರಾಜ್ಯ ಸರ್ಕಾರ ತೆರೆದ ಮನಸ್ಸು ಹೊಂದಿದೆ. ಮೊದಲಿಗೆ ಎಸ್‌ಐಟಿ ತನಿಖೆ ನಡೆಯಲಿ. ಅದರಿಂದ ಸಮಾಧಾನ ಆಗದಿದ್ದರೆ, ಸಿಬಿಐಗೆ ಒಪ್ಪಿಸಬಹುದು’ ಎಂದೂ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಫೇಸ್‌ಬುಕ್‌ನಲ್ಲಿ ಗೌರಿ ಲಂಕೇಶ್‌ ಹತ್ಯೆ ಕುರಿತು ಕೀಳು ಭಾಷೆಗಳಲ್ಲಿ ಪ್ರತಿಕ್ರಿಯೆ ನೀಡಿರುವ ಚಿಕ್ಕಮಗಳೂರಿನ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಂಡು ಪೋಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.

***

ವರದಿ ಕೇಳಿದ ಕೇಂದ್ರ

ಗೌರಿ ಲಂಕೇಶ್‌ ಹತ್ಯೆ ಪ್ರಕರಣ ಸಂಬಂಧ ವರದಿ ನೀಡುವಂತೆ ಕೇಂದ್ರ ಗೃಹ ಸಚಿವಾಲಯ ಕರ್ನಾಟಕ ಸರ್ಕಾರಕ್ಕೆ ಕೇಳಿದೆ.

ರಾಜ್ಯ ಸರ್ಕಾರದಿಂದ ವರದಿ ತರಿಸಿಕೊಳ್ಳುವಂತೆ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಗೃಹ ಕಾರ್ಯದರ್ಶಿ ರಾಜೀವ್‌ ಗೌಬಾ ಅವರಿಗೆ ನಿರ್ದೇಶನ ನೀಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಘಟನೆ ಮತ್ತು ಹಂತಕರನ್ನು ಬಂಧಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಗಳನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿದೆ.

***

ಹೋರಾಟ ಗೀತೆಯೊಂದಿಗೆ ಗೌರಿ ಅಂತ್ಯಕ್ರಿಯೆ

ಬೆಂಗಳೂರು: ಹಂತಕರ ಗುಂಡಿಗೆ ಬಲಿಯಾದ ಗೌರಿ ಲಂಕೇಶ್ ದೇಹ ಮಣ್ಣಾಗುವ ವೇಳೆ ನೆರೆದಿದ್ದ ಎಲ್ಲರ ಕಣ್ಣಂಚಿನಲ್ಲೂ ನೀರು ಇಣುಕುತಿತ್ತು. ಭಾರವಾದ ಎದೆಯೊಳಗಿಂದ ಉಮ್ಮಳಿಸಿದ ದುಃಖ ಒತ್ತಿ ಹಿಡಿದು, ಕಣ್ಣೀರು ಒರೆಸಿಕೊಳ್ಳುತ್ತಾ, ಹೋರಾಟ ಗೀತೆಗಳನ್ನು ಹಾಡಿ ಅಂತಿಮ ವಿದಾಯ ಹೇಳಿದರು.

ಚಾಮರಾಜ ಪೇಟೆಯಲ್ಲಿರುವ ಲಿಂಗಾಯತ ರುದ್ರಭೂಮಿಯಲ್ಲಿ ಬುಧವಾರ ಸಂಜೆ  ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಪೊಲೀಸರು ಮೂರು ಸುತ್ತು ಗುಂಡು ಹಾರಿಸಿ ಗೌರವಾರ್ಪಣೆ ಮಾಡಿದರು.

ಗೌರಿ ಲಂಕೇಶ್ ನಂಬಿದ್ದ ತತ್ವಗಳಿಗೆ ಚ್ಯುತಿಯಾಗದಂತೆ, ಯಾವುದೇ ಧಾರ್ಮಿಕ ವಿಧಿ,ವಿಧಾನಗಳನ್ನು ನೆರವೇರಿಸಲಿಲ್ಲ. ಬದಲಿಗೆ  ಮೃತ ದೇಹಕ್ಕೆ ಎಲ್ಲರಿಂದಲೂ ಹೂ ಹಾಕಿಸಲಾಯಿತು.

ಗಾಯಕ ಪಿಚ್ಚಳ್ಳಿ ಶ್ರೀನಿವಾಸ್, ‘ಕಟ್ಟುತ್ತೇವ ನಾವು, ಕಟ್ಟುತ್ತೇವ ನಾವು, ಕಟ್ಟೇಕಟ್ಟುತ್ತೇವ... ಒಡೆದ ಮನಸುಗಳ, ಕಂಡ ಕನಸುಗಳ ಕಟ್ಟೇ ಕಟ್ಟುತ್ತೇವ..’ ಎಂಬ ಹಾಡಿಗೆ ಎಲ್ಲರೂ ದನಿಗೂಡಿಸಿದಾಗ ನೆರೆದಿದ್ದವರ ದುಃಖ ಇಮ್ಮಡಿಗೊಂಡಿತ್ತು. ಮಣ್ಣೊಳಗೆ ಮೈಚಾಚಿದ ಗೌರಿಗೆ ಕೊನೆಯ ಭಾವನಮನ ಸಲ್ಲಿಸಿದರು.

ರುದ್ರಭೂಮಿಯಲ್ಲಿ ನೆರೆದಿದ್ದ ಜನ ಸ್ವಂತ ತಾಯಿ ಅಥವಾ ಸಹೋದರಿಯನ್ನೋ ಕಳೆದುಕೊಂಡಂತೆ ಪರಿತಪಿಸುತ್ತಿದ್ದರು. ಅವರ ಜೊತೆಗಿನ ಒಡನಾಟ, ನೆನಪುಗಳನ್ನು ಗೆಳೆಯರು, ಸಂಬಂಧಿಕರ ಜೊತೆ ಹಂಚಿಕೊಂಡು ಎದೆ ಭಾರ ಇಳಿಸಿಕೊಳ್ಳುತ್ತಿದ್ದರು. 

ಗೌರಿ ತಾಯಿ ಇಂದಿರಾ ಅವರು ಮಗಳು ಮಣ್ಣಾಗುವ ದೃಶ್ಯವನ್ನು ಕಂಡು ರೋದಿಸುತ್ತಿದ್ದರು. ಶೋಕದಲ್ಲಿ ಮುಳುಗಿದ್ದ ಸಹೋದರಿ ಕವಿತಾ ಲಂಕೇಶ್, ಸಹೋದರ ಇಂದ್ರಜಿತ್ ಲಂಕೇಶ್ ಮತ್ತು ಅವರ ಕುಟುಂಬದ ಸದಸ್ಯರನ್ನು ಸಂತೈಸುವುದು ಕಷ್ಟವಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ರಾಮಲಿಂಗಾರೆಡ್ಡಿ, ಸಚಿವರಾದ ರಮೇಶ್‌ ಕುಮಾರ್, ಉಮಾಶ್ರೀ, ಸಾಹಿತಿ ದೇವನೂರ ಮಹದೇವ, ಚಿತ್ರನಟ ಪ್ರಕಾಶ್ ರೈ ಹಾಜರಿದ್ದರು. ಗೌರಿ ಕುಟುಂಬಕ್ಕೆ ಸಮಾಧಾನ ಹೇಳಿದ ಸಿದ್ದರಾಮಯ್ಯ, ಆದಷ್ಟು ಬೇಗ ಅಪರಾಧಿಗಳನ್ನು ಪತ್ತೆ ಹಚ್ಚುವುದಾಗಿ ಭರವಸೆ ನೀಡಿದರು.

ಹೋರಾಟಗಾರ, ಗುಜರಾತಿನ ಜಿಗ್ನೇಶ್ ಮೇವಾನಿ ಅವರೂ ಭಾಗವಹಿಸಿದ್ದರು. ಗೌರಿ ಸಾವಿನಿಂದ ದಿಗ್ಭ್ರಮೆಗೆ ಒಳಗಾದಂತೆ ಕಂಡುಬಂದ ಜಿಗ್ನೇಶ್ ಮೌನಕ್ಕೆ ಶರಣಾಗಿದ್ದರು. ತಮ್ಮ ಆಪ್ತರನ್ನು ಆಲಿಂಗಿಸಿಕೊಂಡು ಕಣ್ಣೀರಿಟ್ಟರು.

ಗೌರಿ ಅಮರ್ ರಹೇ:

‘ಗೌರಿ ಅಮರ್ ಹೇ, ಅಮರ್ ಹೇ’, ‘ಮತ್ತೊಮ್ಮೆ ಹುಟ್ಟಿ ಬಾ ಅಕ್ಕ’, ‘ಗೌರಿ ಲಂಕೇಶ್ ಹಾದಿಯಲ್ಲಿ ಸಾಗೋಣ’ ‘ಇನ್‌ಕ್ವಿಲಾಬ್ ಜಿಂದಾಬಾದ್’ ಎಂಬ ಘೋಷಣೆಗಳನ್ನು ಕೂಗಿದರು. ಗುಂಡಿಕ್ಕಿ ಹತ್ಯೆ ಮಾಡಿದ ಕ್ರೂರಿಗಳನ್ನು ಕೂಡಲೇ ಬಂಧಿಸುವಂತೆ ಗೌರಿ ಸ್ನೇಹಿತರು, ಹೋರಾಟಗಾರರು ಸರ್ಕಾರವನ್ನು ಒತ್ತಾಯಿಸಿದರು.

***

‘ಚೆಡ್ಡಿಗಳ ಮಾರಣ ಹೋಮ’ ಅಂತ ಬರೆದಿದ್ದಕ್ಕೇ ಗೌರಿ ಲಂಕೇಶ್ ಹತ್ಯೆ?

‘ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ 11 ಹಿಂದೂಗಳ ಹತ್ಯೆ ನಡೆಸಿದೆ. ‘ಚೆಡ್ಡಿಗಳ ಮಾರಣ ಹೋಮ’ ಅಂತ ಗೌರಿ ಲಂಕೇಶ್‌ ಅವರು ತಮ್ಮ ಪತ್ರಿಕೆಯಲ್ಲಿ ಬರೆಯದೆ ಇದ್ದಿದ್ದರೆ ಅವರು ಉಳಿಯುತ್ತಿರಲಿಲ್ಲವಾ?’ ಎಂಬ ಗಂಭೀರ ಪ್ರಶ್ನೆಯನ್ನು ಶಾಸಕ ಡಿ.ಎನ್‌.ಜೀವರಾಜ್‌ ಎತ್ತಿದ್ದಾರೆ.

ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಬುಧವಾರ ತಾಲ್ಲೂಕು ಬಿಜೆಪಿ ಯುವ ಮೋರ್ಚಾ ವತಿಯಿಂದ ‘ಮಂಗಳೂರು ಚಲೋ’ ಕಾರ್ಯಕ್ರಮದ ಅಂಗವಾಗಿ ನಡೆದ ಬೈಕ್ ರ‍್ಯಾಲಿ ನಂತರ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಹಿಂದೂಗಳ ಕೊಲೆ ನಡೆಯುತ್ತಿದೆ, ಇಂತಹ ಕೊಲೆಗಳ ಬಗ್ಗೆ ಅನುಮಾನ ಇದೆ’ ಎಂದು ಅವರು ಪರೋಕ್ಷವಾಗಿ ಬರೆಯುತ್ತಿದ್ದರೆ  ಅವರು ಇಂದು ಜೀವ ಕಳೆದುಕೊಳ್ಳಬೇಕಿರಲಿಲ್ಲವೇನೋ’ ಎಂದು ಅವರು ಹೇಳಿದರು.

‘ನನ್ನ ವಿರುದ್ಧ ಅವರು ಬರೆದಿದ್ದಕ್ಕೆ ತಲೆ ಕೆಡಿಸಿಕೊಳ್ಳಲ್ಲ. ಆದರೂ ಅವರ ಹತ್ಯೆಯನ್ನು ಖಂಡಿಸುತ್ತೇನೆ ಅದೇ ರೀತಿ ಹಿಂದೂ ಕಾರ್ಯಕರ್ತರ ಹತ್ಯೆಯನ್ನೂ ಖಂಡಿಸುತ್ತೇನೆ. ಎಲ್ಲ ಪ್ರಕರಣಗಳನ್ನೂ ಸರ್ಕಾರ ಸಿಬಿಐಗೆ ಒಪ್ಪಿಸಲಿ. ಆಗ ಸತ್ಯ ಏನೆಂಬುದು ಬೆಳಕಿಗೆ ಬರಲಿದೆ’ ಎಂದರು

***

ಇದೊಂದು ಅಮಾನವೀಯ ಕೃತ್ಯ. ಹೇಡಿಗಳು ಮಾತ್ರ ಇದನ್ನು ಮಾಡಲು ಸಾಧ್ಯ

– ಸಿದ್ದರಾಮಯ್ಯ,

ಮುಖ್ಯಮಂತ್ರಿ

***

ತನಿಖಾ ತಂಡ:

ಬೆಂಗಳೂರು ನಗರ ಸಿಸಿಬಿ ಡಿಸಿಪಿ ಅಪರಾಧ (2) ಜಿನೇಂದ್ರ ಕಣಗಾವಿ, ಮೈಸೂರು ಪೋಲೀಸ್‌ ತರಬೇತಿ ಶಾಲೆ ನಿರ್ದೇಶಕ ಹರೀಶ್ ಪಾಂಡ್ಯ, ಕೆ.ಆರ್.ಪುರ ಎಸಿಪಿ ಕೆ.ಪಿ. ರವಿಕುಮಾರ್, ಹುಬ್ಬಳ್ಳಿ- ಧಾರವಾಡ (ಟ್ರಾಫಿಕ್) ಎಸಿಪಿ ಎನ್.ಬಿ.ಸಕ್ರಿ, ಬಿಎಂಟಿಎಫ್ ಡಿವೈಎಸ್ಪಿ ಜಗನ್ನಾಥ್ ರೈ, ತುಮಕೂರು ಡಿವೈಎಸ್ಪಿ ಕೆ.ಎಸ್.ನಾಗರಾಜ್, ಬಿಡಿಎ ಇನ್‌ಸ್ಪೆಕ್ಟರ್ ರಂಗಪ್ಪ, ಸಿಸಿಬಿ ಇನ್‌ಸ್ಪೆಕ್ಟರ್‌ಗಳಾದ ಆರ್.ಪಿ.ಅನಿಲ್, ಜೆ.ಅಶ್ವತ್ಥ್ ಗೌಡ, ಎಂ.ಡಿ.ಕುಲಕರ್ಣಿ, ನಂದಿನಿ ಲೇಔಟ್ ಠಾಣೆ ಇನ್‌ಸ್ಪೆಕ್ಟರ್ ಐಯ್ಯಣ್ಣ ರೆಡ್ಡಿ, ವಿದ್ಯಾರಣ್ಯಪುರ ಠಾಣೆ ಇನ್‌ಸ್ಪೆಕ್ಟರ್ ಆರ್.ಪುನೀತ್, ಮಾರತ್ತಹಳ್ಳಿ ಠಾಣೆ ಡಿ.ಎಂ.ಪ್ರಶಾಂತ್ ಬಾಬು, ಸಿಐಡಿ ಇನ್‌ಸ್ಪೆಕ್ಟರ್ ಟಿ.ಶ್ರೀನಿವಾಸ್, ಬ್ಯಾಡರಹಳ್ಳಿ ಠಾಣೆ ಇನ್‌ಸ್ಪೆಕ್ಟರ್ ಕೆ.ಪಿ.ಸತ್ಯನಾರಾಯಣ್, ಬೆಂಗಳೂರು ನಗರ ನಿಯಂತ್ರಣ ಕೊಠಡಿ ಇನ್‌ಸ್ಪೆಕ್ಟರ್‌ ಮಂಜುನಾಥ್, ಕಾಮಾಕ್ಷಿಪಾಳ್ಯ ಠಾಣೆ  ಇನ್‌ಸ್ಪೆಕ್ಟರ್ ಎಂ.ಆರ್. ಹರೀಶ್, ಕಾಟನಪೇಟೆ ಠಾಣೆ  ಇನ್‌ಸ್ಪೆಕ್ಟರ್ ಕುಮಾರಸ್ವಾಮಿ ಹಾಗೂ ಇಂದಿರಾ ನಗರ ಠಾಣೆ ಇನ್‌ಸ್ಪೆಕ್ಟರ್ ರವಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.