ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈಯಲ್ಲಿ ಕಾಲ್ತುಳಿತ ತಪ್ಪಿಸಬಹುದಾಗಿದ್ದ ದುರಂತ

Last Updated 1 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ರೈಲು ಅವಘಡಗಳ ಸರಣಿ ಇನ್ನೂ ನಿಂತಿಲ್ಲ. ಆಯುಧ ಪೂಜೆಯ ದಿನದಂದೇ ಮುಂಬೈಯ ಎಲ್ಫಿನ್‌ಸ್ಟನ್‌ ರೋಡ್‌ ಮತ್ತು ಪರೇಲ್‌ ರೈಲು ನಿಲ್ದಾಣಗಳ ನಡುವಿನ ಪಾದಚಾರಿ ಮೇಲ್ಸೇತುವೆಯಲ್ಲಿ ಕಾಲ್ತುಳಿತಕ್ಕೆ 23 ಅಮಾಯಕರು ಬಲಿಯಾಗಿದ್ದಾರೆ. ಎಂದಿನಂತೆ ತುರ್ತು ಸಭೆ, ಅಧಿಕಾರಿಗಳಿಗೆ ತರಾಟೆ, ಸಂತಾಪ ಸೂಚನೆ, ಪರಿಹಾರ ಘೋಷಣೆ, ಉನ್ನತಾಧಿಕಾರಿಗಳುಳ್ಳ ತನಿಖಾ ತಂಡ ರಚನೆಯ ಶಾಸ್ತ್ರಗಳು ನಡೆದಿವೆ. ಆದರೆ ಒಂದಂತೂ ನಿಜ. ಇದು ತಪ್ಪಿಸಬಹುದಾಗಿದ್ದ ದುರಂತ. ರೈಲ್ವೆ ಆಡಳಿತ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ, ಹೊಣೆಗೇಡಿತನದಿಂದ ಆದ ಅನಾಹುತ. ಇದನ್ನು ಹೇಳಿದವರು ಬೇರೆ ಯಾರೂ ಅಲ್ಲ. ಒಂದು ತಿಂಗಳ ಹಿಂದಿನವರೆಗೂ ರೈಲ್ವೆ ಮಂತ್ರಿಯಾಗಿದ್ದ ಸುರೇಶ್‌ ಪ್ರಭು ಅವರು. ಆದ್ದರಿಂದ ತಪ್ಪಿತಸ್ಥ ಅಧಿಕಾರಿಗಳನ್ನು ಗುರುತಿಸಿ ನಿರ್ದಾಕ್ಷಿಣ್ಯವಾಗಿ ಶಿಕ್ಷಿಸಬೇಕು. ಕ್ರಿಮಿನಲ್‌ ಮೊಕದ್ದಮೆ ಹೂಡಬೇಕು.

ಸರ್ಕಾರವೇ ಈ ಕೆಲಸ ಮಾಡಬೇಕು. ಇಲ್ಲದೇ ಹೋದರೆ ಇಂತಹ ದುರ್ಘಟನೆಗಳಿಗೆ ಕೊನೆ ಎಂಬುದೇ ಇರುವುದಿಲ್ಲ. ಪ್ರಭು ಅವರು ಎರಡೂಮುಕ್ಕಾಲು ವರ್ಷ ರೈಲ್ವೆ ಮಂತ್ರಿಯಾಗಿದ್ದವರು. ಮಹಾರಾಷ್ಟ್ರದವರು. ಎಲ್ಫಿನ್‌ಸ್ಟನ್‌ ರೋಡ್‌ ನಿಲ್ದಾಣದ ರೈಲ್ವೆ ಮೇಲ್ಸೇತುವೆಯನ್ನು ಇನ್ನಷ್ಟು ಅಗಲಗೊಳಿಸುವ ₹ 12 ಕೋಟಿ ವೆಚ್ಚದ ಯೋಜನೆಗೆ 2016ರಲ್ಲಿಯೇ ಅವರು ಮಂಜೂರಾತಿ ಕೊಟ್ಟಿದ್ದರು. ಹಾಗಿದ್ದರೆ ಇದು ಏಕೆ ಅನುಷ್ಠಾನಕ್ಕೆ ಬರಲಿಲ್ಲ, ಏಕೆ ಅವರು ನಿಗಾ ವಹಿಸಲಿಲ್ಲ ಎಂಬ ಪ್ರಶ್ನೆಗಳಿಗೆ ಅವರೂ ಉತ್ತರಿಸಬೇಕಾಗುತ್ತದೆ. ಅಧಿಕಾರಿಗಳೇ ತಪ್ಪಿತಸ್ಥರು ಎಂದು ಹೇಳಿಬಿಟ್ಟರೆ ಅದರಿಂದ ಅವರ ಹೊಣೆ ಮುಗಿಯಲಿಲ್ಲ. ಅವರೂ ಸಮಾನ ಬಾಧ್ಯಸ್ಥರು.

₹ 25 ಕೋಟಿಯ ಒಳಗಿನ ಅಂದಾಜು ವೆಚ್ಚದ ಇಂತಹ ಅತ್ಯಾವಶ್ಯಕ ಯೋಜನೆಗಳನ್ನು ಮಂಡಳಿಯ ಪೂರ್ವಾನುಮತಿ ಇಲ್ಲದೆ ಕೈಗೆತ್ತಿಕೊಳ್ಳಲು ಪ್ರಭು ಅವರ ಕಾಲದಲ್ಲಿಯೇ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕರಿಗೆ ಅಧಿಕಾರ ಕೊಡಲಾಗಿತ್ತು. ಆದರೆ ಈ ಮೇಲ್ಸೇತುವೆಯ ವ್ಯಾಪ್ತಿ ಹೊಂದಿದ ರೈಲ್ವೆ ವಲಯದ ಅಧಿಕಾರಿಗಳು ಈ ಬಗ್ಗೆ ಗಮನವನ್ನೇ ಕೊಡಲಿಲ್ಲ. ದೇಶದ ಎರಡು ಪ್ರಮುಖ ರೈಲ್ವೆ ವಲಯಗಳ ಪ್ರಧಾನ ಕಚೇರಿಗಳು ಮುಂಬೈ ಮಹಾನಗರದಲ್ಲಿಯೇ ಇವೆ. ಅಲ್ಲಿನ ರೈಲ್ವೆ ಸೌಕರ್ಯ, ಪ್ರಯಾಣಿಕರ ಮತ್ತು ಸುರಕ್ಷತೆಯ ಬೇಕುಬೇಡಗಳ ಬಗ್ಗೆ ತಿಳಿದುಕೊಳ್ಳಲು ಈ ಉನ್ನತ ಅಧಿಕಾರಿಗಳು ಬಹಳ ದೂರಕ್ಕೇನೂ ಹೋಗಬೇಕಿಲ್ಲ.

ನಿತ್ಯ 1 ಲಕ್ಷಕ್ಕೂ ಹೆಚ್ಚು ಜನ ಬಳಸುವ ಎಲ್ಫಿನ್‌ಸ್ಟನ್‌ ರೋಡ್– ಪರೇಲ್‌ ನಡುವಿನ ಮೇಲ್ಸೇತುವೆ ತುಂಬ ಇಕ್ಕಟ್ಟಾಗಿರುವ ಕಾರಣ ಯಾವುದೇ ಸಂದರ್ಭದಲ್ಲೂ ಇಂತಹ ದುರಂತ ಸಂಭವಿಸಬಹುದು ಎಂದು ಗ್ರಹಿಸುವಲ್ಲಿ ಇವರು ವಿಫಲರಾಗಿದ್ದಾರೆ. ಈ ಬಗ್ಗೆ ಬಹಳಷ್ಟು ದಿನಗಳಿಂದ ಜನ ಮುನ್ನೆಚ್ಚರಿಕೆ ಕೊಡುತ್ತಲೇ ಬಂದಿದ್ದರೂ ಸಂಬಂಧಪಟ್ಟವರು ಅದಕ್ಕೆ ಕಿವಿಗೊಡಲೇ ಇಲ್ಲ. ಕೈತುಂಬ ವೇತನ, ಕಾರು, ಆಳು–ಕಾಳು– ಬಂಗಲೆ, ಐಷಾರಾಮಿ ಸೌಕರ್ಯಗಳೆಲ್ಲ ಬೇಕು; ಆದರೆ ಕರ್ತವ್ಯಪಾಲನೆ ಬೇಡ ಎನ್ನುವ ಅಧಿಕಾರಿಗಳನ್ನು ನೋಡಿದರೆ, ಇವರೆಲ್ಲ ಇನ್ನೂ ಬ್ರಿಟಿಷರ ಕಾಲದಲ್ಲಿಯೇ, ಅದೇ ಮನಸ್ಥಿತಿಯಲ್ಲಿಯೇ ಇದ್ದಂತೆ ಕಾಣುತ್ತದೆ. ಅದಕ್ಷತೆ, ಕರ್ತವ್ಯಲೋಪ, ನಿರಾಸಕ್ತಿ, ಏನು ಮಾಡಿದರೂ– ಹೇಗೆ ಮಾಡಿದರೂ ನಡೆಯುತ್ತದೆ ಎಂಬ ಉಡಾಫೆಯಿಂದ ಇವರು ಹೊರಬಂದಂತಿಲ್ಲ. ಇಂಥವರಿಗೆ ಸರಿಯಾಗಿ ಚಾಟಿ ಬೀಸಿ ಕೆಲಸದ ಸಂಸ್ಕೃತಿ ಕಲಿಸಬೇಕು.

ನಮಗೀಗ ಭಾರಿ ವೆಚ್ಚದ ಮಹತ್ವಾಕಾಂಕ್ಷಿ ಬುಲೆಟ್‌ ಟ್ರೇನ್‌ಗಳಂತಹ ಯೋಜನೆಗಳಿಗಿಂತ, ಈಗಿರುವ ವ್ಯವಸ್ಥೆ ಸುಧಾರಣೆ ಮತ್ತು ಪ್ರಯಾಣಿಕರಿಗೆ ಸೌಕರ್ಯ, ಸುರಕ್ಷತೆಯಂತಹ ಮೂಲಭೂತ ಅವಶ್ಯಕತೆಗಳನ್ನು ಒದಗಿಸುವುದು ತುರ್ತಾಗಿ ಬೇಕಾಗಿದೆ. ರೈಲು ಮಾರ್ಗಗಳ ಸಮರ್ಪಕ ನಿರ್ವಹಣೆ, ಕಾವಲುರಹಿತ ಲೆವೆಲ್‌ ಕ್ರಾಸಿಂಗ್‌ಗಳಲ್ಲಿ ಸೇತುವೆ ನಿರ್ಮಾಣ, ಪ್ಲಾಟ್‌ಫಾರಂಗಳಲ್ಲಿ ಸ್ವಚ್ಛತೆ–ಭದ್ರತೆ, ಊಟ–ತಿಂಡಿಗಳ ಗುಣಮಟ್ಟ ಸುಧಾರಣೆಗೂ ತುರ್ತು ಗಮನ ಹರಿಸುವುದು ಅಗತ್ಯ. ಪ್ರಯಾಣಿಕರು ಬಳಸುವ ರೈಲ್ವೆ ಮೇಲ್ಸೇತುವೆಗಳು ಆದ್ಯತೆಯ ಕಾಮಗಾರಿಗಳು ಅಲ್ಲ ಎಂಬ ನೀತಿ 150 ವರ್ಷಗಳಿಂದಲೂ ಜಾರಿಯಲ್ಲಿತ್ತು. ಅದನ್ನೀಗ ಬದಲಿಸುವುದಾಗಿ ಹಾಲಿ ರೈಲ್ವೆ ಸಚಿವ ಪೀಯೂಷ್ ಗೋಯಲ್ ಪ್ರಕಟಿಸಿದ್ದಾರೆ. ಪ್ರತಿಯೊಂದು ಕೆಲಸಕ್ಕೂ ಕಾಲಮಿತಿ ನಿಗದಿ ಮಾಡಿದ್ದಾರೆ. ಸುರಕ್ಷತಾ ಕ್ರಮಗಳಿಗೆ ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ. ಆದರೆ ಅವರ ಘೋಷಣೆಗಳು ಬರೀ ಕಾಗದದ ಮೇಲೆ ಉಳಿಯದೆ ತಕ್ಷಣದಿಂದಲೇ ಜಾರಿಗೆ ಬರಬೇಕು. ಈ ದುರಂತವು ಎಚ್ಚರಿಕೆಯ ಗಂಟೆ ಆಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT