ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಅಧಿಕಾರಿಗಳ ವಾಕಥಾನ್‌

Last Updated 2 ಅಕ್ಟೋಬರ್ 2017, 7:20 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರೈಲ್ವೆ ಇಲಾಖೆಯು ದೇಶದಾದ್ಯಂತ ಹಮ್ಮಿಕೊಂಡಿರುವ ಸ್ವಚ್ಛತಾ ಅಭಿಯಾನದ ಅಂಗವಾಗಿ ನೈರುತ್ಯ ರೈಲ್ವೆಯ ಮುಖ್ಯ ಕಚೇರಿ ಇರುವ ರೈಲ್‌ ಸೌಧದಿಂದ ಸಿಮೆಂಟ್‌ ಚಾಳದವರೆಗೆ ವಾಕಥಾನ್‌ ನಡೆಯಿತು.

ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಶೋಕ ಕುಮಾರ್‌ ಗುಪ್ತಾ ನೇತೃತ್ವದಲ್ಲಿ ನಡೆದ ವಾಕಥಾನ್‌ ಜಾಗೃತಿ ನಡಿಗೆಯಲ್ಲಿ ರೈಲ್ವೆ ಅಧಿಕಾರಿಗಳು, ಸ್ಕೌಟ್ಸ್‌ ಮತ್ತು ಗೈಡ್ಸ್‌ ವಿದ್ಯಾರ್ಥಿಗಳು, ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿ ಗಮನ ಸೆಳೆದರು. ಸ್ವಚ್ಛತೆ ಕಾಪಾಡುವುದಕ್ಕೆ ಸಂಬಂಧಿಸಿದ ಫಲಕಗಳನ್ನು ದಾರಿಯುದ್ದಕ್ಕೂ ಪ್ರದರ್ಶಿಸಿದರು.

ಸೆಪ್ಟೆಂಬರ್‌ 15ರಂದು ಆರಂಭಗೊಂಡಿರುವ ಈ ಅಭಿಯಾನ ಅಕ್ಟೋಬರ್‌ 2ರವರೆಗೆ ಮುಂದುವರಿಯಲಿದೆ. ಈ ಸಂದರ್ಭದಲ್ಲಿ ಗುಪ್ತಾ ಅವರು ರೈಲ್ವೆ ಕಾಲೊನಿಗಳಲ್ಲಿ ಸ್ವಚ್ಛತೆಯನ್ನು ಪರಿಶೀಲಿಸಿ ಸಲಹೆ ಸೂಚನೆಗಳನ್ನು ನೀಡಿದರು.

ನಂತರ ಮಾತನಾಡಿದ ಗುಪ್ತಾ, ‘ಆಯ್ದ 47 ರೈಲುಗಳಲ್ಲಿ ಎಸ್‌ಎಂಎಸ್‌ ಆಧಾರಿತ ಕೋಚ್‌ ಮಿತ್ರ ಸೇವೆಯನ್ನು ಪರಿಚಯಿಸಲಾಗಿದೆ. 58888 ಸಂಖ್ಯೆಗೆ ಸಂದೇಶ ಕಳಿಸಿದರೆ ಸ್ವಚ್ಛತಾ ಸಿಬ್ಬಂದಿ ರೈಲುಗಳಿಗೆ ಬಂದು ಸ್ವಚ್ಛತಾ ಕಾರ್ಯ ಮಾಡಲಿದ್ದಾರೆ’ ಎಂದರು.

ವಲಯದ ಮೈಸೂರು, ಬೆಂಗಳೂರು ಹಾಗೂ ಹುಬ್ಬಳ್ಳಿ ವಿಭಾಗಗಳಲ್ಲಿ ಸಂಪೂರ್ಣ ರೈಲು ಸ್ವಚ್ಛತೆ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ. 3037 ರೈಲು ಬೋಗಿಗಳ ಪೈಕಿ 1478 ಬೋಗಿಗಳಲ್ಲಿ ಜೈವಿಕ ಶೌಚಾಲಯಗಳನ್ನು ಆಗಸ್ಟ್‌ 30ರ ವೇಳೆಗೆ ಅಳವಡಿಸಲಾಗಿದೆ.

460 ಬೋಗಿಗಳಿಗೆ ಈ ಆರ್ಥಿಕ ವರ್ಷದ ಅಂತ್ಯದ ಒಳಗಾಗಿ ಜೈವಿಕ ಶೌಚಾಲಯ ಅಳವಡಿಕೆಯಾಗಲಿದೆ. ಉಳಿದ 1099 ಬೋಗಿಗಳಿಗೆ 2018ರ ಡಿಸೆಂಬರ್‌ ವೇಳೆಗೆ ಜೈವಿಕ ಶೌಚಾಲಯ ಅಳವಡಿಸಲಾಗುವುದು’ ಎಂದರು.

ಈಗಾಗಲೇ ಹುಬ್ಬಳ್ಳಿ. ಮೈಸೂರು, ಬೆಂಗಳೂರಿನಲ್ಲಿ ಯಾಂತ್ರೀಕೃತ ಲಾಂಡ್ರಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಎರಡು ಟನ್‌ ಸಾಮರ್ಥ್ಯದ ಮತ್ತೊಂದು ಲಾಂಡ್ರಿಯನ್ನು ಗೋವಾದ ವಾಸ್ಕೊದಲ್ಲಿ ಅಳವಡಿಸಲಾಗುತ್ತಿದೆ ಎಂದು ಹೇಳಿದರು. ಅಲ್ಲದೇ, ಹುಬ್ಬಳ್ಳಿಯಲ್ಲಿ 50 ಸಾವಿರ ಲೀಟರ್‌ ಸಾಮರ್ಥ್ಯದ ನೀರು ಮರು ಬಳಕೆ ಘಟಕ ಅಳವಡಿಸಲಾಗುವುದು ಎಂದರು.

ರೈಲು ಕಲ್ಯಾಣ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಮೆಕಾನಿಕಲ್‌ ಎಂಜಿನಿಯರ್‌ ಪಿ.ಎ. ಲಾಮ್ಘರೆ, ಮುಖ್ಯ ಕಾರ್ಯಾಚರಣೆ ವ್ಯವಸ್ಥಾಪಕ ಜಿ.ಜೆ. ಪ್ರಸಾದ್‌, ವಿಭಾಗೀಯ ವ್ಯವಸ್ಥಾಪಕ ಅರುಣ್‌ ಕುಮಾರ್‌ ಜೈನ್‌, ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಆರ್‌.ಸಿ. ಪುನೇಟಾ, ಮುಖ್ಯ ಸಿಬ್ಬಂದಿ ವ್ಯವಸ್ಥಾಪಕ ಎಸ್‌.ಕೆ. ಅಲ್ಬೇಲಾ, ಮುಖ್ಯ ಎಲೆಕ್ಟ್ರಿಕಲ್‌ ಎಂಜಿನಿಯರ್‌ ರಾಜೀವ ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT