ನಿತ್ಯ ನಿರಂತರ ಕೃಷಿ

ಬುಧವಾರ, ಜೂನ್ 19, 2019
28 °C

ನಿತ್ಯ ನಿರಂತರ ಕೃಷಿ

Published:
Updated:
ನಿತ್ಯ ನಿರಂತರ ಕೃಷಿ

ಮಹಿಳೆಯರು ಕೃಷಿಯಲ್ಲಿ ಯಶಸ್ವಿಯಾದ ಅನೇಕ ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ. ಅಂಥ ಉದಾಹರಣೆಯಲ್ಲಿ ದಾವಣಗೆರೆಯ ಆನಗೋಡು ಗ್ರಾಮದ ಮಂಜುಳಾ ಗಂಗಾಧರ ರಾಮಗೊಂಡನಹಳ್ಳಿ ಅವರೂ ಸೇರುತ್ತಾರೆ. ಕೃಷಿಯಲ್ಲಿ ನಿರಂತರವಾಗಿ ಆದಾಯ ಬರುವಂತೆ ತಮ್ಮ ಕೃಷಿ ತಾಕು ರೂಪಿಸಿಕೊಂಡಿದ್ದಾರೆ ಇವರು.

ವರ್ಷವಿಡೀ ಇವರ ಹೊಲದಲ್ಲಿ ಬೆಳೆಯಿರುತ್ತದೆ. ತರಕಾರಿ ಹಾಗೂ ಚೆಂಡು ಹೂವುಗಳು ಸದಾ ಲಭ್ಯ. ದಾವಣಗೆರೆ ಮಾರುಕಟ್ಟೆಗೆ ಹತ್ತಿರವೇ ಇವರ ಹೊಲವಿರುವುದರಿಂದ ದಿನವೂ ಕೃಷಿ ಫಸಲು ಮಾರಾಟಕ್ಕೆ ಸಿಗುವಂತೆ ಕೃಷಿ ತಾಕು ರೂಪಿಸಿಕೊಂಡಿದ್ದಾರೆ.

ಇವರದು ಮೂರು ಎಕರೆ ಜಮೀನು. ಬೆಳೆಯ ವೈವಿಧ್ಯಕ್ಕನುಸಾರವಾಗಿ ಕೃಷಿ ತಾಕು ವಿಭಾಗಿಸಿಕೊಂಡಿದ್ದಾರೆ. ಒಂದೂವರೆ ಎಕರೆ ತರಕಾರಿ ಬೆಳೆದಿದ್ದಾರೆ. ಅರ್ಧ ಎಕರೆಯಲ್ಲಿ ಚೆಂಡು ಹೂವು. ಒಂದು ಎಕರೆಯಲ್ಲಿ ಸೌತೆ ಕೃಷಿ. ಸೌತೆ ಸಸಿಗಳನ್ನು ಹತ್ತಿರದಲ್ಲಿಯೇ ಇರುವ ನರ್ಸರಿಯಿಂದ ಖರೀದಿಸಿ ತಂದಿದ್ದರು.

ಎರಡು ವರ್ಷಗಳಿಂದ ಸೌತೆ ಕೃಷಿ ಮಾಡುತ್ತಾ ಬಂದಿದ್ದಾರೆ. ಎಂಟು ಹಂತದಲ್ಲಿ ಕಾಯಿಗಳನ್ನು ಹರಿಯುತ್ತಾರೆ. ಪ್ರತೀ ಹಂತದಲ್ಲಿ 25-30 ಕ್ವಿಂಟಾಲ್‌ನಷ್ಟು ಇಳುವರಿ ಸಿಗುತ್ತದೆ. ಒಂದು ಕ್ವಿಂಟಾಲ್‌ಗೆ 400-500 ರೂಪಾಯಿ ದರ ಸಿಕ್ಕಿತ್ತು. ಗಿಡ ನೆಲಕ್ಕೆ ಹಬ್ಬದಂತೆ ಗೂಟದ ಸಹಾಯದಿಂದ ಮೇಲಕ್ಕೆ ಹಬ್ಬಿಸುತ್ತಾರೆ. ಶಿಸ್ತುಬದ್ಧವಾಗಿ ಮೇಲ್ಮುಖವಾಗಿ ಹಬ್ಬಿದ ಬಳ್ಳಿಗಳು ಉತ್ತಮ ಇಳುವರಿ ನೀಡಿದ್ದವು. ಸ್ಥಳ ಬದಲಾಯಿಸಿ ಪುನಃ ಒಂದೆಕರೆಯಲ್ಲಿ ಈ ಕೃಷಿ ಮುಂದುವರೆಸುತ್ತಾರೆ.

ಅರ್ಧ ಎಕರೆಯಲ್ಲಿನ ಹಳದಿ ಚೆಂಡು ಹೂವು ಕಣ್ಸೆಳೆಯುವ ಗಾತ್ರದಲ್ಲಿ ಬೆಳೆಯುವ ‘ಎಲ್ಲೋಡಾಲರ್’ ತಳಿಯ ಗಿಡಗಳಾಗಿದ್ದವು. 5000 ಸಸಿಗಳನ್ನು ನಾಟಿ ಮಾಡಿದ್ದರು. ಗಿಡ ಹಚ್ಚಿ ಮೂರು ತಿಂಗಳ ನಂತರ ಭರ್ತಿ ಇಳುವರಿ ನೀಡಿದ್ದವು. ಪ್ರತೀ ಕೊಯ್ಲಿಗೆ ಒಂದು ಕ್ವಿಂಟಾಲ್ ಹೂ ಸಿಕ್ಕಿದ್ದವು.

ಕಳೆದ ಬಾರಿ ತರಕಾರಿ ಮಾಡಿದ್ದ ಒಂದು ಎಕರೆ ಕೃಷಿ ಭೂಮಿಯಲ್ಲಿ ಚೆಂಡು ಹೂವು ನಾಟಿ ಮಾಡಿದ್ದರು. ಶ್ರಾವಣಮಾಸ, ಗಣೇಶಚತುರ್ಥಿ ಸಮಯಕ್ಕೆ ಕೊಯ್ಲಿಗೆ ಯತೇಚ್ಛ ಇಳುವರಿ ಸಿಗುವಂತೆ ನಾಟಿ ಮಾಡಿದ್ದರು. ಕೊಯ್ಲಿನ ನಂತರ ಚೆಂಡು ಹೂವು ಬೆಳೆದ ಸ್ಥಳದಲ್ಲಿ ತರಕಾರಿ ಊರುತ್ತಾರೆ. ಬದನೆ, ಮೆಣಸು, ಟೊಮೆಟೊ, ಬೆಂಡೆ ಕೃಷಿಗಳು ನಿತ್ಯ ಕೊಯ್ಲಿಗೆ ಜೊತೆಯಾಗುತ್ತವೆ.

ಚೆಂಡು ಹೂವು ಗಿಡಗಳನ್ನು ಬೆಳೆದಿರುವ ಒಂದು ಎಕರೆಯಲ್ಲಿ ನುಗ್ಗೆ ನಾಟಿ ಮಾಡಿದ್ದರು. ಕಳೆದ ಸಾಲಿನಲ್ಲಿ ನುಗ್ಗೆಯಿಂದ 10,000 ಆದಾಯ ಗಳಿಸಿದ್ದನ್ನು ನೆನಪಿಸಿಕೊಳ್ಳುತ್ತಾರೆ ಅವರು.

ಕಳೆದ ವರ್ಷ ಮೂರು ಎಕರೆ ಜಮೀನಿಗೂ ಅಡಿಕೆ ಗಿಡಗಳನ್ನು ನಾಟಿ ಮಾಡಿದ್ದಾರೆ. 2000 ಗಿಡಗಳಿದ್ದು ತಾವೇ ಸ್ವತಃ ಗಿಡಗಳನ್ನು ತಯಾರಿಸಿಕೊಂಡಿದ್ದಾರೆ. ಅಡಿಕೆ ನಡುವೆ ಅಂತರ ಬೇಸಾಯದ ಬುದ್ಧಿವಂತಿಕೆ ರೂಢಿಸಿಕೊಂಡಿದ್ದಾರೆ. ಜಮೀನನ್ನು ಎರಡು ವಿಭಾಗಗಳಾಗಿ ವಿಂಗಡಿಸಿಕೊಂಡಿದ್ದು, ಅರ್ಧ ಭಾಗ ಹೂವಿನ ಕೃಷಿ, ಅರ್ಧ ಭಾಗ ತರಕಾರಿ ಕೃಷಿಯಿರುತ್ತದೆ.

ಹೂ ಕೊಯ್ಲಿನ ನಂತರ ಹೂ ಬೆಳೆದ ಸ್ಥಳದಲ್ಲಿ ತರಕಾರಿಗೆ ಸ್ಥಾನ. ತರಕಾರಿ ಕೊಯ್ಲಿನ ನಂತರ ಇವು ಬೆಳೆದ ಜಾಗದಲ್ಲಿ ಹೂವಿನ ನಾಟಿ. ಸ್ಥಳ ಬದಲಾವಣೆಯ ಹೊಂದಾಣಿಕೆ ಇವರಲ್ಲಿ ಕರಗತವಾದ ಕೃಷಿ ಕೌಶಲ. ಎಂಟು ಅಡಿಗೆ ಒಂದರಂತೆ ನಾಟಿ ಮಾಡಿರುವ ನುಗ್ಗೆಯದು ಕಾಯಂ ಸ್ಥಾನ. ಬದುವಿನಲ್ಲಿ ಅಲ್ಲಲ್ಲಿ ತೆಂಗು, ಮಾವು ಗಿಡಗಳನ್ನು ನಾಟಿ ಮಾಡಿದ್ದಾರೆ.

ಮಾರುಕಟ್ಟೆಯಲ್ಲಿ ಅಗತ್ಯವಿರುವ ಕೃಷಿ ಉತ್ಪನ್ನಗಳ ಬೇಡಿಕೆಗೆ ಅನುಗುಣವಾಗಿ ಕೃಷಿಯಲ್ಲಿ ವೈವಿಧ್ಯ ಅಳವಡಿಕೆ ಮಾಡಿಕೊಂಡಿರುವ ಇವರ ಕೃಷಿ ಬೆಳೆಗಳ ಹೊಂದಾಣಿಕೆಯ ರೀತಿ ಉತ್ತಮ ಬೆಳೆ ಹಾಗೂ ಉತ್ತಮ ಆದಾಯ ಪಡೆದುಕೊಳ್ಳಲು ಸಹಕರಿಸಿದೆ.  ಇವರನ್ನು ಸಂಪರ್ಕಿಸಲು: 9620383959.

ಜೈವಂತ ಪಟಗಾರ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry