ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೀತಾವಿಷ್ಣು ಬಾವ ಸೆರೆ, ಅಕ್ಕ ಪರಾರಿ

Last Updated 1 ಅಕ್ಟೋಬರ್ 2017, 19:52 IST
ಅಕ್ಷರ ಗಾತ್ರ

ಬೆಂಗಳೂರು: ಪೊಲೀಸರ ವಶದಿಂದ ಪರಾರಿಯಾದ ಆರೋಪಿ ಗೀತಾವಿಷ್ಣುವಿಗೆ ಆಶ್ರಯ ನೀಡಿದ ಹಾಗೂ ನಗರ ತೊರೆಯಲು ಅನುಕೂಲ ಮಾಡಿಕೊಟ್ಟ ಆರೋಪದ ಮೇಲೆ ಆತನ ಬಾವ ರಾಜೇಶ್ ನಾಯ್ಡು (35) ಅವರನ್ನು ಬಂಧಿಸಿರುವ ಜಯನಗರ ಪೊಲೀಸರು, ಗೀತಾವಿಷ್ಣುವಿನ ಅಕ್ಕ ಚೈತನ್ಯ ನಾಯ್ಡು ಬಂಧನಕ್ಕೆ ಬಲೆ ಬೀಸಿದ್ದಾರೆ.

ಸೆ.27ರ ರಾತ್ರಿ ಜಯನಗರದ ಸೌತ್ ಎಂಡ್ ವೃತ್ತದಲ್ಲಿ ಅಪಘಾತ ಮಾಡಿ ಸಾರ್ವಜನಿಕರಿಂದ ಥಳಿತಕ್ಕೊಳಗಾಗಿದ್ದ ಗೀತಾವಿಷ್ಣುನನ್ನು, ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಸೆ.29ರ ಬೆಳಗಿನ ಜಾವ 6.14ಕ್ಕೆ ಆತ ತನ್ನ ಗನ್‌ಮ್ಯಾನ್ ಆನಂದನ್‌ ಜತೆ ಆಸ್ಪತ್ರೆಯ ತುರ್ತು ನಿರ್ಗಮನ ದ್ವಾರದ ಮೂಲಕ ಪರಾರಿಯಾಗಿದ್ದ.

ಹೀಗೆ, ಪೊಲೀಸರ ಕಣ್ತಪ್ಪಿಸಿ ಆಸ್ಪತ್ರೆಯಿಂದ ಹೊರ ಬಂದ ಬಾಮೈದ ಹಾಗೂ ಗನ್‌ಮ್ಯಾನ್‌ನನ್ನು ರಾಜೇಶ್‌ನಾಯ್ಡು ಅವರು ಕಾರಿನಲ್ಲಿ ತಾವು ನೆಲೆಸಿರುವ ವೈಟ್‌ಫೀಲ್ಡ್‌ನ ಪ್ರೆಸ್ಟೀಜ್‌ ಶಾಂತಿನಿಕೇತನ ಅಪಾರ್ಟ್‌ಮೆಂಟ್ ಸಮುಚ್ಚಯಕ್ಕೆ ಕರೆದುಕೊಂಡು ಹೋಗಿದ್ದರು.

ಫ್ಲ್ಯಾಟ್‌ಗೆ ಬಂದ ತಮ್ಮ‌ ಹಾಗೂ ಗನ್‌ಮ್ಯಾನ್‌ನನ್ನು ಚೈತನ್ಯ ನಾಯ್ಡು ‌ಅವರು ಕಾರಿನಲ್ಲಿ ಹೈದರಾಬಾದ್‌ಗೆ ಕರೆದುಕೊಂಡು ಹೋಗಿದ್ದಾರೆ.
ಅವರ ಜತೆ ರಾಜೇಶ್‌ ಸ್ನೇಹಿತ ವಿನೋದ್ ಸಹ ತೆರಳಿದ್ದಾನೆ.

ಈ ರೀತಿಯಾಗಿ ಬಾಮೈದನನ್ನು ನಗರದಿಂದ ಕಳುಹಿಸಿದ ರಾಜೇಶ್, ಬೆಳಿಗ್ಗೆ 8.30ರ ಸುಮಾರಿಗೆ ಆಸ್ಪತ್ರೆಗೆ ವಾಪಸಾಗಿ ಏನೂ ಅರಿಯದವರಂತೆ ಗೀತಾವಿಷ್ಣು ಪೋಷಕರ ಜತೆ ಓಡಾಡಿಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಮೊಬೈಲ್ ಕರೆಗಳ ವಿವರ (ಸಿಡಿಆರ್) ಪರಿಶೀಲಿಸಿದಾಗ ಆರೋಪಿಗಳ ಸಂಚು ಗೊತ್ತಾಯಿತು. ಪೊಲೀಸ್ ವಶದಲ್ಲಿದ್ದವನಿಗೆ ತಪ್ಪಿಸಿಕೊಳ್ಳಲು ನೆರವಾದ ಆರೋಪದಡಿ (ಐಪಿಸಿ 212) ರಾಜೇಶ್, ಚೈತನ್ಯ, ವಿನೋದ್ ಹಾಗೂ ಆನಂದನ್ ವಿರುದ್ಧ ಜಯನಗರ ಠಾಣೆಯಲ್ಲಿ ಭಾನುವಾರ ಎಫ್‌ಐಆರ್ ದಾಖಲಿಸಲಾಯಿತು.

ಫ್ಲ್ಯಾಟ್‌ನಲ್ಲಿದ್ದ ರಾಜೇಶ್‌ನನ್ನು ಬೆಳಿಗ್ಗೆಯೇ ಬಂಧಿಸಲಾಗಿದ್ದು, ಉಳಿದ ಆರೋಪಿಗಳ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಿರಂತರ ಸ್ಥಳ ಬದಲಾವಣೆ: ಗೀತಾವಿಷ್ಣು ಪತ್ತೆಗೆ ಪೊಲೀಸರ ವಿಶೇಷ ತಂಡಗಳು ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕೇರಳ ರಾಜ್ಯ
ಗಳಲ್ಲಿ ಕಾರ್ಯಾಚರಣೆ ನಡೆಸುತ್ತಿವೆ.

‘ಸಿಡಿಆರ್ ಪರಿಶೀಲನೆ ಹಾಗೂ ಟವರ್ ಡಂಪ್ ತನಿಖೆ ಮೂಲಕ ಗೀತಾವಿಷ್ಣು, ಚೈತನ್ಯ ನಾಯ್ಡು, ಅವರ ಸ್ನೇಹಿತರು ಹಾಗೂ ಹೊರ ರಾಜ್ಯಗಳಲ್ಲಿ ನೆಲೆಸಿರುವ ಅವರ ಸಂಬಂಧಿಕರ ಮೊಬೈಲ್ ಸಂಖ್ಯೆಗಳ ಮೇಲೆ ನಿಗಾ ಇಟ್ಟಿದ್ದೇವೆ. ಕಾರಿನಲ್ಲೇ ಸುತ್ತುತ್ತಿರುವ ಆರೋಪಿಗಳು, ಪದೇ ಪದೇ ಸ್ಥಳ ಬದಲಾಯಿಸುತ್ತಿದ್ದಾರೆ’ ಎಂದು ತನಿಖಾಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಗೀತಾವಿಷ್ಣು ತಾತ ಆದಿಕೇಶವಲು ಅವರು ಆಂಧ್ರಪ್ರದೇಶದಲ್ಲಿ ಪ್ರಭಾವಿ ರಾಜಕಾರಣಿಯಾಗಿದ್ದರು. ಹೀಗಾಗಿ, ಆರೋಪಿಗಳಿಗೆ ಅವರ ಬೆಂಬಲಿಗರ ನೆರವು ಸಹ ಸಿಗುತ್ತಿದೆ. ಸ್ಥಳೀಯ ಪೊಲೀಸರಿಂದಲೂ ಅಗತ್ಯ ನೆರವು ದೊರೆಯುತ್ತಿಲ್ಲ’ ಎಂದು ಮಾಹಿತಿ ನೀಡಿದರು.

ಕರ್ತವ್ಯಲೋಪ ತನಿಖೆ: ‘ಈ ಪ್ರಕರಣದಲ್ಲಿ ಪೊಲೀಸರ ಕರ್ತವ್ಯ ಲೋಪದ ಬಗ್ಗೆಯೂ ಆಂತರಿಕ ತನಿಖೆ ನಡೆಯುತ್ತಿದೆ. ಸೆ.27ರ ರಾತ್ರಿ ಅಪಘಾತ ಸಂಭವಿಸಿದ ನಂತರ ಅನುಸರಿಸಿದ ಕ್ರಮಗಳ ಬಗ್ಗೆ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಮಾಲಿನಿ ಕೃಷ್ಣಮೂರ್ತಿ ಅವರು ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಆರೋಪಿಯ ಕಾರಿನಲ್ಲಿ ಮಾದಕ ವಸ್ತು ಸಹ ಪತ್ತೆಯಾಗಿತ್ತು. ಹೀಗಾಗಿ, ಅದೇ ರಾತ್ರಿ ಬಂಧನ ಪ್ರಕ್ರಿಯೆ ಪೂರ್ಣಗೊಳಿಸಬೇಕಿತ್ತು. ಗಾಯಗೊಂಡಿದ್ದ ಆರೋಪಿಗೆ ಸಮೀಪದ ಆಸ್ಪತ್ರೆಯಲ್ಲೇ ಚಿಕಿತ್ಸೆ ಕೊಡಿಸಿ ಹೇಳಿಕೆ ದಾಖಲಿಸಿಕೊಳ್ಳುವ ಬದಲು, ಆತನ ಕುಟುಂಬದ ಒಡೆತನದ ಆಸ್ಪತ್ರೆಗೆ ಕರೆದೊಯ್ದಿದ್ದರು. ಈ ಮೂಲಕ ಗೀತಾವಿಷ್ಣು ತಪ್ಪಿಸಿಕೊಳ್ಳಲು ಸಿಬ್ಬಂದಿಯೂ ಪರೋಕ್ಷವಾಗಿ ನೆರವಾದಂತಾಯಿತು.  ಸಂಚಾರ ಹಾಗೂ ಕಾನೂನು ಸುವ್ಯವಸ್ಥೆ
ವಿಭಾಗದ ಪೊಲೀಸರ ನಡುವಿನ ಸಮನ್ವಯದ ಕೊರತೆಯು ಇಷ್ಟೆಲ್ಲ ಕೆಟ್ಟ ಬೆಳವಣಿಗೆಗಳಿಗೆ ಕಾರಣವಾಗಿದೆ. ಈ ನಿಟ್ಟಿನಲ್ಲೇ ಆಂತರಿಕ ತನಿಖೆ ನಡೆಯುತ್ತಿದೆ’ ಎಂದು ಮಾಹಿತಿ ನೀಡಿದರು.

‘ಮಗ ಜಯನಗರದಲ್ಲಿ ಹೋಟೆಲ್‌ ಉದ್ಯಮ ನಡೆಸುತ್ತಿದ್ದಾನೆ. ಸೆ.27ರ ರಾತ್ರಿ ಆತ ವಹಿವಾಟು ಮುಗಿಸಿ
ಕೊಂಡು ಮನೆಗೆ ಮರಳುತ್ತಿದ್ದ. ಕೆಂಪು ಸಿಗ್ನಲ್‌ ಇದ್ದರೂ ಓಮ್ನಿ ವ್ಯಾನ್‌ ಚಾಲಕ ವೇಗವಾಗಿ ವಾಹನ ಚಲಾಯಿಸಿಕೊಂಡು ಬಂದ. ಆಗ ಮಗನ ಬೆನ್ಜ್‌ ಎಸ್‌ಯುವಿಯು ವ್ಯಾನ್‌ಗೆ ಡಿಕ್ಕಿ ಹೊಡೆಯಿತು. ವಾಸ್ತವ ಅರಿಯದೆ ಅಕ್ಕ–ಪಕ್ಕದ ಅಂಗಡಿಯವರು ಗೀತಾವಿಷ್ಣು ಮೇಲೆ ಹಲ್ಲೆ ಮಾಡಿದರು. ಮಗ ಮಾದಕ ವ್ಯಸನಿಯಲ್ಲ. ಎಸ್‌ಯುವಿಯಲ್ಲಿ ಗಾಂಜಾ ಪೊಟ್ಟಣ ಸಿಕ್ಕಿರುವ ಸಾಧ್ಯತೆಯೂ ಇಲ್ಲ. ಯಾರೋ ಅದನ್ನು ಕಾರಿನಲ್ಲಿ ಇಟ್ಟಿರಬಹುದು’ ಎಂದು ಗೀತಾವಿಷ್ಣು ತಂದೆ ಶ್ರೀನಿವಾಸಮೂರ್ತಿ ಸಂಶಯವ್ಯಕ್ತಪಡಿಸಿದ್ದಾರೆ.

‘ಹಲ್ಲೆಗೊಳಗಾದ ಮಗನನ್ನು ಮೊದಲು ಸಮೀಪದ ರಾಮಕೃಷ್ಣ ನರ್ಸಿಂಗ್ ಹೋಂಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು. ಆ ನಂತರ ಮಲ್ಯ ಆಸ್ಪತ್ರೆಗೆ ಸ್ಥಳಾಂತರಿ ಸಲಾಯಿತು. ತಲೆ ಸುತ್ತು ಬರುತ್ತಿರುವುದಾಗಿ ಹೇಳಿದ್ದರಿಂದ ಹಾಗೂ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿದ್ದರಿಂದ ವೈದ್ಯರು ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡುತ್ತಿದ್ದರು. ಪೊಲೀಸರು ಬಂಧಿಸಬಹುದು ಎಂಬ ಭಯದಿಂದ ಮಗ ಹೊರಟು ಹೋಗಿದ್ದಾನೆ. ಆತನ ಆರೋಗ್ಯ ಹಾಗೂ ಭದ್ರತೆ ಬಗ್ಗೆ ನನಗೆ ಆತಂಕ ಕಾಡುತ್ತಿದೆ’ ಎಂದು ಹೇಳಿದ್ದಾರೆ.

‘ಅಪಘಾತ ನಡೆದಾಗ ಗೀತಾವಿಷ್ಣು ಕಾರಿನಲ್ಲಿ ಪ್ರಜ್ವಲ್ ಹಾಗೂ ದಿಗಂತ್ ಸಹ ಇದ್ದರು ಎಂದು ಕೆಲ ಸ್ಥಳೀಯರು ಹೇಳಿದ್ದರು. ಹೀಗಾಗಿ,
ಆ ನಟರ ಹೇಳಿಕೆ ಪಡೆಯಲು ನಿರ್ಧರಿಸಲಾಗಿದೆ. ಠಾಣೆಗೆ ಹಾಜರಾಗಿ ಹೇಳಿಕೆ
ನೀಡುವಂತೆ ಜಯನಗರ ಇನ್‌ಸ್ಪೆಕ್ಟರ್ ಉಮಾಮಹೇಶ್ ಅವರು ನಟರಿಬ್ಬರಿಗೂ ನೋಟಿಸ್ ಕಳುಹಿಸಿದ್ದಾರೆ’ ಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT