ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್‌ ಸಿಟಿ ಯೋಜನೆ ಹಿನ್ನಡೆಗೆ ರಾಜ್ಯ ಸರ್ಕಾರ ಕಾರಣ

Last Updated 6 ಅಕ್ಟೋಬರ್ 2017, 5:23 IST
ಅಕ್ಷರ ಗಾತ್ರ

ಬೆಳಗಾವಿ: ಸ್ಮಾರ್ಟ್‌ ಸಿಟಿ ಯೋಜನೆಗೆ ಬೆಳಗಾವಿ ಆಯ್ಕೆಯಾಗಿ ಎರಡು ವರ್ಷಗಳ ಕಳೆದರೂ ಕೆಲಸಗಳು ಆರಂಭ ವಾಗಿಲ್ಲ. ಯೋಜನೆ ಯಶಸ್ವಿಯಾದರೆ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಶ್ರೇಯಸ್ಸು ದಕ್ಕುತ್ತದೆಂದು ರಾಜ್ಯದ ಕಾಂಗ್ರೆಸ್‌ ಸರ್ಕಾರ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸುತ್ತಿಲ್ಲ ಎಂದು ಪ್ರೊಫೆಶನಲ್ಸ್‌ ಫೋರಂ ಅಧ್ಯಕ್ಷ ಬಿ.ಎಸ್‌. ಪಾಟೀಲ ಆರೋಪಿಸಿದರು.

ನಗರ ಪ್ರದೇಶಗಳಿಗೆ ಹೆಚ್ಚಿನ ಮೂಲ ಸೌಕರ್ಯ ಒದಗಿಸಬೇಕು. ಐದು ವರ್ಷಗಳಲ್ಲಿ ಆಧುನೀಕರಣಗೊಳಿಸಬೇಕೆನ್ನುವ ಉದ್ದೇಶದಿಂದ ಕೇಂದ್ರದ ಬಿಜೆಪಿ ಸರ್ಕಾರವು 2015ರ ಜುಲೈ ತಿಂಗಳಿನಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯನ್ನು ರೂಪಿಸಿತು. ಮೊದಲ ಹಂತದಲ್ಲಿ ಆಯ್ಕೆಯಾದ ದೇಶದ 20 ನಗರಗಳಲ್ಲಿ ಬೆಳಗಾವಿ ಆಯ್ಕೆಯಾಗಿತ್ತು. ಈಗ ಎರಡು ವರ್ಷ ಕಳೆದುಹೋದರೂ ಕಾಮಗಾರಿಗಳು ಆರಂಭಗೊಂಡಿಲ್ಲ ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಯೋಜನೆಯ ಪರಿಕಲ್ಪನೆಯು ಕೇಂದ್ರ ಸರ್ಕಾರದ್ದಾಗಿದ್ದರೂ, ಅನುದಾನವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 50:50 ಪ್ರಮಾಣದಲ್ಲಿ ಒದಗಿಸುತ್ತಿವೆ. ಈ ಯೋಜನೆಗೆ ತಾವು ಅರ್ಧದಷ್ಟು ಹಣ ನೀಡುತ್ತಿದ್ದರೂ ಜನರು ಕೇಂದ್ರ ಸರ್ಕಾರವನ್ನೇ ಹೊಗಳುತ್ತಿದ್ದಾರೆಂದು ಕೆಲವು ಕಾಂಗ್ರೆಸ್‌ ಮುಖಂಡರು ಆಗಾಗ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಯೋಜನೆಯ ಅನುಷ್ಠಾನದ ಹೊಣೆಯನ್ನು ಹೊತ್ತಿರುವ ರಾಜ್ಯ ಸರ್ಕಾರವು ಹೀಗಾಗಿ ನಿಧಾನಗತಿ ಮಾಡುತ್ತಿದೆ ಎಂದು ಆರೋಪಿಸಿದರು.

‘ಸ್ಮಾರ್ಟ್‌ ಸಿಟಿ ಯೋಜನೆಯು ಸಮರ್ಪಕವಾಗಿ ಅನುಷ್ಠಾನಗೊಂಡರೆ ಬೆಳಗಾವಿಯ ವಾಹನಗಳ ಸಂಚಾರ ದಟ್ಟಣೆ ಸಮಸ್ಯೆ, ಉದ್ಯಾನಗಳ ನಿರ್ವಹಣೆ ಸಮಸ್ಯೆ ಸೇರಿದಂತೆ ಮೂಲಸೌಕರ್ಯಗಳ ಸಮಸ್ಯೆ ನಿವಾರಣೆಯಾಗುತ್ತದೆ. ಆದಷ್ಟು ಬೇಗನೇ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ರಾಜ್ಯ ಸರ್ಕಾರದ ಮೇಲೆ ಕೇಂದ್ರ ಸರ್ಕಾರದ ಮೂಲಕ ಒತ್ತಡ ಹೇರಿಸುವಂತೆ ಸಂಸದ ಸುರೇಶ ಅಂಗಡಿ, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಅವರಲ್ಲಿ ಕೇಳಿಕೊಂಡಿದ್ದೇನೆ’ ಎಂದು ಹೇಳಿದರು.

‘ಈ ಯೋಜನೆಯ ಅಧ್ಯಕ್ಷರೂ ಆಗಿರುವ ನೀರಾವರಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಅವರನ್ನು ನಾನು ಖುದ್ದಾಗಿ ಭೇಟಿ ಮಾಡಿ ಹಲವು ಬಾರಿ ಮನವಿ ಪತ್ರ ನೀಡಿದ್ದೇನೆ. ಆದರೆ, ಅವರು ನೀರಾವರಿ ಇಲಾಖೆಯ ಚಟುವಟಿಕೆಗಳಲ್ಲಿಯೇ ತುಂಬಾ ಬ್ಯುಸಿಯಾಗಿದ್ದು, ಇತ್ತ ಗಮನ ಹರಿಸುತ್ತಿಲ್ಲ’ ಎಂದು ಆರೋಪಿಸಿದರು.

‘ಈ ಯೋಜನೆಯ ಅಧ್ಯಕ್ಷ ಸ್ಥಾನಕ್ಕೆ ಪ್ರಾದೇಶಿಕ ಆಯುಕ್ತರನ್ನು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಜಿಲ್ಲಾಧಿಕಾರಿಯವರನ್ನು ನೇಮಿಸಬೇಕು. ಎಲ್ಲ ನಿರ್ಣಯಗಳನ್ನು ಕೈಗೊಳ್ಳುವ ಅಧಿಕಾರವನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ನೀಡಬೇಕು. ಎಲ್ಲದಕ್ಕೂ ಬೆಂಗಳೂರಿನತ್ತ ಮುಖ ಮಾಡುವುದನ್ನು ತಪ್ಪಿಸಬೇಕು.

ಇದರಿಂದಾಗಿ ಕಾಮಗಾರಿಗಳು ತ್ವರಿತವಾಗಿ ಆರಂಭಗೊಳ್ಳಲು ಸಹಾಯವಾಗುತ್ತದೆ. ಈಗಾಗಲೇ ₹ 400 ಕೋಟಿ ಅನುದಾನ ಬಂದಿದೆ. ಇದರ ಸದುಪಯೋಗ ಆಗಬೇಕು’ ಎಂದು ಒತ್ತಾಯಿಸಿದರು. ಫೋರಂ ಸದಸ್ಯರಾದ ವಿ.ಬಿ. ಜಾವುರ, ಪಿ.ಎಸ್‌. ಹಿರೇಮಠ, ರಾಜೇಂದ್ರ ಮುದಡಾ, ಸಿ.ಬಿ. ಹಿರೇಮಠ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT