3

ಬಣ್ಣ, ಬಣ್ಣದ ಮನೆ

Published:
Updated:
ಬಣ್ಣ, ಬಣ್ಣದ ಮನೆ

ಎಷ್ಟೇ ದೊಡ್ಡದಾದ ಮನೆ ಕಟ್ಟಿದರೂ, ದುಬಾರಿ ಒಳಾಂಗಣ ವಿನ್ಯಾಸ ಮಾಡಿಸಿದರೂ, ಅದಕ್ಕೆ ಅಂದ ಬರುವುದು ಬಣ್ಣದಿಂದಲೇ. ನೋಡುಗರನ್ನು ಮೊದಲು ಆಕರ್ಷಿಸುವುದು ಬಣ್ಣವೇ.

ಮನೆಗೆ ಬಣ್ಣ ಅತ್ಯಂತ ಅವಶ್ಯಕ. ಆದರೆ ಸೂಕ್ತ ಬಣ್ಣ ಆಯ್ಕೆ ಮಾಡುವುದು ಸುಲಭವಲ್ಲ. ಮಡದಿಗೆ ಒಂದು ಬಣ್ಣ ಇಷ್ಟವಾದರೆ, ಮಗನಿಗೆ ಇನ್ನೊಂದು, ಮಗಳಿಗೆ ಮತ್ತೊಂದು ಹೀಗೆ ಮನೆ ಮಂದಿಯನ್ನೆಲ್ಲಾ ಮೆಚ್ಚಿಸುವ ಬಣ್ಣವನ್ನು ಬಳಿಯುವಷ್ಟರಲ್ಲಿ ಮನೆ ಕಟ್ಟಿಸುವಾತನ ಮುಖದ ಬಣ್ಣ ಬದಲಾಗಿರುತ್ತದೆ. ಮನೆಗೆ ಸೂಕ್ತ ಬಣ್ಣದ ಆಯ್ಕೆ ಮಾಡಲು ಕೆಲವು ಸುಲಭ ಉಪಾಯಗಳು ಇಲ್ಲಿವೆ.

ಲಿವಿಂಗ್ ರೂಂನ ಬಣ್ಣ ಹೀಗಿರಲಿ: ಕುಟುಂಬ ಸದಸ್ಯರು ಹೆಚ್ಚು ಸಮಯ ಕಳೆಯುವುದು ಲಿವಿಂಗ್ ರೂಮ್‌ನಲ್ಲಿ. ಅತಿಥಿ ಸತ್ಕಾರ ನಡೆಯುವುದೂ ಇಲ್ಲಿಯೆ. ಹಾಗಾಗಿ ಲಿವಿಂಗ್ ರೂಂಗೆ ಬಳಸುವ ಬಣ್ಣವನ್ನು ಎಚ್ಚರಿಕೆಯಿಂದ ಆರಿಸಬೇಕಾಗುತ್ತದೆ. ಲಿವಿಂಗ್ ರೂಂನಲ್ಲಿ ಹೆಚ್ಚು ನೈಸರ್ಗಿಕ ಬೆಳಕು ಬೀಳುತ್ತಿದ್ದರೆ ತಿಳಿ ಬಣ್ಣಗಳು ಸಾಕಾಗುತ್ತವೆ.

ನೈಸರ್ಗಿಕ ಬೆಳಕು ಮತ್ತು ತಿಳಿ ಬಣ್ಣ ಶಾಂತ ವಾತಾವರಣದ ಅನುಭವ ನೀಡುತ್ತವೆ. ಕೃತಕ ಬೆಳಕು ಇದ್ದಲ್ಲಿ ಸ್ವಲ್ಪ ಗಾಢ ಬಣ್ಣ ಬಳಸಬಹುದು. ಆದರೆ ಅತಿ ಗಾಢ ಬಣ್ಣ ಬೇಡ. ಅತಿ ಗಾಢ ಬಣ್ಣ ಕಣ್ಣಿಗೆ ಅಸಹನೆ ಉಂಟು ಮಾಡುವ ಸಾಧ್ಯತೆ ಹೆಚ್ಚು. ತಿಳಿ ನೀಲಿ, ಹಸಿರು, ಗುಲಾಬಿ, ಹಳದಿ ಬಣ್ಣಗಳು ಲಿವಿಂಗ್ ರೂಂ ಗೋಡೆಗೆ ಚೆನ್ನಾಗಿ ಒಪ್ಪುತ್ತವೆ.

ಬೆಡ್ ರೂಮ್ ಬಣ್ಣ ಹೀಗಿರಲಿ: ಬೆಡ್ ರೂಮ್ ಬಣ್ಣಗಳು ವೈಯಕ್ತಿಕ ಅಭಿರುಚಿಗೆ ತಕ್ಕಂತೆ ಇರಲಿ. ಬೆಡ್ ರೂಂ ಬಣ್ಣ ಆಯ್ಕೆ ಮಾಡುವಾಗ ನಿಮ್ಮ ಸೃಜನ ಶೀಲತೆ ತೋರಿಸಬಹುದು. ಒಂದೇ ಬಣ್ಣವನ್ನು ಬಳಿಯುವುದಕ್ಕಿಂತಲೂ ವಿವಿಧ ಬಣ್ಣಗಳನ್ನು ಬಳಸಿ ಗೋಡೆಗಳು ಕಲಾತ್ಮಕವಾಗಿ ಕಾಣುವಂತೆ ಮಾಡಿದಲ್ಲಿ ಚೆನ್ನಾಗಿರುತ್ತದೆ.

ಕಪ್ಪು-ಬಿಳಿ ಬಣ್ಣವನ್ನು ಬಳಸಿದರೂ ಅಡ್ಡಿ ಇಲ್ಲ. ಆದರೆ ಸಮತೋಲಿತವಾಗಿರಲಿ. ರೂಂನ ಬೆಡ್ ಶೀಟ್, ಪೀಠೋಪಕರಣಗಳಿಗೆ ಹೋಲಿಕೆಯಾಗುವ ಬಣ್ಣಗಳನ್ನು ಬಳಸಿದರೆ ಉತ್ತಮ. ಗಾಢ ಬಣ್ಣಗಳೂ ಮಲಗುವ ಕೋಣೆಯ ಅಂದ ಹೆಚ್ಚಿಸುತ್ತವೆ.

ಅಡುಗೆ ಮನೆ: ಅಡುಗೆ ಮನೆ ಹೆಚ್ಚು ಕ್ರಿಯಾಶೀಲವಾಗಿರುವ ಮನೆಯ ಭಾಗ. ಅಲ್ಲಿ ಅಂದಕ್ಕಿಂತ ಹೆಚ್ಚು ಸುರಕ್ಷತೆಗೆ ಪ್ರಾಮುಖ್ಯ. ಹಾಗೆಂದು ಅಂದವನ್ನು ಕಡೆಗಣಿಸುವಂತಿಲ್ಲ. ಸಾಮಾನ್ಯವಾಗಿ ಅಡುಗೆ ಮನೆ ಗೋಡೆಗಳಿಗೆ ಟೈಲ್ಸ್ ಹಾಕುತ್ತಾರೆ.

ಗೋಡೆಗಳ ಸುರಕ್ಷತೆಗೆ ಇದು ಅವಶ್ಯಕವೂ ಹೌದು. ಅವುಗಳ ಆಯ್ಕೆಯಲ್ಲಿಯೂ ಜಾಗೃತ ಅವಶ್ಯ. ಚಿತ್ರಗಳಿರುವ, ವಿವಿಧ ಬಣ್ಣದ, ಮಹಿಳೆಯರ ಮನಸ್ಸನ್ನು ಉಲ್ಲಸಿತಗೊಳಿಸುವ ಬಣ್ಣದ ಟೈಲ್ಸ್ ಬಳಸಿದರೆ ಉತ್ತಮ. ಗೋಡೆಗಳ ಬಣ್ಣವೂ ಅವರ ಆಯ್ಕೆಯದ್ದೇ ಆಗಿರಲಿ. ಅಡುಗೆ ಮನೆಯಲ್ಲಿ ಗೋಡೆಗಳು ಕಲೆ ಆಗುವ ಸಂಭವ ಹೆಚ್ಚಿರುವುದರಿಂದ ತೊಳೆದರೆ ಕಲೆ ಹೋಗುವ ಬಣ್ಣಗಳನ್ನೇ ಬಳಸಿ.

ಬಾತ್‌ರೂಂ ಗೋಡೆಗೆ ಬಣ್ಣ: ಬಾತ್‌ರೂಂನ ಗೋಡೆಯ ಬಣ್ಣ ಅದರ ಟೈಲ್ಸ್‌ಗೆ ಹೊಂದಿಕೆಯಾಗುವಂತಿರಲಿ. ಗಾಢ ಬಣ್ಣ ಬಳಸಿದರೆ ಉತ್ತಮ. ಹೆಚ್ಚು ಕಲಾತ್ಮಕ ವಿನ್ಯಾಸಗಳನ್ನು ಮಾಡದಿರುವುದು ಒಳಿತು. ಏಕ ರೂಪದ ಬಣ್ಣವನ್ನೇ ಬಾತ್‌ರೂಂನ ಎಲ್ಲ ಗೋಡೆಗಳಿಗೂ ಬಳಿಯಿರಿ.

ಸೀಲಿಂಗ್ ಬಣ್ಣ: ಸೀಲಿಂಗ್ ಬಣ್ಣ ಬಿಳಿಯಾಗಿದ್ದರೆ ಬೆಳಕು ಪ್ರತಿಫಲಿಸಿ ಮನೆ ಪ್ರಕಾಶಮಾನವಾಗಿರುತ್ತದೆ. ಸೀಲಿಂಗ್‌ಗೆ ಪಿಒಪಿ ವರ್ಕ್ ಮಾಡಿಸಿದ್ದಲ್ಲಿ ಅದಕ್ಕೆ ಅನುಗುಣವಾಗಿ ಬಣ್ಣದ ಆಯ್ಕೆ ಇರಲಿ. ಸೀಲಿಂಗ್‌ಗೆ ಅಳವಡಿಸಿದ ದೀಪಕ್ಕೆ ಅನುಗುಣವಾಗಿಯೂ ಸೀಲಿಂಗ್‌ಗೆ ಬಣ್ಣ ಬಳಿದರೆ ಉತ್ತಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry