ಸೋಮವಾರ, ಸೆಪ್ಟೆಂಬರ್ 16, 2019
26 °C

ಕತ್ತೆ ಹಾಲಿಗೂ ಬಂತು ಭಾರಿ ಬೇಡಿಕೆ: 1 ಲೀಟರ್ ಹಾಲಿಗೆ ₹1000!

Published:
Updated:
ಕತ್ತೆ ಹಾಲಿಗೂ ಬಂತು ಭಾರಿ ಬೇಡಿಕೆ: 1 ಲೀಟರ್ ಹಾಲಿಗೆ ₹1000!

ಅಮರಾವತಿ (ಆಂಧ್ರ): ಜನ ಮರುಳೊ, ಜಾತ್ರೆ ಮರುಳೊ ಎನ್ನುವಂತೆ ಆಂಧ್ರಪ್ರದೇಶದ ಅಮರಾವತಿಯ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಕತ್ತೆ ಹಾಲಿಗೆ ಭಾರಿ ಬೇಡಿಕೆ ಇದ್ದು 1ಲೀಟರ್ ಕತ್ತೆ ಹಾಲನ್ನು 1 ಸಾವಿರ ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.

ಕತ್ತೆ ಹಾಲಿನಲ್ಲಿ ಸಾಕಷ್ಟು ಪೋಷಕಾಂಶಗಳು ಮತ್ತು ಔಷಧೀಯ ಗುಣಗಳಿವೆ ಎಂಬ ಕಾರಣಕ್ಕೆ ಗ್ರಾಮೀಣ ಬಾಗದ ಜನರು ಕತ್ತೆ ಹಾಲನ್ನು ಖರೀದಿಸಿ ಕುಡಿಯುತ್ತಿದ್ದಾರೆ. 50 ಮಿ.ಲೀಟರ್ ಹಾಲಿಗೆ 50 ರೂಪಾಯಿ ಬೆಲೆ ಇದೆ ಎಂದು ಸ್ಥಳೀಯರು ಹೇಳುತ್ತಾರೆ.

ತೆಲಂಗಾಣ ಮತ್ತು ಆಂಧ್ರದಲ್ಲಿ ನೆಲೆಸಿರುವ ವಡ್ಡಿರಾಜಲು ಸಮುದಾಯದವರು ಕತ್ತೆ ಹಾಲನ್ನು ಮಾರಾಟ ಮಾಡುತ್ತಿದ್ದಾರೆ. ಉಪಜೀವನಕ್ಕಾಗಿ ಕತ್ತೆಗಳನ್ನು ಸಾಕುವ ಇವರು ಊರೂರಿಗೆ ತೆರಳಿ ಕತ್ತೆ ಹಾಲನ್ನು ಮಾರುತ್ತಾರೆ.

ಕತ್ತೆ ಹಾಲು ಕುಡಿದರೆ, ಕೆಮ್ಮು, ಉಬ್ಬಸ, ಸೊಂಟ ನೋವು, ಮಂಡಿ ನೋವು, ಬೆನ್ನು ನೋವು ನಿವಾರಣೆಯಾಗುತ್ತದೆ ಎಂದು ಅಮರಾವತಿ ಸುತ್ತ ಮುತ್ತಲಿನ ಗ್ರಾಮಸ್ಥರ ನಂಬಿಕೆಯಾಗಿದೆ. ಆದ್ದರಿಂದ ಈ ಭಾಗದಲ್ಲಿ ಕತ್ತೆ ಹಾಲಿಗೆ ಭಾರಿ ಬೇಡಿಕೆ ಇದೆ ಎನ್ನುತ್ತಾರೆ ಸ್ಥಳೀಯರು.

ದಿನವೊಂದಕ್ಕೆ ಒಂದು ಕತ್ತೆ  ಕಾಲು ಲೀಟರ್ ಹಾಲನ್ನು ಮಾತ್ರ ನೀಡಬಲ್ಲದು. ಮರಿ ಹಾಕಿದ ದಿನದಿಂದ 8 ತಿಂಗಳ ವರೆಗೂ ಕತ್ತೆ ಹಾಲನ್ನು ಕೊಡುತ್ತದೆ. ಈ ಹಾಲನ್ನು ಮಾರಾಟ ಮಾಡಿ ಜೀವನ ನಡೆಸಲಾಗುತ್ತದೆ ಎಂದು ವಡ್ಡಿರಾಜಲು ಸಮುದಾಯದವರು ಹೇಳುತ್ತಾರೆ ಎಂದು ತೆಲುಗಿನ ಸುದ್ದಿವಾಹಿನಿಗಳು ವರದಿ ಮಾಡಿವೆ.

Post Comments (+)