6

ರೊಟ್ಟಿ, ಚಪಾತಿಗೆ ಬಗೆಬಗೆ ಪಲ್ಯ

Published:
Updated:
ರೊಟ್ಟಿ, ಚಪಾತಿಗೆ ಬಗೆಬಗೆ ಪಲ್ಯ

ಚೌಳೀಕಾಯಿ ಪಲ್ಯ

ಬೇಕಾಗುವ ಸಾಮಗ್ರಿಗಳು:
ಕಾಲು ಕಿಲೋ ಚೌಳೀಕಾಯಿ, ಮೂರು ಚಮಚ ಎಣ್ಣೆ, ಕಾಲು ಚಮಚ ಸಾಸಿವೆ, ಸ್ವಲ್ಪ ಬೆಲ್ಲ, ಸ್ವಲ್ಪ ಕರಿಬೇವು, ಎರಡು ಚಮಚ ಪಲ್ಯದ ಪುಡಿ ಅಥವಾ ಹುಳಿಪುಡಿ, ಸ್ವಲ್ಪ ಹುಣಸೆರಸ, ಸ್ವಲ್ಪ ತೆಂಗಿನತುರಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲು ಚೌಳೀಕಾಯಿಯನ್ನು ಸ್ವಚ್ಛಗೊಳಿಸಿ ಒಂದು ಇಂಚು ಉದ್ದವಾಗಿ ಹೆಚ್ಚಬೇಕು. ಸಣ್ಣ ಕುಕ್ಕರಿನಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ ಹಾಕಿ ಸಿಡಿದ ನಂತರ ಹೆಚ್ಚಿದ ಚೌಳೀಕಾಯಿಯನ್ನು ಹಾಕಿ ಮುಚ್ಚಳ ಮುಚ್ಚಿ ಒಂದು ಸೀಟಿ ಬಂದ ನಂತರ ಬೆಂದ ಚೌಳೀಕಾಯಿಗೆ ಉಳಿದ ಸಾಮಗ್ರಿಗಳನ್ನು ಹಾಕಿ ಸಣ್ಣ

ಉರಿಯಲ್ಲಿ ಬೇಯಿಸಿ. ಈಗ ರುಚಿಕರವಾದ ಪಲ್ಯ ತಯಾರು. ಚಪಾತಿ, ಜೋಳದ ರೊಟ್ಟಿ ಹಾಗೂ ಅನ್ನದೊಂದಿಗೆ ಸವಿಯಲು ರುಚಿಕರವಾಗಿರುತ್ತದೆ.

*ಆಲೂ ಸಬ್ಬಸಿಗೆ ಪಲ್ಯ

ಬೇಕಾಗುವ ಸಾಮಗ್ರಿಗಳು: 3–4 ಬೇಯಿಸಿದ ಆಲೂಗಡ್ಡೆ, 1 ಕಪ್ ಸ್ವಚ್ಛಗೊಳಿಸಿ ಹೆಚ್ಚಿದ ಸಬ್ಬಸಿಗೆ ಸೊಪ್ಪು, 4 ಚಮಚ ಎಣ್ಣೆ, ಸ್ವಲ್ಪ ಸಾಸಿವೆ, ಎರಡು ಹಸಿಮೆಣಸು, ಎರಡು ಎಸಳು ಬೆಳ್ಳುಳ್ಳಿ, ಸ್ವಲ್ಪ ಹುಣಸೆ ರಸ, ಸ್ವಲ್ಪ ಜೀರಿಗೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿಯಾದ ನಂತರ ಸಾಸಿವೆ ಹಾಗೂ ಜೀರಿಗೆಯನ್ನು ಹಾಕಿ, ಸಾಸಿವೆ ಸಿಡಿದ ನಂತರ ಹೆಚ್ಚಿದ ಸಬ್ಬಸಿಗೆ ಸೊಪ್ಪನ್ನು ಹಾಕಿ ಎಣ್ಣೆಯಲ್ಲಿ ಬಾಡಿಸಿ. ನಂತರ ಅದೇ ಒಗ್ಗರಣೆಗೆ ಹಸಿಮೆಣಸಿನ ಪೇಸ್ಟ್ ಹಾಗೂ ಬೆಳ್ಳುಳ್ಳಿ ಪೇಸ್ಟ್ ಹಾಕಿ ಸ್ವಲ್ಪ ಬಾಡಿಸಿ. ನಂತರ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಹುಣಸೆ ರಸ ಸೇರಿಸಿ ಕುದಿಸಿ, ಈಗ ಬೆಂದ ಆಲೂಗಡ್ಡೆಯನ್ನು ಪುಡಿ ಮಾಡಿ ಸೇರಿಸಿ ಮಗುಚಿದರೆ ರುಚಿಕರವಾದ ಆಲೂ ಸಬ್ಬಸ್ಸಿಗೆ ಪಲ್ಯ ಸವಿಯಲು ಸಿದ್ಧ. ಚಪಾತಿ, ಪೂರಿ ಹಾಗೂ ಜೋಳದ ರೊಟ್ಟಿಯೊಂದಿಗೆ ಸವಿಯಲು ರುಚಿಕರವಾಗಿರುತ್ತದೆ.

*ಮಡಿಕೆ ಕಾಳಿನ ಗಸಿ

ಬೇಕಾಗುವ ಸಾಮಗ್ರಿಗಳು:
ಮೊಳಕೆ ಬರಿಸಿದ ಮಡಿಕೆ ಕಾಳು 1 ಕಪ್, ಸಣ್ಣ ಹೆಚ್ಚಿದ ಈರುಳ್ಳಿ ಒಂದು, ಸಣ್ಣ ಹೆಚ್ಚಿದ ಟೊಮೆಟೊ ಒಂದು, ಸ್ವಲ್ಪ ಕಾಯಿತುರಿ, ಎರಡು ಒಣಮೆಣಸು, ಅರ್ಧ ಇಂಚು ಚೆಕ್ಕೆ ಚೂರು, ಎರಡು ಎಸಳು ಬೆಳ್ಳುಳ್ಳಿ, ಸ್ವಲ್ಪ ಶುಂಠಿ, ಎರಡು ಲವಂಗ, ಎರಡು ಚಮಚ ಹುರಿಗಡಲೆ, ಮೂರು ಚಮಚ ಎಣ್ಣೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊಳಕೆ ಬರಿಸಿದ ಮಡಿಕೆ ಕಾಳನ್ನು ಕುಕ್ಕರಿನಲ್ಲಿ ಎರಡು ವಿಸಿಲ್ ಬರಿಸಿಕೊಳ್ಳಬೇಕು. ಇನ್ನೊಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದರಲ್ಲಿ ಸಣ್ಣ ಹೆಚ್ಚಿದ ಈರುಳ್ಳಿಯನ್ನು ಹಾಕಿ ಸ್ವಲ್ಪ ಹೊತ್ತು ಬಾಡಿಸಬೇಕು. ನಂತರ ಅದಕ್ಕೆ ಟೊಮೆಟೊ ಸೇರಿಸಿ ಅದು ಮೆತ್ತಗಾಗುವವರೆಗೆ ಬಾಡಿಸಬೇಕು. ಉಳಿದ ಸಾಮಗ್ರಿಗಳನ್ನು ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಬೇಕು. (ತೆಂಗಿನ ತುರಿ, ಹುರಿಗಡಲೆ, ಬೆಳ್ಳುಳ್ಳಿ, ಶುಂಠಿ, ಚೆಕ್ಕೆ , ಲವಂಗ, ಒಣಮೆಣಸು) ನಂತರ ಬೆಂದ ಕಾಳನ್ನು ಹಾಕಿ ಹಾಗೂ ಮಿಕ್ಸಿಗೆ ಹಾಕಿದ ಪೇಸ್ಟ್ ಎಲ್ಲಾ ಒಟ್ಟು ಸೇರಿಸಿ ಚೆನ್ನಾಗಿ ಕುದಿಸಬೇಕು. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿದರೆ ರುಚಿಕರವಾದ ಕಾಳಿನ ಗಸಿ ಸವಿಯಲು ಸಿದ್ಧ. ಚಪಾತಿ ಹಾಗೂ ಪೂರಿಯೊಂದಿಗೆ ಸವಿಯಲು ಬಲು ರುಚಿ.

*–ಮೀನಾಕ್ಷಿ ರಮೇಶ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry