ಕೃಷಿಕರ ‘ಕಟ್ಟ’ಕ್ಕೆ ಈಗ ಜಿಪಂ ಬೆನ್ನುಬಲ

7

ಕೃಷಿಕರ ‘ಕಟ್ಟ’ಕ್ಕೆ ಈಗ ಜಿಪಂ ಬೆನ್ನುಬಲ

Published:
Updated:
ಕೃಷಿಕರ ‘ಕಟ್ಟ’ಕ್ಕೆ ಈಗ ಜಿಪಂ ಬೆನ್ನುಬಲ

ರಾಜ್ಯದಲ್ಲೇ ದಕ್ಷಿಣ ಕನ್ನಡ ಜಿಲ್ಲೆ ಮಳೆ ಶ್ರೀಮಂತವಾದರೂ (3500 ಮಿ.ಮೀ) ನೀರಿಗೆ ತತ್ವಾರ! ಕಳೆದ ವರ್ಷ ಚರಿತ್ರೆಯಲ್ಲೇ ಮೊದಲ ಬಾರಿಗೆ ಇಲ್ಲಿನ ಎರಡು ತಾಲೂಕುಗಳು ‘ಬರಪೀಡಿತ’ ಎನಿಸಿಕೊಂಡವು. ನಾಚಿಕೆಗೇಡಿನ ಈ ಅವನತಿ ಜಿಲ್ಲಾಡಳಿತ ಮತ್ತು ಜನಸಮುದಾಯಕ್ಕೆ ಹಾಗೆನಿಸಲೇ ಇಲ್ಲ.

ಕರಾವಳಿ ಕನ್ನಾಡಿನ ಜನಮನದಲ್ಲಿ ಬರವಿಲ್ಲ – ಆದರೆ ಬಾವಿಯಲ್ಲಿ ನೀರಿಲ್ಲ! ಇಲ್ಲಿ ಬರಕ್ಕೆ ಮುಖ್ಯ ಕಾರಣ ಮಳೆಕೊರತೆಯಲ್ಲ; ನೀರಿನ ಅಸಮರ್ಪಕ ನಿರ್ವಹಣೆ; ಜಲನಿರಕ್ಷರತೆ.

ಜಿಪಂ ಕಾರ್ಯನಿರ್ವಹಣಾಧಿಕಾರಿ ಡಾ. ಎಂ. ಆರ್. ರವಿ “ಕೊಳವೆಬಾವಿ ಕೊರೆತ ಬರಕ್ಕೆ ಪರಿಹಾರವಲ್ಲ” ಎಂದು ಆಗಾಗ ಪ್ರತಿಪಾದಿಸುತ್ತಾರೆ. ಜಿಲ್ಲೆ ಇವರ ನೇತೃತ್ವದಲ್ಲಿ ನರೇಗಾದಡಿ ಸಾವಿರ ಕಿಂಡಿ ಅಣೆಕಟ್ಟು ನಿರ್ಮಾಣದ ಗುರಿಯಿಟ್ಟು ಸಾಗುತ್ತಿದೆ.

ಆದರೆ ಕಿಂಡಿ ಅಣೆಕಟ್ಟುಗಳು ಮಲೆನಾಡಿನಲ್ಲಿ ಗೆದ್ದದ್ದಕ್ಕಿಂತ ಸೋತದ್ದೇ ಹೆಚ್ಚು. ಸೈಟಿನ ತಪ್ಪು ಆಯ್ಕೆ, ಕೈಗೆಟಕದ ನಿರ್ವಹಣಾ ವೆಚ್ಚ, ಜಲಪ್ರವಾಹಕ್ಕೆ ತೋಡಿನ ಬದಿ ಕೊರೆತ, ಕಳಪೆ ಕಾಮಗಾರಿ - ‘ಕಿಂಡಿ’ಯನ್ನು ಸೋಲಿಸುವ ಮುಖ್ಯ ಕಾರಣಗಳು.

ಒಂದು ‘ಕಿಂಡಿ ಅಣೆಕಟ್ಟಿ’ನ ವೆಚ್ಚದಲ್ಲಿ ಐವತ್ತು ಸಾಂಪ್ರದಾಯಿಕ ಕಟ್ಟ ಕಟ್ಟಬಹುದು, ಕ್ಷಮತೆಯೂ ಹೆಚ್ಚು ಎಂಬ ದನಿ ಹೊರಹೊಮ್ಮಿತು. ಡಾ.ರವಿ ಈ ಟೀಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದರು. ಸಭೆ ನಡೆಸಿ ಕಟ್ಟದ ಕಟ್ಟಾ ಪ್ರತಿಪಾದಕರ ಮಾತನ್ನು ಜಿಪಂ ಅಧಿಕಾರಿಗಳಿಗೆ ಕೇಳಿಸಿದರು. ಅವರಿಗೂ ಕಟ್ಟ ಫಲಿತಾಂಶ ನಿರ್ದೇಶಿತ, ಸುಸ್ಥಿರ ನೀರುಳಿಸುವ ವಿಧಾನ;  ಕೊಳವೆಬಾವಿಗಿಂತ ಒಳ್ಳೆಯದು, ಸಮುದಾಯೋಪಯೋಗಿ ಎನ್ನುವುದು ಮನದಟ್ಟಾಯಿತು.

ದಶಕಗಳ ಹಿಂದೆ ಜಿಲ್ಲೆಯ ಪ್ರತಿ ಗ್ರಾಮದಲ್ಲೂ ನೂರಾರು ಕಟ್ಟಗಳಿದ್ದವು. ಮಳೆಗಾಲ ಮುಗಿದ ಮೇಲೂ ಜಲಸಂರಕ್ಷಣೆ ಮಾಡುವ ವೈಶಿಷ್ಟ್ಯ ಇವುಗಳದು. ಕೊಳವೆಬಾವಿ ಸುತ್ತುಮುತ್ತಲಿನ ನೀರಿನ ಮಟ್ಟ ಇಳಿಸಿದರೆ, ಕಟ್ಟ ನೆರೆಕರೆಸ್ನೇಹಿ. ಸರಹದ್ದಿನ ಜಲಮಟ್ಟ ಏರಿಸಿ ಕಟ್ಟ ಕಟ್ಟಲು ಸೇರದವರಿಗೂ ‘ವರ’ ಕೊಡುತ್ತದೆ!

(ಮರಿಕೆ ಸದಾಶಿವ)

ಚಿಂತನ ಮಂಥನ ಕೊನೆಗೆ ಇವರನ್ನು ಕರೆದೊಯ್ದದ್ದು ಪುತ್ತೂರಿನ ಆರ್ಯಾಪು ಗ್ರಾಮಕ್ಕೆ. ಅಲ್ಲಿನ ಕೃಷಿಕ ಮರಿಕೆ ಎ.ಪಿ.ಸದಾಶಿವ ಕಬ್ಬಿಣದ ತಗಡಿನ ಕಟ್ಟ ಕಟ್ಟಿದ್ದಾರೆ. ತೋಡಿನ ಅಡ್ಡಕ್ಕೆ ಕಬ್ಬಿಣದ ಬೀಮ್. ಅದರ ಒಳಮೈಯಿಂದ ಆಂಗ್ಲರ್ ಚೌಕಟ್ಟಿನ ಕಬ್ಬಿಣದ ತಗಡಿನ ಚಿಕ್ಕ ಹಲಗೆಗಳನ್ನು ಇಳಿಬಿಡುತ್ತಾರೆ.ನೀರೊತ್ತಡ ತಡೆಯಲು ಬೆನ್ನಿನಿಂದ ಕಬ್ಬಿಣದ ಪೈಪಿನ ಆಧಾರ ಕೊಡುತ್ತಾರೆ.

“ಹಳೆ ಕಟ್ಟಕ್ಕೆ 70 ಆಳು ಬೇಕಾಗುತ್ತಿತ್ತು. ಈಗ ಇಬ್ಬರಿಗೆ ಒಂದು ಗಂಟೆ ಸಾಕು. ಕಿಂಡಿ ಅಣೆಕಟ್ಟಿನ ಹತ್ತರಲ್ಲೊಂದು ವೆಚ್ಚವೂ ಬೇಡ. ಐದು ವರ್ಷ ಹಿಂದೆ ₹ 17,000 ರೂ. ಖರ್ಚಾಯಿತು”, ಸದಾಶಿವ ವಿವರಿಸುತ್ತಾರೆ. ಈ ಅರೆಶಾಶ್ವತ ಕಟ್ಟ ಏಳೆಂಟು ವರ್ಷಕ್ಕೆ ಅಡ್ಡಿಯಿಲ್ಲ.

ಸಾಂಪ್ರದಾಯಿಕ ಕಟ್ಟಗಳ ಸಮಸ್ಯೆಗೆ ಈ ಸುಧಾರಿತ ಕಟ್ಟದಲ್ಲಿ ಪರಿಹಾರ ಇದೆ. ಆರಂಭಿಕ ವೆಚ್ಚ ಜಾಸ್ತಿಯಾದರೂ ಮರುಕಳಿಸುವ ವೆಚ್ಚವೇ ಇಲ್ಲ. ಜಿಲ್ಲಾ ಪಂಚಾಯ್ತಿಗೆ ‘ಮರಿಕೆ ಮಾದರಿ’ ಹಿಡಿಸಿತು. ಇದರ ವಿನ್ಯಾಸ ಪರಿಷ್ಕರಿಸಿ ನರೇಗಾ ಮೂಲಕ ವ್ಯಾಪಕವಾಗಿ ಹಬ್ಬಿಸಬಹುದು ಅನಿಸಿತು.

ಆದರೆ ನರೇಗಾ ನಿಯಮಾವಳಿಯಲ್ಲೊಂದು ಅಡ್ಡಿಯಿತ್ತು. ಅದರನ್ವಯ ಮಾಡುವ ಕೆಲಸ ‘ಖಾಯಂ ಆಸ್ತಿ’ ಸೃಷ್ಟಿಸಬೇಕು. ಗೊಂದಲಕ್ಕೆ ಬಿದ್ದ ಜಿಪಂ ನರೇಗಾ ಕಮಿಶನರ್ ಯು.ಪಿ.ಸಿಂಗ್ ಅವರನ್ನು ಆಹ್ವಾನಿಸಿ ‘ಮರಿಕೆ ಮಾದರಿ’ಯನ್ನು ತೋರಿಸಿತು. ಅವರು “ಈ ಕೆಲಸದಲ್ಲಿ ‘ಖಾಯಂ ಆಸ್ತಿ’ ಸೃಷ್ಟಿಯಾಗುತ್ತದಲ್ಲಾ” ಎನ್ನುತ್ತಾ ಹಸಿರು ನಿಶಾನೆ ತೋರಿದರು.

ಡಾ. ರವಿ ಚುರುಕಾದರು. ಜಿಲ್ಲೆಯ ಐದೂ ತಾಲೂಕುಗಳಲ್ಲಿ ಚುನಾಯಿತ ಜನಪ್ರನಿಧಿಗಳ ಸಭೆ ನಡೆಸಿದರು.  ‘ಅರೆಶಾಶ್ವತ ಕಟ್ಟ’ದ ಬಗ್ಗೆ ಚರ್ಚೆ. ಪ್ರಸ್ತಾವಕ್ಕೆ ಒಳ್ಳೆ ಪ್ರತಿಕ್ರಿಯೆ ಬಂತು. “ಇಷ್ಟರಲ್ಲೇ ಬೇಡಿಕೆಯೂ ಬರಹತ್ತಿದೆ. ಒಂದು ಲಕ್ಷ ರೂಪಾಯಿಗಿಂತ ಕಡಿಮೆಯಲ್ಲಿ ಇದನ್ನು ಆಸಕ್ತ ಕೃಷಿಕರಿಗೆ ನರೇಗಾ ಮೂಲಕ ಮಾಡಿಸಿಕೊಡುವ ಯೋಜನೆ ಸಿದ್ಧವಾಗಿದೆ. ಬೇಕಾದಷ್ಟು ಕಟ್ಟ ಮಾಡಬಹುದು” ಎನ್ನುತ್ತಾರೆ ಡಾ. ರವಿ, “ಮುಂದಿನ ಸಾಲಿನ ನಮ್ಮ ಗುರಿ ಐನೂರು ಕಟ್ಟ” ಎಂದೂ ಸೇರಿಸುತ್ತಾರೆ.

ಸುಧಾರಿತ ಕಟ್ಟ ನಿರ್ಮಾಣವನ್ನು ಗ್ರಾಮ ಪಂಚಾಯತುಗಳು ಮಾಡಬೇಕಿದೆ. ಅಲ್ಲಲ್ಲಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸ್ಥಳಾಧ್ಯಯನ ನಡೆಸಿ ಶಿಫಾರಸು ಮಾಡಬೇಕು.

ಕಟ್ಟ ನಿರ್ಮಾಣದಲ್ಲೂ ಲೋಪಸಾಧ್ಯತೆಯಿದೆ. ಸೂಕ್ತ ಜಾಗದ ಆಯ್ಕೆ, ಸರಿಯಾದ ಅಡಿಪಾಯ, ಕಾಮಗಾರಿಯ ಗುಣಮಟ್ಟ ಮತ್ತು ಇಕ್ಕೆಲಗಳಲ್ಲಿ ನೀರು ಸೋರಿಕೆ ಸಾಧ್ಯತೆ - ವಿಶೇಷ ಎಚ್ಚರ ಬೇಕಾದ ವಿಚಾರಗಳು. ಹಿಂದಿನಿಂದಲೇ ಕಟ್ಟ ಕಟ್ಟುವಲ್ಲೇ ಈ ಕಟ್ಟ ಕಟ್ಟಿದರೆ ಸೋರದು. ರಾಜಕೀಯ ಒತ್ತಡ ಅಥವಾ ಬೇರೆ ಕಾರಣಗಳಿಂದ ಮನ ಬಂದೆಡೆ ನಿರ್ಮಿಸುವುದು ಸೋಲಿಗೆ ಆಹ್ವಾನವಾಗಬಹುದು. ಸ್ಥಳೀಯ ಸಮುದಾಯ ಮನಪೂರ್ವಕ ಒಪ್ಪುವಂತಹ ಸೈಟ್ ಆಯ್ಕೆ ಅತ್ಯಗತ್ಯ.

(ಡಾ. ಎಂ.ಆರ್. ರವಿ)

“ಮರಿಕೆ ತೋಡಿನಲ್ಲಿ ತಳದಲ್ಲಿ ಕಲ್ಲು ಇದೆ. ತೋಡಿನ ಇಬ್ಬದಿಯೂ ಕಟ್ಟಕ್ಕೆ ಅನುಕೂಲಕಾರಿ. ನಾಮಮಾತ್ರದ ಅಡಿಪಾಯ ಸಾಕು. ಹೊಸ ಜಾಗದ ಅಧ್ಯಯನ ಮಾಡಿಯೇ ಅಡಿಪಾಯ ಹೇಗಿರಬೇಕು ಎಂದು ನಿರ್ಧರಿಸಬೇಕು. ಕೆಲವೊಂದೆಡೆ ಅಡಿ ತಡೆಗೋಡೆ ಬೇಕಾಗಲೂಬಹುದು” ಎನ್ನುವುದು ಜಿಪಂ ಸಹಾಯಕ ಕಾರ್ಯದರ್ಶಿ, ಎಂಜಿನಿಯರ್ ಎಂ. ಗೋಪಾಲಕೃಷ್ಣ ಭಟ್ ಅಭಿಪ್ರಾಯ. “ಅಡಿಪಾಯಕ್ಕೆ ಬೇಬಿ ಜಲ್ಲಿಯನ್ನೇ ಬಳಸಬೇಕು. ದೊಡ್ಡ ಜಲ್ಲಿ ಹಾಕಿದರೆ  ಸೋರುವ ಸಾಧ್ಯತೆ ಹೆಚ್ಚು” ಎಂದು ಸದಾಶಿವ ಎಚ್ಚರಿಸುತ್ತಾರೆ.

ಪಾರಂಜವ್ಯವೊಂದಕ್ಕೆ ಹೊಸ ರೂಪ ಕೊಟ್ಟು ಹೆಚ್ಚುಹೆಚ್ಚು ಜನರನ್ನು ಜಲಸಂರಕ್ಷಣೆಗೆ ಪ್ರೇರೇಪಿಸ ಹೊರಟ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯ್ತಿ ಹುಮ್ಮಸ್ಸು ಸ್ವಾಗತಾರ್ಹ. ಈ ಬೆಳವಣಿಗೆ ರಾಜ್ಯದ ಇತರೆಡೆಗಳ ಆಡಳಿತಕ್ಕೆ ಕೊಡುವ ಸಂದೇಶ ಇಷ್ಟೇ: “ನಿಮ್ಮೂರ ಪಾರಂಜವ್ಯದತ್ತ ಕಣ್ಣು ತೆರೆಯಿರಿ. ಅದು ಜಲಸುಸ್ಥಿರತೆಗೆ ಕೀಲಿಕೈ ಆಗುವ ಸಾಧತೆ ಹೆಚ್ಚು.”

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry