ವಿಕಾಸ ಮತ್ತು ಸ್ತಬ್ಧತೆ (ಬಸ್ತ್ ವ ಖ್ವಬ್ದ್)

ಮಂಗಳವಾರ, ಜೂನ್ 18, 2019
26 °C

ವಿಕಾಸ ಮತ್ತು ಸ್ತಬ್ಧತೆ (ಬಸ್ತ್ ವ ಖ್ವಬ್ದ್)

Published:
Updated:

ಅಧ್ಯಾತ್ಮಿಯೊಬ್ಬ ಸೂಫಿ ಪಥದಲ್ಲಿ ತನ್ನ ಗುರಿಯನ್ನು ತಲಪಿದ ಬಳಿಕ ಅವನಿಗೆ ಭಯ ಮತ್ತು ನಿರೀಕ್ಷೆಯ ಹಂತದ ಅಗತ್ಯವಿರುವುದಿಲ್ಲ. ಮೌಲಾನ ಜಲಾಲುದ್ದೀನ್ ರೂಮಿ ಈ ಹಂತದ ಬಗ್ಗೆ ಹೀಗೆ ಹೇಳುತ್ತಾರೆ: ಹಡಗಿನ ಕಾರ್ಯನಿರತ ನಾವಿಕನೊಬ್ಬ ಸಮುದ್ರ ಪ್ರಯಾಣದಲ್ಲಿ ಸದಾಕಾಲ ಭಯ ಮತ್ತು ಒಳ್ಳೆಯ ನಿರೀಕ್ಷೆಯ ಉದ್ದೇಶದ ಹಿಡಿತದಲ್ಲಿರುತ್ತಾನೆ. ವ್ಯಕ್ತಿ ಮತ್ತು ಉದ್ದೇಶ ನಿರ್ನಾಮವಾದಾಗ ಅಲ್ಲಿ ಉಳಿಯುವುದು ನಿಮಜ್ಜನ(ಮುಳುಗಡೆ) ಮಾತ್ರ(ರೂಮಿಯವರ ‘ದಿವಾನೆ ಕಬೀರ್ ಯಾ ಕುಲ್ಲಿಯತ್’ ಎಂಬ ಕೃತಿಯಿಂದ).

ಭಯ ಮತ್ತು ನಿರೀಕ್ಷೆಯು ಒಂದು ಹಂತದಲ್ಲಿ ಹೊಂದಿಕೆಯಾಗುವ ಸ್ಥಿತಿಯನ್ನು ‘ವಿಕಾಸ ಹೊಂದುತ್ತ ಹೋದಂತೆ ವಿಶಾಲವಾಗುವ ಪ್ರಕ್ರಿಯೆ(ಬಸ್ತ್)’ ಎನ್ನಲಾಗುತ್ತದೆ. ಇದಕ್ಕೆ ಸೂಫಿ ವಲಯದಲ್ಲಿ ಉತ್ಸಾಹಪೂರ್ಣ ಭಾವನೆಯ ವಿಸ್ತರಣ ಎಂಬ ಅರ್ಥವನ್ನು ಕೊಡುತ್ತಾರೆ. ಇದನ್ನು ಪರಿಪೂರ್ಣ ಆನಂದ ಮತ್ತು ಕೆಲವೊಂದು ಸಂದರ್ಭದಲ್ಲಿ ಸುಲಭವಾಗಿ ಅಭಿವೃದ್ಧಿ ಹೊಂದುವ ‘ವಿಶ್ವ ಚೇತನ’ ಎಂದು ಮುಖ್ಯವಾಗಿ ಇರಾನ್ ಹಾಗೂ ಟರ್ಕಿಯ ಸೂಫಿ ಉನ್ಮತ್ತ ಕವಿಗಳು ತಮ್ಮ ಪದ್ಯ, ಕಾವ್ಯಗಳಲ್ಲಿ ವ್ಯಕ್ತಪಡಿಸುತ್ತಿದ್ದರು.ಇಂತಹ ಪದ್ಯಗಳು ನೀಳವಾದ ಪಂಕ್ತಿಗಳಲ್ಲಿ ಮತ್ತೆ ಮತ್ತೆ ಪುನರಾವರ್ತನೆಗೊಳ್ಳುವ ಅಧ್ಯಾತ್ಮ ಪ್ರೇಮ ಯಾ ದೈವೀ ಪ್ರೇಮದಲ್ಲಿ ದೇವರ ಅದ್ವಿತೀಯ ಸೌಂದರ್ಯದ ಅಲಂಕಾರಿಕ ಶಬ್ಧ ರಚನೆಗಳ ಮೂಲಕ ವಿವರಿಸಲು ಪ್ರಯತ್ನಿಸಲಾಗುತ್ತದೆ. ವರ್ಣನೆಗೆ ನಿಲುಕಲಾಗದ ಅವನ ಹೊಳಪು ಮಿಂಚುವ ವೈಭವದ ವಿವರಣೆಗಳ ಮೂಲಕ ಎಲ್ಲ ಸಮಸ್ತ ಜನರಿಗೆ ತಿಳಿಸುವ ಇದರ ಹಿಂದಿನ ಉದ್ದೇಶವಿರುತ್ತದೆ. ಬದಲಾದ ಆಧುನಿಕ ವಿಶ್ವದ ಅಮಿತಾನಂದದ ಕ್ಷಣಗಳನ್ನು ಇತರರಿಗೆ ತಿಳಿಸ ಬೇಕು ಎಂಬ ಗುರಿಯೂ ಒಳಗೊಂಡಿರುತ್ತದೆ. ಈ ಅಮಿತಾನಂದದ ಕ್ಷಣದ ಮೂಲಕ ಜಗತ್ತನ್ನು ಬದಲಾದ ವಿಶಿಷ್ಟ ಬೆಳಕಿನಲ್ಲಿ, ಪಾರದರ್ಶಕವಾಗಿ ಹಾಗು ಉಜ್ವಲ ವರ್ಣಗಳೊಂದಿಗೆ ಪ್ರತಿಫಲಿಸುವ ಹಲವಾರು ಬಣ್ಣಗಳ ಮೋಹಕ ಸೌಂದರ್ಯವನ್ನು ಕಾಣಬಹುದಾಗಿದೆ. ಇದನ್ನು ಹಜ್ರತ್ ಫರೀದುದ್ದೀನ್ ಅತ್ತಾರ್ ತನ್ನ ‘ಮುಸೀಬತ್ ನಾಮ’ ಎಂಬ ಕೃತಿಯಲ್ಲಿ ‘ಬಸ್ತ್ ಅಂದರೇನು? ತನ್ನನ್ನೇ ತಾನು ನೂರು ಹೊಸ ಜಗತ್ತುಗಳಿಗೆ ಅಣಿಗೊಳಿಸಿ ಒಂದೇ ಪೆಟ್ಟಿಗೆ ಎರಡೂ ಜಗತ್ತನ್ನು(ಲೌಕಿಕ ಮತ್ತು ಪಾರಮಾರ್ಥಿಕ) ತೊರೆಯುವುದಾಗಿದೆ ಎನ್ನುತ್ತಾರೆ.

‘ಬಸ್ತ್’ ಎಂಬುದು ವಿಕಾಸದ ಅನುಭವವಾದರೆ ‘ಖ್ವಬ್ದ್’ ಎಂಬುದು ಸ್ವಂತಿಕೆಯನ್ನು ಸೂಜಿಯೊಂದರ ತೂತಿನೊಳಗೆ ತೂರಿಸಿ ವಾಸಿಸಲು ದೇಹಾತ್ಮವನ್ನು ಕುಗ್ಗಿಸುವ ಪ್ರಕ್ರಿಯೆಯಾಗಿದೆ. ಇದನ್ನು ಸೂಫಿ ಅಧ್ಯಾತ್ಮಿಯೊಬ್ಬ ಏಕಾಂತದ ಕಗ್ಗತ್ತಲೊಳಗೆ ಒತ್ತಡದಿಂದ ತನ್ನ ಬದುಕಿನ ಹಲವು ದಿನಗಳು ಯಾ ತಿಂಗಳುಗಟ್ಟಲೆಯ ಕಾಲವನ್ನು ಕಳೆಯುವುದು ಎಂದು ಪರಿಗಣಿಸಲಾಗಿದೆ. ಸಂತ ಷೇಖ್ ಜುನೈದ್ ಬಗ್ದಾದಿಯಂತಹ ಶ್ರೇಷ್ಠ ಮಟ್ಟದ ಸೂಫಿ ಸಂತರ ಹೇಳಿಕೆಯಂತೆ ಅವನು ನನ್ನನ್ನು ಭಯಪಡಿಸುವ ಮೂಲಕ ಒತ್ತಡವನ್ನು ಹೇರಿ ನನ್ನಿಂದ ನಾನು ಅದೃಶ್ಯವಾಗುವಂತೆ ಮಾಡುತ್ತಾನೆ. ಆದರೆ ನಿರೀಕ್ಷೆಯ ಮೂಲಕ ವಿಕಾಸಗೊಳಿಸುವಾಗ ಮತ್ತೆ ನನ್ನನ್ನು ಪ್ರಕಟಗೊಳಿಸುತ್ತಾನೆ. ‘ಖ್ವಬ್ದ್’ ಅಥವಾ ಸ್ಥಬ್ಧತೆಯಲ್ಲಿ ‘ನಾನು’ ಎಂಬುದು ಮಾಯವಾಗುತ್ತದೆ. ಇದು ‘ಬಸ್ತ್’ನಿಂದ ವಿಕಸನಗೊಂಡ ಸ್ವಪ್ರಜ್ಞೆಗಿಂತ ಉತ್ತಮವೆಂದು ಪರಿಗಣಿಸಲಾಗುತ್ತದೆ. ಇದನ್ನು ಆತ್ಮದ ಕಗ್ಗತ್ತಲು ಎಂದೂ ಕರೆಯಲಾಗುತ್ತದೆ. ಇದರಲ್ಲಿ ಮನುಷ್ಯನು ತನ್ನ ಅಸ್ತಿತ್ವದ ಕುರುಹೇ ಇಲ್ಲದಂತೆ, ಮನುಷ್ಯ ಸ್ವಭಾವದ ಏನೊಂದೂ ಬೇಡಿಕೆ ಆಸೆ ಆಕಾಂಕ್ಷೆಗಳೂ ಇಲ್ಲದೆ ಸಂಪೂರ್ಣವಾಗಿ ದೇವರನ್ನು ಸೇರಿಕೊಳ್ಳುತ್ತಾನೆ! ಇಂತಹ ಕಗ್ಗತ್ತಲೊಳಗಿನಿಂದ ಆತ್ಮಗಳ ದಿವ್ಯಮಿಲನದ ಅನುಭವ ಅಥವಾ ದರ್ಶನ ತ್ವರಿತವಾಗಿ ಮಧ್ಯರಾತ್ರಿಯಲ್ಲಿ ಸೂರ್ಯದರ್ಶನವಾದಂತೆ ಅನುಭವವಾಗಬಹುದು!

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry