ಮಿಶ್ರ ಬೆಳೆ, ಸಮೃದ್ಧ ಇಳುವರಿ

ಶುಕ್ರವಾರ, ಮೇ 24, 2019
33 °C

ಮಿಶ್ರ ಬೆಳೆ, ಸಮೃದ್ಧ ಇಳುವರಿ

Published:
Updated:
ಮಿಶ್ರ ಬೆಳೆ, ಸಮೃದ್ಧ ಇಳುವರಿ

ಕುಕನೂರು: ಕಡಿಮೆ ಹೂಡಿಕೆ ಮತ್ತು ಹೆಚ್ಚು ಆದಾಯ ಪಡೆಯುವುದು ಕೃಷಿಯಲ್ಲಿ ಸಾಧ್ಯ ಎಂದು ಇಲ್ಲಿನ ಯುವಕ ವೀರೇಶ ಸೋಮನಗೌಡ್ರ ತೋರಿಸಿದ್ದಾರೆ.

ಕಡಿಮೆ ಕಾಲಾವಧಿ ಮತ್ತು ವೆಚ್ಚದಲ್ಲಿ ಹೆಚ್ಚಿನ ಇಳುವರಿ ಮಿಶ್ರ ಬೆಳೆ ಪದ್ಧತಿ ಅನುಸರಿಸುವ ಮೂಲಕ ಅವರು ಈ ಸಾಧನೆ ಮಾಡಿದ್ದಾರೆ.

ಸೋಮನಗೌಡ್ರ ಅವರು ವಿಮಾನ ನಿಲ್ದಾಣವೊಂದರಲ್ಲಿ ಹೋಟೆಲ್‌ ವ್ಯವಹಾರ ನಡೆಸುತ್ತಿದ್ದರು. ಅದೆಲ್ಲವನ್ನೂ ಬಿಟ್ಟು ಕೃಷಿ ಭೂಮಿಗೆ ಮರಳಿದ್ದಾರೆ. ಗಾವರಾಳ ರಸ್ತೆಯ ಹತ್ತಿರದ ತೋಟದಲ್ಲಿ ನಾಲ್ಕು ಎಕರೆ ಭೂಮಿಯನ್ನು ಮಿಶ್ರ ಬೆಳೆ ಬೆಳೆಯಲು ನಿರ್ಧರಿಸಿದರು. 'ಡಿಎಪಿ 1 ಕ್ವಿಂಟಲ್, ಪೋಟ್ಯಾಷ್‌ 50 ಕೆಜಿ, 1 ಕ್ವಿಂಟಲ್‌ ಬೇವಿನ ಹಿಂಡಿ, ಎಸ್‍ಎಪಿ 80 ಕೆಜಿ ಹಾಕಿ ಭೂಮಿ ಅಣಿ ಮಾಡಿದೆ.

ಹನಿ ನೀರಾವರಿ ಅಳವಡಿಸಿ ತೊಗರಿ, ಸೇವಂತಿಗೆ ಎರಡರ ಮಧ್ಯದಲ್ಲಿ ಮಾವು, ಚಿಕ್ಕು ಗಿಡ, ಬದುವಿನಲ್ಲಿ ತೆಂಗು ಹಾಗೂ ರೇಷ್ಮೆ ಬೆಳೆ ಮಾಡಿದ್ದೇನೆ. ನಾಲ್ಕು ಎಕರೆ ಪ್ರದೇಶದಲ್ಲಿ 4 ಮಿಶ್ರ ಬೆಳೆಯನ್ನು ಬೆಳೆದು ಕೇವಲ ಐದೂವರೆ ತಿಂಗಳಲ್ಲಿ 4 ಲಕ್ಷಕ್ಕೂ ಅಧಿಕ ಲಾಭ ಕೈಗೆ ಬಂದಿದೆ ಎಂದರು ಸೋಮನಗೌಡ್ರ.

'ಬೆಳೆಗಳಿಗೆ ಡ್ರಿಪ್ ಮೂಲಕ ನೀರು ಒದಗಿಸಲಾಗುತ್ತಿದೆ. ಸಸಿ ನೆಟ್ಟ 35ರಿಂದ 45 ದಿನಗಳವರೆಗೆ ಪ್ರತಿದಿನ ಒಂದೂವರೆ ತಾಸು, 45 ರಿಂದ 50ದಿನಗಳ ವರೆಗೆ 2ತಾಸು ನಂತರ 50 ರಿಂದ 55 ದಿನಗಳವರೆಗೆ 1 ತಾಸು ಹೀಗೆ ದಿನಕಳೆದಂತೆ ನೀರಿನ ಪ್ರಮಾಣ ಕಡಿಮೆ ಮಾಡುತ್ತಾ ಬಂದಿದ್ದೇವೆ. ಇದರಿಂದ ನೀರಿನ ಉಳಿತಾಯ ಮತ್ತು ಉತ್ತಮ ಇಳುವರಿ ಪಡೆಯಬಹುದು' ಎನ್ನುತ್ತಾರೆ ಅವರು.

ಸೇವಂತಿಗೆ ಸದ್ಯ ಮಾರುಕಟ್ಟೆಯಲ್ಲಿ 1ಕೆಜಿಗೆ  ₹ 50 ಬೆಲೆ ಇದೆ. ಎಕರೆಗೆ 1 ವಾರದಲ್ಲಿ 2 ಕ್ವಿಂಟಲ್‌ ಇಳುವರಿಯಿಂದ ₹ 10 ಸಾವಿರ ಆದಾಯ ಹಾಗೂ ರೇಷ್ಮೆ ಬೆಳೆಯಲ್ಲಿ ಮೂರು ತಿಂಗಳಿಗೊಮ್ಮೆ ₹ 50 ಸಾವಿರ ಆದಾಯ, 2 ಎಕರೆ ಮಿಶ್ರ ಬೆಳೆಯಲ್ಲಿ ತೊಗರಿ ಬೆಳೆಯಲ್ಲಿ ₹ 1 ಲಕ್ಷ ಆದಾಯ ಪಡೆಯಬಹುದು ಎನ್ನುತ್ತಾರೆ ಅವರು.

ಸದ್ಯ ರೇಷ್ಮೆ ಹಾಗೂ ಸೇವಂತಿಗೆ ಬೆಂಗಳೂರು, ಹುಬ್ಬಳ್ಳಿ, ಮುಂಬಯಿ ಉತ್ತಮ ಮಾರುಕಟ್ಟೆಗಳು. ದಲ್ಲಾಳಿಗಳು  ಇಲ್ಲಿಗೇ ಬಂದು ಒಯ್ಯುತ್ತಾರೆ ಎಂದರು ಸೋಮನಗೌಡ್ರ. ಮಾಹಿತಿಗೆ ಮೊ. 7406 4293 11.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry