ಪರ್ಯಾಯ ಧರ್ಮದ ಆಶಯ ಮೂಲ ವಚನರಾಶಿ

7

ಪರ್ಯಾಯ ಧರ್ಮದ ಆಶಯ ಮೂಲ ವಚನರಾಶಿ

Published:
Updated:
ಪರ್ಯಾಯ ಧರ್ಮದ ಆಶಯ ಮೂಲ ವಚನರಾಶಿ

ಜಾತಿ ಈ ದೇಶಕ್ಕಂಟಿದ ಬಹುದೊಡ್ಡ ಶಾಪ. ಚಾತುರ್ವರ್ಣ ಮೂಲದಲ್ಲಿ ಹುಟ್ಟಿ ಬೆಳೆದ ಈ ಜಾತಿವ್ಯವಸ್ಥೆಯನ್ನು ಹೋಗಲಾಡಿಸಲು ಚಾರ್ವಾಕರು ಬುದ್ಧ ಮೊದಲಾಗಿ ಆಕಾಲದಿಂದ ಇಂದಿನವರೆಗೂ ಬಹಳಷ್ಟು ಜನ ಹೋರಾಟ ನಡೆಸಿದ್ದಾರೆ. ಆದರೂ ಈ ದೇಶದೊಳಗೆ ಜಾತಿ ವ್ಯವಸ್ಥೆಯನ್ನು ಬೇರುಸಹಿತ ಕಿತ್ತು ಹಾಕಲು ಸಾಧ್ಯವಾಗಿಲ್ಲ. ಈ ದೇಶದ ಮೇಲೆ ಆಕ್ರಮಣ ಮಾಡಿ ದೇಶವನ್ನು ವಶಪಡಿಸಿಕೊಂಡು ಆಳ್ವಿಕೆ ನಡೆಸಿದ ಎಷ್ಟೋ ಜನ ಹೊರದೇಶಗಳ ಆಕ್ರಮಣಕಾರರನ್ನು ಹೋರಾಡಿ ದೇಶದಿಂದ ಹೊಡೆದೋಡಿಸಲಾಗಿದೆ. ವ್ಯಾಪಾರದ ನೆಪದಲ್ಲಿ ಬಂದು ದೇಶವನ್ನು ಕೊಳ್ಳೆ ಹೊಡೆದ ಬ್ರಿಟಿಷ್ ವಸಾಹತುಶಾಹಿಯನ್ನು ಹೊರದಬ್ಬಲಾಗಿದೆ. ಆದರೆ ಸಹಸ್ರಾರು ವರ್ಷಗಳಿಂದ ಈ ದೇಶವನ್ನು ಕಿತ್ತು ತಿನ್ನುತ್ತಿರುವ ಜಾತಿ ವ್ಯವಸ್ಥೆಯಿಂದ ಮುಕ್ತಿ ಪಡೆಯಲಾಗುತ್ತಿಲ್ಲ. ಇಂದಿಗೂ ಇದು ಕಾಡುತ್ತಿರುವ ಪೆಡಂಭೂತ. ಎಂಥ ವೈಚಾರಿಕ ಎಚ್ಚರ ಮೂಡಿದರೂ ವೈಜ್ಞಾನಿಕ ದೃಷ್ಟಿಕೋನ ಬೆಳೆದರೂ ಜಾತಿ ವ್ಯವಸ್ಥೆಯ ಬೇರು ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ.

ಬ್ರಿಟಿಷ್ ವಸಾಹತುಶಾಹಿಯನ್ನು ಒದ್ದೋಡಿಸಿದಷ್ಟು ಸುಲಭದಲ್ಲಿ ಈ ವೈದಿಕ ಶ್ರೇಷ್ಠತೆಯ ಜಾತಿ ವ್ಯವಸ್ಥೆಯನ್ನು ನಾಶಪಡಿಸಲು ಮಾತ್ರ ಸಾಧ್ಯವಾಗುತ್ತಿಲ್ಲ. ಏಕೆಂದರೆ ಅದು ತನ್ನ ವಿರುದ್ಧ ಯಾವುದೇ ಹೊಸ ಹತಾರ ಹುಟ್ಟಿಕೊಂಡರೂ ಮೊದಲು ಅದನ್ನು ಜಾಣ್ಮೆಯಿಂದ ತನ್ನದಾಗಿಸಿಕೊಂಡು ತನ್ನ ವಶವರ್ತಿಯಾಗಿ ಮಾಡಿಕೊಳ್ಳುತ್ತದೆ. ವಿರುದ್ಧವಾದದ್ದನ್ನು ಪರವಾಗಿ ಮಾಡಿಕೊಂಡು ತನ್ನ ವಿಚಾರವನ್ನು ಪ್ರಚಾರ ಮಾಡುವ ಸಾಧನವಾಗಿ ಪರಿವರ್ತಿಸಿಕೊಳ್ಳುತ್ತದೆ. ಬುಡಕಟ್ಟು ಮೂಲದ ಶೂದ್ರ ದೈವಗಳನ್ನು ಹೈಜಾಕ್ ಮಾಡಿ ತನ್ನದೇ ದೈವಗಳೆಂದು ಬಿಂಬಿಸಿ ಅವುಗಳನ್ನೇ ಅವುಗಳು ಬಂದ ಮೂಲಗಳ ಶೋಷಣೆಗೆ ಸಾಧನಗಳಾಗಿ ಬಳಸುತ್ತಿದೆ. ರಾಮ-ಕೃಷ್ಣ-ಸುಬ್ರಹ್ಮಣ್ಯ-ಜಗನ್ನಾಥ ಮೊದಲಾದ ದೇವರುಗಳ ಮೂಲ ಶೂದ್ರ ಸಮುದಾಯ. ಆದರೆ ಇಂದು ಇವೆಲ್ಲವೂ ಜಾತಿವ್ಯವಸ್ಥೆಯ ಶೋಷಣೆಯ ಒಳ ವ್ಯವಹಾರಕ್ಕೆ ಬಳಕೆಯಾಗುತ್ತಿರುವ ಧಾರ್ಮಿಕ ಹತಾರಗಳು. ವೈದಿಕ ಎಂಬ ಕೋಮುವಾದಿ ರಾಜಕಾರಣಕ್ಕೆ ಅದರ ಬಲವರ್ಧನೆಗೆ ಬಹುದೊಡ್ಡ ಪ್ರಮಾಣದಲ್ಲಿ ಬಳಕೆಯಾಗುತ್ತಿರುವ ದಾಳರೂಪಗಳು.

ಹೀಗಾಗಿ ಜಾತಿವ್ಯವಸ್ಥೆಯ ವಿರುದ್ಧ ನಡೆದ ಎಲ್ಲ ಬಗೆಯ ಹೋರಾಟಗಳನ್ನು ನೋಡಿದಾಗ ಅವುಗಳ ಆಶಯವೆಂಬುದು ಪ್ರಾರಂಭದಲ್ಲಿ ವಿರೋಧವಾಗಿದ್ದು ಕಾಲಾಂತರದಲ್ಲಿ ಅದೇ ಮತ್ತೊಂದು ವ್ಯವಸ್ಥೆಯಾಗುವ ಜಾತಿಯಾಗುವ ವಿದ್ಯಮಾನವಾಗುವಂತೆ ನೋಡಿಕೊಳ್ಳಲಾಗಿದೆ. ಇನ್ನೂ ಚೋದ್ಯದ ಸಂಗತಿಯೆಂದರೆ ಪರ್ಯಾಯವಾಗಿಯಾದರೂ ಬೆಳೆಯಬಹುದಾಗಿದ್ದವುಗಳು ಪೂರಕ ಬಲಗಳಾಗಿ ಪರಿವರ್ತನೆಗೊಂಡಿವೆ; ಅರ್ಥಾತ್ ಮತ್ತೊಂದು ಜಾತಿಯೇ ಜಾತಿ ವ್ಯವಸ್ಥೆಯೇ ಆಗಿ ಉಳಿದಿವೆ. ಇದು ಇಂದಿನ ದುರಂತ.

ಇಂಥ ದುರಂತಮಯ ವಾತಾವರಣದ ನಡುವೆ ಜಾತಿವ್ಯವಸ್ಥೆಯ ವಿರುದ್ಧ ನಡೆದ ಹಲವು ಬಗೆಯ ಹೋರಾಟಗಳಲ್ಲಿ ನಮ್ಮನ್ನು ಮತ್ತೆ ಮತ್ತೆ ಕಾಡಿಸುವ ಹೋರಾಟ ಹನ್ನೆರಡನೇ ಶತಮಾನದಲ್ಲಿ ಕನ್ನಡ ನೆಲದಲ್ಲಿ ಹುಟ್ಟಿ ಬೆಳೆದ ವಚನಕ್ರಾಂತಿಯ ಹೋರಾಟ. ಸಮಾಜದಲ್ಲಿನ ಎಲ್ಲ ಬಗೆಯ ಅನ್ಯಾಯ ಅಸಮಾನತೆಗಳ ವಿರುದ್ಧವಾಗಿ ದನಿ ಎತ್ತಿದ ಪರ್ಯಾಯ ಸಂಸ್ಕೃತಿ ನಿರ್ಮಾಣಕ್ಕೆ ತೊಡಗಿದ ಬಹುದೊಡ್ಡ ಹೋರಾಟವಿದು. ಈ ಹೋರಾಟದ ಉಪಉತ್ಪನ್ನದ ರೀತಿಯಲ್ಲಿ ಹುಟ್ಟಿಕೊಂಡವು ಶರಣರ ವಚನಗಳು. 12ನೇ ಶತಮಾನದಲ್ಲಿ ಜರುಗಿದ ಆ ಚಳವಳಿಯ ಒಳಸ್ವರೂಪವನ್ನು ಬಿಂಬಿಸುತ್ತಿವೆ ವಚನಗಳು. ಜಾತಿ ವ್ಯವಸ್ಥೆಯ ಮೂಲ ಪಠ್ಯಗಳೆನ್ನುವ ಎಲ್ಲ ವೈದಿಕ ರಚನೆಗಳನ್ನೂ ಶರಣರು ತಮ್ಮ ವಚನಗಳಲ್ಲಿ ಮುಲಾಜಿಲ್ಲದೆ ತಿರಸ್ಕರಿಸಿದ್ದಾರೆ. ‘ವೇದ ಶಾಸ್ತ್ರ ಆಗಮ ಪುರಾಣಗಳಲ್ಲಿ ಶ್ರುತಿ ಸ್ಮೃತಿಗಳಲ್ಲಿ ನುಡಿವುದು ಪುಸಿ’ (ಅಮುಗೆ ರಾಯಮ್ಮ) `ವಿಪ್ರಂಗೆ ವೇದಮಂತ್ರವ ಬಿಟ್ಟು ಜಾತಿಯಲ್ಲಿ ಬೆರಸಲಿಕ್ಕೆ ಸುಜಾತಿಗೆ ಹೊರಗಪ್ಪರು ನೋಡಾ’ (ಅಕ್ಕಮ್ಮ) ಹೀಗೆ ವಚನ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದ ಬಹಳ ಮಂದಿ ಶರಣರು ಬ್ರಾಹ್ಮಣ ಮೂಲದ ವೇದ ಆಗಮ ಶಾಸ್ತ್ರ ಗ್ರಂಥಗಳನ್ನು ತಿರಸ್ಕರಿಸಿ ಮಾತನಾಡಿದ್ದಾರೆ.

ಇಲ್ಲಿರುವುದು ಸುಮ್ಮನೆ ಅಲ್ಲಿದೆ ನಮ್ಮ ಮನೆ’ ಎಂಬ ಢೋಂಗಿ ಅಧ್ಯಾತ್ಮವಾದಿಗಳ ತರ್ಕಸರಣಿಯನ್ನು ತಿರಸ್ಕರಿಸಿ ‘ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯ; ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರಯ್ಯಾ’ (ಬಸವಣ್ಣ). ‘ಕೈಲಾಸ ಮರ್ತ್ಯಲೋಕ ಎಂಬರು, ಕೈಲಾಸವೆಂದಡೇನೋ ಮರ್ತ್ಯಲೋಕವೆಂದಡೇನೋ? ಅಲ್ಲಿಯ ನಡೆಯೂ ಒಂದೆ ಇಲ್ಲಿಯ ನಡೆಯೂ ಒಂದೇ ಅಲ್ಲಿಯ ನುಡಿಯೂ ಒಂದೆ ಇಲ್ಲಿಯ ನುಡಿಯೂ ಒಂದೇ ಕಾಣರಯ್ಯ’ (ಲಿಂಗಮ್ಮ) ಎಂದ ಶರಣೆಯರಿದ್ದಾರೆ. ಇವರ ದೃಷ್ಟಿಯಲ್ಲಿ ಕಾಯಕವೆಂಬುದು ವೈದಿಕದ ಕರ್ಮಕ್ಕೆ ಸಂವಾದಿಯಾದ ಪರಿಕಲ್ಪನೆಯಲ್ಲ. ವೈದಿಕದ ಕರ್ಮವೆಂಬುದು ಆತ್ಮವಾದಿ ನೆಲೆಯಲ್ಲಿ ವ್ಯಾಖ್ಯಾನಿಸಿಕೊಂಡ ಪ್ರಾರಬ್ಧ. ಅದು ಮನುಷ್ಯನ ಆತ್ಮಗೌರವವನ್ನು ಕೊಂದುಕೂಗುವ ವಿಧಿತತ್ವ. ನಿತ್ಯನಾರಿಕಿಯ ನೆಲೆಯಲ್ಲಿ ಉತ್ತಮದಕಡೆ ನಡೆಯಲಾರದ ಭವಭಾರದಲ್ಲಿ ಮನುಷ್ಯನನ್ನು ನರಳಿಸುವ ನರಕರೂಪ. ಆದರೆ ಶರಣರ ಕಾಯಕವೆಂಬುದು ಸ್ವಹಿತ ಮತ್ತು ಸಮಾಜಹಿತವನ್ನು ಕಾಯ್ದುಕೊಂಡ ನೆಲೆಯ ಶ್ರಮತತ್ವ.

‘ಮನಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ

ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ

ಸದ್ಭಕ್ತಂಗೆ ಎತ್ತ ನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು

ಮಾರಯ್ಯಪ್ರಿಯ ಅಮರೇಶ್ವರಲಿಂಗದ ಸೇವೆಯುಳ್ಳನ್ನಕ್ಕರ’

- ಎಂದು ಅಸಂಗ್ರಹತತ್ವದ ಪ್ರತಿಪಾದಕಿ ಆಯ್ದಕ್ಕಿಲಕ್ಕಮ್ಮ ಹೇಳುತ್ತಾಳೆ.

ಹೀಗೆ ವಚನಧರ್ಮವು ಸಂಪೂರ್ಣವಾಗಿ ವೈದಿಕಧರ್ಮಕ್ಕೆ ವಿರೋಧಿಯಾದುದು. ವೈದಿಕದ ಅಸಮಾನತೆಯನ್ನು ವಿರೋಧಿಸಿ ಸಮಸಮಾಜ ನಿರ್ಮಾಣದ ಕನಸು ಹೊತ್ತು ರೂಪುಗೊಂಡ ಪರ್ಯಾಯ ಧರ್ಮ. ಈ ಪರ್ಯಾಯದ ಪರಿಕ್ರಮ ಸ್ವರೂಪವನ್ನು ಅರಿಯವುದಕ್ಕೆ ನಾವು ಬೇರೆ ಆಕರಗಳನ್ನು ಹುಡುಕಬೇಕಾದ ಅಗತ್ಯವಿಲ್ಲ. ವಚನ ಚಳವಳಿಯ ಉಪಉತ್ಪನ್ನದ ಫಲರೂಪಿಗಳಾಗಿರುವ ವಚನಗಳನ್ನೇ ನಾವು ಪ್ರಮಾಣುವನ್ನಾಗಿ ನೋಡುವುದು ಅಗತ್ಯ. ಅಲ್ಲಿ ಬಳಕೆಯಾಗಿರುವ ಕನ್ನಡ ಕನ್ನಡನೆಲದಲ್ಲಿ ಹುಟ್ಟಿಬೆಳೆದ ನೆಲದ ಧರ್ಮವಾಗಿರುವ ಈ ವಚನಧರ್ಮದ ಸಾರಸರ್ವಸ್ವವನ್ನು ಒಳಗೊಂಡಿದೆ. ಧಾರ್ಮಿಕ ಚಳವಳಿಯ ಪರಿಭಾಷೆಗಳಂತೆ ಅಲ್ಲಿ ಬಳಸಿರುವ ಪದಗಳು ಕೇವಲ ಪದಾರ್ಥರೂಪಿ ಭಾಷಾ ಸಂಕೇತ ಸ್ವರೂಪದಲ್ಲಿ ಬಳಕೆಯಾಗಿರದೆ ಇಡೀ ಚಳವಳಿಯೊಂದರ ಒಳಹೊರ ಸಂಘರ್ಷಾತ್ಮಕ ಬದುಕಿನ ಆಶಯಗಳನ್ನು ವ್ಯಂಜಿಸುವ ಪದರೂಪಗಳಾಗಿವೆ. ಆದ್ದರಿಂದ ವಚನಗಳಲ್ಲಿನ ಆ ಪರಿಭಾಷೆಗಳನ್ನು ಅರಿಯುವ ಮೂಲಕ ಇಡೀ ಚಳವಳಿಯ ಸಾರವನ್ನು ನಿರ್ವಚಿಸುವ ಎಲ್ಲ ಅವಕಾಶಗಳೂ ತೆರೆದಿಟ್ಟ ಪರಿಯಲ್ಲಿವೆ. ಆದರೆ ಈ ಪರಿಭಾಷೆಗಳ ಅರ್ಥಗಳನ್ನು ಶಾಸ್ತ್ರಜಡ ಚೌಕಟ್ಟಿಗೆ ಬಂಧಿಸಿ ವ್ಯಾಖ್ಯಾನಿಸಿದರೆ ಅದು ನಮ್ಮ ಗ್ರಹಿಕೆಯ ಮನೋಸ್ಥಿತಿಯ (ಮೈಂಡ್ ಸೆಟ್‌) ಮಿತಿಯಾಗುತ್ತದೆ. ಹಾಗಾಗದಿರಬೇಕಾದರೆ ಚಳವಳಿಯಲ್ಲಿ ಭಾಗಿಗಳಾಗಿದ್ದ ವಚನಕಾರರ ಬದುಕಿನ ಗತಿ ತಾರ್ಕಿಕತೆಯ ಅನುಭವಶೋಧದ ಮೂಲರೂಪಗಳಾಗಿ ಅವುಗಳನ್ನು ಗ್ರಹಿಸಬೇಕಾಗುತ್ತದೆ. ಆಗ ಪ್ರತಿಯೊಂದು ಪದವೂ ಕೇವಲ ಅರ್ಥಮಿತಿಯ ಪ್ರಯೋಗವಾಗದೆ ಅನುಭಾವದ ನೆಲೆಯ ಚಿಂತನಾದ್ರವ್ಯರೂಪಿಗಳಾಗಿ ಮಿಂಚುವುದು ಅರಿವಿಗೆ ಬರುತ್ತದೆ.

ಸಮಗ್ರ ವಚನಸಾಹಿತ್ಯವನ್ನು ಅಖಂಡತ್ವದ ಪೂರ್ಣನೋಟಕ್ಕೆ ಒಳಗು ಮಾಡಿದಾಗ ಮಾತ್ರ ಈ ಸೂಕ್ಷ್ಮತೆ ಸಾಧ್ಯವಾಗುತ್ತದೆ. ಈ ಅಖಂಡತ್ವದಲ್ಲಿ ಏಕಮುಖೀ ಚಿಂತನೆ ಇಲ್ಲ; ಬಹುಮುಖೀ ಸಂವಾದಗಳಿವೆ. ಸಂವಾದಗಳು ವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುತ್ತಲೇ ಸಮಷ್ಠಿ ನೆಲೆಯ ಕಲ್ಯಾಣವನ್ನೂ ಕಾಣಿಸುತ್ತವೆ. ಹೊರನೋಟಕ್ಕೆ ವಿರೋಧದ ದನಿಯಲ್ಲಿ ಕೇಳಿಸಿದರೂ ಆಂತರ್ಯದಲ್ಲಿ ತಿಳಿವನ್ನು ತುಂಬಿಕೊಳ್ಳುವ ಅರಿವಿನ ಭಾಂಡಗಳಂತೆ ವಿಸ್ತರಿಸಿಕೊಂಡಿವೆ. ಹೀಗಾಗಿ ವಚನರಾಶಿಯೆಂಬುದು ಹನ್ನೆರಡನೇ ಶತಮಾನದ ಚಳವಳಿಯ ಒಕ್ಕಲ ಮಕ್ಕಳ ಧಾನ್ಯರಾಶಿ. ಈ ರಾಶಿಯಲ್ಲಿ ಸದ್ಯದ ಒಡಲ ಹಸಿವನ್ನು ಹಿಂಗಿಸುವ ದವಸವೂ ಇದೆ. ಹಾಗೆಯೇ ಮುಂದಿನ ತಲೆಮಾರಿಗೆ ಬೇಕಾಗುವ ಬೆಳೆಯನ್ನು ಬೆಳೆಯುವ ಬಿತ್ತವೂ ಇದೆ. ಇದರ ನಡುವೆ ಜರುಕಲುಕಾಳು ಕಳ್ಳಗಾಳು ಇಲ್ಲವೆಂದಲ್ಲ, ಇವೆಲ್ಲವನ್ನೂ ಒಳಗೊಂಡೇ ಪಡೆದ ಸುಗ್ಗಿಯ ರಾಶಿ ಇದು. ಇಂಥ ಧಾನ್ಯರಾಶಿ ಅಳತೆಗೆ ಒಟ್ಟೊಟ್ಟಿಗೆ ದಕ್ಕಬಹುದು. ಆದರೆ ಕಾಳು ಕಾಳನ್ನೂ ಪ್ರತ್ಯೇಕಿಸಿ ಅದರ ಬನಿ ತನಿ ಸ್ವರೂಪವನ್ನು ನೋಡಹೊರಟಾಗ ಮಾತ್ರ ಅದು ಅಳತೆಗೆ ಸಿಗದಷ್ಟು ಅಪಾರತೆಯದು.

ಅಂತೆಯೇ ಪ್ರತಿಯೊಂದು ಕಾಳಿನ ಸ್ವರೂಪವೂ ಅದರದರ ಸತ್ವಶೀಲತೆಯಲ್ಲಿ ಅದು ಅಂದಿನ ಅನ್ನವೋ ಮುಂದಿನ ಎಂದಿನ ಬಿತ್ತವೋ ಎಂಬುದು ಅರಿವಿಗೆ ಬರುತ್ತದೆ. ಆಗ ಮಾತ್ರ ಚಳವಳಿಯ ಸಂಘಟನಾತ್ಮಕ ರಾಶಿಗೌರವದ ಜತೆಗೆ ಪ್ರತ್ಯೇಕ ವ್ಯಕ್ತಿ ಅಸ್ತಿತ್ವದ ಗುಣಗೌರವವೂ ಗ್ರಹಿಕೆಗೆ ಸಿಗುತ್ತದೆ. ಇದು ವಚನ ಸಾಹಿತ್ಯದ ಶಕ್ತಿ. ಹಾಗೆಯೇ ಬೇರಾವುದೇ ಭಾಷೆಯಲ್ಲಿ ಕಾಣಸಿಗದ ವಚನ ಶೇಷ್ಠತೆಯ ಅನನ್ಯತೆ. ಇಂಥ ವಚನರಾಶಿಯನ್ನು ಮುಖಾಮುಖಿಯಾದಂತೆ ಹಲವು ಜನ ಸಾಹಿತ್ಯಾಸಕ್ತರು, ಸಮಾಜಜ್ಞಾನಿಗಳು, ರಾಜಕೀಯ ಪರಿಣತರು, ಮಾನವಶಾಸ್ತ್ರೀಯ ಪಂಡಿತಮಾನ್ಯರು, ಧಾರ್ಮಿಕ ಗುರುಗಳು ಇತಿಹಾಸಕಾರರು ಈ ಮೊದಲಾದ ಹಲವು ಜ್ಞಾನಶಾಖೆಯ ವಿಷಯತಜ್ಞರು ವಿಚಾರವಿಮರ್ಶೆ ಮಾಡಿದ್ದಾರೆ. ತಮ್ಮ ತಮ್ಮ ನೆಲೆ ನೋಟದ ಒಳಪಾತಳಿಯನ್ನು ಚಳವಳಿಯನ್ನು ಸಾಹಿತ್ಯವನ್ನು ವಚನಧರ್ಮವನ್ನು ವಿವರಿಸಿಕೊಂಡಿದ್ದಾರೆ. 12ನೇ ಶತಮಾನದ ಶೂನ್ಯಪೀಠ ಪರಂಪರೆಯ ಶ್ರೀಮುರುಘಾಮಠದ ಪ್ರಸ್ತುತ ಪೀಠಾಧ್ಯಕ್ಷರಾದ ಡಾ. ಶಿವಮೂರ್ತಿ ಮುರುಘಾ ಶರಣರು ತುಂಬು ಗಂಭೀರ ನೆಲೆಯ ಅಧ್ಯಯನಕ್ಕೆ ನಾಡಿನ ವಿದ್ವಾಂಸರು ತೊಡಗುವಂತೆ ದೀಪ ತೋರಿದ್ದಾರೆ. ಅವರೇ ವಿಷಯಾಧಾರಿತವಾಗಿ ವಚನಗಳನ್ನು ಸಂಗ್ರಹಿಸಿ ಹಲವು ಜನ ವಿದ್ವಾಂಸರಿಗೆ ಆ ವಚನಗಳ ವಿಶ್ಲೇಷಣೆ ನಡೆಸುವಂತೆ ನಿರ್ದೇಶಿಸಿದ್ದಾರೆ. ಈ ಗ್ರಂಥ ಸಂಪಾದನೆಯ ಸಂಪೂರ್ಣ ಹೊಣೆ ಅವರದ್ದು.

ಡಾ. ಶಿವಮೂರ್ತಿ ಮುರುಘಾ ಶರಣರ ಪ್ರಧಾನ ಸಂಪಾದಕತ್ವದಲ್ಲಿ ಬಿಡುಗಡೆಗೊಳ್ಳುತ್ತಿರುವ ‘ವಚನಮಾರ್ಗ’ ಸಂಪುಟದಲ್ಲಿ ವಚನಪರಿಭಾಷೆಗಳು ಬಳಕೆಯಾಗಿರುವ ವಚನಗಳು ವಿವೇಚನೆಗೆ ಒಳಗಾಗಿವೆ. ವ್ಯಾಖ್ಯಾನ ಮಾದರಿಗಿಂತ ವಚನ ಧರ್ಮದ ನಿಜ ಶೋಧದ ನಿರೀಕ್ಷಾ ಪ್ರಜ್ಞೆ ಇಲ್ಲಿನ ಬಹುತೇಕ ರಚನೆಗಳಲ್ಲಿ ಹಬ್ಬಿ ಹರಿದಿದೆ. ಹೀಗಾಗಿ ಈ ಎಲ್ಲ ವಿಶ್ಲೇಷಣೆಗಳು ಒಟ್ಟಂದದಲ್ಲಿ ಹನ್ನೆರಡನೇ ಶತಮಾನದ ಚಳವಳಿಯ ಮರುರಚನೆಯಂತೆ ಮರುವಿಮರ್ಶೆಯಂತೆ ಮರೆತು ಹೋಗಿರುವ ಕೆಲವು ಸುಳಿವುಗಳನ್ನು ಮತ್ತೆ ಹುಡುಕವಂತೆ ಗಂಭೀರ ಅಧ್ಯಯನದ ಭಾಗಗಳಾಗಿವೆ. ಆಧುನಿಕ ಬಳಕೆಯಿಂದಾಗಿ ಬೃಹತ್ ಗ್ರಂಥ ಹಗುರಾಗಿ ಓದುಗರಿಗೆ ಅನುಕೂಲಕರವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry