ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರಿಶಿಷ್ಟರಿಗೆ ಕಾಂಗ್ರೆಸ್‌ ದ್ರೋಹ’

Last Updated 3 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪರಿಶಿಷ್ಟ ಸಮುದಾಯದವರಿಗೆ ದ್ರೋಹ ಎಸಗುತ್ತಲೇ ಬಂದಿರುವ ಕಾಂಗ್ರೆಸ್‌ ಪಕ್ಷಕ್ಕೆ, ಅವರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಪಕ್ಷದ ಕಚೇರಿಯಲ್ಲಿ ಮಂಗಳವಾರ ನಡೆದ ಪರಿಶಿಷ್ಟ ಜಾತಿ ಮೋರ್ಚಾದ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದ ಅವರು, ‘ಪರಿಶಿಷ್ಟ ಜಾತಿ, ಪಂಗಡದ ಕಲ್ಯಾಣಕ್ಕಾಗಿ ಅಪಾರ ಕೊಡುಗೆ ನೀಡಿದ್ದೇವೆ ಎಂದು ಕೆಲವರು ದೊಡ್ಡ ಧ್ವನಿಯಲ್ಲಿ ಪ್ರತಿಪಾದಿಸುತ್ತಿ ದ್ದಾರೆ. ಈ ಸಮುದಾಯಕ್ಕೆ ಕಾಂಗ್ರೆಸ್‌ ಮಾಡಿದಷ್ಟು ಅನ್ಯಾಯವನ್ನು ಬೇರೆ ಯಾವ ಪಕ್ಷದವರೂ ಮಾಡಿಲ್ಲ’ ಎಂದು ಟೀಕಿಸಿದರು.

ಡಾ.ಬಿ.ಆರ್. ಅಂಬೇಡ್ಕರ್ ಅವರು ಲೋಕಸಭೆಗೆ ಸ್ಪರ್ಧಿಸಿದಾಗ ಅವರನ್ನು ಸೋಲಿಸಿದ್ದು ಕಾಂಗ್ರೆಸ್‌ ಪಕ್ಷ. ಜಗಜೀವನರಾಂ ಅವರಿಗೆ ಪ್ರಧಾನಿಯಾಗುವ ಎಲ್ಲ ಅರ್ಹತೆಯಿತ್ತು. ನೆಹರು ಕುಟುಂಬಕ್ಕೆ ಅವಕಾಶ ಕೈತಪ್ಪಿ ಹೋಗುತ್ತದೆ ಎಂಬ ಕಾರಣಕ್ಕೆ ಜಗಜೀವನರಾಂಗೆ ಅಂತಹ ಅವಕಾಶ ತಪ್ಪಿಸಲಾಯಿತು. ಪರಿಶಿಷ್ಟ ಸಮುದಾಯಕ್ಕೆ ಸೇರಿದವರು ಕಾಂಗ್ರೆಸ್ ಜತೆಗೆ ಗುರುತಿಸಿಕೊಳ್ಳಬಾರದು ಎಂದರು.

‘36 ವಿಧಾನಸಭೆ ಕ್ಷೇತ್ರಗಳು ಪರಿಶಿಷ್ಟ ಜಾತಿಯವರಿಗೆ ಮೀಸಲಾಗಿವೆ. ಈ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸಲು ಈಗಿನಿಂದಲೇ ಪರಿಶಿಷ್ಟ ಜಾತಿ ಮೋರ್ಚಾದವರು ಸಜ್ಜಾಗಬೇಕು ಎಂದರು.

ಪಕ್ಷ ಅಧಿಕಾರದಲ್ಲಿದ್ದಾಗ ಪರಿಶಿಷ್ಟ ಜಾತಿಯವರ ಅಭಿವೃದ್ಧಿಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಾಂಗ್ರೆಸ್ ಸರ್ಕಾರ ಈ ಸಮುದಾಯಕ್ಕೆ ಮೀಸಲಿರುವ ಅನುದಾನದಲ್ಲಿ ಶೇ 40ರಷ್ಟನ್ನು ಖರ್ಚು ಮಾಡಿಲ್ಲ ಎಂದು ಅವರು ದೂರಿದರು.

ರೈ ವಿವೇಚನೆ ಇಲ್ಲದ ನಟ: (ಮೈಸೂರು ವರದಿ): ‘ಗೌರಿ ಲಂಕೇಶ್‌ ಹತ್ಯೆಗೂ ಪ್ರಧಾನಿ ಮೋದಿ ಅವರಿಗೂ ಏನು ಸಂಬಂಧ? ಮೋದಿ ಅವರು ದೇಶದ ಏಳಿಗೆಗಾಗಿ ಒಂದು ದಿನವೂ ರಜೆ ಪಡೆಯದೆ ಕಾರ್ಯನಿರ್ವಹಿಸುತ್ತಿದ್ದಾರೆ. ಅಂಥವರ ಬಗ್ಗೆ ನಟ ಪ್ರಕಾಶ್‌ ರೈ ಅಸಂಬದ್ಧ ಹೇಳಿಕೆ ನೀಡಿದ್ದಾರೆ’ ಎಂದು ಸಂಸದ ಪ್ರತಾಪಸಿಂಹ ಆಕ್ರೋಶ ವ್ಯಕ್ತಪಡಿಸಿದರು.

* ಪ್ರಬುದ್ಧ ನಟರಾಗಿರುವ ಪ್ರಕಾಶ್ ರಾಜ್ ಮೋದಿ ಅವರನ್ನು ಟೀಕಿಸಿರುವುದು ಖಂಡನೀಯ. ಇಂತಹ ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ

  – ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT