ಒಂದು ನಿಮಿಷ ತಡೆದು ಜೀವನ ಬದಲಿಸಿಕೊಳ್ಳಿ

ಮಂಗಳವಾರ, ಜೂನ್ 18, 2019
24 °C
ಹಿರಿಯರ ಮಾರ್ಗದರ್ಶನ ಪಡೆಯಿರಿ: ಸಿವಿಲ್ ನ್ಯಾಯಾಧೀಶೆ ಲತಾ ಸಲಹೆ

ಒಂದು ನಿಮಿಷ ತಡೆದು ಜೀವನ ಬದಲಿಸಿಕೊಳ್ಳಿ

Published:
Updated:
ಒಂದು ನಿಮಿಷ ತಡೆದು ಜೀವನ ಬದಲಿಸಿಕೊಳ್ಳಿ

ಉಡುಪಿ: ವಿಭಕ್ತ ಕುಟುಂಬಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಅಧಿಕವಾಗುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಲತಾ ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಡುಪಿ ಕಾನೂನು ಸೇವಾ ಪ್ರಾಧಿಕಾರ ಹಾಗೂ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ನಗರದಲ್ಲಿ ಬುಧವಾರ ಏರ್ಪಡಿಸಿದ್ದ ‘ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಹಾಗೂ ‘ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜೀವನದಲ್ಲಿ ಪೂರ್ವಾಪರ ಆಲೋಚನೆ, ಸರಿಯಾದ ನಿರ್ಧಾರ, ಸರಿ ತಪ್ಪುಗಳ ವಿಮರ್ಶೆ ಮಾಡುವ ಗುಣ ಹಾಗೂ ಶಿಸ್ತು ಅಳವಡಿಸಿಕೊಳ್ಳುವ ಮೂಲಕ ಯಶಸ್ಸು ಕಾಣಬಹುದು. ಯುವ ಜನತೆ ಗುರು– ಹಿರಿಯರ ಅನುಭವಗಳ ಮಾರ್ಗದರ್ಶನ ಪಡೆದು ಮುನ್ನಡೆಯಬೇಕು. ಸಾಮಾಜಿಕ ಮಾಧ್ಯಮಗಳ ಬಳಕೆಗಿಂತ ಸಾಹಿತ್ಯ ಓದಬೇಕು. ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಸಂಪನ್ಮೂಲ ವ್ಯಕ್ತಿ, ಮನೋರೋಗ ತಜ್ಞ ಡಾ, ಮಾನಸ್ ಮಾತನಾಡಿ, ನಿಮ್ಹಾನ್ಸ್‌ ವರದಿ ಪ್ರಕಾರ ದೇಶದ ಜನರಲ್ಲಿ ಶೇ13.7ರಷ್ಟು ಮಂದಿ ಒಂದಲ್ಲ ಒಂದು ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ ಭಾರತದಲ್ಲಿ 5 ಕೋಟಿ ಜನ ಖಿನ್ನತೆಯಿಂದ ಬಳಲುತ್ತಿದ್ದಾರೆ. ದೇಶದಲ್ಲಿ ಪ್ರತಿ 40 ನಿಮಿಷಕ್ಕೆ ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಎಂದರು.

2015–16ರಲ್ಲಿ ದೇಶದಲ್ಲಿ ಒಟ್ಟು 1,32,000 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಭಾರತದ ಈಶಾನ್ಯ ಮತ್ತು ದಕ್ಷಿಣ ಭಾಗದಲ್ಲಿ ಆತ್ಮಹತ್ಯೆ ಪ್ರಮಾಣ ಅಧಿಕವಾಗಿದ್ದು, ಕರ್ನಾಟಕದಲ್ಲಿ ಪ್ರತಿ 1 ಲಕ್ಷ ಜನರಿಗೆ 17–18 ಮಂದಿ ಪ್ರತಿ ವರ್ಷ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

‘ಒಂದು ನಿಮಿಷ ತಡೆದು ಜೀವನ ಬದಲಿಸಿಕೊಳ್ಳಿ’ ಎಂಬುದು ಈ ಬಾರಿಯ ಆತ್ಮಹತ್ಯೆ ತಡೆ ದಿನಾಚರಣೆಯ ಧ್ಯೇಯ ವಾಕ್ಯವಾಗಿದೆ. ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸುವ ವ್ಯಕ್ತಿಗಳು ತಮ್ಮ ಆತ್ಮೀಯರೊಂದಿಗೆ, ಕುಟುಂಬದ ಸದಸ್ಯರೊಂದಿಗೆ, ಸ್ನೇಹಿತರೊಂದಿಗೆ ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಿ. ಯಾರೂ ಇಲ್ಲವಾದಲ್ಲಿ ಅರೋಗ್ಯ ಇಲಾಖೆಯ ಉಚಿತ ಸಹಾಯವಾಣಿ ಸಂಖ್ಯೆ 104ಗೆ ಕರೆ ಮಾಡಿ ಆಪ್ತ ಸಲಹೆ ಪಡೆಯಿರಿ. ಖಿನ್ನತೆಗೆ ಒಳಗಾದವರನ್ನು ಸಮೀಪದ ಆಪ್ತ ಸಮಾಲೋಚನ ಕೇಂದ್ರಗಳಿಗೆ ಅಥವಾ ಮನಃಶಾಸ್ತ್ರಜ್ಞರ ಬಳಿಗೆ ಕರೆದೊಯ್ಯಿರಿ ಎಂದು ಹೇಳಿದರು.

ಜೀವನದಲ್ಲಿ ಯಾವುದೇ ಸಮಸ್ಯೆ ಬಂದರೂ ಎದುರಿಸುವ ದೃಢ ಮನಸ್ಸು ಇದ್ದಾಗ ಆತ್ಮಹತ್ಯೆಯಂತಹ ಕೆಟ್ಟ ಯೋಚನೆ ಬರುವುದಿಲ್ಲ. ಸಮಸ್ಯೆಗಳಿಂದಾಗಿ ಖಿನ್ನತೆ ಆವರಿಸಿದಾಗ, ಮಾನಸಿಕ ಆರೋಗ್ಯ ಹದಗೆಟ್ಟ ಸಂದರ್ಭದಲ್ಲಿ ಆತ್ಮಹತ್ಯೆಯಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅಂತಹ ಕೆಟ್ಟ ತೀರ್ಮಾನ ತೆಗೆದುಕೊಳ್ಳುವ ಮುನ್ನ ಒಂದು ನಿಮಿಷ ಸಮಾಧಾನದಿಂದ ಯೋಚಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ ಹೇಳಿದರು.

ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ. ಪ್ರಕಾಶ ಕಣಿವೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕುಷ್ಠ ರೋಗ ನಿವಾರಣಾಧಿಕಾರಿ ಡಾ. ಸುರೇಂದ್ರ ಚಿಂಬಾಳ್ಕರ್, ಮನಃಶಾಸ್ತ್ರಜ್ಞೆ ಕ್ಯಾಥರಿನ್ ಜೆನಿಫರ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಲೋಲಾಕ್ಷ ಸ್ವಾಗತಿಸಿದರು. ಶೃತಿ ನಿರೂಪಿಸಿದರು. ಸುಮಯ ವಂದಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry