ಲೆಕ್ಕಕ್ಕೆ ಉಂಟು, ಊಟಕ್ಕೆ ಇಲ್ಲ!

ಭಾನುವಾರ, ಮೇ 26, 2019
22 °C

ಲೆಕ್ಕಕ್ಕೆ ಉಂಟು, ಊಟಕ್ಕೆ ಇಲ್ಲ!

Published:
Updated:
ಲೆಕ್ಕಕ್ಕೆ ಉಂಟು, ಊಟಕ್ಕೆ ಇಲ್ಲ!

ಹೊಸನಗರ: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ‘ಮಾತೃಪೂರ್ಣ’ಕ್ಕೆ ತಾಲ್ಲೂಕಿನಾದ್ಯಂತ ಗರ್ಭಿಣಿ ಹಾಗೂ ಬಾಣಂತಿಯರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಗರ್ಭಿಣಿ ಹಾಗೂ ಬಾಣಂತಿಯರ ಕಬ್ಬಿಣಾಂಶ ಕೊರತೆ ಸೇರಿದಂತೆ ಆರೋಗ್ಯ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಮಧ್ಯಾಹ್ನದ ಪೌಷ್ಟಿಕ ಭರಿತ ಊಟಕ್ಕೆ ಬಹುತೇಕ ಕಡೆ ಶೂನ್ಯ ಹಾಜರಾತಿ ಆಗಿರುವುದು ವರದಿಯಾಗಿದೆ.

ಪಟ್ಟಣದ ಉರ್ದು ಶಾಲೆ ಎದುರಿನ ಮುಸ್ಲಿಮರು ಹೆಚ್ಚಾಗಿರುವ ಅಂಗನವಾಡಿಯಲ್ಲಿ ಎಂಟು ಗರ್ಭಿಣಿ ಹಾಗೂ ನಾಲ್ವರು ಬಾಣಂತಿಯರು ಸೇರಿದಂತೆ 12 ಫಲಾನುಭವಿ

ಗಳಿದ್ದರೂ, ಒಂದು ದಿನವೂ ಮಧ್ಯಾಹ್ನದ ಊಟಕ್ಕೆ ಹಾಜರಾಗಿಲ್ಲ. ದ್ಯಾರ್ವಸದಲ್ಲಿ 9 ಫಲಾನುಭವಿಗಳ ಪೈಕಿ ಒಬ್ಬರು ಊಟಕ್ಕೆ ಹಾಜರಾಗಿದ್ದಾರೆ.

ಫಲಾನುಭವಿಗಳ ಸಬೂಬು: ‘ಮನೆಗೆ ಗಂಡ ಊಟಕ್ಕೆ ಬರುವಾಗ ನಾವು ಅಂಗನವಾಡಿಗೆ ಹೋಗುವುದು ಎಷ್ಟು ಸರಿ?’, ‘ನಮ್ಮ ಯಜಮಾನರು ದುಬೈಯಲ್ಲಿ ಇದ್ದಾರೆ’. ‘ಅತ್ತೆ ಮನೆಯಿಂದ ಹೊರಗೆ ಹೋಗಲು ಬಿಡುತ್ತಿಲ್ಲ’, ‘ಸಣ್ಣ ಮಗು ಮಲಗುವ ಹೊತ್ತು, ಅದನ್ನು ಕರೆದುಕೊಂಡು ಬಿಸಿಲಿನಲ್ಲಿ ಹೇಗೆ ಅಂಗನವಾಡಿಗೆ ಹೋಗೋದು?’, ‘ಮನೆಯಲ್ಲಿ ನಾ ಮಾಡಿದ ಮಾಂಸಾಹಾರ ಬಿಟ್ಟು ಪುಳ್ಚಾರು ಊಟಕ್ಕೆ ಹೋಗೋಕೆ ಮನಸು ಆಗೋಲ್ಲ ಸರ್‌’ ಎಂದು ಫಲಾನುಭವಿಗಳು ಕಾರಣ ನೀಡುತ್ತಾರೆ. ಪಟ್ಟಣದ ಸಬೀನಾ ಬಾನು, ಸಮೀರಾ ಭಾನು ಅವರೂ ಇದನ್ನು ಅನುಮೋದಿಸುತ್ತಾರೆ.

ಪಟ್ಟಣದ ಅಂಗನವಾಡಿ ಕತೆ ಹೀಗಿದ್ದರೆ, ಹಳ್ಳಿಯದು ಇನ್ನೊಂದು ತರಹ. ವಿರಳ ಮನೆಗಳು ಇರುವ ಮಲೆನಾಡಿನಲ್ಲಿ ಅಂಗನವಾಡಿ ಊಟಕ್ಕಾಗಿ 2-3 ಕಿ.ಮೀ ಅರಣ್ಯದ ನಡುವೆ ಕಾಲುದಾರಿಯಲ್ಲಿ ಗುಡ್ಡ ಹತ್ತಿ ಹೋಗಬೇಕು. ಮನೆ, ಗದ್ದೆ ಕೆಲಸ ಬಿಟ್ಟು ಮಧ್ಯಾಹ್ನದ ಊಟಕ್ಕಾಗಿ ಹೋಗುವುದು ಆಗದ ಮಾತು’ ಎಂಬುದು ನಕ್ಸಲ್‌ ಪೀಡಿತ ಕುಂಬ್ರಿಬೈಲ್ ಅಂಗನವಾಡಿ ಸಮೀಪದ ಹಳ್ಳಿಯ ಶಾರದಾ ಅವರ ಅಹವಾಲು.

ಮನೆಗೆ ತಲುಪಿಸುವುದು ಕಷ್ಟ: ‘ಮಧ್ಯಾಹ್ನ ಊಟಕ್ಕೆ ಬಾರದಿದ್ದರೆ, ಊಟ ತಯಾರಿಸಿ ಬಾಕ್ಸ್ ಹಾಕಿ ಮನೆಗೆ ಕೊಡಿ’ ಎಂಬ ಶಿಶು ಅಭಿವೃದ್ಧಿ ಅಧಿಕಾರಿಗಳ ಮೌಖಿಕ ಆದೇಶ ಪಾಲಿಸುವುದು ಕಷ್ಟ ಎನ್ನುತ್ತಾರೆ ಅಂಗನವಾಡಿ ಸಹಾಯಕಿಯರು.

ಅವೈಜ್ಞಾನಿಕ ಯೋಜನೆ: ‘ಮಾತೃಪೂರ್ಣ ಯೋಜನೆ ಕೇವಲ ಸರ್ಕಾರದ ಚುನಾವಣೆ ಗಿಮಿಕ್‌ ಹಾಗೂ ಅಧಿಕಾರಿಗಳು ದುಡ್ಡು ಹೊಡೆಯುವ ಅವೈಜ್ಞಾನಿಕ ಯೊಜನೆಯಾಗಿದೆ. ಮಲೆನಾಡಿನಲ್ಲಿ ಈ ಯೋಜನೆ ಅನುಷ್ಠಾನ ಕಷ್ಟ ಸಾಧ್ಯ. ಮೊದಲಿನಂತೆ ಅಕ್ಕಿ, ಗೋಧಿ, ಧಾನ್ಯಗಳನ್ನು ವಿತರಿಸಬೇಕು’ ಎಂದು ತಾಲ್ಲೂಕು ಪಂಚಾಯ್ತಿ ಮಾಜಿ

ಸದಸ್ಯ ಬಿ.ಇ.ಮಂಜುನಾಥ ಒತ್ತಾಯಿಸಿದ್ದಾರೆ.

ತಾಲ್ಲೂಕಿನಾದ್ಯಂತ ಮಾತೃಪೂರ್ಣ ಯೋಜನೆಗೆ ಹಾಜರಾತಿ ಕಡಿಮೆ ಇದ್ದರೂ ಊಟದ ಸಾಮಾಗ್ರಿಗಳ, ಮೊಟ್ಟೆ, ಹಾಲಿನ ಲೆಕ್ಕ ಸರ್ಕಾರಿ ಲೆಕ್ಕದಲ್ಲಿ ಖರ್ಚು ತೋರಿಸಲಾಗುತ್ತಿದೆ. ‘ಅಡುಗೆ ಮಾಡಿ, ಊಟ ಮಾಡದಿದ್ದರೆ ಹೊರಕ್ಕೆ ಚೆಲ್ಲಿರಿ’ ಎಂದು ಯೋಜನೆ ಉಸ್ತುವಾರಿ ಹೊತ್ತ ಅಧಿಕಾರಿ ರಾಜು ಅವರ ಹೇಳಿಕೆಯನ್ನು ಅವರು ಖಂಡಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry