ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಹೊಂಡಕ್ಕೆ ಮಕ್ಕಳ ಬಲಿ; ತಡೆಗಿಲ್ಲ ತಂತಿ–ಬೇಲಿ

Last Updated 7 ಅಕ್ಟೋಬರ್ 2017, 10:26 IST
ಅಕ್ಷರ ಗಾತ್ರ

ವಿಜಯಪುರ: ಕೃಷಿ ಹೊಂಡಗಳಿಗೆ ತಂತಿ–ಬೇಲಿಯ ರಕ್ಷಣೆ ಇಲ್ಲದಿರುವುದರಿಂದ, ಹೊಂಡದ ನೀರು ಹಿಂಗದಂತೆ ಅಳವಡಿಸಿರುವ ಪಾಲಿಥಿನ್‌ ಚೀಲದ ಮೇಲೆ ಕಾಲಿಟ್ಟ ಸಂದರ್ಭ, ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಹೊಂಡದ ನೀರಿನೊಳಗೆ ಮುಳುಗಿ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಳಗೊಂಡಿದೆ.

ಇಂತಹ ಪ್ರಕರಣ ಜಿಲ್ಲೆಯ ವ್ಯಾಪ್ತಿಯಲ್ಲಿ ಆಗ್ಗಿಂದಾಗ್ಗೆ ಮರುಕಳಿಸುತ್ತಿವೆ. ಸಾವಿಗೀಡಾದ ಎಲ್ಲರೂ ಮಕ್ಕಳೇ ಆಗಿದ್ದು, ಆತಂಕ ಹೆಚ್ಚಿಸಿದೆ. ಇಲ್ಲಿಯವರೆಗೂ ಎಂಟು ಮಕ್ಕಳು ಕೃಷಿ ಹೊಂಡದೊಳಗೆ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿವೆ.

‘ರಾಜ್ಯ ಸರ್ಕಾರ ‘ಕೃಷಿ ಭಾಗ್ಯ’ ಯೋಜನೆಯಡಿ 2014–15ನೇ ಸಾಲಿನಿಂದ ಕೃಷಿ ಹೊಂಡ ನಿರ್ಮಾಣಕ್ಕೆ ರೈತರಿಗೆ ಪ್ರೋತ್ಸಾಹ ನೀಡಲಾರಂಭಿಸಿತು. ಸಬ್ಸಿಡಿಯನ್ನು ನೀಡಿತು. ಇದರ ಪರಿಣಾಮ ಜಿಲ್ಲೆಯ ವ್ಯಾಪ್ತಿಯಲ್ಲಿ ಇದುವರೆಗೂ 16000ಕ್ಕೂ ಹೆಚ್ಚು ಕೃಷಿ ಹೊಂಡ ನಿರ್ಮಾಣಗೊಂಡಿವೆ.

ಕೃಷಿ ಇಲಾಖೆ ಅಧಿಕಾರಿಗಳು ಕಾಟಾಚಾರಕ್ಕಾಗಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದು ರೈತರಿಗೆ ಸರಿಯಾಗಿ ಮಾಹಿತಿ ನೀಡದೆ ಹೊಂಡಗಳನ್ನು ನಿರ್ಮಿಸಿದರು. ರೈತರು ಸಬ್ಸಿಡಿ ಆಸೆಗಾಗಿ ನಿರ್ಮಿಸಿಕೊಂಡರು. ಇಂತಹ ಹೊಂಡಗಳೇ ಇದೀಗ ಅಪಾಯಕಾರಿ ತಾಣಗಳಾಗಿ ಮಕ್ಕಳ ಜೀವ ಬಲಿ ಪಡೆಯುತ್ತಿವೆ’ ಎಂದು ವಿಜಯಪುರ ತಾಲ್ಲೂಕು ಉಪ್ಪಲದಿನ್ನಿಯ ಯುವ ರೈತ ಸೋಮನಾಥ ಬಿರಾದಾರ ಅಸಮಾಧಾನ ವ್ಯಕ್ತಪಡಿಸಿದರು.

‘ಯೋಜನೆ ಅನುಷ್ಠಾನಗೊಂಡ ಆರಂಭದಲ್ಲಿ ರಕ್ಷಣೆಗಾಗಿ ತಂತಿ–ಬೇಲಿ ನಿರ್ಮಿಸಿಕೊಳ್ಳುವಂತೆ ರೈತರಿಗೆ ಮೌಖಿಕ ಸೂಚನೆ ನೀಡುತ್ತಿದ್ದೆವು. ಇದೀಗ 2017–18ನೇ ಸಾಲಿನಲ್ಲಿ ಕೃಷಿ ಹೊಂಡ ನಿರ್ಮಿಸಿಕೊಳ್ಳುವ ರೈತರಿಗೆ ತಂತಿ ಬೇಲಿಗೂ ಸಬ್ಸಿಡಿ ಒದಗಿಸಲಾಗುತ್ತಿದೆ.

20 ಮೀಟರ್‌ ಅಳತೆಯ ಕೃಷಿ ಹೊಂಡಕ್ಕೆ ತಂತಿ–ಬೇಲಿ ನಿರ್ಮಿಸಿಕೊಳ್ಳಲು ₨ 16000 ಸಬ್ಸಿಡಿ ನೀಡುತ್ತೇವೆ. ಉಳಿದ ಮೊತ್ತವನ್ನು ರೈತರೇ ಭರಿಸಬೇಕು. ಈ ಕುರಿತು ಜಾಗೃತಿ ಮೂಡಿಸುತ್ತಿದ್ದೇವೆ’ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ.ಬಿ.ಮಂಜುನಾಥ, ಸಹಾಯಕ ನಿರ್ದೇಶಕ ಶಿವನಗೌಡ ಬಿರಾದಾರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಅಂಕಿ–ಅಂಶ
16000 ಕೃಷಿ ಹೊಂಡ ನಿರ್ಮಾಣ
10% ಹೊಂಡಗಳಿಗೆ ಮಾತ್ರ ತಂತಿ–ಬೇಲಿ
90% ಹೊಂಡಗಳಿಂದ ಅಪಾಯಕ್ಕೆ ಆಹ್ವಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT