ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪತಗುಡ್ಡದ ಕಡೆಗೆ ಕುರಿಗಳ ಪ್ರಯಾಣ

Last Updated 1 ಅಕ್ಟೋಬರ್ 2017, 7:06 IST
ಅಕ್ಷರ ಗಾತ್ರ

ಡಂಬಳ: ಉತ್ತಮ ಮಳೆಯಾಗಿರುವ ಬೆನ್ನಲ್ಲೇ ಜಿಲ್ಲೆಯ ಕಪ್ಪತಗುಡ್ಡದಲ್ಲಿ ಸಮೃದ್ಧವಾಗಿ ಹುಲ್ಲು ಬೆಳೆದಿದ್ದು, ಬೆಳಗಾವಿ, ಮಹಾರಾಷ್ಟ್ರ ಬಾಗಲಕೋಟೆ, ಅಥಣಿ, ರಾಯಭಾಗ, ಭಾಗಗಳದ ಕುರಿಗಾರರು ಕುರಿ ಹಿಂಡನ್ನು ಹೊಡೆದುಕೊಂಡು ಕಪ್ಪತಗುಡ್ಡಕ್ಕೆ ಬರತೊಡಗಿದ್ದಾರೆ. ಜೂನ್‌ನಿಂದ ಡಿಸೆಂಬರ್‌ ಅಂತ್ಯದವರೆಗೂ ಈ ಪ್ರದೇಶದಲ್ಲಿ ಸಾಕಷ್ಟು ಹಸಿ ಮೇವು ಲಭಿಸುವುದರಿಂದ ಇಲ್ಲೇ ಠಿಕಾಣಿ ಹೂಡುತ್ತಾರೆ. ಕುರಿಹಿಂಡಿನೊಂದಿಗೆ ಬರುವ ಕುರಿಗಾರರು ಗುಡ್ಡದ ತಪ್ಪಲಲ್ಲಿರುವ ಜಮೀನಿನಲ್ಲಿ ಮೊದಲು ಡೇರೆ ಹಾಕುತ್ತಾರೆ.

ನಂತರ ಸರಕು ಸಾಮಗ್ರಿಗಳನ್ನು ಕುದುರೆಯ ಮೇಲೆ ಹೇರಿಕೊಂಡು ಗುಡ್ಡದ ನೆತ್ತಿ ತಲುಪುತ್ತಾರೆ. ಡೇರೆ ಹಾಕಿದ ನಂತರ ಮಹಿಳೆಯರು, ಮಕ್ಕಳು ಬಂದು ಸೇರುತ್ತಾರೆ ಹಿಂದಿನಿಂದ ಕುರಿಗಳನ್ನು ಹೊಡೆದುಕೊಂಡು ಕುರಿಗಾರರು ಗುಡ್ಡ ಹತ್ತಿ ಬರುತ್ತಾರೆ.

‘ಮಳೆಗಾಲ ಬಂದರೆ ಕಪ್ಪತಗುಡ್ಡದ ಕಡೆಗೆ ಕುರಿಗಳನ್ನು ಹೊಡೆದುಕೊಂಡು ಬರುತ್ತೇವೆ. ಕಳೆದ 3 ದಶಕಗಳಿಂದ ಇದೇ ಕಾಯಕ ಮಾಡುತ್ತಿದ್ದೇವೆ. ಇಲ್ಲಿ ಕುರಿಗಳಿ ಇಲ್ಲಿನ ವಾತಾವರಣವೂ ಒಳ್ಳೆಯದಿದ್ದು ಕುರಿಗಳಿಗೆ ಯಾವುದೇ ರೋಗಗಳು ಬರುವುದಿಲ್ಲ ಎನ್ನುತ್ತಾರೆ ಕುರಿಗಾಯಿ ವಿಠಲ ಜಯಪ್ಪ ಬಾಣಸೆ.

ಡಂಬಳ ಹೋಬಳಿಯ ಡೋಣಿ ತಾಂಡದ ಹತ್ತಿರ ಕುರಿಗಳನ್ನು ಮೇಯಿಸಿಕೊಂಡು ಕಪ್ಪತ್ತಗುಡ್ಡಕ್ಕೆ ಪ್ರಯಾಣ ಹೊರಟಿದ್ದರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ನಾಯಂಗಲಜ ಗ್ರಾಮದ ವಿಠಲ ಬಾಣಸೆ.

ಸುಮಾರು 1 ಸಾವಿರ ಕುರಿಗಳು ಹಾಗೂ 30 ಕುದುರೆಗಳು ಜತೆಗಿದ್ದವು. ಹಾವೇರಿ, ರಾಣೆಬೆನ್ನೂರ, ಕೊಪ್ಪಳ, ಯಲಬುರ್ಗಾ, ತಳಕಲ್ಲ, ಸುತ್ತಿ ಕಪ್ಪತ್ತಗುಡ್ಡಕ್ಕೆ ಬಂದಿದ್ದರು. ಒಳ್ಳೆಯ ಮಳೆ ಆಗಿದ್ದರಿಂದ ಕುರಿಗಳಿಗೆ ಮೇಯಲು ಹಸಿರು ಹುಲ್ಲು ಸಿಗುತ್ತದೆ ಕನಿಷ್ಠ ಮೂರು ತಿಂಗಳ ಕಾಲ ವಾಸ ಮಾಡಬೇಕು ಅಕ್ಕಿ, ಜೋಳ, ಸಕ್ಕರೆ, ತರಕಾರಿ, ಬೆಳಕಾಳುಗಳು ಬಾಂಡೆ ಸಾಮಾನು ಎಲ್ಲ ವಸ್ತುಗಳನ್ನು ಜತೆಗೆ ತಂದಿದ್ದೇವೆ’ ಎಂದರು.

ತಾಡಪತ್ರಿ ಹಾಕಿಕೊಂಡು ರೈತರ ಜಮೀನು, ಗುಡ್ಡ ಬೆಟ್ಟದಲ್ಲಿ ತಾತ್ಕಾಲಿಕವಾಗಿ ಡೇರೆ ಹಾಕಿ ವಾಸ ಮಾಡುತ್ತೇವೆ ಅಡುಗೆ ಮಾಡಲು ನೀರಿಗಾಗಿ ಸ್ವಲ್ಪ ಅಲೆದಾಡಬೇಕು. ಕಪ್ಪತಗುಡ್ಡದ ಗಾಳಿಯಲ್ಲಿ ಸಂಜೀವಿನಿ ಇದೆ. ಸಾಮಾನ್ಯವಾಗಿ ಇಲ್ಲಿದ್ದಾಗ ಔಷಧದ ಅಗತ್ಯ ಇರುವುದಿಲ್ಲ. ಜ್ವರ, ಕೆಮ್ಮು, ಮುಂತಾದ ಕಾಯಲೆಗಳು ಹತ್ತಿರ ಸುಳಿಯುವುದಿಲ್ಲ.

ಕುರಿಗಳಿಗೆ ಏನಾದರೂ ಹೆಚ್ಚು ಕಮ್ಮಿಯಾದರೆ ವೈದ್ಯರನ್ನೆ ಗುಡ್ಡಕ್ಕೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸುತ್ತೇವೆ. ಪ್ರತಿ ವರ್ಷ ಕಪ್ಪತ್ತಗುಡ್ಡಕ್ಕೆ ಬರುತ್ತೇವೆ ಮಕ್ಕಳು, ಸೊಸೆಯಂದಿರು, ಮೊಮ್ಮಕಳು ಹೀಗೆ ಇಡೀ ಕುಟುಂಬವೇ ಇಲ್ಲಿ ವಾಸ ಮಾಡುತ್ತಿದ್ದು ಹಬ್ಬಗಳು, ಮನೆಯಲ್ಲಿ ಏನಾದರೂ ಶುಭ ಕಾರ್ಯವಿದ್ದರೆ ಮಾತ್ರ ಊರಿಗೆ ಹೋಗಿ ಬರುತ್ತೇವೆ ಎಂದು ಅವರು ಹೇಳಿದರು.

’ಯಾವ ಕಾಲವಾದರೂ ನಮಗೆ ಕಷ್ಟ ತಪ್ಪಿದ್ದಲ್ಲ. ಕುರಿಗಳನ್ನು ನಮ್ಮ ಮಕ್ಕಳಂತೆ ರಕ್ಷಣೆ ಮಾಡುತ್ತೇವೆ’ ಎನ್ನುತ್ತಾರೆ ವಿಠಲ ಪತ್ನಿ ಮಾಯವ್ವ. 'ಬೇಸಿಗೆಯಲ್ಲಿ ನೀರು, ಹಸಿರ ಹುಲ್ಲಿನ ಸಮಸ್ಯೆ ಹೇಳತೀರದು ಗುಡ್ಡ ಬೆಟ್ಟಗಳು, ಗಿಡ ಮರಗಳು ಒಣಗಿದ್ದವು ಅಡವಿಯಲ್ಲಿ ಸಿಗುವ ಒಣಗಿದ ಕರಿಕಿ, ಇತರ ಎಲೆಯನ್ನು ಕುರಿಗಳು ತಿನ್ನುವ ಪರಿಸ್ಥಿತಿಯಿತ್ತು. ಈಗ ಮಳೆ ಚೆನ್ನಾಗಿ ಆಗಿದ್ದರಿಂದ ಕುರಿಗಳು ಬದುಕುತ್ತೀವೆ ನಮಗೂ ಸ್ವಲ್ಪ ನೆಮ್ಮದಿ ತಂದಿದೆ' ಎನ್ನುತ್ತಾ ಇನ್ನೂರ್ವ ಕುರಿಗಾಯಿ ಬೀರಪ್ಪ ಶಿವರಾಯಪ್ಪ ಕುರಿಗಳನ್ನು ಹೊಡೆದುಕೊಂಡು ಗುಡ್ಡ ಹತ್ತತೊಡಗಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT