ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಿನ ಬೆಟ್ಟ ಕರಗುವುದು ಎಂದು?

Last Updated 2 ಅಕ್ಟೋಬರ್ 2017, 6:06 IST
ಅಕ್ಷರ ಗಾತ್ರ

ಚಾಮರಾಜನಗರ: ಕಲ್ಲಿನಿಂದ ಕೂಡಿದ್ದ ಬೆಟ್ಟವನ್ನು ಕಡಿದು ಗ್ರಾಮಕ್ಕೆ ದಾರಿ ನಿರ್ಮಿಸಿದ ಬಿಹಾರದ ದಶರಥ್‌ ಮಾಂಝಿ ಎಂಬಾತನ ಕಥೆ ಪ್ರಸಿದ್ಧವಾದುದು. ಆದರೆ ನಗರದಲ್ಲಿ ಅದಕ್ಕೆ ತದ್ವಿರುದ್ಧ ಕಥೆ. ಇಲ್ಲಿ ರಸ್ತೆಯನ್ನೇ ಅಗೆದು ಕಲ್ಲಿನ ಬೆಟ್ಟ ನಿರ್ಮಿಸಲಾಗಿದೆ.

ನಗರದ ರಾಮಸಮುದ್ರದಲ್ಲಿನ ಬಿ. ರಾಚಯ್ಯ ಜೋಡಿ ರಸ್ತೆಯ ಒಂದು ಬದಿಯನ್ನು ಈ ಬೃಹತ್‌ ಕಲ್ಲಿನ ರಾಶಿ ಮುಚ್ಚಿಹಾಕಿದೆ. ಈ ‘ಬೆಟ್ಟ’ ನಿರ್ಮಾಣವಾಗಿ ತಿಂಗಳು ಕಳೆದರೂ ಅಧಿಕಾರಿಗಳು ಅದನ್ನು ತೆರವುಗೊಳಿಸುವ ಗೋಜಿಗೆ ಹೋಗಿಲ್ಲ. ಯುಜಿಡಿ ಕಾಮಗಾರಿಯಿಂದಾಗಿ ಇಲ್ಲಿನ ಜನರು ಸುಮಾರು ಆರೇಳು ತಿಂಗಳಿನಿಂದ ನಿತ್ಯ ಅನುಭವಿಸುತ್ತಿರುವ ನರಕಯಾತನೆಗೆ ಮುಕ್ತಿಯೂ ಸಿಗುತ್ತಿಲ್ಲ.

ಒಳಚರಂಡಿ ನಿರ್ಮಾಣಕ್ಕಾಗಿ ಅಡ್ಡರಸ್ತೆಯನ್ನು ಅಗೆಯಲಾಗಿತ್ತು. ತಳಭಾಗದಲ್ಲಿ ಬೃಹತ್‌ ಬಂಡೆಗಲ್ಲು ಎದುರಾಗಿದ್ದರಿಂದ ಅದನ್ನು ಡೈಮಂಡ್‌ ಕಟರ್‌ ಬಳಸಿ ಹಂತಹಂತವಾಗಿ ಕತ್ತರಿಸಿ ತೆಗೆಯಲಾಗಿತ್ತು. ಈ ಪ್ರಕ್ರಿಯೆಯೇ ನಾಲ್ಕೈದು ತಿಂಗಳು ತೆಗೆದುಕೊಂಡಿತ್ತು. ಹೀಗೆ ತೆಗೆಯಲಾದ ಕಲ್ಲುಗಳನ್ನು ಜೋಡಿ ರಸ್ತೆಯ ಪಕ್ಕದಲ್ಲಿ ಸಾಲಾಗಿ ಪೇರಿಸಿಡಲಾಗಿತ್ತು. ಇದರಿಂದಾಗಿ ಅಡ್ಡರಸ್ತೆಗೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದರು. ಈಗ ಕಲ್ಲುಗಳನ್ನು ಅಲ್ಲಿಂದ ತೆರವುಗೊಳಿಸಿ ರಸ್ತೆ ಮಧ್ಯೆಯೇ ರಾಶಿ ಹಾಕಲಾಗಿದೆ.

ರಸ್ತೆಯೇ ಬಂದ್‌!: ಈ ಪ್ರದೇಶದಲ್ಲಿ ಬೇರೆ ಸ್ಥಳಾವಕಾಶ ಇಲ್ಲದೆ ಇರುವುದರಿಂದ ಕರಿನಂಜನಪುರಕ್ಕೆ ಸಂಪರ್ಕ ಕಲ್ಪಿಸುವ 1ನೇ ಅಡ್ಡರಸ್ತೆಯನ್ನೇ ಒಳಚರಂಡಿ ನಿರ್ಮಾಣಕ್ಕೆ ಬಳಸುವುದು ಅನಿವಾರ್ಯವಾಗಿತ್ತು. ಉತ್ತಮ ಸ್ಥಿತಿಯಲ್ಲಿದ್ದ ಡಾಂಬರ್‌ ರಸ್ತೆಯನ್ನು ಅಗೆದು ಕೊಳವೆ ಅಳವಡಿಸಲಾಗಿದೆ. ಈಗ ಅಲ್ಲಿ ಡಾಂಬರ್‌ ಇದ್ದ ಕುರುಹು ಕೂಡ ಇಲ್ಲ. ಮನಬಂದಂತೆ ಮಣ್ಣು ಮುಚ್ಚಿ ಬಿಡಲಾಗಿದೆ. ರಸ್ತೆ ಇದ್ದೂ ಓಡಾಡಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

‘ದೀನಬಂಧು ಶಾಲೆಗೆ ಈ ಮಾರ್ಗದಲ್ಲಿಯೇ ಮಕ್ಕಳು ಓಡಾಡಬೇಕು. ಕೆಸರು ಮತ್ತು ಕೊಳಚೆ ನೀರಿನಿಂದ ತುಂಬಿಕೊಂಡಿರುವ ರಸ್ತೆಯಲ್ಲಿ ಕೊಂಚ ಆಯ ತಪ್ಪಿದರೂ ಅಪಾಯಕ್ಕೀಡಾಗುವ ಸಾಧ್ಯತೆ ಇದೆ. ಇಲ್ಲಿ ವಾಹನ ಪ್ರವೇಶವಂತೂ ಅಸಾಧ್ಯ. ಬೇರೆ ಮಾರ್ಗದಿಂದ ಸುತ್ತಿಬಳಸಿ ಬರುವಂತಾಗಿದೆ. ಮಳೆಬಂದಾಗ ಮುಖ್ಯ ರಸ್ತೆಯ ಚರಂಡಿ ನೀರು ಉಕ್ಕಿ ಅಡ್ಡರಸ್ತೆಯ ಮೂಲಕ ಕೆಳಭಾಗದ ಮನೆಗಳಿಗೆ ನುಗ್ಗುತ್ತದೆ’ ಎಂದು ಸ್ಥಳೀಯ ಯುವಕ ರಮೇಶ್ ಎಂ. ಹೇಳಿದರು.

‘ಯುಜಿಡಿ ಕೆಲಸಕ್ಕೆ ಸಂಪೂರ್ಣ ಸಹಕಾರ ಕೊಟ್ಟಿದ್ದೇವೆ. ಕಾಮಗಾರಿ ಮುಗಿದ ಬಳಿಕ ವ್ಯವಸ್ಥೆ ಸರಿಪಡಿಸುವುದು ಅಧಿಕಾರಿಗಳ ಕರ್ತವ್ಯ. ಆದರೆ, ಇದುವರೆಗೂ ಒಬ್ಬ ಅಧಿಕಾರಿಯೂ ಇತ್ತ ತಲೆಹಾಕಿಲ್ಲ’ ಎಂದು ಅವರು ಆರೋಪಿಸಿದರು.

ಜೋಡಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿ ತಿಂಗಳು ಕಳೆದಿದೆ. ಅದು ಆರಂಭವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ವಾಹನ ಸವಾರರು ಡಿವೈಡರ್‌ ಮೇಲಿನಿಂದ ರಸ್ತೆಯ ಇನ್ನೊಂದು ಭಾಗಕ್ಕೆ ಹೋಗುವಂತಾಗಿದೆ. ಅದರ ಕಬ್ಬಿಣದ ಸರಳುಗಳು ಮೇಲೆದ್ದಿದ್ದು, ಎಚ್ಚರ ತಪ್ಪಿದರೆ ಅಪಘಾತಕ್ಕೆ ಎಡೆಮಾಡಿಕೊಡುವಂತಿದೆ. ಈಗಾಗಲೇ ಕೆಲವು ದ್ವಿಚಕ್ರ ವಾಹನ ಸವಾರರು ಆಯ ತಪ್ಪಿ ಬಿದ್ದಿದ್ದಾರೆ ಎನ್ನುತ್ತಾರೆ ನಿವಾಸಿಗಳು.

ಬಂಡೆ ಸೀಳಿ ಹೊರತೆಗೆದ ಕಲ್ಲುಗಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮೂಲಕ ಹರಾಜು ಹಾಕಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದರು. ಇದುವರೆಗೂ ಹರಾಜು ಪ್ರಕ್ರಿಯೆ ಆರಂಭವಾಗಿಲ್ಲ. ಕಡೇಪಕ್ಷ ಈ ಜಾಗದಿಂದ ಕಲ್ಲುಗಳನ್ನಾದರೂ ತೆರವುಗೊಳಿಸಿ ಎನ್ನುವುದು ಸ್ಥಳೀಯರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT