ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಖುಷಿ ಕೊಟ್ಟ ಶಾಕ್’

Last Updated 5 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನಿರ್ದೇಶಕನಾಗಬೇಕು ಎಂದು ನಾನು ಅಂದುಕೊಂಡಿರಲಿಲ್ಲ. ಹದಿನೆಂಟು ವರ್ಷಗಳ ನೃತ್ಯದ ಸಾಂಗತ್ಯ ನಿರ್ದೇಶನದ ಪಟ್ಟುಗಳನ್ನು ಕಲಿಸಿತು. ಆಕಸ್ಮಿಕವಾಗಿ ಸಿಕ್ಕ ಅವಕಾಶವನ್ನು ಮನತುಂಬಿ ಒಪ್ಪಿಕೊಂಡೆ.

ನಾನು ಮೂಲತಃ ಬೆಂಗಳೂರಿನವ. ಪಿಯುಸಿಯ ನಂತರ ಹವ್ಯಾಸದ ಜೊತೆಗೆ ಫಿಟ್‌ನೆಸ್‌ ಉದ್ದೇಶಕ್ಕೆ ನೃತ್ಯಕ್ಕೆ ಸೇರಿಕೊಂಡೆ. ಪ್ರಾರಂಭದಲ್ಲಿ ನೃತ್ಯವನ್ನು ಅಷ್ಟೇನೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ನೃತ್ಯದ ಸೆಳೆತ ಅದರಲ್ಲಿಯೇ ಮುಂದುವರೆಯುವಂತೆ ಮಾಡಿತು. ನನ್ನ ಗುರು ಚಂದ್ರಮೌಳಿ ಅವರ ಆರ್ಕೆಸ್ಟ್ರಾದೊಂದಿಗೆ ಪ್ರದರ್ಶನ ನೀಡಲು ಆರಂಭಿಸಿದೆ.

ಅಲ್ಲಿ 4ರಿಂದ 5 ವರ್ಷ ಕೆಲಸ ಮಾಡಿದೆ. ಚಂದ್ರಮೌಳಿ ಅವರು ಸಿನಿಮಾಕ್ಕೆ ನೃತ್ಯ ಸಂಯೋಜನೆ ಮಾಡುತ್ತಿದ್ದರು. ಅವರೇ ಸಂಯೋಜನೆ ಮಾಡಿದ್ದ ‘ಅನುರಾಗ ಸಂಗಮ’ದಲ್ಲಿ ನೃತ್ಯ ಮಾಡುವ ಮೂಲಕ ಸಿನಿ ಕ್ಷೇತ್ರ ಪ್ರವೇಶಿಸಿದೆ. ಕೆಲ ಸಮಯ ಅವರ ಸಹಾಯಕನಾಗಿದ್ದೆ.

ಬಳಿಕ ನೃತ್ಯ ಸಂಯೋಜಕ ಮದನ್‌ ಹರಿಣಿ ಅವರಿಗೆ ಸಹಾಯಕನಾಗುವ ಅವಕಾಶ ದೊರಕಿತು. ಕೊಡ್ಲೂ ರಾಮಕೃಷ್ಣ ನಿರ್ದೇಶನದ ರಮೇಶ್‌ ಅರವಿಂದ್‌ ನಟನೆಯ ‘ಇದು ಎಂಥಾ ಪ್ರೇಮವಯ್ಯ’ ಸಿನಿಮಾದ ಮೂಲಕ ಸ್ವತಂತ್ರ ನೃತ್ಯ ಸಂಯೋಜಕನಾದೆ.

ಮುಂಗಾರುಮಳೆ ಚಿತ್ರದ ‘ಕುಣಿದು ಕುಣಿದು ಬಾರೆ’, 'ಮೊಗ್ಗಿನ ಮನಸು' ಸಿನಿಮಾಗೆ ‘ಐ ಲವ್ ಯೂ' ಹಾಡು, ಕಿರಾತಕ, ಸವಾರಿ ಸೇರಿದಂತೆ ಹಲವು ಸಿನಿಮಾಗಳಿಗೆ ನೃತ್ಯ ಸಂಯೋಜನೆ ಮಾಡಿದ್ದೇನೆ. ಹೀಗೆ ಸಾಲು ಸಾಲು ಅವಕಾಶಗಳು ನನ್ನ ಪ್ರತಿಭೆಯ ಮೇಲೆ ಬೆಳಕು ಚೆಲ್ಲಿದವು.
ನೃತ್ಯ ಸಂಯೋಜಕನಾಗಿ ಪಳಗಿದ ನನಗೆ ‘ಕಿಡಿ’ ಸಿನಿಮಾದ ಮೂಲಕ ಆ್ಯಕ್ಷನ್‌ ಕಟ್‌ ಹೇಳುವ ಅವಕಾಶ ಲಭಿಸಿದೆ.

‘ಕಿಡಿ’ ಸಿನಿಮಾದ ನಾಯಕ ಭುವನ್‌ ಚಂದ್ರರ ಹಿಂದಿನ ಸಿನಿಮಾವೊಂದಕ್ಕೆ ನೃತ್ಯ ಸಂಯೋಜನೆ ಮಾಡಿದ್ದೆ. ಆಗ ಅವರು ‘ನೀವೇಕೆ ಸಿನಿಮಾ ನಿರ್ದೇಶನ ಮಾಡಬಾರದು’ ಎಂದು ಪ್ರಶ್ನಿಸಿದ್ದರು. ನಾನು ಅವಕಾಶ ಸಿಕ್ಕರೆ ನೋಡುವ ಎಂದಿದ್ದೆ.

ಸ್ವಲ್ಪ ದಿನಗಳ ಹಿಂದೆ ಅವರು ಕರೆ ಮಾಡಿ ‘ನಾವೊಂದು ಸಿನಿಮಾ ಮಾಡುತ್ತಿದ್ದೇವೆ. ನೃತ್ಯದ ಬಗ್ಗೆ ಮಾತನಾಡುವುದಿದೆ ಬನ್ನಿ’ ಎಂದರು. ಅಲ್ಲಿಗೆ ಹೋದಾಗ ಸಿನಿಮಾದ ಬಗ್ಗೆ ಮಾತನಾಡಿದ ಅವರು, ನೀವೇ ನಿರ್ದೇಶನ ಮಾಡಿ ಎಂದುಬಿಟ್ಟರು. ಸಣ್ಣ ಸುಳಿವೂ ಇಲ್ಲದೇ ಕೊಟ್ಟ ಶಾಕ್‌ನಿಂದ ಸಂತಸವೇ ಆಯಿತು.

ನೃತ್ಯ ಸಂಯೋಜನೆಗೂ, ನಿರ್ದೇಶನಕ್ಕೂ ಸಾಮೀಪ್ಯ ಇರುವುದರಿಂದ ಸಿನಿಮಾ ನಿರ್ದೇಶಿಸಬಲ್ಲೆ ಎಂಬ ಧೈರ್ಯವಿತ್ತು. ನೃತ್ಯದ ಅನುಭವಗಳು ಇಲ್ಲಿಯ ಕೆಲಸಕ್ಕೆ ನೆರವಾಯಿತು.

ಸಿನಿಮಾದಲ್ಲಿ ನೃತ್ಯ ಸಂಯೋಜನೆ ಮಾಡುವಾಗ ಮೂರರಿಂದ ನಾಲ್ಕು ದಿನ ಚಿತ್ರೀಕರಣ ಇರುತ್ತದೆ. ಆದರೆ ನಿರ್ದೇಶನ ಹಾಗಲ್ಲ. ಇದು ಕಡಿಮೆ ಎಂದರೂ 50 ದಿನದ ಕೆಲಸ. ನಿರ್ದೇಶಕ ಎಂದರೆ ಒಂದು ತಂಡಕ್ಕೆ ನಾಯಕನಿದ್ದಂತೆ.

200ಕ್ಕೂ ಹೆಚ್ಚು ಮಂದಿಯನ್ನು ಸಂಭಾಳಿಸಬೇಕು. ಸ್ವಲ್ಪ ರಿಸ್ಕ್‌ ಎನಿಸಿದರೂ, ಒಳ್ಳೆಯ ಅನುಭವವೇ ದಕ್ಕಿದೆ. ನಾನು ಅಂದುಕೊಂಡಿರುವುದಕ್ಕಿಂತ ಒಂದು ಪಟ್ಟು ಹೆಚ್ಚೇ ಚೆನ್ನಾಗಿ ಕೆಲಸ ಮಾಡಿದ್ದೇನೆ. ಜೊತೆಗೆ ಒಳ್ಳೆಯ ತಂಡ ಸಿಕ್ಕಿದ್ದು ನನ್ನ ಅದೃಷ್ಟ.

ಇನ್ನೊಂದು ಸಿನಿಮಾ ನಿರ್ದೇಶನದ ಅವಕಾಶವೂ ಒದಗಿದೆ. ಅದು ಸದ್ಯದಲ್ಲಿಯೇ ಸೆಟ್ಟೇರಲಿದೆ. ಸದ್ಯ ಮಾತುಕತೆಯ ಹಂತದಲ್ಲಿರುವುದರಿಂದ ಈಗ ಆ ಬಗ್ಗೆ ಹೆಚ್ಚು ಹೇಳಲಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT