ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಸ್ಕಾರದ ಊರಿನಲ್ಲಿ ತಿರಸ್ಕಾರದ ಮಾತುಗಳು

Last Updated 1 ಅಕ್ಟೋಬರ್ 2017, 6:15 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ತಾಲ್ಲೂಕಿನ ಪಟ್ರೇನಹಳ್ಳಿ ಗ್ರಾಮ ಪಂಚಾಯಿತಿ 2016–17ನೇ ಸಾಲಿನ ‘ಗಾಂಧಿ ಗ್ರಾಮ’ ಪುರಸ್ಕಾರಕ್ಕೆ ಭಾಜನವಾಗಿದ್ದು, ಬೆಂಗಳೂರಿನಲ್ಲಿ ಅಕ್ಟೋಬರ್‌ 2 ರಂದು ನಡೆಯುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನವಾಗಲಿದೆ.

ಪಟ್ರೇನಹಳ್ಳಿ ಪಂಚಾಯಿತಿ ಪ್ರಶಸ್ತಿ ಪಡೆದದ್ದು ಪಂಚಾಯಿತಿ ಸಿಬ್ಬಂದಿಗೆ ಗರಿ ಮೂಡಿಸಿದರೆ, ಅಧಿಕಾರದಲ್ಲಿ ಇರುವವರಿಗೆ ಸಹಜವಾಗಿಯೇ ಸಂತಸ ಉಂಟು ಮಾಡಿದೆ. ಹಾಗೆಂದು ಪಂಚಾಯಿತಿಯೇ ಇರುವ ಪಟ್ರೇನಹಳ್ಳಿ ಜನರಿಗೆ ಖುಷಿ ತಂದಿಯೇ ಎಂದು ಪರೀಕ್ಷಿಸಲು ಹೋದರೆ ದೂರುಗಳನ್ನು ಹೇಳಿಕೊಳ್ಳುವವರೇ ಭೇಟಿಯಾದರು ವಿನಾ ‘ಎಲ್ಲವೂ ಚೆನ್ನಾಗಿದೆ ಪ್ರಶಸ್ತಿ ಸಿಗಲೇ ಬೇಕಿತ್ತು’ ಎನ್ನುವವರು ಇರಲಿಲ್ಲ. ವಿಚಿತ್ರವೆಂದರೆ ಅನೇಕರಿಗೆ ತಮ್ಮ ಗ್ರಾಮ ಪಂಚಾಯಿತಿಗೆ ಪ್ರಶಸ್ತಿ ದೊರೆತದ್ದೇ ಗೊತ್ತಿಲ್ಲ! ಇನ್ನು ಕೆಲವರು ‘ಹೌದಾ’ ಎಂದು ಸೋಜಿಗ ವ್ಯಕ್ತಪಡಿಸಿದರು.

ಪಂಚಾಯಿತಿಯ ತೆರಿಗೆ ಸಂಗ್ರಹ, ಸಾಕ್ಷರತೆ ಪ್ರಮಾಣ, ಶೌಚಾಲಯಗಳ ನಿರ್ಮಾಣ, ಸೌರ ವಿದ್ಯುತ್ ಬಳಕೆ, ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಕೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ನರೇಗಾ) ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ಪ್ರಗತಿ ಮತ್ತು ಮೂಲಸೌಕರ್ಯ ಅಭಿವೃದ್ಧಿಯನ್ನು ಮಾನದಂಡವಾಗಿಟ್ಟುಕೊಂಡು ಪಂಚಾಯಿತಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.

ಪ್ರಶಸ್ತಿ ಆಯ್ಕೆಗಿರುವ ಮಾನದಂಡಗಳನ್ನು ಓದಿಕೊಂಡು, ಪಟ್ರೇನಹಳ್ಳಿಯನ್ನು ಒಂದು ಸುತ್ತು ಹಾಕಿ, ಸ್ಥಳೀಯರನ್ನು ಮಾತನಾಡಿಸಿಕೊಂಡು ಬಂದರೆ ಊರಿನ ಮುಖ್ಯ ರಸ್ತೆಯೇ ಅಭಿವೃದ್ಧಿಯ ಇನ್ನೊಂದು ಮುಖದ ದರ್ಶನ ಮಾಡಿಸುತ್ತದೆ.

ಊರಿನಲ್ಲಿ ಮಾತಿಗೆ ಸಿಕ್ಕ ನಾರಾಯಣಪ್ಪ, ‘ಊರಿನಲ್ಲಿ 350 ಮನೆಗಳಿವೆ. ಒಂದು ತಿಂಗಳಿಂದ ಈಚೆಗೆ ಶೌಚಾಲಯ ಕಟ್ಟಿಸದಿದ್ದರೆ ರೇಷನ್‌ ನೀಡುವುದಿಲ್ಲ ಎಂದು ಪಂಚಾಯಿತಿಯವರು ಹೆದರಿಸಿದ ಕಾರಣಕ್ಕೆ ಅನೇಕರು ತರಾತುರಿಯಲ್ಲಿ ಶೌಚಾಲಯ ನಿರ್ಮಿಸಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಇನ್ನೂ 50 ಮನೆಗಳಲ್ಲಿ ಶೌಚಾಯವಿಲ್ಲ. ಕೆಲವರು ಜಾಗದ ಕೊರತೆಯಿಂದ ದಾರಿ ಬದಿಯಲ್ಲೋ, ಚರಂಡಿ ಮೇಲೋ ಹೀಗೆ ಎಲ್ಲೆಂದರಲ್ಲಿ ಶೌಚಾಲಯ ಕಟ್ಟಿಸಲು ಹೊರಟಿದ್ದಾರೆ. ಅನೇಕ ತಿಂಗಳಾದರೂ ಕೆಲವರಿಗೆ ಶೌಚಾಲಯದ ಸಹಾಯಧನ ಕೂಡ ಬಂದಿಲ್ಲ’ ಎಂದು ತಿಳಿಸಿದರು.

‘ಊರಿನ ಮುಖ್ಯ ರಸ್ತೆಯೇ ಡಾಂಬರ್‌ ಕಂಡಿಲ್ಲ. ಅನೇಕ ರಸ್ತೆಗಳಲ್ಲಿ ಗುಂಡಿಗಳು ಗೋಚರಿಸುತ್ತವೆ. ಚರಂಡಿಗಳು ಅಧ್ವಾನ ಸ್ಥಿತಿಗೆ ತಲುಪಿವೆ. ಗಿಡಗಂಟೆಗಳು ಬೆಳೆದು ಅನೇಕ ಕಡೆಗಳಲ್ಲಿ ಚರಂಡಿ ಮುಚ್ಚಿ ಹೋಗಿವೆ. ಊರು ತಗ್ಗು ಪ್ರದೇಶದಲ್ಲಿರುವ ಕಾರಣಕ್ಕೆ ಮಳೆಗಾಲದಲ್ಲಿ ಅನೇಕ ಮನೆಗಳಿಗೆ ನೀರು ನುಗ್ಗುತ್ತದೆ. ಸೊಳ್ಳೆಗಳ ಕಾಟವಂತೂ ಹೇಳತೀರದು. ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಯಾವೊಂದು ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಆರೋಪಿಸಿದರು.

ವಾರಕ್ಕೊಮ್ಮೆ ಕುಡಿಯೊ ನೀರು!
‘ನಮ್ಮ ಪಂಚಾಯಿತಿ ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಂತೋಷದ ಸುದ್ದಿ. ಆದರೆ ಊರಿನಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಸರಿಯಾಗಿ ಕೆಲಸಗಳು ನಡೆದಿಲ್ಲ. ಇತ್ತೀಚೆಗೆ ಅರ್ಧಂಬರ್ಧ ಕೆಲಸಗಳು ಆಗಿವೆ. ಊರಿನ ಹೊರವಲಯದಲ್ಲಿ ರಾಜಕಾಲುವೆಗಳ ಒತ್ತುವರಿಗೆ ಮುಚ್ಚಿರುವ ಕಾರಣಕ್ಕೆ ಎಸ್‌ಪಿ ಕಚೇರಿ ಸುತ್ತಲಿನ ಪ್ರದೇಶದ ನೀರೆಲ್ಲ ಊರಿಗೆ ನುಗ್ಗುತ್ತದೆ. ಆ ಸಮಸ್ಯೆ ಬಗೆಹರಿಸುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ’ ಎಂದು ಸ್ಥಳೀಯ ನಿವಾಸಿ ಮೋಹನ್‌ ಹೇಳಿದರು.

‘ಊರಿನಲ್ಲಿ ವಾರಕ್ಕೊಮ್ಮೆ ಕುಡಿಯಲು ನೀರು ಪೂರೈಸುತ್ತಾರೆ. ಸೌರ ವಿದ್ಯುತ್‌ ದೀಪಗಳನ್ನು ಪಂಚಾಯಿತಿಯವರು ಬೇಕಾದವರ ಮನೆಗಳ ಮುಂದಷ್ಟೇ ಅಳವಡಿಸಿದ್ದಾರೆ.ಶಿಥಿಲಗೊಂಡ ಅಂಗನವಾಡಿ ಕಟ್ಟಡ ರಿಪೇರಿ ಮಾಡಿಸಲು ಯಾರೂ ಮುಂದೆ ಬರಲಿಲ್ಲ. ಹೀಗಾಗಿ ಇವತ್ತು ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ನಡೆಸಲಾಗುತ್ತಿದೆ. ಕಟ್ಟಡ ಮಾತ್ರ ರಿಪೇರಿಯಾಗಿಲ್ಲ’ ಎಂದು ತಿಳಿಸಿದರು.

‘ಪಂಚಾಯಿತಿಯಲ್ಲಿ ನಡೆಯುವ ಸಭೆಗಳ ಕುರಿತು ಜನರಿಗೆ ಮಾಹಿತಿಯೇ ತಿಳಿಯುವುದಿಲ್ಲ. ಹೀಗಾದರೆ ಜನರು ಯಾರ ಬಳಿ ಕುಂದುಕೊರತೆ ಹೇಳಿಕೊಳ್ಳಬೇಕು? ಇವರೇನೋ ಎಲ್ಲಾ ಅಭಿವೃದ್ಧಿಯಾಗಿದೆ ಎಂದು ಲೆಕ್ಕ ತೋರಿಸಿ ಪ್ರಶಸ್ತಿ ಪಡೆದುಕೊಳ್ಳಲು ಹೊರಟಿದ್ದಾರೆ. ಇದನ್ನು ನೋಡಿದವರು ಪಟ್ರೇನಹಳ್ಳಿ ಸಂಪೂರ್ಣ ಅಭಿವೃದ್ಧಿಗೊಂಡಿದೆ ಎಂದು ಮುಂದೆ ಇಲ್ಲಿ ಯಾವ ಕೆಲಸಗಳನ್ನು ಮಾಡಿಸದಿದ್ದರೆ ಏನು ಗತಿ ಎನ್ನುವ ಚಿಂತೆ ಕಾಡುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಜಾಬ್ ಕಾರ್ಡ್ ಎಂದರೆ ಊರಿನಲ್ಲಿ ಅನೇಕರಿಗೆ ಗೊತ್ತೇ ಇಲ್ಲ. ರೈತರೇ ಅಲ್ಪಸ್ವಲ್ಪ ಕಾಳಜಿ ಮಾಡಿ ಕೃಷಿ ಹೊಂಡಗಳನ್ನು ಮಾಡಿಸಿಕೊಂಡಿದ್ದಾರೆ. ನರೇಗಾ ಯೋಜನೆಯನ್ನು ಅಧಿಕಾರಿಗಳು ಬೇಕಾಬಿಟ್ಟಿಯಾಗಿ ಅನುಷ್ಠಾನ ಮಾಡುತ್ತಿದ್ದಾರೆ. ದುಡಿಯುವ ವರ್ಗದವರಿಗೆ ಕೂಲಿ ದೊರೆಯುತ್ತಿಲ್ಲ. ನಮಗಿಂತಲೂ ಅನೇಕ ಗ್ರಾಮ ಪಂಚಾಯಿತಿಗಳು ಸಾಕಷ್ಟು ಅಭಿವೃದ್ಧಿ ಹೊಂದಿವೆ. ಆದರೆ ಇದೇ ಪಂಚಾಯಿತಿಯನ್ನು ಏಕೆ ಆಯ್ಕೆ ಮಾಡಿದರು ಎನ್ನುವುದು ನಮಗೆ ಸೋಜಿಗ ಮೂಡಿಸಿದೆ’ ಎಂದು ಹೇಳಿದರು.

‘ಈ ಪ್ರಶಸ್ತಿ ಆಯ್ಕೆ ಅಂಕಗಳ ಆಧಾರದಲ್ಲಿ ನಡೆಯುತ್ತದೆ. ಸಿಇಒ ಅವರು ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಪಂಚಾಯಿತಿ ಆಯ್ಕೆ ಮಾಡದೆ ಬೇರೆ ಆಯ್ಕೆ ಇರುವುದಿಲ್ಲ. ಹೀಗಾಗಿ ಇದು ಅತಿ ಕೆಟ್ಟದರಲ್ಲಿಯೇ ಒಳ್ಳೆಯದನ್ನು ಆಯ್ಕೆ ಮಾಡುವ ವಿಧಾನದಿಂದ ಕೂಡಿದೆ. ಉತ್ತಮವಾಗಿ ಅಭಿವೃದ್ಧಿ ಕೆಲಸ ಮಾಡಿದ ಪಂಚಾಯಿತಿಯವರು ಮುಂದೆ ಬಂದು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿ ತೋರಿಸಬೇಕಿದೆ’ ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸಿ.ಸಿದ್ದರಾಮಯ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT