ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರೇಮಠ ದಂಪತಿ ಹಸಿರು ಪ್ರೇಮ

Last Updated 8 ಅಕ್ಟೋಬರ್ 2017, 5:54 IST
ಅಕ್ಷರ ಗಾತ್ರ

ಹುಮನಾಬಾದ್: ಇಂದಿನ ದಿನಗಳಲ್ಲಿ ನಿಸ್ವಾರ್ಥ ಮನೋಭಾವದಿಂದ ಕೆಲಸ ಮಾಡುವವರು ತುಂಬಾ ಕಡಿಮೆ ಎಂಬ ಮಾತಿದೆ. ಅಂಥವರ ಸಾಲಿನಲ್ಲಿ ಇಲ್ಲಿನ ಹಿರೇಮಠ ದಂಪತಿ ಕೂಡ ಸೇರುತ್ತಾರೆ. ಅವರು ಶಿಕ್ಷಕರಾಗಿ ತಮ್ಮ ನಿತ್ಯದ ಸರ್ಕಾರಿ ಸೇವೆ ಜೊತೆಗೆ ಪುರಸಭೆ ಕಿರು ಉದ್ಯಾನದ ಪೋಷಣೆಯೂ ಮಾಡುತ್ತಾರೆ. ಪರಿಸರ ಸಂರಕ್ಷಣೆಗೆ ಇತರರಿಗೆ ಮಾರ್ಗದರ್ಶನ ನೀಡುತ್ತಾರೆ.

ಸರ್ಕಾರಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಈ ದಂಪತಿ ಇಲ್ಲಿನ ಪುರಸಭೆ ವಾಣಿಜ್ಯ ಸಂಕೀರ್ಣ ಆವರಣದಲ್ಲಿನ ಕಿರು ಉದ್ಯಾನದ ಅಭಿವೃದ್ಧಿಯತ್ತ ವಿಶೇಷ ಆಸಕ್ತಿ ತಳೆದಿದ್ದಾರೆ. ಸ್ವಯಂ ಪ್ರೇರಣೆಯಿಂದ ಕನಕಾಂಬರಿ, ಸೇವಂತಿ, ಕಣಗಿಲ, ಗುಲಾಬಿ, ದಾಸವಾಳ, ಮನಿಪ್ಲ್ಯಾಂಟ್‌, ತುಳಸಿ, ಅಶೋಕ ವೃಕ್ಷ, ನವಳಸರ(ಅಲವೇರಾ), ತೆಂಗು ಮುಂತಾದವು ಸೇರಿದಂತೆ 50ಕ್ಕೂ ಹೆಚ್ಚು ಜಾತಿಯ ಗಿಡ ನೆಟ್ಟು ಬೆಳೆಸುತ್ತಿದ್ದಾರೆ. ಎರಡು ದಿನಕ್ಕೊಮ್ಮೆ ತಪ್ಪದೇ ನೀರುಣಿಸುತ್ತಾರೆ. ಉದ್ಯಾನ ಸ್ವಚ್ಛಗೊಳಿಸುತ್ತಾರೆ. ಕೀಟಬಾಧೆ ನಿಯಂತ್ರಣಕ್ಕೆ ಔಷಧಿ ಸಿಂಪಡಿಸುತ್ತಾರೆ. ಒಣಗಿದ ಎಲೆಗಳನ್ನು ಬೇರ್ಪಡಿಸಿ ಗಿಡಗಳನ್ನು ಉತ್ತಮ ರೀತಿಯಲ್ಲಿ ಪೋಷಿಸುತ್ತಾರೆ.

ಹುಡಗಿಯ ಉರ್ದು ಸರ್ಕಾರಿ ಪ್ರೌಢಶಾಲೆಯಲ್ಲಿ ಅಶೋಕಕುಮಾರ ಹಿರೇಮಠ ಅವರು ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದರೆ, ಪತ್ನಿ ಗಂಗಾ ಹಿರೇಮಠ ಅವರು ಹುಡಗಿಯ ಕನ್ಯಾ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಇಬ್ಬರೂ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುವುದರ ಜೊತೆಗೆ ಉಳಿದ ಸಮಯವನ್ನು ಸಮಾಜಕ್ಕೆ ಉಪಯುಕ್ತವಾಗುವ ಕಾರ್ಯದಲ್ಲಿ ತೊಡಗಲು ಇಚ್ಛಿಸುತ್ತಾರೆ.

ಅಶೋಕ ಹಿರೇಮಠ ಅವರು ಹಲವು ಕಡೆ ಏಕವ್ಯಕ್ತಿ ಹಾಗೂ ಸಾಮೂಹಿಕವಾಗಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ. ಈ ಹಿಂದೆ ಕರ್ನಾಟಕ ಲಲಿತ ಕಲಾ ಅಕಾಡೆಮಿ ಸದಸ್ಯರಾಗಿದ್ದ ವೇಳೆ ಕಲಾ ಚಟುವಟಿಕೆಗೆ ಸಂಬಂಧಿಸಿದಂತೆ ಹೆಚ್ಚಿನ ಕಾರ್ಯಕ್ರಮ ಆಯೋಜಿಸಿದರು. ಈಗಲೂ ತಮ್ಮ ಮನೆಯಲ್ಲಿ ಮಕ್ಕಳಿಗೆ ಚಿತ್ರಕಲೆಗೆ ಸಂಬಂಧಿಸಿದಂತೆ ತರಬೇತಿ ನೀಡುತ್ತಾರೆ.

ರಾಜ್ಯಮಟ್ಟದ ಉತ್ತಮ ಚಿತ್ರಕಲಾ ಶಿಕ್ಷಕ ಪ್ರಶಸ್ತಿ ಮತ್ತು ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿಗೆ ಪಾತ್ರರಾಗಿರುವ ಅವರು ಹಲವಾರು ಕಲಾವಿದರಿಗೆ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡಿದ್ದಾರೆ. ಎಷ್ಟೇ ಕಾರ್ಯ ಒತ್ತಡವಿದ್ದರೂ ಮತ್ತು ಬೇರೇನೆ ಸಮಸ್ಯೆಯಿದ್ದರೂ ವೃತ್ತಿ ಬದ್ಧತೆ ಮತ್ತು ಸಾಮಾಜಿಕ ಕಾರ್ಯಗಳಿಂದ ವಿಮುಖರಾಗಲು ಇಚ್ಛಿಸುವುದಿಲ್ಲ.

‘ಪ್ರತಿ ಭಾನುವಾರ ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತೆ ಕಾಯ್ದುಕೊಳ್ಳುವಿಕೆಗೆ ಸಂಬಂಧಿಸಿದಂತೆ ವಿವಿಧ ಕಾರ್ಯಗಳನ್ನು ನಡೆಸುತ್ತೇವೆ. ಸ್ನೇಹಿತರು ಮತ್ತು ವಿವಿಧ ಬಡಾವಣೆಗಳ ನಿವಾಸಿಗಳು ನಮ್ಮೊಂದಿಗೆ ಕೈಜೋಡಿಸುತ್ತಾರೆ. ಅವಳಿ ಮಕ್ಕಳಾದ ಅಮಿತ್‌ ಮತ್ತು ಅಮೋಘ್‌ ಕೂಡ ಉತ್ಸಾಹದಿಂದ ಬರುತ್ತಾರೆ. ದೈನಂದಿನ ಕೆಲಸಗಳ ಜೊತೆಗೆ ಸಮಾಜಕ್ಕೆ ಉಪಯೋಗ ಆಗುವಂತಹ ಕೆಲಸದಲ್ಲಿ ತೊಡಗಿಕೊಂಡರೆ ಖುಷಿಯಾಗುತ್ತದೆ. ’ ಎಂದು ಅಶೋಕ ಮತ್ತು ಗಂಗಾ ಹಿರೇಮಠ ‘ಪ್ರಜಾವಾಣಿ’ಗೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT